ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿಗಿಂತ ಪಕ್ಷ ದೊಡ್ಡದು

Last Updated 15 ಸೆಪ್ಟೆಂಬರ್ 2011, 9:00 IST
ಅಕ್ಷರ ಗಾತ್ರ

ಮಾನ್ವಿ: ಪಕ್ಷದಿಂದ ಅಧಿಕಾರ,  ಸ್ಥಾನಮಾನ ಪಡೆದು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಮುಖಂಡರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಪಕ್ಷದ ನಿಯಮಗಳಿಗೆ ತಕ್ಕಂತೆ ನಡೆದುಕೊಳ್ಳಲು ಸಾಧ್ಯವಿಲ್ಲದವರು ಪಕ್ಷ ಬಿಟ್ಟು ಹೊರಹೋಗಲಿ  ಎಂದು ಬಿಜೆಪಿಯ ಹಲವು ಹಿರಿಯ ಮುಖಂಡರು ಬಹಿರಂಗವಾಗಿ ಒತ್ತಾಯಿಸಿದ ಘಟನೆ ಮಂಗಳವಾರ ಪಟ್ಟಣದಲ್ಲಿ   ಜರುಗಿದ ಕಾರ್ಯಕರ್ತರ ಸಭೆಯಲ್ಲಿ ನಡೆಯಿತು.

ಇಬ್ಬರು ತಾಲ್ಲೂಕು ಘಟಕದ ಅಧ್ಯಕ್ಷರ ಹೆಸರಿನಲ್ಲಿ ಮಂಗಳವಾರ ಮಾನ್ವಿ ಹಾಗೂ ಸಿರವಾರದಲ್ಲಿ ಏಕಕಾಲಕ್ಕೆ ಕಾರ್ಯಕರ್ತರ ಸಭೆ ಆಯೋಜಿಸಿದ್ದು ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣಗಿತ್ತು. ಈ  ಹಿನ್ನೆಲೆಯಲ್ಲಿ ಪಕ್ಷದ ಶಾಸಕ, ಜಿಲ್ಲಾಧ್ಯಕ್ಷ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಮುಖಂಡರು ಮಾನ್ವಿಯ ಸಭೆಯಲ್ಲಿ ಪಾಲ್ಗೊಂಡು ಕಾರ್ಯಕರ್ತರಲ್ಲಿ ಇದುವರೆಗೆ ಮೂಡಿದ್ದ ಅನುಮಾನಗಳಿಗೆ ತೆರೆ ಎಳೆದರು.

ತುಂಗಭದ್ರಾ ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗವಾಟ ವರ್ತನೆ ವಿರುದ್ಧ ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಮಲ್ಲನಗೌಡ ನಕ್ಕುಂದಿ ಅವರೇ ಬಿಜೆಪಿಯ ನೂತನ ತಾಲ್ಲೂಕು ಘಟಕದ ಅಧಿಕೃತ ಅಧ್ಯಕ್ಷರೆಂದು ಘೋಷಿಸಲಾಯಿತು.

ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಮಸ್ಕಿ ಶಾಸಕ ಪ್ರತಾಪಗೌಡ, ವ್ಯಕ್ತಿಗಿಂತ ಪಕ್ಷ ದೊಡ್ಡದು. ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ. ಕಾರಣ ಪಕ್ಷದಿಂದ ಅಧಿಕಾರ ಪಡೆದವರು ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿ ಪಕ್ಷ ಸಂಘಟನೆಯಲ್ಲಿ ತೊಡಗಬೇಕು. ಆದರೆ ಮಾನ್ವಿಯಲ್ಲಿ ಮುಖಂಡರ ಗುಂಪುಗಾರಿಕೆಯಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. ಎಪಿ ಎಂಸಿ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಇದ್ದರೂ  ಮುಖಂಡರ ದುರ್ಬುದ್ಧಿಯಿಂದ ಅಧಿಕಾರ ಸಿಗಲಿಲ್ಲ ಎಂದು ನೇರ ಮಾತುಗಳಲ್ಲಿ ನುಡಿದರು.

ಮಾಜಿ ಶಾಸಕ ಗಂಗಾಧರ ನಾಯಕ ಮಾತನಾಡಿ, ತುಂಗಭದ್ರಾ ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗವಾಟ ಅವರ ಧೋರಣೆಯನ್ನು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡರು. ಬಿಜೆಪಿ ಕಾರ್ಯಕರ್ತರ ಸಭೆ ನಡೆಸಲು ಇವರಿಗೆ ಹಕ್ಕಿಲ್ಲ.   ಬಸನಗೌಡ ದದ್ದಲ ಅವರು ಮುಂಬರುವ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಲು ಇವರೇನು ಯಡಿಯೂರಪ್ಪನವರೋ ಅಥವಾ ಈಶ್ವರಪ್ಪನವರೋ ಎಂದು ವ್ಯಂಗ್ಯವಾಡಿದರು. ಬಸನಗೌಡರಿಂದ ಪಕ್ಷಕ್ಕೇನು ಲಾಭವಿಲ್ಲ. ಪಕ್ಷದಲ್ಲಿದ್ದುಕೊಂಡು ವಿರೋಧಿ ಚಟುವಟಿಕೆ ನಡೆಸುವುದಕ್ಕಿಂತ ಅವರು ಪಕ್ಷ ಬಿಡುವುದೇ ಒಳಿತು ಎಂದು ಗಂಗಾಧರ ನಾಯಕ ಒತ್ತಾಯಿಸಿದರು.

ಮಾಜಿ ಶಾಸಕ ಎ.ಪಾಪಾರೆಡ್ಡಿ, ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಆರ್.ತಿಮ್ಮಯ್ಯ, ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ ಜೆ.ಶರಣಪ್ಪಗೌಡ ಸಿರವಾರ, ರಾಜ್ಯ ಖಾದಿ ಮಂಡಳಿ ಅಧ್ಯಕ್ಷ ಹರವಿ ಶಂಕರಗೌಡ ಮಾತನಾಡಿ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿ ಸಂಘಟನೆಯಲ್ಲಿ ತೊಡಗಬೇಕು. ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಜನರಲ್ಲಿ ತಿಳವಳಿಕೆ ಮೂಡಿಸಬೇಕು ಎಂದು ಕರೆ ನೀಡಿದರು.

ಪಕ್ಷದ ವಿವಿಧ ಘಟಕಗಳ ನೂತನ ಪದಾಧಿಕಾರಿಗಳನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಅಮರೇಶ ಹೊಸಮನಿ ಸಭೆಯ ಅಧ್ಯಕ್ಷತೆವಹಿಸಿದ್ದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ನಕ್ಕುಂದಿ ಮಲ್ಲನಗೌಡ, ಬಿಜೆಪಿ ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷ ಕೆ.ಬಸವಂತಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ ಸಜ್ಜನ ಹಾಗೂ ರಮಾನಂದ ಯಾದವ್, ಜಿಪಂ ಸದಸ್ಯ ಗೋಪಾಲ ನಾಯಕ ಪದಾಧಿಕಾರಿಗಳಾದ ಜೆ.ಸಿ.ಪಾಟೀಲ್, ಕಡಗೋಲು ಆಂಜನೇಯ, ರಾಜಕುಮಾರ್, ದೊಡ್ಡಮಲ್ಲೇಶಪ್ಪ, ಶೇಖರರೆಡ್ಡಿ, ಜಯರಾಜ ಬಾದರದಿನ್ನಿ, ಅಶೋಕ ಚಾಗಬಾವಿ, ತಾಲ್ಲೂಕು ಯುವ ಅಧ್ಯಕ್ಷ ಸಂದೀಪ ಪಾಟೀಲ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಶೀಲಾ ಗಣೇಶ, ತಾಲ್ಲೂಕು ಅಧ್ಯಕ್ಷೆ ಈರಮ್ಮ ವೇದಿಕೆಯಲ್ಲಿದ್ದರು.

ತಾಲ್ಲೂಕು ಅಧ್ಯಕ್ಷ ಮಲ್ಲನಗೌಡ ನಕ್ಕುಂದಿ ಮಾತನಾಡಿದರು. ಮಠದಪ್ಪ ನಾಯ್ಕರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT