ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರನೊಬ್ಬನ ಆಕರ್ಷಕ, ರೋಚಕ ಚಿತ್ರಣ

ಪುಸ್ತಕ ವಿಮರ್ಶೆ
Last Updated 14 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಐತಿಹಾಸಿಕ ಕಾದಂಬರಿಗಳು ಈಚೆಗೆ ಕನ್ನಡದಲ್ಲಿ ಅಪರೂಪವಾಗುತ್ತಿವೆ. ಇಂಥ ಕಾದಂಬರಿಗಳನ್ನು ಬರೆಯವುದರ ಬಗ್ಗೆ ಕನ್ನಡ ಲೇಖಕರಿಗೆ ಅವಜ್ಞೆಯೋ ನಿರ್ಲಕ್ಷ್ಯವೋ ಇದ್ದಂತಿದೆ. ತಮ್ಮ ಅನುಭವ ಶೋಧನೆಗೆ ಗತದ ಬದುಕು ಅಷ್ಟಾಗಿ ಅವರಿಗೆ ಆಕರ್ಷಕ ಎನ್ನಿಸುತ್ತಿಲ್ಲ. ಈ ಅಂಶ ಕನ್ನಡ ಸಾಹಿತ್ಯದ ದೃಷ್ಟಿಯಿಂದ ಅಭ್ಯಾಸ ಯೋಗ್ಯವಾಗಿದೆ.

ಇಂಥ ಹೊತ್ತಿನಲ್ಲಿ ಚಿತ್ರಾ ರಾಮಚಂದ್ರನ್ ಮೈಸೂರು ರಾಜ್ಯವನ್ನು ಆಳಿದ ಟಿಪ್ಪು ಸುಲ್ತಾನನ ಕಾಲದ ಜನಜೀವನ, ಬದುಕನ್ನು ಇಟ್ಟುಕೊಂಡು ಕಾಲ್ಪನಿಕ ವೀರಬಾಲಕ ಕೇಸರಿ ಸಿಂಘನ ಕಥೆಯನ್ನು ಚಿತ್ರಿಸಿದ್ದಾರೆ. ತನ್ನ ತಂದೆ ವೀರ ವಿಶ್ವನಾಥನನ್ನು ಬಾಲ್ಯದಲ್ಲೇ ಕಳೆದುಕೊಂಡ ಬಾಲಕ ಕೇಸರಿ ಸಿಂಘ ರಾಜನಿಷ್ಠೆಯ ಯೋಧನಾಗಿ ಬೆಳೆಯುವುದು ಈ ಕಾದಂಬರಿಯ ಸ್ಥೂಲ ಕಥಾನಕ. ಇದು ಕೇಸರಿ ಸಿಂಘನ ಕಥೆ ಮಾತ್ರವಲ್ಲ. ಟಿಪ್ಪುವಿನ ಕೊನೆಯ ಕಾಲದ ಆಗಿನ ಜನಜೀವನದ ಚಿತ್ರಣ ಕೂಡ. ಟಿಪ್ಪುವಿನ ವಿರುದ್ಧ ನಡೆಯುವ ಒಳಸಂಚಿನಲ್ಲಿ ಭಾಗಿಯಾಗುವವರು ಹಾಗೂ ಅವನಿಗೆ ನಿಷ್ಠರಾಗಿರುವವರು ಎಲ್ಲರೂ ಸೇರಿಯೇ ಈ ಕಥನ ರೂಪುಗೊಂಡಿದೆ.

ಟಿಪ್ಪು ಹೊರತಾಗಿ ಇಲ್ಲಿನ ಬಹುಪಾಲು ಪಾತ್ರಗಳು ಕಾಲ್ಪನಿಕ. ನಾಯಕ ಕೇಸರಿ ಸಿಂಘ ಕಾದಂಬರಿಯ ರಾಜಕೀಯ ಸಂಘರ್ಷದ ಕೇಂದ್ರವಾದ ಶ್ರೀರಂಗಪಟ್ಟಣಕ್ಕೆ ತನ್ನ ಹಳ್ಳಿಯಿಂದ ಹೋಗಿ ಅಲ್ಲಿನ ಟಿಪ್ಪುವಿನ ವಿರುದ್ಧದ ಒಳಘರ್ಷಣೆಯ ಭಾಗವಾಗುವುದು, ಅದಕ್ಕೆ ಸಾಕ್ಷಿಯಾಗುವುದು ಅನಿವಾರ್ಯವಾಗುತ್ತದೆ. ಅವನಿಗೆ ತಂದೆ ವಿಶ್ವನಾಥ ಹಾಗೂ ಟಿಪ್ಪು ಆದರ್ಶವಾಗುತ್ತಾರೆ. ಅವರೇ ಅವನ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಾರೆ.

ಇದು ಒಂದು ರೀತಿಯಲ್ಲಿ ಹಲಬಗೆಯ ಆದರ್ಶ, ಗುರಿಯನ್ನು ಇಟ್ಟುಕೊಂಡು ನಗರಕ್ಕೆ ಸೇರಿಕೊಳ್ಳುವ ಹುಡುಗರ ಪ್ರಯಾಣದಂತೆಯೇ ಇದೆ. ಕಾಲ ಮಾತ್ರ ಬೇರೆ. ಆದರೆ, ಈಗಿನ ಹುಡುಗರ ಆದರ್ಶ ಛಿದ್ರಗೊಂಡಿದೆ. ಅವರ ಆದರ್ಶದ ಏಕೈಕ ಗುರಿ ಹಣ ಮಾಡುವುದಾಗಿದೆ. ಈ ಹುಡುಗನದು ಅರ್ಥವಿಲ್ಲದ, ಸ್ವಾರ್ಥವಿಲ್ಲದ, ಅವನ ಮಟ್ಟಿಗೆ, ಆ ಕಾಲದ ಸಾರ್ಥಕ ಎನ್ನಿಸುವ ಯಾತ್ರೆ. ಟಿಪ್ಪುವಿಗೆ ಕೇಡು ಬಗೆಯಲು ಯತ್ನಿಸುವವರ ಪ್ರಯತ್ನವನ್ನು ಭಂಗಗೊಳಿಸುವಲ್ಲಿ ಅವನು ಮುಖ್ಯ ಪಾತ್ರವನ್ನು ಈ ಕಥಾನಕದಲ್ಲಿ ವಹಿಸುತ್ತಾನೆ.

ಇದು ನಮ್ಮ ಮಹಾಕಾವ್ಯಗಳ, ಐತಿಹಾಸಿಕ ವ್ಯಕ್ತಿಗಳು ವೀರರಾಗಿ ಬೆಳೆದು ಬಂದ ರೀತಿಯನ್ನು ಅನುಸರಿಸಿದ ಕಾದಂಬರಿಯಾಗಿದೆ. ಇದು ಒಬ್ಬ ಜನನಾಯಕ ಅಥವಾ ವೀರನೊಬ್ಬ ಕಷ್ಟಗಳನ್ನು, ವಿರೋಧಗಳನ್ನು ಎದುರಿಸಿ ಹಂತ ಹಂತವಾಗಿ ಬೆಳೆಯುವ ರೀತಿಯದೇ. ಕೇಸರಿ ಸಿಂಘನ ಪಾತ್ರ ಚಿತ್ರಣವನ್ನು ಸೂಕ್ಷ್ಮವಾಗಿ ನೋಡಿದರೆ ಅವನು ನಮ್ಮಲ್ಲಿ ಬಂದ ಅನೇಕ ವೀರರಿಗಿಂತ ಬೇರೆಯಾದವನಲ್ಲ. ಇದು ಇಂಥ ಐತಿಹಾಸಿಕ ಹಿನ್ನೆಲೆಯ ಕಾದಂಬರಿಗಳ ಬರವಣಿಗೆಯ ಒಂದು ಕ್ರಮವೇ ಆದ್ದರಿಂದ ರೋಚಕವಾಗಿ, ಕುತೂಹಲಕರವಾಗಿ, ಧೈರ್ಯ, ಶೌರ್ಯಗಳನ್ನು ಪ್ರದರ್ಶಿಸುವ  ಪಾತ್ರವಾಗಿ ಬೆಳೆದು ನಿಂತಿದೆ. ಭಾರತವನ್ನು ಆಗ ಆಳುತ್ತಿದ್ದ ಬ್ರಿಟಿಷರ ವಿರುದ್ಧದ ದ್ವೇಷ, ಸ್ವಾಭಿಮಾನ, ದೇಶಾಭಿಮಾನವನ್ನು ಪ್ರದರ್ಶಿಸಿಸುವ ಈ ಕೇಸರಿ ಸಿಂಘ ಎಲ್ಲರಿಗೂ ಇಷ್ಟವಾಗಬಹುದಾದ ಆದರ್ಶ ನಾಯಕ. ಅವನಿಲ್ಲಿ ಎಲ್ಲಿಯೂ ಕುಂದಿಲ್ಲದಂತೆ ಚಿತ್ರಣಗೊಂಡಿದ್ದಾನೆ.

ಎಲ್ಲೆಡೆ ಟಿಪ್ಪುವಿನ ಕೆಲಸ, ಅವನ ಚತುರ ಗುಣ, ಬ್ರಿಟಿಷರ ವಿರುದ್ಧ ಅವನ ಹೋರಾಟ ಇವೆಲ್ಲವೂ ಜನರ ಮಾತುಕತೆಯಲ್ಲಿ ಕಾಣಿಸುತ್ತದೆ. ಕಾದಂಬರಿಯುದ್ದಕ್ಕೂ ಟಿಪ್ಪೂ ನೆರಳಿನಂತೆ ಇರುತ್ತಾನೆ; ಎಲ್ಲಿಯೂ ಕಾಣುವುದಿಲ್ಲ. ಒಂದು ರೀತಿಯಲ್ಲಿ ಟಿಪ್ಪು ಈ ಕಾದಂಬರಿಯಲ್ಲಿ ಎಲ್ಲವನ್ನೂ ನಿಯಂತ್ರಿಸುವ ಅದೃಶ್ಯ ನಾಯಕ.

ಒಮ್ಮೆ ಮಾತ್ರ, ಕಾದಂಬರಿಯ ಕೊನೆಯ ಭಾಗದಲ್ಲಿ ನಾಯಕ ಕೇಸರಿ ಸಿಂಘನಿಗೆ ಅವನ ಶೌರ್ಯವನ್ನು ಮೆಚ್ಚಿ ಕತ್ತಿಯನ್ನು ಸೊಂಟಕ್ಕೆ ಸಿಕ್ಕಿಸುವಾಗ ಮಾತ್ರ ಅವನು ಕಾಣಿಸಿಕೊಳ್ಳುವುದು. ಹೀಗೆ ಅದೃಶ್ಯವಾಗಿಯೇ ಇದ್ದು, ಬ್ರಿಟಿಷರ ವಿರುದ್ಧ ಹೋರಾಡುವ, ತನ್ನದೇ ರಾಜ್ಯದಲ್ಲಿದ್ದು, ತನ್ನ ವಿರುದ್ಧ ಕುತಂತ್ರ ನಡೆಸುವವರ ಪ್ರಯತ್ನವನ್ನು ಭಂಗಗೊಳಿಸುವ ಟಿಪ್ಪುವಿನ ವ್ಯಕ್ತಿತ್ವವನ್ನು ಲೇಖಕಿ ಚಿತ್ರಾ ರಾಮಚಂದ್ರನ್ ಸರಳ ಕಥನದಲ್ಲಿ ಹಿಡಿದಿಟ್ಟಿದ್ದಾರೆ. ಟಿಪ್ಪುವಿನ ಕಾಲದ ರಾಜನೀತಿ, ಯುದ್ಧತಂತ್ರ, ಯೋಧರು, ಜಟ್ಟಿಗಳನ್ನು ತಯಾರು ಮಾಡುವ ಕ್ರಮ- ಇವೆಲ್ಲ ನಿಜ ವಿವರಗಳನ್ನು ಲೇಖಕಿ ಕಾದಂಬರಿಯ ಕಥನಕ್ಕೆ ಭಾರವಾಗದಂತೆ ಹೆಣೆದಿದ್ದಾರೆ. ಹಾಗಾಗಿ ಈಚಿನ ದಿನಮಾನಗಳಲ್ಲಿ ಕನ್ನಡ ಕಾದಂಬರಿಗಳಲ್ಲಿ ಇದೊಂದು ಮಹತ್ವದ ಪ್ರಯತ್ನವಾಗಿದೆ.

ಇದನ್ನು ಮಕ್ಕಳ ಸಾಹಸ ಕಥೆಯಂತೆಯೂ ಓದಬಹುದು. ಮಕ್ಕಳಿಗೆ ಇಷ್ಟವಾಗುವ ರೋಚಕತೆ, ಸಾಹಸ, ಕಲ್ಪನಾಶೀಲತೆ ಇಲ್ಲಿದೆ. ಕಾದಂಬರಿಯ ಸರಳ ಭಾಷೆಯ ನಿರೂಪಣೆ ಮಕ್ಕಳನ್ನು ತನ್ನತ್ತ ಸೆಳೆದುಕೊಳ್ಳಬಲ್ಲದು. ಅಷ್ಟು ಪಾರದರ್ಶಕ, ಆಕರ್ಷಕ ಗುಣ ಇದರ ಭಾಷೆಗಿದೆ. ಲೇಖಕಿಯ ಸೋದರಿ ವಿದ್ಯಾ ಮುರುಳಿ ಪ್ರತಿ ಅಧ್ಯಾಯಕ್ಕೂ ಒಂದೊಂದು ಚಿತ್ರ ಬರೆದಿದ್ದಾರೆ. ಸೋದರಿಯರ ಈ ಜುಗಲ್‌ಬಂದಿ ಇದನ್ನೊಂದು ಚಿತ್ರಕ ಕಾದಂಬರಿಯನ್ನಾಗಿ ಮಾಡಿದೆ.

ಕೀರ್ತಿನಿಧಿ ಕೇಸರಿ ಸಿಂಘ
ಲೇ: ಚಿತ್ರಾ ರಾಮಚಂದ್ರನ್
ಪು: 315; ಬೆ: ರೂ. 250
ಪ್ರ: ಪ್ರಕಾಶ ಸಾಹಿತ್ಯ ನಂ. 27, ಕಾಟನ್‌ಪೇಟೆ
ಬೆಂಗಳೂರು- 560 053
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT