ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿತ್ವ ರೂಪಿಸುವುದೇ ಅಧ್ಯಾತ್ಮ

Last Updated 16 ಫೆಬ್ರುವರಿ 2012, 6:25 IST
ಅಕ್ಷರ ಗಾತ್ರ

ಜಮಖಂಡಿ: `ನಾವು ಇನ್ನೊಬ್ಬರನ್ನು ಪ್ರೀತಿಸುವ ಮನಸ್ಸು ಬೆಳೆಸಿಕೊಳ್ಳುವುದು ಹಾಗೂ ಇನ್ನೊಬ್ಬರು ನಮ್ಮನ್ನು ಪ್ರೀತಿಸುವಂತಹ ವ್ಯಕ್ತಿತ್ವ ರೂಪಿಸಿಕೊಳ್ಳುವುದೇ ನಿಜವಾದ ಅಧ್ಯಾತ್ಮ~ ಎಂದು ಹರಿಹರ ತಾಲ್ಲೂಕಿನ ಎರೇ ಹೊಸಹಳ್ಳಿಯ ಮಹಾಯೋಗಿ ವೇಮನ ಮಹಾಸಂಸ್ಥಾನ ಮಠದ ವೇಮನಾನಂದ ಶ್ರೀಗಳು ಬುಧವಾರ ನುಡಿದರು.

ತಾಲ್ಲಕಿನ ಗಣಿ ಗ್ರಾಮದ ಹೇಮ-ವೇಮ ಯುವಕ ಸಂಘದ ಆಶ್ರಯದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಮಹಾಶಿವಶರಣೆ ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರ ದೇವಸ್ಥಾನದ ಅಡಿಗಲ್ಲು ಸಮಾರಂಭದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಜ್ಞಾನವನ್ನು ಸಂಪಾದಿಸಿ ಭಕ್ತಿಯನ್ನು ಒಡಮೂಡಿಸಿಕೊಂಡು ವೈರಾಗ್ಯ ಪ್ರಾಪ್ತಿ ಮಾಡಿಕೊಳ್ಳಬೇಕು. ನಿರ್ಲಿಪ್ತ ಜೀವನ ನಡೆಸುವುದು ಕೂಡ ವೈರಾಗ್ಯ ಎನಿಸುತ್ತದೆ. ನಿತ್ಯ ಜೀವನದ ಆದರ್ಶ ಪರಿಪಾಲನೆ ಕೂಡ ವೈರಾಗ್ಯದ ಭಾಗವೇ ಆಗಿದೆ ಎಂದು ಆಶೀರ್ವಚನ ನೀಡಿದರು.

ರಾಜ್ಯ ರಡ್ಡಿ ಜನಸಂಘದ ಉಪಾಧ್ಯಕ್ಷ ಮೊ.ಮು.ಆಂಜನಪ್ಪರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲರೂ ಸಮಾನವಾಗಿರಬೇಕು. ಮಾನವ ತತ್ವಗಳು ನೆಲೆ ನಿಲ್ಲಬೇಕು ಎಂಬುದು ಮಹಾಯೋಗಿ ವೇಮನರ ಹಾಗೂ ಮಹಾಶಿವಶರಣೆ ಹೇಮರಡ್ಡಿ ಮಲ್ಲಮ್ಮರ ಸದಾಶಯವಾಗಿತ್ತು ಎಂದರು.

ಎಂಎಲ್‌ಸಿ ಎಸ್.ಆರ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಣ್ಣಿನ ಸಂಸ್ಕಾರ ಹೊಂದಿರುವ, ಹೃದಯ ಶ್ರೀಮಂತಿಕೆವುಳ್ಳ ಹಾಗೂ ಸ್ವಾಭಿಮಾನದ ಸದೃಢ ಜನಾಂಗವನ್ನು ರಡ್ಡಿ ಸಮಾಜ ಹೊಂದಿದೆ. ರಡ್ಡಿ ಸಮಾಜ ಯಾವಾಗಲೂ ಇತರ ಸಮಾಜದ ನೋವು ನಲಿವುಗಳಿಗೆ ಸ್ಪಂದಿಸುವ ಮನೋಭಾವ ಹೊಂದಿದೆ ಎಂದರು.

ಮಾಜಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ಅತ್ತೆ- ಸೊಸೆಯ ಸಂಬಂಧಗಳು ತಾಯಿ-ಮಗಳ ಸಂಬಂಧದಂತೆ ಇರಬೇಕು ಎಂಬುದು ಮಹಾಶಿವಶರಣೆ ಹೇಮರಡ್ಡಿ ಮಲ್ಲಮ್ಮಳ ಜೀವನದಿಂದ ಕಂಡುಕೊಳ್ಳಬೇಕಾದ ಜೀವನದ ಪಾಠವಾಗಿದೆ ಎಂದರು.

ಖಜ್ಜಿಡೋಣಿಯ ಅವದೂತ ಆಶ್ರಮದ ಕೃಷ್ಣಶಾಸ್ತ್ರಿಗಳು, ಕವಿವಿ ಪ್ರಾಧ್ಯಾಪಕಿ ಡಾ.ಶಾಂತಾದೇವಿ ಸಣ್ಣಯಲ್ಲಪ್ಪನವರ ಹಾಗೂ ಪ್ರಾಧ್ಯಾಪಕ ಡಾ. ಹೇಮರಡ್ಡಿ ನೀಲಗುಂದ ಉಪನ್ಯಾಸ ನೀಡಿದರು.
ಮರೇಗುದ್ದಿಯ ಅಡವಿ ಸಿದ್ಧೇಶ್ವರ ಮಠದ ಗುರುಪಾದೀಶ್ವರ ಶ್ರೀಗಳು, ಗಣಿ ಗ್ರಾಮದ ಸಿದ್ಧಾರೂಢ ಮಠದ ಚಿನ್ಮಯಾನಂದ ಶ್ರೀಗಳು, ಬೆಳಗಲಿಯ ಸದಾಶಿವ ಮಠದ ಚಿಕ್ಕಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಶಾಸಕ ಶ್ರೀಕಾಂತ ಕುಲಕರ್ಣಿ, ಹಿರಿಯರಾದ ವಾಸಣ್ಣ ದೇಸಾಯಿ, ಶಂಕರ ಪಂಚಗಾಂವಿ, ವಿಜಾಪುರ ಜಿ.ಪಂ.ಮಾಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಜಮಖಂಡಿಯ ವೇಮ ವಿಕಾಸ ವೇದಿಕೆಯ ಅಧ್ಯಕ್ಷ ಡಾ.ಟಿ.ಪಿ. ಗಿರಡ್ಡಿ, ಪ್ರಗತಿಪರ ರೈತ ಗೋವಿಂದಪ್ಪ ಗುಜ್ಜನ್ನವರ, ಅರ್ಜುನ ಶೇಬಾನಿ, ನಂದಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ಉಪಾಧ್ಯಕ್ಷ ಕೆ.ಆರ್. ಬಿರಾದಾರ, ವಕೀಲ ಎಲ್‌ಆರ್. ಉದಪುಡಿ, ಪಿ.ಎಸ್.ಚೌರಡ್ಡಿ ಉಪಸ್ಥಿತರಿದ್ದರು.

ಪಾಂಡುರಂಗ ಭಜನಾ ಮಂಡಳ ಸದ್ಭಕ್ತರಿಂದ ಪ್ರಾರ್ಥನೆ ಜರುಗಿತು. ಶಿಕ್ಷಕ ಆರ್.ಎಸ್.ಪಾಟೀಲ ಸ್ವಾಗತಿಸಿದರು. ಕೃಷಿ ಅಧಿಕಾರಿ ಎಚ್.ಕೆ.ನ್ಯಾಮಗೌಡರ ನಿರೂಪಿಸಿದರು. ಕಲ್ಮೇಶ ನ್ಯಾಮಗೌಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT