ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದಾವತಿ ನದಿ: ಅಕ್ರಮ ಮರಳು ಸಾಗಾಣಿಕೆ

Last Updated 19 ಅಕ್ಟೋಬರ್ 2011, 9:55 IST
ಅಕ್ಷರ ಗಾತ್ರ

ಹಿರಿಯೂರು: ಗಣಿಗಾರಿಕೆಗೆ ಸುಪ್ರೀಂ ಕೋರ್ಟ್ ತಡೆಯೊಡ್ಡಿದ ನಂತರ, ಗಣಿ ಮಾಫಿಯಾದವರ ಕಣ್ಣು ತಾಲ್ಲೂಕಿನಲ್ಲಿರುವ ವೇದಾವತಿ ನದಿ ಪಾತ್ರದ ಮರಳಿನ ಮೇಲೆ ಬಿದ್ದಿದ್ದು, ಜೆಸಿಬಿ ಯಂತ್ರ ಬಳಸಿ ಮರಳು ತುಂಬುತ್ತಿರುವ ಕಾರಣ, ವೇದಾವತಿಯ ಒಡಲಲ್ಲಿರುವ ಮರಳು ಬರಿದಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ವೇದಾವತಿ ನದಿಪಾತ್ರದ ಮರಳಿಗೆ ಬಂಗಾರದ ಬೆಲೆ ಇರುವ ಕಾರಣ, ಕೆಲವು ಸ್ಥಳೀಯ ಮುಖಂಡರು ಮರಳು ತುಂಬುವುದಕ್ಕೆ ಒಳಗೊಳಗೆ ಪ್ರೋತ್ಸಾಹ ನೀಡುವ ಮೂಲಕ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ.
 
ಪ್ರತಿದಿನ ಬೆಂಗಳೂರು, ಚಿತ್ರದುರ್ಗದ ಕಡೆಗೆ 40-50 ಲೋಡ್ ಮರಳನ್ನು ಅಕ್ರಮವಾಗಿ ತುಂಬಿ ಸಾಗಿಸಲಾಗುತ್ತಿದೆ. ಅ. 16ರಂದು ಲೋಕೋಪಯೋಗಿ ಇಲಾಖೆ ಅಧಿಕಾರಿಯೊಬ್ಬರು ಗನ್ನಾಯಕನಹಳ್ಳಿ ಸಮೀಪ ಒಂದು ಲಾರಿ ಹಾಗೂ ಪ್ರವಾಸಿ ಮಂದಿರ ವೃತ್ತದ ಸಮೀಪ ಮೂರು ಮರಳು ಲಾರಿಗಳನ್ನು ನಿಲ್ಲಿಸಿ ತಪಾಸಣೆ ಮಾಡಿದ್ದು, ಭಾನುವಾರದ ರಜಾ ದಿನದ ಕಾರಣ ಏನು ಕ್ರಮ ಕೈಗೊಳ್ಳಲಾಗಿದೆ ಎನ್ನುವುದು ತಿಳಿದಿಲ್ಲ ಎಂದು ವಂದೇಮಾತರಂ ಜನಜಾಗೃತಿ ವೇದಿಕೆ ಕಾರ್ಯದರ್ಶಿ ವಿ. ಅರುಣ್‌ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಕ್ರಮ ಮರಳು ಸಾಗಣೆಯನ್ನು ತಡೆಯಬೇಕು ಎಂದು ಹಲವು ಬಾರಿ ತಾಲ್ಲೂಕು ರೈತಸಂಘ, ದಲಿತ ಸಂಘಟನೆಗಳು ಹೋರಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ. ಅಕ್ರಮವಾಗಿ ಮರಳು ತುಂಬುತ್ತಿರುವ ಕಾರಣ ನದಿಪಾತ್ರದಲ್ಲಿ ಅಂತರ್ಜಲ ಕುಸಿಯುತ್ತದೆ. ಜನ -ಜಾನುವಾರುಗಳಿಗೆ ಕುಡಿಯುವ ನೀರು ಇಲ್ಲವಾಗುತ್ತದೆ.

ಹೊರ ನಗರಗಳಿಗೆ ಮರಳು ಸಾಗಣೆ ಮಾಡುತ್ತಿರುವ ಕಾರಣ ಸ್ಥಳೀಯವಾಗಿ ಕಟ್ಟಡ ನಿರ್ಮಿಸುವವರು ದುಬಾರಿ ಬೆಲೆ ಕೊಟ್ಟು ಮರಳು ಖರೀದಿ ಮಾಡಬೇಕಿದೆ. ಜಿಲ್ಲಾಧಿಕಾರಿ ತಕ್ಷಣ ಅಕ್ರಮ ಮರಳು ಸಾಗಣಿಕೆಗೆ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ.

ತಾಲ್ಲೂಕು ಅಥವಾ ಜಿಲ್ಲಾಡಳಿತ ಮರಳು ಸಾಗಣೆ ತಡೆಯದಿದ್ದರೆ, ತಾಲ್ಲೂಕಿನ ಪ್ರಗತಿಪರ ಸಂಘಟನೆಗಳು ನದೀಪಾತ್ರದ ಹಳ್ಳಿಗಳಲ್ಲಿ ಸ್ವಯಂ ಸೇವಕರನ್ನು ನೇಮಕ ಮಾಡಿಕೊಂಡು, ಮರಳು ಸಾಗಣೆ ಮಾಡುವ ಲಾರಿಗಳಿಗೆ ತಡೆಯೊಡ್ಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅರುಣ್‌ಕುಮಾರ್ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT