ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕ ಶಾನಭಾಗ ಕಥಾ ಸಂಕಲನ ಬಿಡುಗಡೆಯಲ್ಲಿ ರಾಘವೇಂದ್ರರಾವ್

ಚಿಂತನೆಗೆ ಹಚ್ಚುವ ಯಶಸ್ವಿ ಕತೆಗಾರ
Last Updated 6 ಜನವರಿ 2013, 20:12 IST
ಅಕ್ಷರ ಗಾತ್ರ

ಬೆಂಗಳೂರು: `ಹೊರಗಿನ ಲೋಕದ ಅನುಭವದ ಒಳಗೆ ನಿಂತು ಮಾಸ್ತಿ ಬರೆದರೆ, ಸ್ವ-ಅನುಭವದ ಲೋಕದಿಂದಲೇ ಹೊರಗೆ ನಿಂತು ಕತೆ ರಚಿಸುವ ಮೂಲಕ ವಿವೇಕ ಶಾನಭಾಗ ಅವರು ಓದುಗರಲ್ಲಿ ಕುತೂಹಲ ಮೂಡಿಸುತ್ತಾರೆ' ಎಂದು ಹಿರಿಯ ವಿಮರ್ಶಕ ಎಚ್.ಎಸ್.ರಾಘವೇಂದ್ರರಾವ್ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಅಕ್ಷರ ಪ್ರಕಾಶನ ಹೊರತಂದಿರುವ ವಿವೇಕ ಶಾನಭಾಗ ಅವರ `ಘಾಚರ್ ಘೋಚರ್' ಕಥಾ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿದರು.

`ಕಾಲ, ದೇಶಗಳಾಚೆ ಮನುಷ್ಯ ಸಂಬಂಧಗಳ ನಡುವಿನ ಹುಡುಕಾಟವೇ ಶಾನಭಾಗ ಅವರ ಕೃತಿಗಳ ಮೂಲದ್ರವ್ಯ. ಕತೆಯನ್ನು ಕೊಲ್ಲುವುದರ ಮೂಲಕವೇ ಹೊಸ ಬಗೆಯ ಜೀವನದರ್ಶನವನ್ನು ನೀಡುವ ಅವರ ಕತೆಗಳು ಎಂದಿನ ಜನಪ್ರಿಯ ಮಾದರಿಯಲ್ಲಿ ಸಾಗದೇ ಅಕ್ಷರಪ್ರಿಯರನ್ನು ಚಿಂತನೆಗೆ ಹಚ್ಚುತ್ತದೆ' ಎಂದು ಬಣ್ಣಿಸಿದರು.

ಕಥಾ ಸಂಕಲನದ ಹೆಸರು ವಿಭಿನ್ನವಾಗಿದ್ದರೂ, ಈ ಪದ `ಕ್ಲಿಷ್ಟ' ಎಂಬ ಅರ್ಥವನ್ನು ಸೂಚಿಸುತ್ತದೆ. ಪ್ರಸ್ತುತ ಪರಿಹಾರದ ಸೂತ್ರ ಎಲ್ಲೆಡೆ ಇದ್ದರೂ ಸಮಸ್ಯೆಗಳು ಬಗೆಹರಿಯದೇ ಗೋಜಲಾಗಿರುವ ಸ್ಥಿತಿಯನ್ನು ಬಿಂಬಿಸುವಲ್ಲಿ ಈ ಪದ ಯಶಸ್ವಿಯಾಗುತ್ತದೆ' ಎಂದು ತಿಳಿಸಿದರು.

`ರಾಜಕೀಯ ಚಿಂತನೆಗಳ ಗ್ರಹಿತದಿಂದ ದೂರ ಉಳಿದಿರುವ ಈ ಕತೆಗಳು ಗಂಡು ಮತ್ತು ಹೆಣ್ಣಿನಲ್ಲಿ ಇರಬಹುದಾದ ಕ್ರೌರ್ಯ, ಕ್ಷುಲ್ಲಕತನವನ್ನು ನಿರ್ಭಿಡೆಯಿಂದ ಹೇಳುತ್ತದೆ. ಸೌಂದರ್ಯ ಮೀಮಾಂಸೆಯ ಚೌಕಟ್ಟಿಗಿಂತಲೂ, ಕಂಡುಕೊಂಡ ಸತ್ಯವನ್ನು ಕಲಾತ್ಮಕವಾಗಿ ನಿರೂಪಿಸುವ ಈ ಮಾದರಿಯ ಬಗ್ಗೆ  ಹೆಚ್ಚಿನ ಚರ್ಚೆ ನಡೆಯಬೇಕಿದೆ' ಎಂದು ಹೇಳಿದರು.

ಕಾದಂಬರಿಕಾರ ಸುಕೇತು ಮೆಹತಾ, `ವಿವೇಕ ಅವರ ಕತೆಗಳ ನಿರೂಪಣೆಯ ಶೈಲಿ ಚೆನ್ನಾಗಿದ್ದು, ಅಕ್ಷರಲೋಕದವರನ್ನು ಕುತೂಹಲದಿಂದ ನೋಡುವಂತೆ ಮಾಡುತ್ತದೆ' ಎಂದು ಶ್ಲಾಘಿಸಿದರು.

ಕತೆಗಾರ ವಿವೇಕ ಶಾನಭಾಗ, `ಓದುಗರ ಅತೀವ ಸ್ಪಂದನ ಹಾಗೂ ವಿಮರ್ಶಾ ವಲಯದಿಂದ ದೊರೆಯುವ ಅಭೂತಪೂರ್ವ ಪ್ರತಿಕ್ರಿಯೆಯಿಂದ ಲೇಖಕ ಬೆಳೆಯಲು ಸಾಧ್ಯ. ಇವರೆಡೂ ಒದಗಿಬಂದಿರುವುದಕ್ಕೆ ನನಗೆ ಖುಷಿ ತಂದಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT