ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಾನಂದರ ಚಿತ್ರ ವಿಶಿಷ್ಟ ರೀತಿ ಅನಾವರಣ: ಜಿಲ್ಲಾಧಿಕಾರಿ

Last Updated 4 ಜನವರಿ 2012, 6:35 IST
ಅಕ್ಷರ ಗಾತ್ರ

ಮಂಗಳೂರು: ಹದಿನೇಳನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಮಂಗಳೂರು ಭರದಿಂದ ಸಜ್ಜಾಗುತ್ತಿದ್ದು, ಉದ್ಘಾಟನಾ ಸಮಾರಂಭದ ವೇಳೆ ರೊಬೊ ತಂತ್ರಜ್ಞಾನದೊಂದಿಗೆ ವಿಶಿಷ್ಟ ರೀತಿಯಲ್ಲಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಚಿತ್ರ ವೇದಿಕೆಯಲ್ಲಿ ಅನಾವರಣಗೊಂಡು ಎರಡು ನಿಮಿಷ ಕಾಲ ಇದ್ದು ಮರೆಯಾಗಲಿದೆ.

ಸ್ವಯಂಚಾಲಿತವಾಗಿ ಅನಾವರಣಗೊಳ್ಳುವ ಈ ಚಿತ್ರವು ನಿಧಾನವಾಗಿ ಸಭಿಕರೆದುರು ತೆರೆದುಕೊಳ್ಳುತ್ತಿದ್ದಂತೆಯೇ ಕುವೆಂಪು ವಿರಚಿತ `ಏಳು, ಎದ್ದೇಳು~... ಹಾಡು ಮೊಳಗಲಿದೆ. ವೇದಿಕೆಯಲ್ಲಿ ವಿವೇಕಾನಂದ ಚಿತ್ರ ಕಣ್ಣಿಗೆ ಭ್ರಮಾ ರೂಪದಲ್ಲಿ ಕಾಣುತ್ತಲೇ ಮರೆಯಾಗಲಿದೆ. ಲೇಸರ್ ಪ್ರದರ್ಶನದ ಮುಂದುವರಿದ ರೂಪದಂತೆ ಇದು ಕಂಗೊಳಿಸಲಿದೆ.

ಮಂಗಳವಾರ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಹಾಡಿನ ಸಿ.ಡಿ.ಯನ್ನು ಬೆಳಗಾವಿ ರಾಮಕೃಷ್ಣ ಮಠದಿಂದ ತರಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಂದ ಹಾಡಿಸುವ ವಿಚಾರ ಇದೆ. ಹಾಡಿಗೆ ಸಿದ್ಧತೆ ನಡೆಯುವುದು ಕಷ್ಟ ಎಂದಾದರೆ ಸಿ.ಡಿ. ಮೂಲಕ ಹಾಡು ಪ್ರಸಾರ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪ ಗೌಡ `ಪ್ರಜಾವಾಣಿ~ಗೆ ಮಂಗಳವಾರ ತಿಳಿಸಿದರು.

ಈ ಮಧ್ಯೆ, ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಬುಧವಾರ ಬೆಳಿಗ್ಗೆ ಸರ್ಕಿಟ್ ಹೌಸ್‌ನಲ್ಲಿ ಯುವಜನೋತ್ಸವ ತಯಾರಿ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.

ಯುವಜನೋತ್ಸವ ಯಶಸ್ವಿಗೊಳಿಸುವ ಸಲುವಾಗಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯು ಬೆಂಗಳೂರಿನಿಂದ ಈಗಾಗಲೇ 6 ಸಿಬ್ಬಂದಿಯನ್ನು ಕಳುಹಿಸಿಕೊಟ್ಟಿದ್ದು, ಇನ್ನೂ 15ರಿಂದ 20ರಷ್ಟು ಸಿಬ್ಬಂದಿಯನ್ನು ಒಂದೆರಡು ದಿನಗಳಲ್ಲಿ ಕಳುಹಿಸಿಕೊಡಲಿದೆ.

ಖಾಸಗಿ ಬಸ್ ಪ್ರಯಾಣ ಉಚಿತ: ಯುವಜನೋತ್ಸವದಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳು ಮತ್ತು ಪ್ರೇಕ್ಷಕರನ್ನು ಉಚಿತವಾಗಿ ಕರೆದೊಯ್ಯಲು ಖಾಸಗಿ ಬಸ್ ಮಾಲೀಕರು ಒಪ್ಪಿಕೊಂಡಿದ್ದಾರೆ. ಇದರಿಂದ ಯುವಜನೋತ್ಸವದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ರಿಯಾಯಿತಿ ಪಾಸ್ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಒಂದೆರಡು ದಿನದಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಸ್ಪರ್ಧಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಯುವಜನೋತ್ಸವ ಸಮಯದಲ್ಲಿ ಸೇಂಟ್ ಅಲೋಷಿಯಸ್ ಪದವಿ ಪೂರ್ವ ಕಾಲೇಜು ಮತ್ತು ನೀರು ಮಾರ್ಗದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಮಾತ್ರ ಪೂರ್ಣ ರಜೆ ಘೋಷಿಸಲಾಗಿದೆ. ಉಳಿದಂತೆ ಇತರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿಲ್ಲವಾದರೂ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಶಾಲಾ, ಕಾಲೇಜುಗಳಿಗೆ ಅನುಮತಿ ನೀಡಲಾಗುವುದು ಎಂದು ಅವರು ಹೇಳಿದರು.

ಸ್ಪರ್ಧಿಗಳು ಮತ್ತು ಪ್ರೇಕ್ಷಕರಿಂದ ಅತಿಯಾಗಿ ದುಡ್ಡು ಸುಲಿಗೆ ಮಾಡುವುದಿಲ್ಲ ಎಂಬ ಭರವಸೆಯನ್ನು ಆಟೊ ಚಾಲಕರೂ ನೀಡಿದ್ದಾರೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT