ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಮಾಂತರಿಕ್ಷ ವಿವಿ ಸ್ಥಾಪನೆಗೆ ಚಿಂತನೆ

Last Updated 7 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ


ಬೆಂಗಳೂರು: ‘ವಿದೇಶಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಗರದಲ್ಲಿ ವೈಮಾಂತರಿಕ್ಷ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಕೆನಡಾ, ಅಮೆರಿಕ ಹಾಗೂ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳ ಜೊತೆ ಮಾತುಕತೆ ನಡೆದಿದೆ’ ಎಂದು ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ಪಿ. ಬಳಿಗಾರ್ ಹೇಳಿದರು. ಫೆ.9ರಂದು ಆರಂಭವಾಗಲಿರುವ ‘ಏರೊ ಇಂಡಿಯಾ’ ವೈಮಾನಿಕ ಪ್ರದರ್ಶನದ ಹಿನ್ನೆಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.‘ವೈಮಾನಿಕ ಕ್ಷೇತ್ರವನ್ನು ಬಲಪಡಿಸುವ ದೃಷ್ಟಿಯಿಂದ ಭಾರತೀಯ ಕೈಗಾರಿಕೆಗಳ ಒಕ್ಕೂಟದ (ಸಿಐಐ) ಜೊತೆಗೂಡಿ  ಏರೊಸ್ಪೇಸ್ ಕಾರ್ಯಪಡೆಯನ್ನು ರಚಿಸಲಾಗಿದೆ. ಕಾರ್ಯಪಡೆ ತಂಡವು ಈಗಾಗಲೇ ವಿವಿಧ ದೇಶಗಳಿಗೆ ಭೇಟಿ ನೀಡಿ ಮಾತುಕತೆ ನಡೆಸಿದೆ. ಮುಖ್ಯವಾಗಿ ಇಂಗ್ಲೆಂಡ್‌ನ ವೊಲ್ವರ್‌ಹ್ಯಾಂಪ್ಟನ್ ವಿ.ವಿ. ಹಾಗೂ ಕ್ರಾನ್‌ಫೀ ವಿ.ವಿ.ಗೆ ಭೇಟಿ ನೀಡಿ ಬಂದಿದೆ’ ಎಂದು ಅವರು ಹೇಳಿದರು.

‘ಉನ್ನತ ಶಿಕ್ಷಣ ರಂಗದಲ್ಲಿ ವಿದೇಶಿ ಹೂಡಿಕೆಗೆ ಕೇಂದ್ರ ಸರ್ಕಾರವು ಸದ್ಯಕ್ಕೆ ಅನುಮತಿ ನೀಡಿಲ್ಲ. ನಿಯಮಾವಳಿಗಳ ತಿದ್ದುಪಡಿಯಾಗುವವರೆಗೆ ಸ್ವಲ್ಪ ವಿಳಂಬವಾಗಬಹುದು. ಇದಕ್ಕೆ ಪರ್ಯಾಯವಾಗಿ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ಹಾಗೂ ರಾಷ್ಟ್ರೀಯ ಏರೊನಾಟಿಕ್ಸ್ ಲಿಮಿಟೆಡ್‌ನ ಸಹಕಾರವನ್ನೂ ಕೇಳಲಾಗಿದೆ. ಯಾರು ಮುಂದೆ ಬರುತ್ತಾರೆಯೋ ಅವರ ಜೊತೆ ಸೇರಿಕೊಂಡು ವಿ.ವಿ ಸ್ಥಾಪಿಸಲಾಗುವುದು’ ಎಂದು ಅವರು ವಿವರಣೆ ನೀಡಿದರು.

‘ನಗರದ ಪಿಇಎಸ್ ಹಾಗೂ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು ವಿ.ವಿ ಆರಂಭಿಸಲು ಮುಂದೆ ಬಂದಿವೆ. ಇದಕ್ಕಾಗಿ ದೇವನಹಳ್ಳಿ ಬಳಿ ತಲಾ 15 ಎಕರೆ ಭೂಮಿನೀಡಲಾಗಿದೆ. ಆರಂಭದಲ್ಲಿ ಡಿಪ್ಲೊಮಾ, ಪದವಿ ಕೋರ್ಸ್‌ಗಳನ್ನು ನೀಡಲಾಗುವುದು. ಫ್ಲೈಯಿಂಗ್, ಎಂಜಿನಿಯರಿಂಗ್, ಇನ್‌ಫ್ರಾಸ್ಟ್ರಕ್ಚರ್, ಏರ್ ಟ್ರಾಫಿಕ್ ಕಂಟ್ರೋಲ್ ಹಾಗೂ ಮೆಂಟೇನನ್ಸ್ ವಿಷಯಗಳ ಮೇಲೆ ತರಬೇತಿ ನೀಡಲಾಗುವುದು’ ಎಂದು ಬಳಿಗಾರ್ ಹೇಳಿದರು.

ವೈಮಾಂತರಿಕ್ಷ ಕಾರ್ಯಪಡೆಯ ಮುಖ್ಯಸ್ಥ, ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆಯ ನಿರ್ದೇಶಕ ಡಾ. ರಾಜಕುಮಾರ್ ಖತ್ರಿ, ವೈಮಾಂತರಿಕ್ಷ ವಿ.ವಿ. ಮೇಲ್ವಿಚಾರಣೆ ಹೊತ್ತಿರುವ ಏರ್ ಮಾರ್ಷಲ್ ಟಿ.ಜೆ. ಮಾಸ್ಟರ್, ಕರ್ನಾಟಕ ಉದ್ಯೋಗ್ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಉಪಸ್ಥಿತರಿದ್ದರು..

ವೈಮಾನಿಕ ಉದ್ಯಮಿಗಳಿಗೆ ಸರ್ಕಾರದ ಗಾಳ

ಬೆಂಗಳೂರು: ‘ಏಷ್ಯಾ ವೈಮಾನಿಕ ರಂಗದ ಪ್ರಮುಖ ಕೇಂದ್ರವನ್ನಾಗಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಮಿತ್ತ ‘ಏರೊ ಇಂಡಿಯಾ’ ಮೇಳದಲ್ಲಿ 10ರಿಂದ 11 ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ’ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ಪಿ. ಬಳಿಗಾರ್ ಹೇಳಿದರು.
‘ಏರೊ ಇಂಡಿಯಾ’ ವೈಮಾನಿಕ ಪ್ರದರ್ಶನದ ಹಿನ್ನೆಲೆಯಲ್ಲಿ ನಗರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಮೇಳದಲ್ಲಿ ಸರ್ಕಾರ ಮಳಿಗೆಯನ್ನು ತೆರೆಯಲಿದ್ದು, ಹೂಡಿಕೆದಾರರಿಗೆ ರಾಜ್ಯದಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಿದೆ. ವಿಮಾನಗಳ ಬಿಡಿಭಾಗಗಳ ತಯಾರಿಕೆಯಲ್ಲಿ ತೊಡಗಿರುವ ರಾಜ್ಯದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಇದರಿಂದ ಲಾಭವಾಗಲಿದೆ’ ಎಂದರು.

ವೈಮಾಂತರಿಕ್ಷ ಪಾರ್ಕ್
: ‘ದೇವನಹಳ್ಳಿಯಲ್ಲಿ ಸುಮಾರು 985 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ವೈಮಾಂತರಿಕ್ಷ ಪಾರ್ಕ್‌ನ ಶೇ 50ರಷ್ಟು ಪ್ರದೇಶವನ್ನು ಕಂಪೆನಿಗಳಿಗೆ ಹಸ್ತಾಂತರಿಸಲಾಗಿದೆ. ದೇಶೀಯ ಕಂಪೆನಿಗಳಾದ ವಿಪ್ರೊ, ಮಹೀಂದ್ರಾ ಮತ್ತು ಮಹೀಂದ್ರಾ ಸೇರಿದಂತೆ ಸುಮಾರು 28 ಕಂಪೆನಿಗಳು ನೋಂದಣಿ ಮಾಡಿಸಿಕೊಂಡಿವೆ. ಪಾರ್ಕ್‌ನಲ್ಲಿ ರಸ್ತೆ, ವಿದ್ಯುತ್, ನೀರು ಪೂರೈಸುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಅವರು ತಿಳಿಸಿದರು.

ಸಿ.ಎಂ. ಅವರಿಂದ ಔತಣಕೂಟ:
‘ಕಳೆದ ವರ್ಷ ಆಯೋಜಿಸಲಾದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ತುಂಬಾ ಯಶಸ್ಸು ಕಂಡಿದೆ. ಇದರ ಹಿನ್ನೆಲೆಯಲ್ಲಿ ಈಗ ವೈಮಾನಿಕ ಕ್ಷೇತ್ರದಲ್ಲಿಯೂ ಹೂಡಿಕೆಯನ್ನು ಆಕರ್ಷಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶ್ವದ ಪ್ರಮುಖ ಉದ್ಯಮಿಗಳಿಗೆ ಮಂಗಳವಾರ ಸಂಜೆ ಔತಣ ಕೂಟ ಏರ್ಪಡಿಸಿದ್ದಾರೆ’ ಎಂದರು.








 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT