ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಶಾಂತಿ: ಮಹಿಳಾ ಶಕ್ತಿ

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಮೂವರು ಹೋರಾಟಗಾರ್ತಿಯರು ಹಂಚಿಕೊಂಡಿದ್ದಾರೆ. ಯುದ್ಧ ವಲಯಗಳಲ್ಲಿ ಶಾಂತಿ ಹಾಗೂ ಮಹಿಳಾ ಹಕ್ಕುಗಳಿಗಾಗಿ ಅಹಿಂಸಾತ್ಮಕ ಆಂದೋಲನಗಳನ್ನು ನಡೆಸಿದ ಸಾಹಸಿ ಮಹಿಳೆಯರು ಇವರು. 

ಪ್ರಜಾಸತ್ತಾತ್ಮಕ ಸುಧಾರಣೆಗಳಿಗಾಗಿ ನಡೆಯುವ ಹೋರಾಟಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಕಡೆಗಣಿಸುವುದು ಸಲ್ಲದು ಎಂಬಂತಹ  ಸಂದೇಶವನ್ನು  ಈ ಪ್ರಶಸ್ತಿ ನೀಡಿದೆ.

`ಸಮಾಜದ ಎಲ್ಲಾ ಸ್ತರಗಳಲ್ಲಿನ ಬೆಳವಣಿಗೆಗಗಳಿಗೆ ಪ್ರಭಾವ ಬೀರಲು  ಪುರುಷರಷ್ಟೇ ಮಹಿಳೆಯರಿಗೂ ಅವಕಾಶವಿದೆ~ ಎನ್ನುತ್ತದೆ ನೊಬೆಲ್ ಪ್ರಶಸ್ತಿ ಪತ್ರ. ನಿಜ. ಈ ಮೂವರು ಸಾಹಸಿ ಮಹಿಳೆಯರೂ ಆ  ಶಕ್ತಿಯನ್ನು ತೋರ್ಪಡಿಸಿದ್ದಾರೆ.

ಎಲೆನ್ ಜಾನ್ಸನ್ ಸರ್‌ಲೀಫ್ ಹಾಗೂ ಲೆಮಾ ಜಿಬೊವೀ - ಈ ಇಬ್ಬರೂ  ಆಫ್ರಿಕಾದ ಲೈಬೀರಿಯಾ ದೇಶದವರು.  ಮತ್ತೊಬ್ಬರು ಯೆಮೆನ್‌ನ ಪತ್ರಕರ್ತೆ  ತವಾಕ್ಕುಲ್ ಕರ್ಮಾನ್.  ಈ ಪ್ರಶಸ್ತಿಗೆ ಭಾಜನರಾದ ಮೊದಲ ಅರಬ್ ಮಹಿಳೆ ಎಂಬಂತಹ ಕೀರ್ತಿ ಅವರಿಗೆ ಈಗ.  ಈ ಮೂವರೂ ಯುದ್ಧ ಹಾಗೂ ಪ್ರಭುತ್ವದ ಹಿಂಸಾಚಾರಗಳ ಸಂದರ್ಭಗಳಲ್ಲಿ ನಿರಂತರವಾದ ಧೈರ್ಯ ಹಾಗೂ ಮಾನಸಿಕ ಸ್ಥೈರ್ಯಗಳನ್ನು ಪ್ರದರ್ಶಿಸಿದ್ದಾರೆ.

ಲೈಬೀರಿಯಾ ಎಂದರೇ ಯುದ್ಧಕೋರರಿರುವ ಅನಾಗರಿಕ ಆಡಳಿತದ  ನಾಡು ಎಂಬುದು ಸಾಮಾನ್ಯ ಅಭಿಪ್ರಾಯ. ಈ ಗ್ರಹಿಕೆಯನ್ನು ಪರಿವರ್ತಿಸುವಲ್ಲಿ  ಎಲೆನ್ ಜಾನ್ಸನ್ ಸರ್‌ಲೀಫ್ ಹಾಗೂ ಲೆಮಾ ಜಿಬೊವೀ ಅವರ ಕೊಡುಗೆ ಅಪಾರ. ಲೈಬೀರಿಯಾ ಈಗ ನಾಗರಿಕತೆಗೆ, ಮಾಮೂಲಿ ಜನಜೀವನಕ್ಕೆ ಹೊರಳಿಕೊಳ್ಳುವ ಪ್ರಕ್ರಿಯೆಯಲ್ಲಿರುವ ನಾಡು.

2003ರಲ್ಲಿ ಲೈಬೀರಿಯಾ ದೊಂಬಿಯ ಗೂಡಾಗಿತ್ತು.  ಅಂತರ್ಯುದ್ಧದಲ್ಲಿ ಅದು ಬಸವಳಿದಿತ್ತು. ಅಂತರ್ಯದ್ಧಕ್ಕೆ ಅಂತ್ಯ ಹಾಡಲು ಮಹಿಳೆಯರ ನೇತೃತ್ವದ ಆಂದೋಲನದಲ್ಲಿ ಶಾಂತಿಯುತವಾದ ತಮ್ಮದೇ ವಿಶಿಷ್ಟ ತಂತ್ರಗಳನ್ನು ಜಿಬೊವೀ ಬಳಸಿದರು.

ಬಂಡುಕೋರ ಗುಂಪುಗಳು ಹಾಗೂ  ಸರ್ವಾಧಿಕಾರಿ ಚಾರ್ಲ್ಸ್ ಟೇಲರ್‌ನ ಕ್ರೂರ ಆಡಳಿತವನ್ನು ಕೊನೆಗಾಣಿಸಲು ಜಿಬೊವೀ ಲೈಬೀರಿಯಾದ ಮಹಿಳೆಯರಿಗೆ ಹೇಳಿದ್ದೇನು ಗೊತ್ತೆ? ನಿರಂತರವಾದ ಸಾರ್ವಜನಿಕ ಪ್ರತಿಭಟನೆ. ಜೊತೆಗೆ ಯುದ್ಧ ನಿಲ್ಲುವವರೆಗೂ ಗಂಡಂದಿರಿಗೆ ಲೈಂಗಿಕ ಸುಖದ ನಿರಾಕರಣೆಗೆ (ಸೆಕ್ಸ್ ಸ್ಟ್ರೈಕ್)ಕರೆ.

ಜಿಬೊವೀ ಹೇಳುತ್ತಾರೆ: `ಪ್ರತಿ ದಿನ ಮಲಗುವ ಮುನ್ನ, ಮರು ದಿನ ಹೊಸ ದಿನವಾಗಿರಲಿ ಎಂದು ಪ್ರಾರ್ಥಿಸುತ್ತೀರಿ. ಗುಂಡು ಹಾರಿಸುವುದು ನ್ಲ್ಲಿಲಲಿ. ಹಸಿವೆ ಎಂಬುದು ಇಲ್ಲದಿರಲಿ ದೇವರೇ ಎಂದು ಪ್ರಾರ್ಥಿಸುತ್ತೀರಿ. ಆದರೆ ನನಗೆ ಕನಸೊಂದು ಬಿತ್ತು. ಅದೊಂದು ಹುಚ್ಚು ಕನಸು. ಶಾಂತಿಗಾಗಿ ಪ್ರಾರ್ಥಿಸಲು ಚರ್ಚ್‌ನ ಮಹಿಳೆಯರನ್ನು ಒಟ್ಟುಗೂಡಿಸು ಎಂದು ಯಾರೋ ನಿಜವಾಗಿ ಹೇಳಿದಂತಹ ಕನಸು ಅದು~.

ಜಿಬೊವೀ ಮಾಡಿದ್ದು ಅದನ್ನೇ. 2002ರಲ್ಲಿ ಶಾಂತಿಯುತ ಪ್ರತಿಭಟನೆಗೆ ಸಾವಿರಾರು ಕ್ರೈಸ್ತ ಹಾಗೂ ಮುಸ್ಲಿಂ ಮಹಿಳೆಯರನ್ನು  ಒಟ್ಟುಗೂಡಿಸಿದರು. ಶಾಂತಿಗಾಗಿ ಪ್ರಾರ್ಥನಾ ಸಭೆ ನಡೆಸುವುದು, ಹಾಡು ಹೇಳುವುದು ದಿನ ನಿತ್ಯದ ವಿದ್ಯಮಾನವಾಯಿತು. ಅಂತರ್ಯುದ್ಧದಲ್ಲಿ ತೊಡಗಿದ್ದ ಸೈನಿಕರು ಗುಂಡು ಹಾರಿಸಬಹುದಾದ ಸಾಧ್ಯತೆಗಳ ನಡುವೆಯೂ ಈ ಶಾಂತಿ ಸಭೆಗಳು ತಣ್ಣಗೆ ನಡೆಯುತ್ತಿದ್ದವು.

14 ವರ್ಷಗಳಿಗೂ ಹೆಚ್ಚು ಕಾಲ ಕಾಡಿದ ಯುದ್ಧ ಕನಿಷ್ಠ 2,50,000ದಷ್ಟು ಜನರ ಸಾವು ಹಾಗೂ ರಾಷ್ಟ್ರದ ಮುಕ್ಕಾಲು ಭಾಗದಷ್ಟು ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಸಾಮೂಹಿಕ ಅತ್ಯಾಚಾರಗಳಿಗೆ ಸಾಕ್ಷಿಯಾಗಿತ್ತು. ಇಂತಹ ಕ್ರೂರ ಯುದ್ಧ ನಿಲ್ಲಿಸಲು ಧಾರ್ಮಿಕ ಹಾಗೂ ರಾಜಕೀಯ ನಾಯಕರ ಮೇಲೆ ಒತ್ತಡ ಹೇರುವುದು ಈ ಪ್ರಾರ್ಥನಾ ಸಭೆಗಳ ಉದ್ದೇಶವಾಗಿತ್ತು.

ಈ ಸೃಜನಾತ್ಮಕವಾದ ಸಾರ್ವಜನಿಕ ಪ್ರದರ್ಶನಗಳಿಂದಾಗಿ ಶಾಂತಿ ಮಾತುಕತೆ ಆರಂಭಕ್ಕೆ ಲೈಬೀರಿಯಾದ ಆಗಿನ ಯುದ್ಧಕೋರ ಅಧ್ಯಕ್ಷ ಚಾರ್ಲ್ಸ್ ಟೇಲರ್ ಒಪ್ಪಿಕೊಳ್ಳಲೇಬೇಕಾಯಿತು. ಸಂಧಾನ ಮಾತುಕತೆಗೆ ಮಣಿಯದಿದ್ದಲ್ಲಿ ಸಾರ್ವಜನಿಕವಾಗಿ ಬೆತ್ತಲಾಗುವುದಾಗಿಯೂ ಈ ಮಹಿಳೆಯರು ಬೆದರಿಕೆ ಒಡ್ಡಿದ್ದರು.

2003ರಲ್ಲಿ ಅಂತೂ ಯುದ್ಧ ಮುಕ್ತಾಯವಾಯಿತು. ಅದೇ ವರ್ಷವೇ ಸಿಯೆರಾ ಲಿಯೊನ್ ವಿಶೇಷ ನ್ಯಾಯಾಲಯ ಯುದ್ಧ ಅಪರಾಧಗಳ ಆರೋಪ ಹೊರಿಸಿ ಚಾರ್ಲ್ಸ್ ಟೇಲರ್‌ನನ್ನು ಗಡೀಪಾರು ಮಾಡಿತು.

`ಸಮಾಜದಲ್ಲಿ ಏನಾದರೂ ಬದಲಾವಣೆಗಳನ್ನು ಮಾಡಬೇಕಾದಲ್ಲಿ ಅದು ತಾಯಂದಿರಿಂದ ಸಾಧ್ಯ~ ಎಂಬುದನ್ನು ಯುದ್ಧದ ಪ್ರತ್ಯಕ್ಷ ದೃಶ್ಯಗಳಿಗೆ ಸಾಕ್ಷಿಯಾಗಿದ್ದ ಈ ಆರು ಮಕ್ಕಳ ತಾಯಿ  ಅರಿತುಕೊಂಡಿದ್ದರು.  ಜಿಬೊವೀ ಅವರು ಇಂದೂ ಕೂಡ ಶಾಂತಿ ಚಳವಳಿಯನ್ನು ಮುಂದುವರಿಸಿದ್ದಾರೆ.

2007ರಲ್ಲಿ ಆಫ್ರಿಕಾದ ಎಲ್ಲಾ ರಾಷ್ಟ್ರಗಳನ್ನೂ ಒಳಗೊಳ್ಳುವಂತಹ ಮಹಿಳಾ ಶಾಂತಿ ಹಾಗೂ ಭದ್ರತಾ ಜಾಲವನ್ನು (ವಿಮೆನ್ ಪೀಸ್ ಅಂಡ್ ಸೆಕ್ಯುರಿಟಿ ನೆಟ್‌ವರ್ಕ್) ಆರಂಭಿಸಿ ಶಾಂತಿ ಚಳವಳಿಯ ಮುಂಚೂಣಿಯಲ್ಲಿದ್ದಾರೆ.

ಲೈಬೀರಿಯಾದಲ್ಲಿ  ಅವರು ಹೊತ್ತಿಸಿದ  ಮಹಿಳಾ ಹೋರಾಟದ ಚೈತನ್ಯದ ಕಿಡಿ ರಾಜಕೀಯವಾಗಿ ಫಲ ನೀಡಿದ್ದು ನಂತರದ ಬೆಳವಣಿಗೆ. 72 ವರ್ಷದ  ಹಿರಿಯ ಮಹಿಳೆ   ಜಾನ್ಸನ್ ಸರ್‌ಲೀಫ್  ಲೈಬೀರಿಯಾದ ಅಧ್ಯಕ್ಷೆಯಾಗಿ ಚುನಾಯಿತರಾದರು. 2005ರ ಚುನಾವಣೆಯಲ್ಲಿ ಸರ್‌ಲೀಫ್‌ರ ಗೆಲುವು ಆಫ್ರಿಕಾ ರಾಷ್ಟ್ರಗಳಲ್ಲಿ ಹೊಸದೊಂದು ಇತಿಹಾಸವನ್ನೇ ಬರೆಯಿತು.

ಆಫ್ರಿಕಾ ರಾಷ್ಟ್ರದ ಮೊದಲ ಚುನಾಯಿತ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆ ಅವರದಾಯಿತು.  ಕೊಲೆ, ಅತ್ಯಾಚಾರ, ಬಾಲ ಸೈನಿಕರ ಬಳಕೆಯಿಂದಾಗಿ ಲೈಬೀರಿಯಾದಲ್ಲಿ ಮಹಿಳೆಯರು ಹಾಗೂ ಮಕ್ಕಳ ಬದುಕು ದಾರುಣವಾದುದಾಗಿತ್ತು. 

ಸ್ಯಾಮ್ಯುಯೆಲ್ ಡೊ ನ ಕ್ರೂರ ಆಡಳಿತದ ಅವಧಿಯಲ್ಲಿ ಸೆರೆವಾಸ ಹಾಗೂ ಸೈನಿಕನೊಬ್ಬನಿಂದ ಅತ್ಯಾಚಾರ ಯತ್ನಗಳನ್ನು ಸ್ವತಃ ಸರ್‌ಲೀಫ್ ಅವರೂ ಎದುರಿಸಿದ್ದರು.  ಅಂತರ್ಯುದ್ಧಗಳಲ್ಲಿ ನಲುಗಿದ ನಾಡನ್ನು ಮರು ನಿರ್ಮಿಸುವ ಯಾನದಲ್ಲಿ  ಎದುರಾದ ಅಸಂಖ್ಯ ಸವಾಲುಗಳ  ನಡುವೆಯೂ ಸ್ಥಿರವಾಗಿ ಉಳಿದವರು ಸರ್‌ಲೀಫ್. 

 ಲೈಬೀರಿಯಾ ಅಧ್ಯಕ್ಷೆಯಾಗಿ  ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ ಮಹಿಳಾ ಹಕ್ಕುಗಳನ್ನು ಕುರಿತು ಅವರು ಮಾತನಾಡತೊಡಗಿದರು. ಅಂತರ್ಯುದ್ಧದಲ್ಲಿ  ಅನೇಕ ಮಹಿಳೆಯರು ಲೈಂಗಿಕವಾಗಿ ಶೋಷಿತರಾಗಿದ್ದರೂ ಅತ್ಯಾಚಾರವನ್ನು ಖಾಸಗಿ ವಿಚಾರವಾಗೇ ಪರಿಗಣಿಸಲಾಗುತ್ತಿತ್ತು.  ಲೈಂಗಿಕ ಹಾಗೂ ಲಿಂಗಾಧಾರಿತ ಹಿಂಸಾಚಾರಗಳಡಿ ನಲುಗುವ ಮಹಿಳೆಯರ ರಕ್ಷಣೆಗಾಗಿ  ವಿಸ್ತೃತವಾದ ಅತ್ಯಾಚಾರ ಕಾನೂನನ್ನು ಸರ್‌ಲೀಫ್ ಜಾರಿಗೊಳಿಸಿದರು.

   ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಸುಮ್ಮನಾಗಿಸಲು 2 ಡಾಲರ್ ಸಾಕಾಗುವಂತಹ ನಾಡಿನಲ್ಲಿ ಅತ್ಯಾಚಾರದ ದೂರುಗಳನ್ನು  ದಾಖಲಿಸಲು ಉತ್ತೇಜಿಸುವುದಕ್ಕಾಗಿ ವಿಶೇಷ ನ್ಯಾಯಾಲಯಗಳನ್ನೂ ಅವರು ಸ್ಥಾಪಿಸಿದರು. ಆದರೆ  ಈ ಕೋರ್ಟ್‌ಗಳು ಯಶಸ್ವಿಯಾಗಲಿಲ್ಲ ಎಂಬುದು ಬೇರೆ ಮಾತು. ಹೀಗಿದ್ದೂ ಮಹಿಳೆ ಕುರಿತ ದೃಷ್ಟಿಕೋನಗಳ ಬದಲಾವಣೆಗೆ ಅವರು ಅಡಿಪಾಯ ಹಾಕಿದ್ದಂತೂ ನಿಜ.

ಸೈನಿಕನೊಬ್ಬನ ಅತ್ಯಾಚಾರ ಯತ್ನ ಹಾಗೂ ಕೌಟುಂಬಿಕ ಹಿಂಸೆಗಳ ಕೂಪದಿಂದ ಬಿಡಿಸಿಕೊಂಡು ಬೆಳೆದವರು ತಾವೆಂದು ಅವರು ಮುಕ್ತವಾಗಿ ಹೇಳಿದ್ದಾರೆ. ಆ ಮೂಲಕ ಮೌನದೊಳಗೆ ಹುದುಗಿಹೋಗಿದ್ದ ಮಹಿಳೆಯ ನೋವು, ಅನುಭವಗಳಿಗೆ ದನಿ ನೀಡಿದರು.

 ಲೈಬೀರಿಯಾ ನಾಡನ್ನು ಮರು ಕಟ್ಟುವಾಗ ಮಹಿಳೆಯರನ್ನು ಒಳಗೊಳ್ಳುವುದನ್ನು ಆದ್ಯತೆಯಾಗಿಸಿಕೊಂಡರು. ವಾಣಿಜ್ಯ, ನ್ಯಾಯ, ಹಣಕಾಸು, ಯುವಜನ, ಕ್ರೀಡೆ, ಜೆಂಡರ್ ಹಾಗೂ ಅಭಿವೃದ್ಧಿ ಖಾತೆಗಳಿಗೆ ಮಹಿಳೆಯರೇ ಸಚಿವರು.
 
ನಾಗರಿಕ ಹಾಗೂ ಸುರಕ್ಷಿತ ಸಮಾಜಕ್ಕಾಗಿ ಸಶಕ್ತ ಮಹಿಳೆಯರು ಅಗತ್ಯ ಎಂಬುದನ್ನು ಘೋಷಿಸಿದ ಸರ್‌ಲೀಫ್ ರಾಷ್ಟ್ರದ ಶೇಕಡಾ 40ರಷ್ಟು ಬಾಲಕಿಯರು ಉಚಿತ ಕಡ್ಡಾಯ ಶಾಲೆಗಳಿಗೆ ಪ್ರವೇಶ ಪಡೆಯುವಂತೆ ಮಾಡಿದರು.  `ಉಕ್ಕಿನ ಮಹಿಳೆ~ ಎಂದು ಹೆಸರಾದ ಸರ್‌ಲೀಫ್  ಅಧ್ಯಕ್ಷ ಸ್ಥಾನಕ್ಕೆ ತಾಯಿಯ ಸೂಕ್ಷ್ಮತೆ ಹಾಗೂ ಭಾವನೆಗಳನ್ನು ತರುವುದಾಗಿ  ಘೋಷಿಸಿದ್ದರು. ಯುದ್ಧದ ಸಂದರ್ಭದಲ್ಲಿ ಹಾಗೂ ನಂತರ ಪಶ್ಚಿಮ ಆಫ್ರಿಕಾ ರಾಷ್ಟ್ರಗಳಲ್ಲಿ  ಮಹಿಳೆಯರ ಪ್ರಭಾವ ಹೆಚ್ಚಾಗುವಂತೆ ಕೆಲಸ ಮಾಡಿದವರು ಅವರು.

ಸರ್‌ಲೀಫ್ ಅವರು ಹಲವು ವರ್ಷಗಳ ಕಾಲ ದೇಶದಿಂದ ಹೊರಗೆ ವಾಸಿಸುತ್ತಿದ್ದರು. ಆಗ ಅವರು ವಿಶ್ವ ಬ್ಯಾಂಕ್‌ನ ಆರ್ಥಿಕ ತಜ್ಞರಾಗಿದ್ದರು.  ಲೈಬೀರಿಯಾದಲ್ಲಿ ಅವರನ್ನು ಸುಧಾರಕಿ ಹಾಗೂ ಶಾಂತಿ ಸ್ಥಾಪಕಿ ಎಂದೇ ಗುರುತಿಸಲಾಗುತ್ತದೆ.

1980ರ ದಶಕದಲ್ಲಿ ಸರ್ವಾಧಿಕಾರಿ ಟೇಲರ್‌ನನ್ನು ಸರ್‌ಲೀಫ್ ಬೆಂಬಲಿಸಿದ್ದರು  ಎಂಬಂತಹ ಕಾರಣಗಳಿಂದಾಗಿ ತಮ್ಮದೇ ದೇಶದಲ್ಲಿ ಸರ್‌ಲೀಫ್ ಸಾಕಷ್ಟು ಟೀಕೆಗಳಿಗೂ ಗುರಿಯಾಗಿದ್ದಾರೆ.  ಟೇಲರ್‌ನನ್ನು ಬೆಂಬಲಿಸಿದ ಆ ದಿನಗಳಲ್ಲಿ ತಮಗೆ ಆತನ ದುರುದ್ದೇಶದ ಅರಿವಿರಲಿಲ್ಲ ಎಂದು ಲೈಬೀರಿಯಾದ ಸತ್ಯ ಹಾಗೂ ಸಂಧಾನ ಆಯೋಗದ ಮುಂದೆ ಸಾಕ್ಷ್ಯ ನುಡಿದಿದ್ದಾರೆ.

ಒಟ್ಟಾರೆ, ಲಿಂಗಾಧಾರಿತ ಹಿಂಸಾಚಾರ ಹಾಗೂ ವಿಮೋಚನೆ ಹೆಸರಲ್ಲಿ ನಡೆಯುವಂತಹ ಹತ್ಯೆ, ಯುದ್ಧ ಹಾಗೂ ಕ್ಷಿಪಣಿದಾಳಿಗಳ ಅಂತ್ಯಕ್ಕೆ  ಹಂಬಲಿಸುವಂತಹ ವಿಶ್ವದ ಮಹಿಳೆಯರ ಚೈತನ್ಯವನ್ನು ಸರ್‌ಲೀಫ್ ಹಾಗೂ ಜಿಬೊವೀ ಪ್ರತಿನಿಧಿಸುತ್ತಾರೆ ಎನ್ನಬಹುದು.

ಮಹಿಳೆಯರ ಸುರಕ್ಷತೆ ಹಾಗೂ ಶಾಂತಿ ಸ್ಥಾಪನೆ ಪ್ರಕ್ರಿಯೆಯಲ್ಲಿ ಪೂರ್ಣ ಪಾಲ್ಗೊಳ್ಳುವಿಕೆಗೆ ಮಹಿಳೆಯರ ಹಕ್ಕಿಗಾಗಿ  ನಡೆಸಿದ ಅಹಿಂಸಾತ್ಮಕ ಹೋರಾಟಗಳಿಗಾಗಿ  ಈ ಮೂವರು ಮಹಿಳೆಯರನ್ನು ಗೌರವಿಸುತ್ತಿರುವುದಾಗಿ ನೊಬೆಲ್ ಪ್ರಶಸ್ತಿ ಸಮಿತಿಯೂ ಹೇಳಿದೆ. 

 ಅತ್ಯಾಚಾರ ಹಾಗೂ ಮಹಿಳೆಯರ ಮೇಲೆ ನಡೆಯುವ ಹಿಂಸಾಚಾರಗಳ  ಬಗ್ಗೆ ಈ ಪ್ರಶಸ್ತಿ ಜಗತ್ತಿನ ಗಮನ ಸೆಳೆದಿದೆ. ಜೊತೆಗೆ ಆಫ್ರಿಕಾ, ಅರಬ್ ಪ್ರಪಂಚದಲ್ಲಿ ಪ್ರಜಾಪ್ರಭುತ್ವದ ಬೆಳವಣಿಗೆಗೆ ಮಹಿಳೆಯರ ಪಾತ್ರ ಕುರಿತಂತೆಯೂ ಈ ಪ್ರಶಸ್ತಿ ಹೆಚ್ಚಿನ ಗಮನ ಸೆಳೆಯುತ್ತದೆಂಬ ಆಶಯವನ್ನೂ ಸಮಿತಿ ವ್ಯಕ್ತ ಪಡಿಸಿದೆ.

 ಹೀಗಾಗಿ, ಶಾಂತಿ ಹೋರಾಟದ ಹೊಸ ಆಯಾಮಗಳನ್ನು ಈ  ಮೂವರು ಮಹಿಳೆಯರಿಗೆ ಸಂದಿರುವ ನೊಬೆಲ್ ಶಾಂತಿ ಪ್ರಶಸ್ತಿಯಿಂದ ಗುರುತಿಸಲಾಗಿದೆ ಎನ್ನಬಹುದು. ಶಾಂತಿ ಹೋರಾಟಗಾರರಾಗಿ ಮಹಿಳೆಯರು ಯಾವಾಗಲೂ ಮಹತ್ವದ ಪಾತ್ರಗಳನ್ನು ನಿರ್ವಹಿಸಿಯೇ ಇದ್ದಾರೆ.
 
ಅಮೆರಿಕನ್ ನಾಗರಿಕ ಹಕ್ಕುಗಳ ಹೋರಾಟದಲ್ಲಿ ರೋಸಾ ಪಾರ್ಕ್ಸ್ ಪಾತ್ರವನ್ನು ನೆನಪಿಸಿಕೊಳ್ಳಿ.  ಆದರೆ ಇಂದು ಮಹಿಳೆಯರೇ ನಾಯಕರಾಗಿ ಮುಂಚೂಣಿಯಲ್ಲಿದ್ದು ಬದಲಾವಣೆಗೆ ನೇರವಾಗಿ ಕಾರಣರಾಗುತ್ತಿದ್ದಾರೆ ಎಂಬುದನ್ನು 2011ರ ಈ ನೊಬೆಲ್ ಶಾಂತಿ ಪ್ರಶಸ್ತಿ ಗುರುತಿಸಿದೆ.
 
ಬಹಳ ಮುಖ್ಯವಾದದ್ದು ಏನೆಂದರೆ ಪ್ರತಿಭಟನಾ ರ‌್ಯಾಲಿ ನಡೆಸಲಿ, ಬ್ಲಾಗ್‌ನಲ್ಲಿ ಬರೆಯಲಿ, ಪ್ರಾರ್ಥನೆ ಮಾಡಲಿ - ಈ ಮಹಿಳೆಯರು ಈ ತಮ್ಮ ಕಾರ್ಯಗಳಿಗೆ ತಮ್ಮದೇ ಆದೊಂದು ಸೃಜನಶೀಲತೆಯ ಸ್ಪರ್ಶವನ್ನೂ ನೀಡುತ್ತಿದ್ದಾರೆ. ಶಾಂತಿ ಸ್ಥಾಪನೆ ಎನ್ನುವುದು ಇಂದು ನಿಜಕ್ಕೂ ಮಹಿಳೆಯ ಕಾರ್ಯವಾಗಿದೆ. ಅದು ಯಾವಾಗಲೂ ಮಹಿಳೆಯೊಳಗಿನ ತುಡಿತವೂ ಹೌದು.

ನೊಬೆಲ್ ಶಾಂತಿ ಪ್ರಶಸ್ತಿ ಸದಾ ಒಂದಲ್ಲ  ಒಂದು ವಿವಾದಕ್ಕೆ ಸಿಲುಕುತ್ತದೆ. ಲೈಬೀರಿಯಾದಲ್ಲಿ ಮರುಚುನಾವಣೆಗಳು ನಡೆದಿರುವ ಸಂದರ್ಭದಲ್ಲೇ ಈ ಪ್ರಶಸ್ತಿಯ ಘೋಷಣೆ  ಸರ್‌ಲೀಫ್ ಅವರನ್ನೇ ಪುನರಾಯ್ಕೆ ಮಾಡಬೇಕೆಂಬ ಒತ್ತಡ ತಂತ್ರಕ್ಕೆ ಕಾರಣವಾಗುತ್ತದೆ ಎಂಬ ಆರೋಪ ಲೈಬೀರಿಯಾದ ಪ್ರತಿಪಕ್ಷಗಳ ನಾಯಕರಿಂದ ಬಂದಿದೆ. 

ಯೆಮೆನ್‌ನ ತವಾಕುಲ್ ಕರ್ಮಾನ್ 32 ವರ್ಷದವರಾಗ್ದ್ದಿದು ಅವರಿನ್ನೂ ಸಾಧಿಸುವುದು ಇದೆ ಎಂಬಂತಹ ವಾದಗಳ ಹಿನ್ನೆಲೆಯಲ್ಲಿ ಟೀಕೆಗಳು ವ್ಯಕ್ತವಾಗಿವೆ. ವಾದಗಳು ಏನೇ ಇರಲಿ, ಈ ಮೂವರು ಸಾಹಸಿ ಮಹಿಳೆಯರ ಸಾಧನೆಗೆ ಸಂದ ಗೌರವ ಈ ಪ್ರಶಸ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ವಿಶ್ವದಾದ್ಯಂತ ಸಂಘರ್ಷಗಳ ಫಲವಾಗಿ ಮನೆಮಠ ಕಳೆದುಕೊಳ್ಳುವ  4 ಕೋಟಿ ಜನರಲ್ಲಿ ಮುಕ್ಕಾಲು ಭಾಗದಷ್ಟು ಮಂದಿ ಮಹಿಳೆಯರು ಹಾಗೂ ಮಕ್ಕಳೇ ಆಗಿರುತ್ತಾರೆ. ಹೀಗಾಗಿ ಶಾಂತಿ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾತ್ರ ಕಡೆಗಣಿಸುವಂತಹದ್ದಲ್ಲ ಎಂಬುದನ್ನು ಈ ಪ್ರಶಸ್ತಿ ಮತ್ತೊಮ್ಮೆ ನಮಗೆ ನೆನಪಿಸಿದೆ.

ನೊಬೆಲ್ `ಶಾಂತಿ~ ಮಹಿಳೆಯರು
 2004ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದ ಕೀನ್ಯಾದ ವಾಂಗರಿ ಮಥಾಯ್ ನಂತರ ಮತ್ತೊಮ್ಮೆ  ಈ ಪ್ರಶಸ್ತಿ  ಮಹಿಳೆಯರಿಗೆ ಸಂದಿದೆ. ನೊಬೆಲ್ ಪ್ರಶಸ್ತಿಯ 110 ವರ್ಷದ ಇತಿಹಾಸದಲ್ಲಿ  ಬಹುತೇಕ ಪ್ರಶಸ್ತಿ ವಿಜೇತರು ಪುರುಷರೇ. ಈಗಿನ ಈ ಮೂವರು ಮಹಿಳೆಯರೂ ಸೇರಿದಂತೆ ಕೇವಲ 15 ಮಹಿಳೆಯರು ಮಾತ್ರ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT