ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಖನಾದ ಮಾಡುವ ಗೋಪುರ ಗಡಿಯಾರ

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಇದು ಅಂತಿಂಥಾ ಗಡಿಯಾರವಲ್ಲ; ಗೋಪುರ ಗಡಿಯಾರ! ವೈಶಿಷ್ಟ್ಯಪೂರ್ಣವಾದ ಲಕ್ಷಣಗಳಿಂದ ಕೂಡಿದ ಇದು ವಿಖ್ಯಾತಿಗೆ ಅರ್ಹವಾಗಿದೆ. ಇದರ ಮಹಿಮೆ ಅಪಾರ. ಅದಿರಲಿ, ಅಂಥದ್ದೇನಪ್ಪಾ ಇದೆ ಇದರಲ್ಲಿ? ಅಂತೀರಾ. ಇಲ್ಲಿ ಕೇಳಿ...

ಇದು ಗಂಟೆಗೊಮ್ಮೆ ಸಮಯವನ್ನು ಹೇಳುವ ಮೊದಲು ಗಂಟೆ ಬಾರಿಸುವುದರ ಬದಲು ಬಹು ದೂರದವರೆಗೆ ಕೇಳುವಂತೆ ಶಂಖನಾದ ಮಾಡುತ್ತದೆ. ಅದರ ನಂತರ, ಶಿವನನ್ನು ನೆನಪಿಸುವ `ಓಂಕಾರ~ವನ್ನು ಐದು ಬಾರಿ ಪಠಿಸುತ್ತದೆ. ಅದಾದ ಮೇಲೆಯೆ ಗಂಟೆ ಎಷ್ಟಾಗಿದೆ ಅಂತ ಗಂಟೆ ಬಾರಿಸುತ್ತದೆ. ಕೆಂಗೇರಿಯಿಂದ -ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಐದು ಕಿ.ಮೀ. ಸಾಗಿದರೆ ಈ ಗಡಿಯಾರದ ಸದ್ದು ಕೇಳುತ್ತದೆ. ಇದು ಇರುವುದು  ಚಿತ್ರನಟ ಬಾಲಕೃಷ್ಣ ಅವರ ನಿರ್ಮಾಣದ ಅಭಿಮಾನ್ ಸ್ಟುಡಿಯೋ ಪಕ್ಕದಲ್ಲೇ. ಚಿತ್ರನಟ ವಿಷ್ಣುವರ್ಧನ್ ಸಮಾಧಿ ಕೂಡ ಅದರ ಸಮೀಪವೇ ಇರುವುದು. ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಿಂದ ಕೆಲವೇ ಅಡಿ ಸಾಗಿದರೆ ಪ್ರಶಾಂತವಾದ `ಓಂಕಾರ ಆಶ್ರಮ~ದ ಬುಡದಲ್ಲಿ ಈ ಬೃಹತ್ ಗೋಪುರ ಗಡಿಯಾರವನ್ನು ನೋಡಬಹುದು.

ಲಂಡನ್‌ನ ಬಹುದೊಡ್ಡ `ಬಿಗ್ ಬೆನ್~ ಗೋಪುರ ಗಡಿಯಾರಕ್ಕಿಂತ ದೊಡ್ಡದು ಎಂಬ ಖ್ಯಾತಿ ಪಡೆದಿರುವ ಇದು ಬೆಂಗಳೂರಿನಲ್ಲೇ ಅತ್ಯಂತ ಬೃಹತ್ತಾದದ್ದು. ಅಲ್ಲದೆ, ಪ್ರಪಂಚದ ಬೃಹತ್ ಗಡಿಯಾರಗಳಲ್ಲಿ ಒಂದಾದ ಗೋಪುರ ಗಡಿಯಾರವೂ ಹೌದು. ಇದರ ಪ್ರತಿ ಅಂಕೆಯ ಎತ್ತರ ಸುಮಾರು 2.5 ಅಡಿ. ಈ ಗಡಿಯಾರದ ನಿಮಿಷದ ಮತ್ತು ಗಂಟಾಮುಳ್ಳಿನ ತೂಕ ಸರಿ ಸುಮಾರು 40 ಕೆ.ಜಿ. ಈ ಗಡಿಯಾರದ ಒಟ್ಟು ವ್ಯಾಸ ಅಂದರೆ ಸುತ್ತಳತೆ 24 ಅಡಿ. ಭೂ ಮಟ್ಟದಿಂದ 40 ಅಡಿ ಎತ್ತರದಲ್ಲಿ ನಾಲ್ಕು ಆಧಾರ ಸ್ತಂಭಗಳ ಮೇಲೆ ಈ ಗಡಿಯಾರವನ್ನು ನಿರ್ಮಿಸಲಾಗಿದೆ. ಇಂತಿಪ್ಪ ಬೃಹತ್ ಗಡಿಯಾರ ಬರೋಬ್ಬರಿ 500 ಕೆಜಿ ಭಾರ ತೂಗುತ್ತದೆ. ಇದರ ನಿರ್ಮಾತೃ ಬೆಂಗಳೂರಿನ ಪ್ರಖ್ಯಾತ ಗಡಿಯಾರ ನಿರ್ಮಾಣ ಸಂಸ್ಥೆಯಾದ ಎಚ್‌ಎಂಟಿ ಲಿಮಿಟೆಡ್.

ಇದೀಗ ಅಲ್ಲಿ ದ್ವಾದಶ ಲಿಂಗಗಳ ಬೃಹತ್ ಮಂದಿರವೊಂದು ತಲೆಎತ್ತಿದ್ದು ಅದು ಅಕ್ಷರಶಃ ಶೈವ ಅನುಯಾಯಿಗಳ ಪವಿತ್ರ ಯಾತ್ರಾಸ್ಥಳವಾಗಿ ಮಾರ್ಪಟ್ಟಿದೆ.      
                
ಕಳೆದ ತಿಂಗಳಷ್ಟೇ ದಶಮಾನೋತ್ಸವ ಕಂಡಿರುವ ಈ ಗಡಿಯಾರವನ್ನು `ಓಂಕಾರ ಆಶ್ರಮ~ದ ಸಂಸ್ಥಾಪಕ ಶಿವಪುರಿ ಮಹಾ ಸ್ವಾಮೀಜಿಯವರ 54ನೇ ಜನ್ಮದಿನದಂದು ಲೋಕಾರ್ಪಣೆ ಮಾಡಲಾಯಿತು. ಅಂದರೆ, 2002ನೇ ವರ್ಷದ ಜನವರಿ 30 ಬುಧವಾರ ಸಾರ್ವಜನಿಕರ ದರ್ಶನಕ್ಕೆ ಮುಕ್ತಗೊಳಿಸಲಾಯಿತು ಎಂಬ ಮಾಹಿತಿ ದೊರೆಯುತ್ತದೆ. ಆದಿಚುಂಚನಗಿರಿ ಪೀಠಾಧ್ಯಕ್ಷ ಬಾಲಗಂಗಾಧರನಾಥ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.    

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT