ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನದ ಶಾಲೆ ಅವ್ಯವಸ್ಥೆ: ಅಧಿಕಾರಿಗಳಿಗೆ ನೋಟಿಸ್‌

ಪ್ರಜಾವಾಣಿ ಫಲಶ್ರುತಿ
Last Updated 13 ಸೆಪ್ಟೆಂಬರ್ 2013, 6:17 IST
ಅಕ್ಷರ ಗಾತ್ರ

ಚಿತ್ರದುರ್ಗ: ಶತಮಾನಗಳ ಇತಿಹಾಸವಿರುವ ಕಾಮನಬಾವಿ ಬಡಾವಣೆಯ ಸರ್ಕಾರಿ ಮಾದರಿ ಬಾಲಕ, ಬಾಲಕಿಯರ ಪ್ರೌಢಶಾಲೆಗೆ ಗುರುವಾರ ಸಂಸದ ಜನಾರ್ದನ ಸ್ವಾಮಿ ದಿಢೀರನೆ ಭೇಟಿ ನೀಡಿ, ಶಾಲೆಯ ಪರಿಸ್ಥಿತಿ ಕಂಡು ದಿಗ್ಭ್ರಾಂತರಾದರು.

ಶಾಲೆಯ  ಅಂಗಳ ಹಂದಿ, ನಾಯಿಗಳ ತಾಣವಾಗಿ ಮಾರ್ಪಟ್ಟಿರುವುದು, ರಕ್ಷಣೆಗಾಗಿ ಶಾಲೆಯ ಬಾಗಿಲಿಗೆ ಮುಳ್ಳಿನ ಬೇಲಿ ಹಾಕಿಕೊಂಡೆ ಪಾಠ ಮಾಡುವ ಪರಿಸ್ಥಿತಿ ಹಾಗೂ  ಮಳೆ ಬಂದಾಗ ಸೋರುತ್ತಿರು ಅಡುಗೆ ಕೋಣೆ ಎಲ್ಲವನ್ನು ಕಂಡ ಸಂಸದರು, ಸ್ಥಳದಲ್ಲೇ ಡಿಡಿಪಿಐ, ಬಿಇಒ ಅವರಿಗೆ ನೋಟಿಸ್ ಜಾರಿ ಮಾಡಿ ಒಂದು ವಾರದಲ್ಲಿ ಸೂಕ್ತ ಉತ್ತರ ನೀಡುವಂತೆ ಎಚ್ಚರಿಸಿದರು.

‘ಶಾಲೆಗೆ ಕಳೆದ ಮೂರು ವರ್ಷಗಳಿಂದ ಎಷ್ಟು ಅನುದಾನ ನೀಡಲಾಗಿದೆ. ನಗರ ಪ್ರದೇಶದಲ್ಲಿದ್ದರೂ  ಡಿಡಿಪಿಐ, ಬಿಇಒ ಅಧಿಕಾರಿಗಳು ಎಷ್ಟು ಸಲ ಭೇಟಿ ನೀಡಿ ಇಲ್ಲಿನ ಸಮಸ್ಯೆ ಪರಿಶೀಲಿಸಿ ಸರ್ಕಾರದ ಗಮನ ಸೆಳೆಯಲಾಗಿದೆ ಎನ್ನುವುದು ಸೇರಿದಂತೆ ಮತ್ತಿತರ ಎಲ್ಲ ರೀತಿಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ’ ಎಂದು ಹೇಳಿದರು.

ಶತಮಾನ  ಪೂರೈಸಿರುವ ಮಾದರಿ ಪ್ರಾಥಮಿಕ ಸರ್ಕಾರಿ ಶಾಲೆಗೆ ಕಿಟಕಿಯಿಲ್ಲ, ಬಾಗಿಲುಗಳಿಲ್ಲ,  ಛಾವಣಿ ಸೋರುತ್ತಿದೆ. ಇದು ಶೈಕ್ಷಣಿಕ ವ್ಯವಸ್ಥೆಗೇ ಅಪಮಾನ. ಈ ರೀತಿಯ ಸ್ಥಿತಿ ನೋಡಿ ನನಗೆ ತುಂಬಾ ಆಘಾತವಾಗಿದೆ. ೧೫ ದಿನಗಳಲ್ಲಿ ಸೂಕ್ತ ಅನುದಾನ ನೀಡಿ ಅವ್ಯವಸ್ಥೆ ಸರಿಪಡಿಸಲಾಗುತ್ತದೆ ಎಂದು ಅವರು ಮಾಧ್ಯಮದವರಿಗೆ ತಿಳಿಸಿದರು.

‘ಪುಂಡ ಹುಡುಗರು, ಶಾಲೆಯ ಆವರಣದಲ್ಲಿ ಹಂದಿ ನಾಯಿಗಳ ಕಾಟ ಸಾಲದು ಎನ್ನುವಂತೆ ಕ್ರಿಕೆಟ್ ಆಟವಾಡುವ ಯುವಕರು ನೀಡುವ ತೊಂದರೆಯನ್ನು ಶಾಲಾ ಮಕ್ಕಳು ಅನುಭವಿಸಬೇಕಿದೆ. ಇಷ್ಟು ಸಾಲದು ಎನ್ನುವಂತೆ ಕಾಂಪೌಂಡ್ ಗೋಡೆ ಕಿತ್ತು ಹೋಗಿರುವುದರಿಂದ ಕೆಲ ಮನೆಗಳಿಗೆ ಓಡಾಡಲು ಶಾಲಾ ಆವರಣವನ್ನೇ ದಾರಿ ಮಾಡಿಕೊಂಡಿದ್ದು ಒಟ್ಟಾರೆ ಶಾಲಾ ವಾತಾವರಣ ಹದಗೆಟ್ಟಿದೆ.  ಐತಿಹಾಸಿಕ ಕೋಟೆ ನೋಡಲು ಈ ಶಾಲೆಯ ಎದುರಿನಿಂದಲೇ ಪ್ರವಾಸಿಗರು ಹಾದು ಹೋಗುತ್ತಾರೆ.

ಇದು ಜಿಲ್ಲಾಡಳಿತಕ್ಕೂ ಶೋಭೆ ತರುವಂತದ್ದಲ್ಲ ಎಂದು ಅವರು ಕಿಡಿ ಕಾರಿದರು. ಶಾಲಾ ಮೈದಾನ, ಆವರಣವೇ ಸಾರ್ವಜನಿಕರಿಗೆ ಓಡಾಡುವ ರಸ್ತೆಯಾಗಿರುವುದು ಶಿಕ್ಷಣ ಇಲಾಖೆ ತಲೆ ತಗ್ಗಿಸುವ ವಿಚಾರವಾಗಿದೆ ಎಂದು ಅವರು ಬೇಸರ ವ್ಯಕ್ತ ಪಡಿಸಿದರು. ಜಿಲ್ಲಾ ಸಚಿವರು, ಶಾಸಕರು, ಸಿಇಒ, ಡಿಡಿಪಿಐ ಅವರೊಂದಿಗೆ ಚರ್ಚಿಸಿ ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಂಸದರು ಭರವಸೆ ನೀಡಿದರು. ಕಾಮನಬಾವಿ ಬಡಾವಣೆಯ ಈ ಶಾಲೆಯ ದುಸ್ಥಿತಿ ಕುರಿತು ಈ ಹಿಂದೆ ಪತ್ರಿಕೆ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇಂದು ಸುಗಮ ಸಂಗೀತ
ಚಿತ್ರದುರ್ಗ:
ನಗರದ ಪ್ರಸನ್ನ ಗಣಪತಿ ಸೇವಾ ಸಮಿತಿ ವತಿಯಿಂದ ಆನೆಬಾಗಿಲು ಬಳಿ ಪ್ರತಿಷ್ಠಾಪಿಸಿರುವ ೫೬ನೇ ವರ್ಷದ ಪ್ರಸನ್ನ ಗಣಪತಿ ಸನ್ನಿಧಿಯಲ್ಲಿ ಸೆ.೧3ರಂದು ಸಂಜೆ ಮೈಸೂರಿನ ಲಕ್ಷ್ಮೀಶಂಕರ್‌ ಗಾನ ಸಿರಿ ವೃಂದಾದ ವಿ.ಮಾಲಿನಿ ಮತ್ತು ತಂಡದಿಂದ ಸುಗಮ ಸಂಗೀತ ಮತ್ತು ಹಳೇ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT