ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸ್ತರಣೆಯಾದರೂ ಎಂಬಿ ರಸ್ತೆ ಇಕ್ಕಟ್ಟು

Last Updated 14 ಸೆಪ್ಟೆಂಬರ್ 2013, 6:06 IST
ಅಕ್ಷರ ಗಾತ್ರ

ಕೋಲಾರ: ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಎಂ.ಬಿ.ರಸ್ತೆಯು ವಿಸ್ತರಣೆಯಾದರೂ ಜನರಿಗೆ ಮತ್ತು ವಾಹನ ಸವಾರರಿಗೆ ಇಕ್ಕಟ್ಟಿನಲ್ಲೇ ಸಂಚರಿಸುವ ಕಷ್ಟ ತಪ್ಪಿಲ್ಲ.

ಪಾದಚಾರಿಗಳು ರಸ್ತೆ ಮಧ್ಯೆಯೇ ಸಂಚರಿ­ಸುತ್ತಿದ್ದಾರೆ. ಅವರಿಗೆಂದೇ ಇರುವ ‘ಪಾದಚಾರಿ ರಸ್ತೆ’ಯನ್ನು ರಸ್ತೆ ಬದಿ ಅಂಗಡಿಗಳ ಮಂದಿ ಪೂರ್ಣ ಒತ್ತುವರಿ ಮಾಡಿರುವುದರಿಂದ ಅವರ ಪ್ರಾಣಕ್ಕೆ ಬೆಲೆಯೇ ಇಲ್ಲವಾಗಿದೆ.

ಇದರ ಜೊತೆಗೆ, ಏಕಕಾಲಕ್ಕೆ ಎರಡು ವಾಹನ­ಗಳು ಒಟ್ಟಿಗೇ ಚಲಿಸಲು ಕಷ್ಟಕರವಾದ ಸನ್ನಿವೇಶ­ವಿದೆ. ರಸ್ತೆಯ ಎರಡೂ ಬದಿಯಲ್ಲಿ ಪಾದಚಾರಿ ರಸ್ತೆ ಮತ್ತು ಮುಖ್ಯ ರಸ್ತೆಯನ್ನು ವ್ಯಾಪಾರಿಗಳು ತಮ್ಮ ಇಷ್ಟಕ್ಕೆ ತಕ್ಕಂತೆ ಆಕ್ರಮಿಸಿಕೊಂಡಿದ್ದಾರೆ. ಈ ಸನ್ನಿವೇಶ ನಿರ್ಮಾಣವಾಗದಂತೆ ಎಚ್ಚರಿಕೆ ವಹಿಸಬೇಕಾಗಿದ್ದ ಸಂಚಾರ ನಿಯಂತ್ರಣ ಠಾಣೆ ಪೊಲೀಸರು ಕೂಡ ಕಂಡೂ ಕಾಣದಂತಿರುವುದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಹೊಸ ಬಸ್‌ ನಿಲ್ದಾಣ ವೃತ್ತದಿಂದ ಅಮ್ಮವಾರಿ-­ಪೇಟೆ ವೃತ್ತ ಮತ್ತು ಮೆಕ್ಕೆ ವೃತ್ತದವರೆಗೂ ವಿಸ್ತರಣೆ ಕಂಡಿರುವ ಎಂಬಿ ರಸ್ತೆಯ ವಿಸ್ತರಣೆಯ ಸಂದರ್ಭದಲ್ಲಿದ್ದ ಸುಗಮ ಸಂಚಾರದ ಆಶಯವು ಅರ್ಥ ಕಳೆದುಕೊಂಡಿದೆ. ನಿಲ್ದಾಣ ವೃತ್ತದಿಂದ ಮೆಕ್ಕೆ ವೃತ್ತದವರೆಗೂ ಎರಡೂ ಬದಿಯಲ್ಲಿ ಹೆಚ್ಚಿನ ಮಟ್ಟಿಗೆ ದ್ವಿಚಕ್ರ ವಾಹನ ದುರಸ್ತಿ, ಮಾರಾಟದ ಅಂಗಡಿಗಳು ಪಾದಚಾರಿ ರಸ್ತೆಯನ್ನು ತಮ್ಮ ಆಕ್ರಮಿಸಿಕೊಂಡಿವೆ. ಅವುಗಳ ಜೊತೆಗೆ ಟೀ. ಕಾಫಿ, ಬೀಡಾ ಅಂಗಡಿಗಳು, ಹೋಟೆಲ್‌ಗಳು ಕೂಡ ರಸ್ತೆಯನ್ನು ಆಕ್ರಮಿಸಿವೆ.  ಈ ಅಂಗಡಿಗಳಿಗೆ ಬರುವ ಗ್ರಾಹಕರು ಕೂಡ ರಸ್ತೆಯಲ್ಲೇ ನಿಲ್ಲುತ್ತಾರೆ. ಅವರನ್ನು ದಾಟಿಕೊಂಡೇ ಜನ ಸಂಚರಿಸುತ್ತಾರೆ.

ರಾಷ್ಟ್ರೀಯ ಹೆದ್ದಾರಿ4ರಿಂದ ರಾಷ್ಟ್ರೀಯ ಹೆದ್ದಾರಿ 4ರವರೆಗೆ ಎಂಬ ಹೆಸರಿನಲ್ಲಿ ಕಳೆದ ಜನವರಿಯಲ್ಲಿ ರೂ 2.8 ಕೋಟಿ ವೆಚ್ಚದಲ್ಲಿ ನಡೆದ ರಸ್ತೆ ವಿಸ್ತರಣೆ ಕಾಮಗಾರಿಯ ಪರಿಣಾಮವಾಗಿ ರಸ್ತೆಯ ಎರಡೂ ಬದಿಯಲ್ಲಿ 7.5 ಮೀಟರ್‌ನಷ್ಟು ರಸ್ತೆ ನಿರ್ಮಿಸಲಾಗಿದೆ. ಸುಮಾರು ಒಂದೂವರೆ ಮೀಟರ್‌ನಷ್ಟು ಜಾಗದಲ್ಲಿ ಚರಂಡಿ ನಿರ್ಮಿಸ­ಲಾಗಿದೆ. ಆದರೆ ಚರಂಡಿಗಳ ಮೇಲೆ ಅಂಗಡಿ ಮಾಲೀಕರು ಸಾಮಗ್ರಿಗಳನ್ನು ಪೇರಿಸಿಡುವುದು ಮಾಮೂಲಿಯಾಗಿದೆ.

ಅಪಘಾತ: ವಿಸ್ತರಣೆಗೊಂಡು ಜೋಡಿ ರಸ್ತೆಯಾಗಿ­ರುವ ಎಂಬಿ ರಸ್ತೆಯ ಎರಡೂ ಬದಿಯಲ್ಲಿ, ಸಂಚಾರ ನಿಯಮಗಳನ್ನು ಮೀರಿ ಬೈಕ್‌ ಚಾಲನೆ ಮಾಡುವ ಯುವಕರ ಹಾವಳಿಯೂ ಹೆಚ್ಚಾಗಿದೆ. ಅದರ ಪರಿಣಾಮವಾಗಿ ಅಪಘಾತಗಳೂ ನಡೆ­ಯುತ್ತಿವೆ.
ಇತ್ತೀಚೆಗಷ್ಟೆ ಅಮ್ಮವಾರಿಪೇಟೆ ವೃತ್ತದಲ್ಲಿ ನಿವೃತ್ತ ಸಬ್‌ ಇನ್ಸ್ ಪೆಕ್ಟರ್‌ ಒಬ್ಬರ ಪುತ್ರ, ಅವರ ಪತ್ನಿ, ಮಗು ಸಮೇತ ಅಪಘಾತಕ್ಕೆ ಈಡಾದ ಘಟನೆಯೂ ನಡೆದಿದೆ. ಎಂಬಿ ರಸ್ತೆಯ ಒಂದು ಬದಿಯಲ್ಲಿ ನಿಯಮ ಮೀರಿ ವಿರುದ್ಧ ದಿಕ್ಕಿನಿಂದ ಸಂಚರಿಸಿದ ಬೈಕ್‌ ಸವಾರನ ಬೇಜವಾಬ್ದಾರಿತನವೇ ಅದಕ್ಕೆ ಕಾರಣವಾಗಿತ್ತು. ಅಮ್ಮವಾರಿಪೇಟೆಯ ನೆಲಗಂಗಮ್ಮ ದೇವಾಲಯಕ್ಕೆ ದೀಪದಾರತಿಗಳನ್ನು ಹೊತ್ತು ಬರುತ್ತಿದ್ದ ಗೃಹಿಣಿಯರಿಗೆ ಹಿಂಬದಿಯಿಂದ ಆಟ ಡಿಕ್ಕಿ ಹೊಡೆದ ಘಟನೆಯೂ ನಡೆದಿದೆ. ಒಟ್ಟಾರೆ ಹೆಚ್ಚು ಅನುಕೂಲಕರವಾಗಬೇಕಿದ್ದ ರಸ್ತೆ ವಿಸ್ತರಣೆಯು ಅದರ ಬದಲಿಗೆ ಅನನುಕೂಲಗಳನ್ನೇ ತಂದೊಡ್ಡುತ್ತಿದೆ ಎಂಬುದು ಹಲವರ ಅಸಮಾ­ಧಾನದ ನುಡಿ.

ಬ್ಯಾರಿಕೇಡ್‌ ಅಗತ್ಯ: ಪಾದಚಾರಿ ರಸ್ತೆಯನ್ನು ಎರಡೂ ಬದಿಯಲ್ಲಿ ಒತ್ತುವರಿ ಮಾಡಿ­ಕೊಳ್ಳು­ವುದನ್ನು ತಪ್ಪಿಸಲು, ಉದ್ದಕ್ಕೂ ಅಲ್ಲಲ್ಲಿ ಬ್ಯಾರಿಕೇಡ್‌­ಗಳನ್ನು ಅಳವಡಿಸುವುದು ಅಗತ್ಯ ಎನ್ನುತ್ತಾರೆ ಗಾಂಧಿನಗರದ ವೆಂಕಟರಮಣ. ಅದರಿಂದ, ಪಾದಚಾರಿಗಳು ರಸ್ತೆಗಿಳಿಯಲು ಅವಕಾಶವಿರು­ವುದಿಲ್ಲ. ಅಪಘಾತಗಳ ಸಂಖ್ಯೆಯೂ ಕಡಿಮೆ­ಯಾಗುತ್ತದೆ. ವ್ಯಾಪಾರ–ವಹಿವಾಟು ಕೂಡ ಸಮರ್ಪಕವಾಗಿ ನಡೆಯುತ್ತದೆ ಎಂಬುದು ಅವರ ಅಭಿಪ್ರಾಯ.

ಅಂಗಡಿ ಮಾಲಿಕರು ಪಾದಚಾರಿ ರಸ್ತೆಯನ್ನು ಒತ್ತುವರಿ ಮಾಡಿಕೊಳ್ಳದಂತೆ ನಗರಸಭೆ ಮತ್ತು ಸಂಚಾರ ನಿಯಂತ್ರಣ ಠಾಣೆ ಪೊಲೀಸರು ಕಟ್ಟುನಿಟ್ಟಿನ ನಿಯಮ ಜಾರಿಗೆ ತರಬೇಕು. ಸುಗಮ ಸಂಚಾರ ವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಹಲವು ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT