ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿಯ ಘನತೆ, ಗೌರವಕ್ಕೆ ಚ್ಯುತಿ: ಪತ್ರಿಕೆಗಳಿಗೆ ಕಟ್ಜು ಎಚ್ಚರಿಕೆ

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜನತೆಯ ಘನತೆ ಗೌರವಗಳಿಗೆ ಧಕ್ಕೆಯುಂಟು ಮಾಡಿದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪತ್ರಿಕಾ ಮಂಡಲಿ ಅಧ್ಯಕ್ಷ ಮಾರ್ಕಂಡೇಯ ಕಟ್ಜು ವೃತ್ತಪತ್ರಿಕೆಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಮಹಿಳಾ ಐಎಎಸ್ ಅಧಿಕಾರಿಯ ವಿರುದ್ಧ ವರದಿಗಳನ್ನು ಪ್ರಕಟಿಸಿರುವ ಕೋಲ್ಕತ್ತದ ಪತ್ರಿಕೆಯೊಂದರ ವಿರುದ್ಧ ಬಂದಿರುವ ದೂರು ಪ್ರಸ್ತಾಪಿಸಿ ಅವರು ಈ ಎಚ್ಚರಿಕೆ ನೀಡಿದ್ದಾರೆ.

ದೂರನ್ನು ಸಮಿತಿಯ ವಿಚಾರಣೆಗೆ ಒಳಪಡಿಸುವ ಬದಲು ಕಟ್ಜು ಅವರು ಪತ್ರಿಕೆಯ ವಿರುದ್ಧ ಬಹಿರಂಗ ಹೇಳಿಕೆ ನೀಡಿ, ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಹಿಳಾ ಅಧಿಕಾರಿಗೆ ಚೆನ್ನೈನಲ್ಲಿ ಚಿಕಿತ್ಸೆ  ಪಡೆಯಲು ರಜೆ ಮಂಜೂರು ಮಾಡಿರುವ ವಿಚಾರವನ್ನು ತಿರುಚಿ ಬರೆಯಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೂಗ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಪ್ರಿಯಾ ರಂಗರಾಜನ್ ಅವರ ನಡವಳಿಕೆ ಸರಿ ಇಲ್ಲ ಎಂಬ ಕಾರಣಕ್ಕೆ ಅವರನ್ನು ಮುಖ್ಯಮಂತ್ರಿ ಅವರು ಜಿಲ್ಲಾಧಿಕಾರಿ ಹುದ್ದೆಯಿಂದ ತೆಗೆದಿದ್ದಾರೆ ಎಂದು ಪತ್ರಿಕೆ ಕಳೆದ ತಿಂಗಳು ಸುಳ್ಳು ಸುದ್ದಿ ಪ್ರಕಟಿಸಿತ್ತು.

 ಇದಲ್ಲದೆ ಪತ್ರಿಕೆ ಇನ್ನೂ ಕೆಲವು ಸುಳ್ಳು ಆಪಾದನೆಗಳನ್ನು ಮಾಡಿ ಈ ಮಹಿಳಾ ಅಧಿಕಾರಿ ವಿರುದ್ದ ಸುದ್ದಿಗಳನ್ನು ಪ್ರಕಟಿಸಿದೆ ಎಂದು ಮಾರ್ಕಂಡೇಯ ಕಟ್ಜು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಐಎಎಸ್ ಅಧಿಕಾರಿಗಳ ನಿಯೋಗವೊಂದು ಶನಿವಾರ ತಮ್ಮನ್ನು ಭೇಟಿ ಮಾಡಿ, ಪತ್ರಿಕೆಯು ಮಹಿಳಾ ಅಧಿಕಾರಿಯ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಸುದ್ದಿ ಪ್ರಕಟಿಸುವ ಮೂಲಕ ಘನತೆ ಗೌರವಗಳಿಗೆ ಚ್ಯುತಿ ತಂದಿದೆ, ಈ ಪತ್ರಿಕೆಯ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದೆ ಎಂದು ತಿಳಿಸಿದ್ದಾರೆ.

ಅಧಿಕಾರಿಯ ವಿರುದ್ಧ  ಸುಳ್ಳು ಮತ್ತು ಗೌರವಕ್ಕೆ ಚ್ಯುತಿ ತರುವಂತಹ ಸುದ್ದಿ ಪ್ರಕಟಿಸಿದ್ದನ್ನು ಪ್ರತಿಭಟಿಸಿ ಪಶ್ಚಿಮ ಬಂಗಾಳದ ಸಿಬ್ಬಂದಿ ಇಲಾಖೆಯ ಕಾರ್ಯದರ್ಶಿ ಅವರು ಸಂಪಾದಕರಿಗೆ ಬರೆದಿದ್ದ ಪತ್ರವನ್ನು ಪ್ರಮುಖ ಜಾಗದಲ್ಲಿ ಯಥಾವತ್ತಾಗಿ ಪ್ರಕಟಿಸದೆ ಅದನ್ನು ತಿರುಚಿ, ಸಣ್ಣದಾಗಿ, ಪ್ರಾಮುಖ್ಯ ನೀಡದೆ ಪ್ರಕಟಿಸಲಾಗಿದೆ ಎಂದು ನಿಯೋಗವು ದೂರಿನಲ್ಲಿ ತಿಳಿಸಿದೆ.

ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶ ನೀಡಿದೆ ಎಂಬ ಕಾರಣಕ್ಕೆ ಅದನ್ನು ದುರ್ಬಳಕೆ ಮಾಡಿಕೊಂಡು ಸ್ವೇಚ್ಛೆಯಿಂದ ಮನಬಂದಂತೆ ಸುದ್ದಿ ಪ್ರಕಟಿಸುವುದು ಸರಿಯಲ್ಲ ಎಂದ ಕಟ್ಜು ಅವರು, `ಘನತೆ- ಗೌರವ ಎನ್ನುವುದು ವ್ಯಕ್ತಿಗತ ಆಸ್ತಿ; ಪತ್ರಿಕೆಗಳು ಅದಕ್ಕೆ ಧಕ್ಕೆ ಉಂಟು ಮಾಡಬಾರದು~ ಎಂದು ಎಚ್ಚರಿಕೆ ನೀಡಿದ್ದಾರೆ.

ಕ್ಯಾನ್ಸರ್‌ನಿಂದ ಬಳಲುತ್ತಿರುವ ಐಎಎಸ್ ಅಧಿಕಾರಿ ವಿರುದ್ಧ ಪತ್ರಿಕೆಯು ಇಲ್ಲಸಲ್ಲದ ಸುದ್ದಿಗಳನ್ನು ಪ್ರಕಟಿಸಿ ಕೀಳುಮಟ್ಟದಲ್ಲಿ ವರ್ತಿಸಿದೆ ಎನ್ನುವುದು ಮನದಟ್ಟಾಗಿದೆ. ಆದ್ದರಿಂದ ಪತ್ರಿಕಾ ಮಂಡಲಿಯು ಇಂತಹ ಬೇಜವಾಬ್ದಾರಿ ವರ್ತನೆಯನ್ನು ಇನ್ನು ಮುಂದೆ ಸಹಿಸಿಕೊಳ್ಳುವುದಿಲ್ಲ. ಇಂತಹ ವರ್ತನೆ ಪುನರಾವರ್ತನೆಗೊಂಡರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಟ್ಜು ಎಚ್ಚರಿಕೆ ನೀಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT