ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಕಾಲೇಜಿಗೆ ಜಿಲ್ಲಾಡಳಿತದಿಂದ ಪ್ರಸ್ತಾವ!

Last Updated 5 ಅಕ್ಟೋಬರ್ 2012, 8:30 IST
ಅಕ್ಷರ ಗಾತ್ರ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ 2005ರಲ್ಲೇ ಪ್ರಸ್ತಾವ ಸಿದ್ಧಪಡಿಸಿ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರ ಕಚೇರಿಗೆ ಕಳುಹಿಸಿದೆ.

ಪ್ರಸ್ತಾವದ ಪ್ರತಿಯೊಂದನ್ನು ಓದುಗರೊಬ್ಬರು ಪತ್ರಿಕೆಗೆ ನೀಡಿದ್ದಾರೆ. 2005ರಲ್ಲಿ ಅಂದಿನ ಧರ್ಮಸಿಂಗ್ ಸರ್ಕಾರ ರಾಜ್ಯದ 3-4 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿತ್ತು.

ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರವೂ ಸೇರಿತ್ತು. ಅಂದು ಜಿಲ್ಲಾ ಉಸ್ತುವಾರಿ ಸಚಿವರ ನಿರಾಶಕ್ತಿಯಿಂದ ವೈದ್ಯಕೀಯ ಕಾಲೇಜು ನಿರ್ಮಾಣ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು.

ವೈದ್ಯಕೀಯ ಕಾಲೇಜನ್ನು ತಾಲ್ಲೂಕಿನ ಮುಡಗೇರಿ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾರಂಭಿಸಬಹುದು ಎಂದು ಏ. 2, 2005ರಲ್ಲಿ ಅಂದಿನ ಜಿಲ್ಲಾಧಿಕಾರಿ ರಿತೇಶಕುಮಾರ ಸಿಂಗ್ ಅವರು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಪ್ರಸ್ತಾವ ಸಲ್ಲಿಸಿದ್ದರು.

ವೈದ್ಯಕೀಯ ಕಾಲೇಜು ಜಿಲ್ಲಾ ಆಸ್ಪತ್ರೆಯಲ್ಲಿ ನಿರ್ಮಿಸುವುದಾದಲ್ಲಿ ಆಸ್ಪತ್ರೆಗೆ ಹೊಂದಿಕೊಂಡು ಒಟ್ಟು 23 ಎಕರೆ ಜಾಗ ಇದೆ.  ಈಗಿರುವ ಕಟ್ಟಡದಲ್ಲೇ ಮತ್ತೊಂದು ಮಹಡಿಯನ್ನು ಕಟ್ಟಬಹುದು. ಮುಡಗೇರಿ ತಾಲ್ಲೂಕು ಕೇಂದ್ರದಿಂದ 16 ಕಿಲೋ ಮೀಟರ್ ದೂರದಲ್ಲಿದೆ. ವೈದ್ಯಕೀಯ ಕಾಲೇಜು ಅಲ್ಲಿ ನಿರ್ಮಾಣ ಮಾಡಿದರೆ ವಿದ್ಯಾರ್ಥಿಗಳು ಮತ್ತು ಬೋಧಕ ವರ್ಗ ಕಾಲೇಜಿನಿಂದ ಆಸ್ಪತ್ರೆಗೆ ಬರಲು ಬಸ್ ಸೌಕರ್ಯ ಒದಗಿಸಬಹುದು ಎನ್ನುವ ಅಂಶವನ್ನು ಜಿಲ್ಲಾಡಳಿತ ಪ್ರಸ್ತಾವದಲ್ಲಿ ಸೇರಿಸಿದೆ.

ಜಿಲ್ಲಾ ಆಸ್ಪತ್ರೆ ಮತ್ತು ಮುಡಗೇರಿಯಲ್ಲಿರುವ ಜಮೀನಿನ ನಕಾಶೆ, ಜಿಲ್ಲಾ ಆಸ್ಪತ್ರೆಯಲ್ಲಿ ಐದು ವರ್ಷಗಳಲ್ಲಿ ಚಿಕಿತ್ಸೆ ಪಡೆದಿರುವ ಒಳ ಮತ್ತು ಹೊರ ರೋಗಿಗಳ ಸಂಖ್ಯೆ, ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸೇರಿದಂತೆ ಇತರೆ ಮೂಲ ಸೌಕರ್ಯಗಳು ಮತ್ತು ಆಸ್ಪತ್ರೆಯಲ್ಲಿ ಅಳವಡಿಸಿರುವ ವೈದ್ಯಕೀಯ ಸಲಕರಣೆಗಳ ಕುರಿತು ಮಾಹಿತಿ ಪ್ರಸ್ತಾವನೆಯಲ್ಲಿದೆ.

ಕಾಲೇಜು ನಿರ್ಮಾಣಕ್ಕೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಕಟ್ಟಡ, ನೀರಿನ ವ್ಯವಸ್ಥೆ, ವಸತಿ ಗೃಹ, ಜನರೇಟರ್ ಕೊಠಡಿ, ಧೋಬಿ ಹಾಲ್, ಆರೋಗ್ಯ ಸಲಕರಣೆಗಳ ದುರಸ್ತಿ ವಿಭಾಗ ಸೇರಿದಂತೆ ಒಟ್ಟು 28 ರೀತಿಯ ಸೌಲಭ್ಯಗಳು ಎಷ್ಟು ಎಕರೆಯಲ್ಲಿದೆ. ಮತ್ತು ಉಳಿದಿರುವ ಕ್ಷೇತ್ರ ಎಷ್ಟು ಎನ್ನುವುದರ ಕುರಿತು ಸರ್ವೆ ಮಾಡಿದ ದಾಖಲೆಗಳು ಪ್ರಸ್ತಾವದಲ್ಲಿ ಸೇರಿದೆ.

ರಕ್ತದೊತ್ತಡ, ಸಕ್ಕರೆ ಕಾಯಿಲೆ, ಜ್ವರ, ವಿಷ ಪ್ರಾಶಾನ, ಹೆರಿಗೆ, ಕಣ್ಣು, ಕಿವಿ, ಮೂಗು, ಹಲ್ಲು, ಮೂಳೆ ರೋಗ ಸೇರಿದಂತೆ ಒಟ್ಟು  20 ವಿವಿಧ ರೀತಿಯ ಕಾಯಿಲೆಗೆ 2000-01ರಲ್ಲಿ 89166, 2001-02ರಲ್ಲಿ 94843, 2002-03ರಲ್ಲಿ 1229952, 145680, 124356 ಹೊರ ರೋಗಿಗಳು ಜಿಲ್ಲಾ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದಿದ್ದಾರೆ ಎನ್ನುವ ವಿವರಗಳನ್ನು ಜಿಲ್ಲಾಡಳಿತ ನೀಡಿದೆ.

ಎಕ್ಸ್ ರೇ, ಇಸಿಟಿ, ಇಸಿಜಿ, ಟೆಲಿ ಮೆಡಿಷಿನ್, ಬ್ಯಾಚ್ ಎನಲೈಸರ್, ಸೆಲ್ ಕೌಂಟರ್, ಎಲಿಷಾ ವಾಷರ್ ಮತ್ತು ರಿಡರ್, ಎನ್‌ಐವಿ ಪರೀಕ್ಷೆಯ ಸೌಲಭ್ಯಗಳನ್ನು ಹೊಂದಿದ ಪ್ರಯೋಗಾಲಯ, ಪಲ್ಸ್ ಆಕ್ಸಿಮೊರೆಟರ್, ಡಿ-ಫೈಬ್ರಿಲೆಟರ್ಸ್‌, ವೆಂಟಿಲೇಟರ್‌ಗಳನ್ನು ಹೊಂದಿರುವ ಐಸಿಯು, ಅಂಬುಲೆನ್ಸ್ ವ್ಯವಸ್ಥೆ, ಸೆಂಟ್ರಲ್ ಆಕ್ಸಿಜನ್ ಸೌಲಭ್ಯ ಹೊಂದಿರುವ ಸುಸಜ್ಜಿತ ಶಸ್ತ್ರಚಿಕಿತ್ಸಾ ಕೋಣೆ, ರಕ್ತನಿಧಿ, ಮಕ್ಕಳ ವಿಭಾಗ, ಅಲ್ಟ್ರಾ ಸೌಂಡ್ ಸೌಲಭ್ಯ, ಶವಾಗಾರ ಹೀಗೆ ಜಿಲ್ಲಾ ಆಸ್ಪತ್ರೆಯಲ್ಲಿ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳ ಬಗ್ಗೆಯೂ ಜಿಲ್ಲಾಡಳಿತ ಪ್ರಸ್ತಾವನೆಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT