ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ 10-ಕೆ ಓಟ; ಆಫ್ರಿಕಾ ಅಥ್ಲೀಟ್‌ಗಳ ನಡುವೆ ಪೈಪೋಟಿ

Last Updated 26 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೀರ್ಘದೂರ ಓಟದಲ್ಲಿ ಆಫ್ರಿಕಾದ ಅಥ್ಲೀಟ್‌ಗಳಿಗೆ ಸರಿಸಾಟಿಯಾಗಿ ನಿಲ್ಲುವುದು ಸುಲಭವಲ್ಲ. ಕೀನ್ಯಾ, ಇಥಿಯೋಪಿಯಾ ಮತ್ತು ಉಗಾಂಡಾ ದೇಶಗಳ ಸ್ಪರ್ಧಿಗಳು ಈ ವಿಭಾಗದಲ್ಲಿ ಪ್ರಭುತ್ವ ಮೆರೆದಿದ್ದಾರೆ. ಉದ್ಯಾನನಗರಿಯಲ್ಲಿ ಭಾನುವಾರ ಬೆಳಿಗ್ಗೆ ನಡೆಯಲಿರುವ `ವಿಶ್ವ 10-ಕೆ~ ಓಟದಲ್ಲೂ ಆಫ್ರಿಕಾದ ಪ್ರತಿಭೆಗಳ ನಡುವೆಯೇ ಪೈಪೋಟಿಯನ್ನು ನಿರೀಕ್ಷಿಸಲಾಗಿದೆ.

2009ರ ಚಾಂಪಿಯನ್ ಇಥಿಯೋಪಿಯದ ಡೆರಿಬಾ ಮೆರ್ಗಾ, ಎರಡು ಸಲದ `ರನ್ನರ್ ಅಪ್~ ಉಗಾಂಡದ ಮೋಸೆಸ್ ಕಿಪ್ಸಿರೊ, ಕೀನ್ಯಾದ ಸ್ಪರ್ಧಿಗಳಾದ ಜೆಫ್ರಿ ಕಿಪ್ಸಂಗ್ ಮತ್ತು ಡೆನಿಸ್ ಕಿಮೆಟೊ ಪುರುಷರ ವಿಭಾಗದಲ್ಲಿ ಪದಕ ಗೆಲ್ಲುವ ನೆಚ್ಚಿನ ಅಥ್ಲೀಟ್ ಎನಿಸಿಕೊಂಡಿದ್ದಾರೆ.

ಅದರಲ್ಲೂ ಡೆನಿಸ್ ಕಿಮೆಟೊ ಈ ಬಾರಿ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸುವ ತಾಕತ್ತು ಹೊಂದಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಅವರು ಉತ್ತಮ ಪ್ರದರ್ಶನ ನೀಡುತ್ತಿರುವುದು ಇದಕ್ಕೆ ಕಾರಣ. ರಾಸ್ ಅಲ್ ಖೈಮಾ ಮತ್ತು ಬರ್ಲಿನ್ ಹಾಫ್ ಮ್ಯಾರಥಾನ್ ಗೆಲ್ಲುವ ಮೂಲಕ ಕಿಮೆಟೊ ವಿಶ್ವದ ಗಮನ ಸೆಳೆದಿದ್ದಾರೆ.

ಈ ತಿಂಗಳ ಆರಂಭದಲ್ಲಿ ಬರ್ಲಿನ್‌ನಲ್ಲಿ ನಡೆದ 25 ಕಿ.ಮೀ ಓಟದ ಸ್ಪರ್ಧೆಯಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡಿದ್ದರು. ಒಂದು ಗಂಟೆ 11 ನಿಮಿಷಗಳಲ್ಲಿ ಅವರು ಈ ದೂರ ಕ್ರಮಿಸಿದ್ದರು. 10-ಕೆ ಓಟದಲ್ಲಿ ಪಾಲ್ಗೊಂಡ ಹೆಚ್ಚಿನ ಅನುಭವ ಅವರಿಗಿಲ್ಲ. ಆದರೂ ಭಾನುವಾರ ಉದ್ಯಾನನಗರಿಯ ರಸ್ತೆಗಳಲ್ಲಿ ಮಿಂಚಿನ ಸಂಚಾರ ಮೂಡಿಸಲು ತಕ್ಕ ಸಿದ್ಧತೆ ನಡೆಸಿಕೊಂಡಿದ್ದಾರೆ.

ಈ ಬಾರಿ ಹೊಸ ಕೂಟ ದಾಖಲೆ ನಿರ್ಮಾಣವಾಗಬಹುದು ಎಂಬ ವಿಶ್ವಾಸವನ್ನು ವಿದೇಶಿ ಅಥ್ಲೀಟ್‌ಗಳ ಸಲಹೆಗಾರ ಇಯಾನ್ ಲ್ಯಾಡ್‌ಬ್ರೂಕ್ ವ್ಯಕ್ತಪಡಿಸಿದ್ದಾರೆ. 2008 ರಲ್ಲಿ ನಡೆದ ಮೊದಲ ವರ್ಷದ ಓಟದಲ್ಲಿ ಎರಿಟ್ರಿಯಾದ ಜೆರ್ಸೆನಿ ಟಡೆಸೆ 27.51 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದು ಇದುವರೆಗಿನ ದಾಖಲೆಯಾಗಿ ಉಳಿದುಕೊಂಡಿದೆ.

ಮಹಿಳೆಯರ ವಿಭಾಗದಲ್ಲಿ ಕಾಮನ್‌ವೆಲ್ತ್ ಕೂಟದ 10,000 ಮೀ. ಓಟದಲ್ಲಿ ಚಿನ್ನದ ಪದಕ ವಿಜೇತೆ ಗ್ರೇಸ್ ಮೊಮಾನ್ಯಿ ಕೀನ್ಯಾದ ಸವಾಲನ್ನು ಮುನ್ನಡೆಸಲಿದ್ದಾರೆ. ಇವರಿಗೆ ಇಥಿಯೋಪಿಯದ ಮೆರಿಮಾ ಮೊಹಮ್ಮದ್ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ. ಅದೇ ರೀತಿ ಕೀನ್ಯಾದ ಫಿಲೆಸ್ ಒಂಗೊರಿ ಮತ್ತು ಡಾರಿಸ್ ಚಂಗೆವೊ ಕೂಡಾ ಪದಕದ ನಿರೀಕ್ಷೆಯಲ್ಲಿದ್ದಾರೆ.

`ಎಲೈಟ್~ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಒಟ್ಟು 136 ಅಥ್ಲೀಟ್‌ಗಳು ಕಣದಲ್ಲಿದ್ದಾರೆ. ಪುರುಷರ ವಿಭಾಗದಲ್ಲಿ ಕೀನ್ಯಾದ 14 ಹಾಗೂ ಇಥಿಯೋಪಿಯದ ಆರು ಅಥ್ಲೀಟ್‌ಗಳು ಸ್ಪರ್ಧಿಸಲಿದ್ದಾರೆ.

ರಾಮ್‌ಸಿಂಗ್ ಪ್ರಮುಖ ಆಕರ್ಷಣೆ: ಭಾರತದ ಸ್ಪರ್ಧಿಗಳಲ್ಲಿ ರಾಮ್‌ಸಿಂಗ್ ಯಾದವ್ ಎಲ್ಲರ ಗಮನ ಸೆಳೆಯುವುದು ಖಚಿತ. ಲಂಡನ್ ಒಲಿಂಪಿಕ್ಸ್‌ನ ಮ್ಯಾರಥಾನ್ ಸ್ಪರ್ಧೆಗೆ ಈಗಾಗಲೇ ಅರ್ಹತೆ ಗಿಟ್ಟಿಸಿರುವ ಅವರು ಉತ್ತಮ ಪ್ರದರ್ಶನದ ವಿಶ್ವಾಸ ಹೊಂದಿದ್ದಾರೆ.

ಕಳೆದ ಬಾರಿಯ ಚಾಂಪಿಯನ್ ಸುರೇಶ್ ಕುಮಾರ್ ಮತ್ತು ರಾಮ್‌ಸಿಂಗ್ ಯಾದವ್ ಮಧ್ಯೆ ತುರುಸಿನ ಪೈಪೋಟಿ ನಡೆಯುವ ಸಾಧ್ಯತೆಯಿದೆ. ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಜೊತೆಗೆ ಸಮಯವನ್ನು ಉತ್ತಮಪಡಿಸಿಕೊಳ್ಳುವ ಲೆಕ್ಕಾಚಾರವನ್ನು ಸುರೇಶ್ ಹೊಂದಿದ್ದಾರೆ. ಕಳೆದ ವರ್ಷ ಅವರು 30.17 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಪೂರೈಸಿದ್ದರು.

ಮಹಿಳೆಯರ ವಿಭಾಗದಲ್ಲಿ ಕಳೆದ ಬಾರಿಯ ಚಾಂಪಿಯನ್ ಕವಿತಾ ರಾವತ್, ಸುಧಾ ಸಿಂಗ್ ಮತ್ತು ಪ್ರೀಜಾ ಶ್ರೀಧರನ್ ಅವರಂತಹ ಪ್ರಮುಖರು ಪಾಲ್ಗೊಳ್ಳುತ್ತಿಲ್ಲ. ಇವರ ಅನುಪಸ್ಥಿತಿಯಲ್ಲಿ ಲಲಿತಾ ಬಬ್ಬರ್ ಚಾಂಪಿಯನ್ ಆಗುವ ನೆಚ್ಚಿನ ಅಥ್ಲೀಟ್ ಎನಿಸಿಕೊಂಡಿರುವರು. ಯುವ ಪ್ರತಿಭೆಗಳಾದ ಅರ್ಚನಾ ಪಾಲ್, ಮೋನಿಕಾ ಅತ್ರೆ, ಪ್ರಿಯಾಂಕಾ ಪಟೇಲ್ ಮತ್ತು ಕಿರಣ್ ತಿವಾರಿ ಕಣದಲ್ಲಿದ್ದಾರೆ.

`ಎಲೈಟ್~ ಪುರುಷರ ಮತ್ತು ಮಹಿಳೆಯರ ಓಟದ ಜೊತೆ ಇತರ ವಿಭಾಗಗಳಲ್ಲೂ ಸ್ಪರ್ಧೆಗಳು ನಡೆಯಲಿವೆ. ನೇಷನ್ಸ್ ಚಾಲೆಂಜ್, ಓಪನ್ 10-ಕೆ ಓಟ, ಹಿರಿಯರ ಓಟ, ವೀಲ್‌ಚೇರ್ ಓಟ ಹಾಗೂ `ಮಜಾ ರನ್~ ಏರ್ಪಡಿಸಲಾಗಿದೆ.

ವಿಜೇತರಿಗೆ ಭಾರಿ ಬಹುಮಾನ
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಪ್ರೊಕ್ಯಾಮ್ ಇಂಟರ್‌ನ್ಯಾಷನ್ ಒಳಗೊಂಡಂತೆ ವಿವಿಧ ಪ್ರಾಯೋಜಕರ ನೆರವಿನಿಂದ ಭಾನುವಾರ ನಡೆಯಲಿರುವ `ವಿಶ್ವ 10-ಕೆ~ ಓಟದ ವಿಜೇತರು ಭಾರಿ ಮೊತ್ತದ ಬಹುಮಾನ ಪಡೆಯಲಿದ್ದಾರೆ. ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗುವ ಅಥ್ಲೀಟ್ ತಲಾ 11,76,000 ರೂ. (21,000 ಅಮೆರಿಕನ್ ಡಾಲರ್) ಬಹುಮಾನ ತಮ್ಮದಾಗಿಸಿಕೊಳ್ಳುವರು.

ಎರಡನೇ ಸ್ಥಾನ ಪಡೆಯುವ ಅಥ್ಲೀಟ್ ರೂ. 6,72,000 ರೂ. ಪಡೆಯುವರು. ಮೂರರಿಂದ ಐದರವರೆಗಿನ ಸ್ಥಾನ ಪಡೆಯುವ ಅಥ್ಲೀಟ್‌ಗಳು ಕ್ರಮವಾಗಿ 4,48,000, 3,36,000 ಹಾಗೂ 2,80,000 ರೂ. ಬಹುಮಾನ ತಮ್ಮದಾಗಿಸಿಕೊಳ್ಳುವರು. ಪುರುಷ ಹಾಗೂ ಮಹಿಳಾ ಸ್ಪರ್ಧಿಗಳಿಗೆ ಸಮಾನ ರೀತಿಯ ಬಹುಮಾನ ಲಭಿಸಲಿದೆ. ಮೊದಲ ಹತ್ತು ಸ್ಥಾನಗಳನ್ನು ಪಡೆದವರು ನಗದು ಬಹುಮಾನ ಪಡೆಯಲಿದ್ದಾರೆ.

ಭಾರತದ ಸ್ಪರ್ಧಿಗಳಲ್ಲಿ ಮೊದಲ ಸ್ಥಾನ ಪಡೆಯುವ ಪುರುಷ ಮತ್ತು ಮಹಿಳಾ ಅಥ್ಲೀಟ್ ತಲಾ ಒಂದು ಲಕ್ಷ ರೂ. ನಗದು ಬಹುಮಾನ ಪಡೆಯುವರು. ಎರಡರಿಂದ ಐದರವರೆಗಿನ ಸ್ಥಾನ ಪಡೆಯುವವರು ಕ್ರಮವಾಗಿ 75, 60, 40 ಹಾಗೂ 25 ಸಾವಿರ ರೂ. ಬಹುಮಾನ ಪಡೆಯಲಿದ್ದಾರೆ.

ನೇಷನ್ಸ್ ಚಾಲೆಂಜ್ ವಿಭಾಗದಲ್ಲಿ ಮೊದಲ ಸ್ಥಾನ ಪಡೆಯುವ ತಂಡಕ್ಕೆ 4.50 ಲಕ್ಷ ರೂ. ಬಹುಮಾನ ಲಭಿಸಿದೆ. ಕಾರ್ಪೊರೇಟ್ ಚಾಲೆಂಜ್ ವಿಭಾಗದಲ್ಲಿ ಮೊದಲ ಐದು ಸ್ಥಾನ ಪಡೆಯುವವರು ಕ್ರಮವಾಗಿ 65, 55, 45, 35 ಮತ್ತು 30 ಸಾವಿರ ರೂ. ಬಹುಮಾನ ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT