ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಭೋ ಶಿವ ಶಂಭೋ!

Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸದ್ದಿಲ್ಲದೆ ಬಹುಪಾಲು ಚಿತ್ರೀಕರಣ ಮುಗಿಸಿ ಸುದ್ದಿಮಿತ್ರರ ಮುಂದೆ ಹಾಜರಾಗಿತ್ತು ‘ಶಂಭೋ ಮಹಾದೇವ’ ಬಳಗ. ಹೊಸ ನಿರ್ದೇಶಕ ಮತ್ತು ನಿರ್ಮಾಪಕರಿಬ್ಬರಿಗೂ ಇಲ್ಲಿ ಅನುಭವಿ ಕಲಾವಿದರ ನೆರವು ಸಿಕ್ಕಿದೆ ಎಂಬ ನೆಮ್ಮದಿ.

ನಿರ್ದೇಶಕ ಮೈಸೂರು ಮಂಜು ರಂಗಭೂಮಿಯಲ್ಲಿ ತೊಡಗಿಸಿಕೊಂಡವರು. ಶೀರ್ಷಿಕೆ ಭಕ್ತಿಪ್ರಧಾನ ಸಿನಿಮಾ ಇರಬಹುದು ಎಂಬ ಭಾವನೆ ಮೂಡಿಸಿದರೂ ಇದು ಪಕ್ಕಾ ಕಮರ್ಷಿಯಲ್ ಮಾದರಿ ಚಿತ್ರ ಎಂದು ಸ್ಪಷ್ಟಪಡಿಸಿದರು ಅವರು. ದುಡ್ಡು ಮತ್ತು ಸಂಬಂಧಗಳ ನಡುವಿನ ಸಂಘರ್ಷ ಚಿತ್ರದ ಕಥಾವಸ್ತು. ತಂದೆ ತಾಯಿಯನ್ನು ಕಳೆದುಕೊಂಡು ಅಜ್ಜನ ಆಶ್ರಯದಲ್ಲಿ ಬೆಳೆಯುವ ಮೊಮ್ಮಗ ಮತ್ತು ಆತನ ಆಸ್ತಿಯ ಮೇಲೆ ಕಣ್ಣಿಡುವ ಸಂಬಂಧಿಗಳ ಚಿತ್ರಣ ಈ ಚಿತ್ರದಲ್ಲಿ ವಾಸ್ತವಕ್ಕೆ ಹತ್ತಿರವಾಗಿ ಮೂಡಿಬಂದಿದೆಯಂತೆ.

ಬರ್ಮುಡಾ ಹಾಕಿಕೊಂಡು ದೇಶವಿದೇಶ ಸುತ್ತಾಡುವ ಜಾಲಿ ಅಜ್ಜನ ಪಾತ್ರದಲ್ಲಿ ಆರ್.ಎನ್. ಸುದರ್ಶನ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರಕ್ತಸಂಬಂಧಗಳ ಬಾಂಧವ್ಯವೇ ಹಣಕ್ಕಿಂತ ಮೇಲು ಎಂಬ ನೀತಿ ಪ್ರತಿಪಾದನೆ ಮಾಡಿದ್ದರೂ ನಿಜಜೀವನದಲ್ಲಿ ಅವರಿಗೆ ಹಣವೇ ಮುಖ್ಯ ಹೊರತು ಸಂಬಂಧಗಳಲ್ಲ ಎಂಬ ಅನುಭವಗಳು ಉಂಟಾಗಿವೆಯಂತೆ.

ನಾಯಕ ಆಕಾಶ್, ಹಿರಿಯ ನಟ ಸತ್ಯಜಿತ್ ಅವರ ಮಗ. ಅವರಿಗಿದು ನಾಲ್ಕನೇ ಸಿನಿಮಾ. ಕಥೆಯೊಳಗಿನ ತಾಂತ್ರಿಕತೆ ಅವರಿಗೆ ಮೆಚ್ಚುಗೆಯಾಗಿದೆ. ಅವರಿಗೆ ಜೋಡಿಯಾಗಿರುವುದು ನಟಿ ನೇಹಾ ಪಾಟೀಲ್. ಚಿತ್ರದಲ್ಲಿ ಅವರದು ಭರತನಾಟ್ಯ ಶಿಕ್ಷಕಿಯ ಪಾತ್ರ.
ಸಿನಿಮಾಗಳಲ್ಲಿ ಹಣಹೂಡಿ ಕಳೆದುಕೊಂಡವರನ್ನು ಹತ್ತಿರದಿಂದ ಬಲ್ಲ ನಿರ್ಮಾಪಕ ಕುಮಾರ್ ಅವರಿಗೆ ಒಳ್ಳೆಯ ಮನಸಿನ ನಂಬಿಕೆಗೆ ಅರ್ಹವಾದ ಚಿತ್ರತಂಡ ತಮಗೆ ಸಿಕ್ಕಿದೆ ಎಂಬ ಸಂತಸ. ವೃತ್ತಿಯಲ್ಲಿ ಅವರು ಕೃಷಿಕ. ಶೀರ್ಷಿಕೆ ನೋಡಿ ಎಷ್ಟೋ ಜನ ‘ಶಂಭೋ ಮಹಾದೇವ’ ಎಂದು ವ್ಯಂಗ್ಯವಾಡಿದ್ದಾರೆ ಎನ್ನುವ ದುಃಖ ಅವರಲ್ಲಿದ್ದರೂ, ಸಿನಿಮಾ ಟೀಕಾಕಾರರಿಗೆ ಉತ್ತರ ನೀಡುತ್ತದೆ ಎಂಬ ಭರವಸೆಯೂ ಇದೆ.

ನಾಗೇಂದ್ರ ಅರಸ್, ಸಂಕಲನ ಕಾರ್ಯದ ಜೊತೆ ಚಿಕ್ಕದೊಂದು ಪಾತ್ರವನ್ನೂ ನಿರ್ವಹಿಸಿದ್ದಾರೆ. ನಟರಾದ ಗಣೇಶ್‌ರಾವ್, ರಾಮಚಂದ್ರ, ಮಲ್ಲೇಶಿ, ಭಾಸ್ಕರ್, ನಟಿ ಅಪೂರ್ವಶ್ರೀ ಉಪಸ್ಥಿತರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT