ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿ ಶಿಕ್ಷಣ: ಸರ್ಕಾರ, ಕಾಮೆಡ್-ಕೆ ಒಪ್ಪಂದ

Last Updated 9 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎಂಜಿನಿಯರಿಂಗ್, ವೈದ್ಯಕೀಯ/ದಂತ ವೈದ್ಯಕೀಯ ಮತ್ತಿತರ ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಸರ್ಕಾರ ಮತ್ತು ಕಾಮೆಡ್-ಕೆ ನಡುವೆ ಪರಸ್ಪರ ಒಪ್ಪಂದವಾಗಿದ್ದು, ಇದರಿಂದಾಗಿ ಪ್ರಸಕ್ತ ಸಾಲಿನ ಕೌನ್ಸೆಲಿಂಗ್‌ಗೆ ದಾರಿ ಸುಗಮವಾಗಿದೆ.

ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಅವರ ಸಮ್ಮುಖದಲ್ಲಿ ಗುರುವಾರ ಇಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ಪರವಾಗಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಲತಾ ಕೃಷ್ಣರಾವ್, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ಎಚ್.ಗೋಪಾಲಕೃಷ್ಣೇಗೌಡ ಹಾಗೂ ಕಾಮೆಡ್-ಕೆ ಪರವಾಗಿ ಎಂ.ಆರ್.ಜಯರಾಂ, ಎಂ.ಕೆ.ಪಾಂಡುರಂಗ ಶೆಟ್ಟಿ ಅವರು ಒಪ್ಪಂದಕ್ಕೆ ಸಹಿ ಹಾಕಿದರು.

ಈಗಾಗಲೇ ಸರ್ಕಾರ ಮತ್ತು ಕಾಮೆಡ್-ಕೆ ನಡುವೆ ಎಂಜಿನಿಯರಿಂಗ್‌ನಲ್ಲಿ ಶೇ 45: 55, ವೈದ್ಯಕೀಯದಲ್ಲಿ ಶೇ 40: 60 ಮತ್ತು ದಂತ ವೈದ್ಯಕೀಯದಲ್ಲಿ ಶೇ 20: 80ರ ಅನುಪಾತದಲ್ಲಿ ಸೀಟು ಹಂಚಿಕೆ ಆಗಿದೆ. ಎಂಜಿನಿಯರಿಂಗ್‌ನಲ್ಲಿ ಎಐಸಿಟಿಇ ಸೂಚನೆಯಂತೆ ಶೇ 5ರಷ್ಟು ಸೀಟುಗಳನ್ನು ಹೆಚ್ಚುವರಿಯಾಗಿ ಸೂಪರ್ ನ್ಯೂಮರರಿ ಕೋಟಾದಡಿ ಉಚಿತವಾಗಿ ಹಂಚಲಾಗುತ್ತದೆ.

ಮೊದಲ ಐದು ಸಾವಿರ ರ‌್ಯಾಂಕ್ ಒಳಗಿನ ವಿದ್ಯಾರ್ಥಿಗಳಿಗೆ ಮಾತ್ರ ಸೂಪರ್ ನ್ಯೂಮರರಿ ಕೋಟಾದ ಸೀಟುಗಳನ್ನು ನೀಡಲಾಗುತ್ತದೆ. ಒಂದು ವೇಳೆ ಆ ಕೋಟಾದಡಿ ಸೀಟು ಸಿಗದಿದ್ದರೆ 30 ಸಾವಿರ ರೂಪಾಯಿ ಶುಲ್ಕದಡಿ ಪ್ರವೇಶ ಪಡೆಯಬಹುದು.

ಎಂಜಿನಿಯರಿಂಗ್‌ನಲ್ಲಿ ಸರ್ಕಾರಿ ಕೋಟಾದ ಶೇ 45ರಷ್ಟು ಸೀಟುಗಳಿಗೆ ಎರಡು ರೀತಿಯ ಶುಲ್ಕವನ್ನು ನಿಗದಿ ಮಾಡಲಾಗಿದೆ. ಸರ್ಕಾರಿ ಕೋಟಾದ ಸೀಟುಗಳಿಗೆ 35 ಸಾವಿರ ರೂಪಾಯಿ ಶುಲ್ಕ ಪಡೆಯುವ ಕಾಲೇಜುಗಳು ಆಡಳಿತ ಮಂಡಳಿ ಕೋಟಾ ಸೀಟುಗಳಿಗೆ ಒಂದು ಲಕ್ಷ ರೂಪಾಯಿ ಶುಲ್ಕ ಪಡೆಯಬೇಕು.

ಒಂದು ವೇಳೆ ಸರ್ಕಾರಿ ಸೀಟುಗಳಿಗೆ 30 ಸಾವಿರ ರೂಪಾಯಿ ಶುಲ್ಕ ಪಡೆದರೆ, ಅಂತಹ ಕಾಲೇಜುಗಳು ಆಡಳಿತ ಮಂಡಳಿ ಕೋಟಾ ಸೀಟುಗಳಿಗೆ 1.25 ಲಕ್ಷ ರೂಪಾಯಿ ಶುಲ್ಕ ಪಡೆಯಲು ಅವಕಾಶ ನೀಡಲಾಗಿದೆ. ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಲು ಕಾಲೇಜುಗಳು ಸ್ವತಂತ್ರವಾಗಿವೆ. ಯಾವ ಮಾದರಿಯ ಶುಲ್ಕವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬುದನ್ನು ಕಾಲೇಜುಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ತಿಳಿಸಬೇಕು. ಅದನ್ನು ಆಧರಿಸಿ ಪ್ರಾಧಿಕಾರ ಶುಲ್ಕದ ಅಧಿಸೂಚನೆ ಹೊರಡಿಸಲಿದೆ.

ಸರ್ಕಾರಿ ಕೋಟಾ ಸೀಟುಗಳಿಗೆ 35 ಸಾವಿರ ರೂಪಾಯಿ ಶುಲ್ಕ ನೀಡಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು 25 ಸಾವಿರ ರ‌್ಯಾಂಕ್ ಒಳಗೆ ಇದ್ದು, ಅವರ ಪೋಷಕರ ವಾರ್ಷಿಕ ವರಮಾನ 2.5 ಲಕ್ಷ ರೂಪಾಯಿ ಮೀರದಿದ್ದರೆ ಅಂತಹವರಿಗೆ ಸರ್ಕಾರ ಐದು ಸಾವಿರ ರೂಪಾಯಿ ಸಬ್ಸಿಡಿ ನೀಡಲಿದೆ ಎಂದು ಸಚಿವ ಆಚಾರ್ಯ ತಿಳಿಸಿದರು.

ವೈದ್ಯಕೀಯ ವಿಭಾಗದಲ್ಲಿ ಸರ್ಕಾರಿ ಕೋಟಾ ಸೀಟುಗಳಿಗೆ 35 ಸಾವಿರ ರೂಪಾಯಿ, ಕಾಮೆಡ್-ಕೆ ಕೋಟಾ ಸೀಟುಗಳಿಗೆ 3.25 ಲಕ್ಷ ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ. ದಂತ ವೈದ್ಯಕೀಯದಲ್ಲಿ ಸರ್ಕಾರಿ ಸೀಟುಗಳಿಗೆ 25 ಸಾವಿರ ರೂಪಾಯಿ ಹಾಗೂ ಕಾಮೆಡ್-ಕೆ ಕೋಟಾ ಸೀಟುಗಳಿಗೆ 2.30 ಲಕ್ಷ ರೂಪಾಯಿ ಶುಲ್ಕವಿರುತ್ತದೆ.

ಪ್ರತಿ ವರ್ಷದಂತೆ ಈ ವರ್ಷವೂ ಒಪ್ಪಂದದ ಪ್ರಕಾರವೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಸರ್ಕಾರದ ಮನವಿಗೆ ಖಾಸಗಿಯವರು ಸಹಕರಿಸಿದ್ದಾರೆ. ಪಾರದರ್ಶಕವಾಗಿ ಕೌನ್ಸೆಲಿಂಗ್ ನಡೆಯಲಿದ್ದು, 3-4 ದಿನಗಳಲ್ಲಿ ಸೀಟು ಹಂಚಿಕೆ ಪಟ್ಟಿ ಲಭ್ಯವಾಗುವ ವಿಶ್ವಾಸವಿದೆ. ಕಳೆದ ಬಾರಿಗಿಂತ ಸೀಟುಗಳು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT