ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಟಿಗಾಗಿ ನೋಟು ಪಡೆದರೆ ಜೈಲು...

Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೀದರ್: `ನಿಮ್ಮ ಊರಿನಲ್ಲಿಯೂ ಜಾಗೃತ ದಳಗಳು ಕಾರ್ಯ ನಿರ್ವಹಿಸುತ್ತಿವೆ. ಮತದಾರರೇ ವೋಟು ನೀಡಲು ಹಣ ಪಡೆಯಬೇಡಿ. ಹಣ ಪಡೆಯುವುದು ಅಪರಾಧ. ಅದಕ್ಕಾಗಿ ಜೈಲು ಶಿಕ್ಷೆಯೂ ಆಗಬಹುದು..!'

ಸಾರ್ವತ್ರಿಕ ಚುನಾವಣೆಯಲ್ಲಿ ವೋಟು ಪಡೆಯಲು ಮತದಾರರಿಗೆ ಹಣದ ಆಮಿಷ ಒಡ್ಡುವ ಪ್ರವೃತ್ತಿಗೆ ಕಡಿವಾಣ ಹಾಕುವ ಕ್ರಮವಾಗಿ ಬೀದರ್ ಜಿಲ್ಲಾಡಳಿತ ವಿಭಿನ್ನ ರೀತಿಯಲ್ಲಿ ಕರಪತ್ರ ಜಾಗೃತಿ ನಡೆಸುತ್ತಿದೆ.  `ಹಣ ಪಡೆಯುವುದು ಅಪರಾಧ, ಹಣ ನೀಡುವುದು ಅಪರಾಧ. ಅದಕ್ಕಾಗಿ ಐಪಿಸಿ ಸೆಕ್ಷನ್ 171 ಬಿ ಅನ್ವಯ ಒಂದು ವರ್ಷ ಜೈಲೂ ಆಗಬಹುದು' ಎಂಬ ಸಂದೇಶವುಳ್ಳ ಕರಪತ್ರಗಳನ್ನು ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಸ್ಪತ್ರೆ, ಬಸ್ ನಿಲ್ದಾಣಗಳಲ್ಲಿ ವಿತರಿಸಲಾಗುತ್ತಿದೆ.

ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವುದ ಜೊತೆಗೆ, ಮುಕ್ತ ಮುತ್ತು ನ್ಯಾಯಸಮ್ಮತ ಚುನಾವಣೆಗೆ ವೇದಿಕೆ ಕಲ್ಪಿಸುವುದು ಇದರ ಉದ್ದೇಶ ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್.

ಚುನಾವಣಾ ಅಯೋಗದ ನಿರ್ದೇಶನದಂತೆ `ಸ್ವೀಪ್' ಅಂಗವಾಗಿ ಇದು ನಡೆಯುತ್ತಿದೆ. ಮತದಾನರ ಜಾಗೃತಿಗ `ಬನ್ನಿರಿ ಮತದಾನ ಮಾಡೋಣ, ಅಭಿವೃದ್ಧಿಯ ಬೀಜವ ಬಿತ್ತೋಣ' ಎಂಬ ಹಾಡುಗಳ ಮೂಲಕ ಜಾಗೃತಿ ರಥ ಹೋಗುವ ಸ್ಥಳಗಳಲ್ಲಿ ಇಂಥ ಕರಪತ್ರಗಳೂ ವಿತರಣೆ ಆಗಲಿವೆ. ಬುಧವಾರ ಇಂಥದೊಂದು ಜಾಗೃತಿ ಕಾರ್ಯಕ್ರಮದ ಬಳಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು, `ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ಅವಶ್ಯವಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ' ಎಂದರು.

ಮತದಾರರೇ ಯಾವುದೇ ಆಮಿಷಗಳಿಗೆ ಬಲಿಯಾಗಬೇಡಿ. ಹಣ, ಉಡುಗೊರೆಗಳನ್ನು ಸ್ವೀಕರಿಸಿ ತೊಂದರೆಗೆ ಒಳಗಾಗಬೇಡಿ ಎಂದು ಮನವಿ ಮಾಡಲಾದ ಕರಪತ್ರದಲ್ಲಿ, `ಇಂಥ ಪ್ರಕರಣಗಳು ಕಂಡು ಬಂದರೆ ತಕ್ಷಣವೇ ಚುನಾವಣಾಧಿಕಾರಿಗಳು ಅಥವಾ ಸಮೀಪದ ಪೊಲೀಸ್ ಠಾಣೆಗೆ ತಿಳಿಸಿರಿ' ಎಂದು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT