ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದಿಕೆಯೇರಿದ ಶಾಸಕರಿಗೆ ಷೋಕಾಸ್ ಸಂಭವ

Last Updated 9 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಬೆಂಗಳೂರು: ಹಾವೇರಿಯಲ್ಲಿ ಭಾನುವಾರ ನಡೆದ ಕೆಜೆಪಿ ಸಮಾವೇಶದಲ್ಲಿ ಭಾಗವಹಿಸಿದ್ದ ಬಿಜೆಪಿಯ 14 ಶಾಸಕರಿಗೆ ಕಾರಣ ಕೇಳಿ ಷೋಕಾಸ್ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಗುರುತಿಸಿಕೊಂಡಿರುವ ಶಾಸಕರ ವಿರುದ್ಧ ಏಕಾಏಕಿ ಕಠಿಣ ಕ್ರಮಕೈಗೊಂಡರೆ ಸರ್ಕಾರ ಪತನವಾಗಬಹುದು ಎಂಬ ದೃಷ್ಟಿಯಿಂದ ಎಚ್ಚರಿಕೆ ಹೆಜ್ಜೆ ಇಡಲು ಆಡಳಿತಾರೂಢ ಬಿಜೆಪಿ ತೀರ್ಮಾನಿಸಿದೆ ಎನ್ನಲಾಗಿದೆ.

ಒಮ್ಮೆಲೇ ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸುವ ಬದಲು ಕಾರಣ ಕೇಳಿ ಷೋಕಾಸ್ ನೋಟಿಸ್ ನೀಡಲಾಗುತ್ತದೆ. ಅವರಿಂದ ಬರುವ ಉತ್ತರ ಆಧರಿಸಿ ಶಿಸ್ತುಕ್ರಮಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಗೊತ್ತಾಗಿದೆ. ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಕಠಿಣ ಕ್ರಮಕೈಗೊಂಡರೆ ಸದನದಲ್ಲಿ ಮಸೂದೆಗಳನ್ನು ಪಾಸು ಮಾಡಿಕೊಳ್ಳಲು ಕಷ್ಟವಾಗುತ್ತದೆ. ಮಸೂದೆಗಳಿಗೆ ಸೋಲು ಉಂಟಾದರೆ ಸರ್ಕಾರಕ್ಕೆ ಮುಖಭಂಗವಾಗುತ್ತದೆ. ಹೀಗಾಗಿ ತಕ್ಷಣವೇ ಶಾಸಕರನ್ನು ಅಮಾನತುಗೊಳಿಸುವ ಸಾಧ್ಯತೆಗಳು ಕಡಿಮೆ ಎಂದು ಮೂಲಗಳು ತಿಳಿಸಿವೆ.

ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ವಿಪ್ ನೀಡುವ ಮೂಲಕವೂ ಯಡಿಯೂರಪ್ಪ ಬೆಂಬಲಿಗ ಶಾಸಕರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ಸದನದಲ್ಲಿ ಮಸೂದೆಗಳು ಚರ್ಚೆಗೆ ಬರುವ ಸಂದರ್ಭದಲ್ಲಿ ವಿಪ್ ನೀಡುವ ಬಗ್ಗೆ ಚಿಂತನೆ ನಡೆದಿದೆ. ವಿಪ್ ಉಲ್ಲಂಘಿಸಿದರೆ ಅಂತಹ ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸಲು ಸ್ಪೀಕರ್‌ಗೆ ಅಧಿಕಾರ ಇರುತ್ತದೆ.

ವಿಧಾನಸಭೆ ವಿಸರ್ಜನೆ ಮಾಡುವ ಸಾಧ್ಯತೆ ಇಲ್ಲ. ಹೇಗಾದರೂ ಮಾಡಿ ಸರ್ಕಾರವನ್ನು ಉಳಿಸಿಕೊಳ್ಳಬೇಕು ಎಂಬ ಅಭಿಪ್ರಾಯ ಪಕ್ಷದ ಮುಖಂಡರು ಹೊಂದಿದ್ದಾರೆ. ಹೀಗಾಗಿ ವರಿಷ್ಠರ ಸಲಹೆ ಪಡೆದ ನಂತರವೇ ಶಿಸ್ತುಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಗೊತ್ತಾಗಿದೆ.

ಅನರ್ಹತೆ

ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಬಂಡಾಯ ಎದ್ದಿದ 16 ಜನ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದರು. ಈಗ ಅದೇ ರೀತಿ ಕೆಜೆಪಿಯೊಂದಿಗೆ ಗುರುತಿಸಿಕೊಂಡಿರುವ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸ್ಪೀಕರ್‌ಗೆ ಪತ್ರ ಬರೆಯುವ ಬಗ್ಗೆ ಪಕ್ಷದಲ್ಲಿ ಚಿಂತನೆ ನಡೆದಿದೆ.

ಬಿಜೆಪಿಯಲ್ಲಿ ಇದ್ದುಕೊಂಡೇ, ಕೆಜೆಪಿ ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಪಕ್ಷ ವಿರೋಧ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ 14 ಜನ ಶಾಸಕರನ್ನು ಅನರ್ಹಗೊಳಿಸುವಂತೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ವಿಧಾನಸಭೆಯ ಸ್ಪೀಕರ್ ಕೆ.ಜಿ.ಬೋಪಯ್ಯಗೆ ಪತ್ರ ಬರೆಯುವ ಸಾಧ್ಯತೆಯೂ ಇದೆ.

ಬಹುಮತಕ್ಕೆ ಕಂಟಕ

ಸ್ಪೀಕರ್ ಹೊರತುಪಡಿಸಿ ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ 117. ಕೆಜೆಪಿ ಸಮಾವೇಶದಲ್ಲಿ ಭಾಗಿಯಾಗಿದ್ದ 14 ಶಾಸಕರನ್ನು ಅಮಾನತುಗೊಳಿಸಿದರೆ ಬಿಜೆಪಿ ಬಲ 103ಕ್ಕೆ ಕುಸಿಯಲಿದ್ದು, ಸರ್ಕಾರ ಬಹುಮತ ಕಳೆದುಕೊಳ್ಳಲಿದೆ.

ವಿಧಾನಸಭೆಯ ಒಟ್ಟು ಸಂಖ್ಯಾಬಲ 225. ಎರಡು ಸ್ಥಾನಗಳು ಖಾಲಿ ಇವೆ. ಹೀಗಾಗಿ ಸರಳ ಬಹುಮತಕ್ಕೆ 113ರ ಬದಲು 112 ಶಾಸಕರ ಸಂಖ್ಯಾಬಲದ ಅಗತ್ಯವಿದೆ. ಒಟ್ಟು ಏಳು ಜನ ಪಕ್ಷೇತರ ಶಾಸಕರಿದ್ದು, ಬಿಎಸ್‌ಆರ್ ಕಾಂಗ್ರೆಸ್‌ನ ಬಿ.ಶ್ರೀರಾಮುಲು ಹೊರತುಪಡಿಸಿ ಉಳಿದ ಆರು ಜನ ಪಕ್ಷೇತರ ಶಾಸಕರು, ಸ್ಪೀಕರ್ ಹಾಗೂ ಒಬ್ಬ ನಾಮಕರಣ ಸದಸ್ಯ ಸರ್ಕಾರಕ್ಕೆ ಬೆಂಬಲ ನೀಡಿದರೂ ಒಟ್ಟು ಸಂಖ್ಯಾಬಲ 111 ಆಗುತ್ತದೆ. ಆಗಲೂ ಬಹುಮತಕ್ಕೆ ಒಬ್ಬ ಸದಸ್ಯರ ಕೊರತೆ ಉಂಟಾಗುತ್ತದೆ.

ಅಧಿವೇಶನದತ್ತ ಗಮನ

ಪೂರ್ವ ನಿಗದಿಯಂತೆ ಇದೇ 13ರಂದು ವಿಧಾನಮಂಡಲದ ಅಧಿವೇಶನ ಅಂತ್ಯವಾಗಲಿದೆ. ಅಲ್ಲಿಯವರೆಗೂ ಕಾದು ನೋಡುವ ತಂತ್ರವನ್ನು ಅನುಸರಿಸುವುದು ಬಿಜೆಪಿ ಮುಖಂಡರ ಉದ್ದೇಶವಾಗಿದೆ. ಹೀಗಾಗಿಯೇ ಈಶ್ವರಪ್ಪ, ಶೆಟ್ಟರ್ ಅವರು 12ರ ನಂತರ ಕ್ರಮಕೈಗೊಳ್ಳುತ್ತೇವೆ ಎಂಬುದಾಗಿ ತಿಳಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಸುಸೂತ್ರವಾಗಿ ಅಧಿವೇಶನ ನಡೆದರೆ ಸಾಕು. ಆ ಮೇಲೆ ಹೇಗೊ 2-3 ತಿಂಗಳು ತಳ್ಳಿಕೊಂಡು ಹೋಗಬಹುದು. ಅಷ್ಟೊತ್ತಿಗೆ ಚುನಾವಣೆ ಘೋಷಣೆಯಾಗಲಿದೆ ಎಂಬುದು ಬಿಜೆಪಿ ಮುಖಂಡರ  ಲೆಕ್ಕಾಚಾರ.

ವೇದಿಕೆಯಲ್ಲಿದ್ದವರು
ಸುನೀಲ್ ವಲ್ಯಾಪುರೆ (ಸಚಿವ)- ಚಿಂಚೋಳಿ
ಡಾ.ವಿಶ್ವನಾಥ್- ಕಡೂರು
ಎಂ.ಚಂದ್ರಪ್ಪ- ಹೊಳಲ್ಕೆರೆ
ನೆಹರೂ ಓಲೇಕಾರ್- ಹಾವೇರಿ
ಸುರೇಶ್‌ಗೌಡ ಪಾಟೀಲ- ಬ್ಯಾಡಗಿ
ಜಿ.ಶಿವಣ್ಣ- ರಾಣೆಬೆನ್ನೂರು
ಬಿ.ಪಿ.ಹರೀಶ್- ಹರಿಹರ
ಶ್ರೀಶೈಲಪ್ಪ ಬಿದರೂರು- ಗದಗ
ಎಚ್.ಹಾಲಪ್ಪ- ಸೊರಬ
ಎಸ್.ಐ.ಚಿಕ್ಕನಗೌಡರ-ಕುಂದಗೋಳ
ಸಿ.ಸಿ.ಪಾಟೀಲ- ನರಗುಂದ
ರಾಮಣ್ಣ ಲಮಾಣಿ- ಶಿರಹಟ್ಟಿ
ಕೆ.ಲಕ್ಷ್ಮೀನಾರಾಯಣ- ಬೈಂದೂರು
ಡಿ.ಎಸ್.ಸುರೇಶ್-ತರೀಕೆರೆ

ವಿಧಾನ ಪರಿಷತ್ ಸದಸ್ಯರು
ಬಿ.ಜೆ.ಪುಟ್ಟಸ್ವಾಮಿ
ಎಂ.ಡಿ.ಲಕ್ಷ್ಮೀನಾರಾಯಣ
ಶಿವರಾಜ ಸಜ್ಜನರ
ಮೋಹನ್ ಲಿಂಬಿಕಾಯಿ
ವಿಜಯ ಸಂಕೇಶ್ವರ
ಪ್ರೊ.ಮುಮ್ತಾಜ್ ಅಲಿಖಾನ್

ಮಾಜಿ ಶಾಸಕರು
ಜಬ್ಬಾರ್ ಖಾನ್ ಹೊನ್ನಳ್ಳಿ, ರಾಜವರ್ಧನ್, ಎಚ್.ಎಂ.ವಿಶ್ವನಾಥ್, ಬಿ.ಆರ್.ಪಾಟೀಲ, ಜೆ.ಸಿ.ಮಾಧುಸ್ವಾಮಿ, ಮೈಕೇಲ್ ಫರ್ನಾಂಡಿಸ್, ಗುರುಪಾದಪ್ಪ ನಾಗಮಾರಪಳ್ಳಿ, ಬಸವರಾಜು (ಪಿರಿಯಾಪಟ್ಟಣ), ಎ.ಎಸ್.ಬಸವರಾಜು, ಡಾ.ಭಾರತಿ ಶಂಕರ್, ಕುಶಲ, ಶ್ರೀನಿವಾಸ್ (ನಂಜನಗೂಡು), ರಾಜಣ್ಣ ಮಾಮನಿ, ಕೆ.ಸಿ.ಪುಟ್ಟಸಿದ್ದಶೆಟ್ಟಿ, ಡಿ.ಬಿ.ಗಂಗಾಧರಪ್ಪ, ಬಿ.ಆರ್.ಗುರುದೇವ್. ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಅನ್ವರಿ.

ಎದುರಲ್ಲಿ ಕುಳಿತವರು
ಭಾರತಿ ಶೆಟ್ಟಿ, ಲೆಹರ್ ಸಿಂಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT