ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಾವತಿ ಕಣಿವೆಯಲ್ಲಿ 40 ಹುಲಿ: ಬಿ.ಕೆ.ಸಿಂಗ್

Last Updated 22 ಆಗಸ್ಟ್ 2011, 6:50 IST
ಅಕ್ಷರ ಗಾತ್ರ

ದಾಂಡೇಲಿ: ಶರಾವತಿಯಿಂದ ಖಾನಾಪುರದವರೆಗಿನ ದಟ್ಟ ಅರಣ್ಯ ಪ್ರದೇಶದಲ್ಲಿ ಖಚಿತವಾಗಿ 40 ಹುಲಿಗಳು ಇರುವ ಬಗ್ಗೆ ಅರಣ್ಯ ಇಲಾಖೆಗೆ ದಾಖಲೆ ಸಹಿತ ಮಾಹಿತಿ ಇದೆ. ಇತ್ತೀಚಿನ ಕೆಲ ವರ್ಷಗಳಲ್ಲಿ  ಈ ವಿಷಯ ಇಲಾಖೆ ಹೆಮ್ಮೆ ಪಡುವಂತಹುದು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ.ಸಿಂಗ್ ಹೇಳಿದರು.

ಅವರು ಇಲ್ಲಿಯ ಕುಳಗಿ ನಿಸರ್ಗ ಧಾಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ದಾಂಡೇಲಿ- ಅಣಶಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ಜನರನ್ನು ಒಕ್ಕಲೆಬ್ಬಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದು ಕೇವಲ ಊಹಾಪೋಹದ ಸಂಗತಿ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ 38/ವಿ ಪ್ರಕಾರ ಅರಣ್ಯದಲ್ಲಿ ಜೀವನೋಪಾಯಕ್ಕಾಗಿ ಕಾಯಂ ಆಗಿ ನೆಲೆಯೂರಿನಿಂತ ಯಾವುದೇ ಬುಡಕಟ್ಟು ಹಾಗೂ ಕುಟುಂಬಗಳನ್ನು ಯಾವ ಕಾರಣಕ್ಕೂ ಒಕ್ಕಲೆಬ್ಬಿಸಲು ಬಾರದು. ಆದರೆ 2006ರ ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ಅರಣ್ಯದಲ್ಲಿ 75 ವರ್ಷಕ್ಕೂ ಹೆಚ್ಚು ಕಾಲ ಅಂದರೆ ಮೂರು ತಲೆಮಾರಿನಿಂದ ಇದ್ದವರನ್ನು ಬಿಟ್ಟು ಇತ್ತೀಚಿನ ಅತಿಕ್ರಮಣಕಾರರನ್ನು ನಿರ್ದಯವಾಗಿ ಹೊರಹಾಕಬೇಕಾಗುತ್ತದೆ ಎಂದರು.

ಸಹ್ಯಾದ್ರಿ ಎಲಿಫೆಂಟ್ ಕಾರಿಡಾರ್ ಯೋಜನೆಯ ಸಂಪೂರ್ಣ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಹಾನಗಲ್ ಬನವಾಸಿ, ದಾಂಡೇಲಿ, ಮುಂಡಗೋಡ, ಹಳಿಯಾಳ, ಭಾಗವತಿ, ಖಾನಾಪುರ, ಕಾರವಾರ, ಅಣಶಿ ಸೇರಿದಂತೆ ಮಹಾರಾಷ್ಟ್ರದ ಸಾವಂತವಾಡಿ, ಕಿಲಾರಿ, ಅರಣ್ಯ ಪ್ರದೇಶವನ್ನು ಈ ಯೋಜನೆಯ ವ್ಯಾಪ್ತಿಗೆ ಸೇರಿದೆ. ಸಹ್ಯಾದ್ರಿ ಆನೆ ಸಂರಕ್ಷಿತ ಪ್ರದೇಶವಾಗಿದ್ದು, ಸರ್ಕಾರದಿಂದ ಈ ಯೋಜನೆ ಮಂಜೂರಾಗುವ ಭರವಸೆ ಇದೆ ಎಂದರು.

ದಾಂಡೇಲಿ ಹಾಗೂ ಜೋಯಿಡಾದ ಅರಣ್ಯ ಪ್ರದೇಶದಲ್ಲಿ ಮೂರ‌್ನಾಲ್ಕು ಪ್ರಕಾರದ ಹಾರ್ನ್‌ಬಿಲ್‌ಗಳು ಇವೆ.  ಈ ಪ್ರದೇಶವನ್ನು ಹಾರ್ನ್‌ಬಿಲ್ ಸಂರಕ್ಷಿತ ಪ್ರದೇಶವನ್ನಾಗಿಸಿ ಪ್ರವಾಸಿಗರಿಗೆ ಅವುಗಳ ಅಂದ ಸವಿಯಲು ಕ್ರಮ ಕೈಗೊಳ್ಳಲಾಗಿದೆ ಎಂದು ದಾಂಡೇಲಿ- ಅಣಶಿ ಹುಲಿ ಸಂರಕ್ಷಣಾ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ದಾಂಡೇಲಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸುನೀಲ ಪನ್ವಾರ ತಿಳಿಸಿದರು.

ಶಿವಮೊಗ್ಗ ಹುಲಿ ಯೋಜನೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರೇಮ ಕುಮಾರ, ಕೆನರಾ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲಖೇಡ್, ಹಳಿಯಾಳ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಬಿ.ಮಲ್ಲೇಶ, ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT