ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಗೆ ಬದುಕು ಕಲಿಸಿದ `ಭಾಗ್ಯವಂತಿ'

Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ನಾನೂ ಉದ್ಯಮಿ

`ಅನಿವಾರ್ಯತೆಯೇ ಎಲ್ಲ ಸಂಶೋಧನೆಗಳ ತಾಯಿ' ಎನ್ನುವ ಮಾತು ಇದೆ. ಬದುಕಿನಲ್ಲಿ ತೀರಾ ಅನಿವಾರ್ಯತೆ ಉಂಟಾದಾಗಲೇ ಮನಸ್ಸಿನಲ್ಲಿ ಹೊಸ ಹೊಸ ಆಲೋಚನೆಗಳು ಹುಟ್ಟಿಕೊಳ್ಳುತ್ತವೆ. ನಮ್ಮಲ್ಲಿ ಹುಟ್ಟಿಕೊಳ್ಳುವ ಆಲೋಚನೆಗಳು ನಕಾರಾತ್ಮಕವಾಗಿದ್ದರೆ ಅದು ನಮ್ಮ ಬದುಕನ್ನು ನಾಶ ಮಾಡುತ್ತದೆ. ಆಲೋಚನೆಗಳು ಸಕಾರಾತ್ಮಕವಾಗಿದ್ದರೆ ಅದು ಭಾಗ್ಯದ ಹೆಬ್ಬಾಗಿಲನ್ನು ತೆರೆಯುತ್ತದೆ. ಸಾಧನೆಯ ಶಿಖರವನ್ನು ಏರಲು ಮಾರ್ಗವನ್ನು ಸೂಚಿಸುತ್ತದೆ. ಹೀಗೆ ತೆರೆದುಕೊಂಡ ಬಾಗಿಲಿನಲ್ಲಿ ದೃಢವಾದ ಹೆಜ್ಜೆ ಇಟ್ಟರೆ ಸವಾಲುಗಳು ಮಂಜಿನಂತೆ ಕರಗುತ್ತವೆ. ಸಾಧನೆಯ ಶಿಖರ ಸುಲಭದ ಹಾದಿಯಾಗುತ್ತದೆ. ಇದೇ ಬಗೆಯಲ್ಲಿ ಯಶಸ್ಸನ್ನು ಕಂಡವರು ಶಾಂತಿ ವಿಶ್ವನಾಥ್.
ಶಾಂತಿ ವಿಶ್ವನಾಥ್ ಮೂಲತಃ ವಿಜಾಪುರ ಜಿಲ್ಲೆ ಸಿಂಧಗಿ ತಾಲ್ಲೂಕು ಚಂಬೇವಾಡದವರು. ಮೂವರು ಗಂಡು ಮಕ್ಕಳ ನಂತರ ಹುಟ್ಟಿದ ಮಗಳು.

ಹೀಗೆ ಮೂರು ಗಂಡು ಮಕ್ಕಳ ನಂತರ ಹೆಣ್ಣು ಹುಟ್ಟಿದರೆ ಅಪಶಕುನ ಎನ್ನುವ ನಂಬಿಕೆ ಕೆಲವರಲ್ಲಿದೆ. ಇಂತಹ ಅಪಶಕುನದ, ಅವಮಾನದ ಮಾತುಗಳು ಪುಟ್ಟ ಶಾಂತಿಯ ಮೇಲೆ ಬಹಳ ಪರಿಣಾಮ ಬೀರಿದವು. ಅದಕ್ಕೇ ಅವರು ಶಿಕ್ಷಣ ಮತ್ತು ಬದುಕನ್ನು ಅರಸಿಕೊಂಡು ಮೈಸೂರಿಗೆ ಬಂದರು. ಇಲ್ಲಿ ಅವರ ಸಂಬಂಧಿಗಳ ಮನೆಯಲ್ಲಿ ಇದ್ದುಕೊಂಡು ಶಿಕ್ಷಣ ಪೂರೈಸುವ ಕನಸು ಹೊತ್ತರು. ಕಾನೂನು ವಿದ್ಯಾಭ್ಯಾಸ ಮಾಡಿ ನ್ಯಾಯವಾದಿಯಾಗುವ ಅವರ ಕನಸು ನನಸಾಗಲೇ ಇಲ್ಲ. ಪಿಯುಸಿ ಓದುವ ಹೊತ್ತಿಗೆ ಅಪಶಕುನದ ಗುಮ್ಮ ಇಲ್ಲಿಯೂ ಅವರ ಬೆನ್ನು ಬಿಡಲಿಲ್ಲ. ಓದು ಪಿಯುಸಿಗೇ ನಿಂತಿತು. ಆದರೂ ಹೃದಯದೊಳಗೆ ಇದ್ದ ಕನಸುಗಳು ಮಾತ್ರ ಅಲ್ಲಿಗೇ ಕೊನೆಗೊಳ್ಳಲಿಲ್ಲ.

ಅವಮಾನದ ಬೇಗೆಯಲ್ಲಿಯೇ ಬೆಳೆದ ಶಾಂತಿ ಅವರಿಗೆ ತಾನು ಏನನ್ನಾದರೂ ಸಾಧಿಸಬೇಕು ಛಲ-ಗುರಿ ಇತ್ತು. ಎಲ್ಲ ಹೆಣ್ಣು ಮಕ್ಕಳೂ ಕಲಿಯುವ ಹಾಗೆ ಅವರೂ ಹೊಲಿಗೆ ತರಬೇತಿ ಪಡೆದುಕೊಂಡರು. ಅದರಲ್ಲಿಯೇ ಕೌಶಲ ಹೆಚ್ಚಿಸಿಕೊಂಡರು. ಜತೆಗೆ ಒಂದಿಷ್ಟು ಹೊಲಿಗೆ ಯಂತ್ರಗಳನ್ನು ಪಡೆದುಕೊಂಡು ಇತರೆ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಲು ಆರಂಭಿಸಿದರು.

ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆದುಕೊಂಡು ಮೈಸೂರಿನ ದಟ್ಟಗಳ್ಳಿಯಲ್ಲಿ ಹೊಲಿಗೆ ತರಬೇತಿ ಕೇಂದ್ರವನ್ನೂ ತೆರೆದರು. ಇವರ ಬಳಿ ನೂರಾರು ಮಹಿಳೆಯರು ಹೊಲಿಗೆ ಕೆಲಸವನ್ನು ಕಲಿತುಕೊಂಡು ಗಾರ್ಮೆಂಟ್‌ಗಳಿಗೆ ನೌಕರಿಗಾಗಿ ಹೋಗತೊಡಗಿದರು. ಆಗ ಇನ್ನೂ ಮೈಸೂರಿನಲ್ಲಿ ಅಷ್ಟೊಂದು ಗಾರ್ಮೆಂಟ್ ಕಂಪೆನಿಗಳು ಇರಲಿಲ್ಲ. ಹೊಲಿಗೆ ಕಲಿತವರು ಕೆಲಸಕ್ಕೆ ಬೆಂಗಳೂರಿಗೇ ಹೋಗಬೇಕಿತ್ತು. ಅಲ್ಲಿಗೆ ಪ್ರತಿದಿನ ಹೋಗಿ ಬರುವುದು ಕಷ್ಟದ ಕೆಲಸವಾಗಿದ್ದರಿಂದ ಬಹಳಷ್ಟು ಮಹಿಳೆಯರು ಹೊಲಿಗೆ ತರಬೇತಿ ಪಡೆದಿದ್ದರೂ ಮನೆಯಲ್ಲಿಯೇ ಸುಮ್ಮನೆ ಕೂರಬೇಕಾಗಿತ್ತು. ಅವರೆಲ್ಲ ಈ ಸಂಕಷ್ಟದ ಸ್ಥಿತಿಯೇ ಶಾಂತಿ ಅವರು ಗಾರ್ಮೆಂಟ್ ಫ್ಯಾಕ್ಟರಿ ಆರಂಭಿಸಲು ಪ್ರೇರೇಪಣೆ ನೀಡಿತು.

ಕಾರ್ಖಾನೆ ಆರಂಭಿಸುವ ಕನಸು ಕಾಣುವುದು ಸುಲಭ. ಆದರೆ ಇದಕ್ಕಾಗಿ ಒಂದು ಹೆಜ್ಜೆ ಮುಂದಿಟ್ಟರೂ ಹಲವಾರು ಅಡ್ಡಿಗಳು ಎದುರಾಗುತ್ತವೆ. ಮೊದಲನೇ ಅಡ್ಡಿಯೇ ಬಂಡವಾಳದ್ದು. ಗಾರ್ಮೆಂಟ್ ಘಟಕ ಆರಂಭಿಸಲು ಬಂಡವಾಳ ತರುವುದು ಎಲ್ಲಿಂದ? ಎಂಬ ಚಿಂತೆ ಶಾಂತಿ ಅವರನ್ನು ಕಾಡಿತು. ಮಹಿಳಾ ಉದ್ಯಮಿಗಳಿಗೆ ನೆರವಾಗಲು ಸಾಕಷ್ಟು ಯೋಜನೆಗಳಿವೆ ಎಂಬುದನ್ನು ಅರಿತು ಅದರ ಮೂಲಕವೇ ಕಾರ್ಖಾನೆ ಆರಂಭಿಸಲು ಮುಂದಾದಾಗ ನಮ್ಮ ಸರ್ಕಾರಿ ವ್ಯವಸ್ಥೆಯ ವಿಶ್ವರೂಪದ ದರ್ಶನವೇ ಶಾಂತಿ ಅವರಿಗೆ ಆಯಿತು.

ಸರ್ಕಾರಿ ಯೋಜನೆಗಳನ್ನು ಮಂಜೂರು ಮಾಡಿಸಿಕೊಡಲು ಮಧ್ಯವರ್ತಿಗಳು, ಸಬ್ಸಿಡಿ ದೊರಕಿಸಿಕೊಡಲು ಮಧ್ಯವರ್ತಿಗಳು. ಮುಟ್ಟಿದ್ದಕ್ಕೆಲ್ಲಾ ಲಂಚ. ಇಷ್ಟೆಲ್ಲಾ ಕೊಟ್ಟು ಯೋಜನೆ ಅನುಮೋದನೆಯಾಗಿ ಬಂದರೆ ಸರ್ಕಾರ ಕೊಡುವ ಹಣದಲ್ಲಿ ಬಹುತೇಕ ಪಾಲು ಲಂಚಕ್ಕೆ, ಕಮಿಷನ್‌ಗೇ ಖರ್ಚಾಗಿ ಬಿಡುತ್ತದೆ. `ನಾನು ಸ್ವಯಂ ಉದ್ಯೋಗ ಮಾಡುತ್ತೇನೆ' ಎಂದು ಹೇಳಿದರೆ ಯಾವ ಬ್ಯಾಂಕುಗಳೂ ಸರಿಯಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಕೆಲವು ಮ್ಯಾನೇಜರ್‌ಗಳಂತೂ ಮಾತನಾಡಲೇ ಸಿದ್ಧವಿರುವುದಿಲ್ಲ.

ಇಷ್ಟೆಲ್ಲಾ ಕಷ್ಟಗಳು ಇದ್ದರೂ ಒಂದೆರಡು ಬಾರಿ ಮೋಸ ಹೋದರೂ ಶಾಂತಿ, ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆಯಲಿಲ್ಲ. ಇಷ್ಟೆಲ್ಲದರ ನಡುವೆ ಸಂಬಂಧಿಕರ ಮನೆಯಿಂದ ಹೊರ ಬಂದಿದ್ದ ಶಾಂತಿ ತಮ್ಮ ಸಹೋದರನ ಸ್ನೇಹಿತ ಸಣ್ಣ ಪ್ರಮಾಣದಲ್ಲಿ ಷೇರು ವ್ಯಾಪಾರ ಮಾಡಿಕೊಂಡಿದ್ದ ವಿಶ್ವನಾಥ್ ಅವರನ್ನು ಪ್ರೇಮಿಸಿ ಮದುವೆಯಾದರು. ಶಾಂತಿ ಅವರಾದಿಯಾಗಿ ಮೈಸೂರಿಗೆ ಬಂದಿದ್ದ ಶಾಂತಿ ಮದುವೆಯಾದ ನಂತರ ಶಾಂತಿ ವಿಶ್ವನಾಥ್ ಆದರು. ಮದುವೆಯಾದ ನಂತರ ಇವರ ಸ್ವಯಂ ಉದ್ಯೋಗದ ಕನಸಿಗೆ ಪತಿ ವಿಶ್ವನಾಥ್ ಕೂಡ ನೀರೆರೆದರು.

ಸ್ವಂತ ಉದ್ಯಮ ಆರಂಭಿಸುವಷ್ಟು ಹಣ ಆಗಲೂ ಇವರ ಬಳಿ ಇರಲಿಲ್ಲ. ಬ್ಯಾಂಕ್ ಆಫ್ ಇಂಡಿಯಾ ಇವರ ಬೆಂಬಲಕ್ಕೆ ನಿಂತಿತು. 30 ಲಕ್ಷ ರೂಪಾಯಿ ಸಾಲ ಕೊಡಲು ಒಪ್ಪಿತು. ಜತೆಗೆ ಸ್ನೇಹಿತರೂ ಸಹಕರಿಸಿದರು. ಅವರಿಂದಲೂ 30 ಲಕ್ಷ ರೂಪಾಯಿ ಕೂಡಿಸಿದರು. ಒಟ್ಟು 60 ಲಕ್ಷ ರೂಪಾಯಿ ಬಂಡವಾಳದೊಂದಿಗೆ 2011ರ ಜೂನ್ 6ರಂದು `ಭಾಗ್ಯವಂತಿ ಗಾರ್ಮೆಂಟ್' ಆರಂಭವಾಗಿಯೇ ಬಿಟ್ಟಿತು.

ಹೊಲಿಗೆ ಯಂತ್ರಗಳನ್ನು ಜೋಡಿಸಿ 60ಕ್ಕೂ ಹೆಚ್ಚು ಕೆಲಸಗಾರರೊಂದಿಗೆ ಗಾರ್ಮೆಂಟ್ ಘಟಕವೇನೋ ಮೈಸೂರಿನ ರಾಜರಾಜೇಶ್ವರಿ ನಗರದಲ್ಲಿ ಆರಂಭವಾಯಿತು. ಆದರೆ ಮುಂದುವರಿಯುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಕೆಲಸಗಾರರು ಇದ್ದರು. ಆದರೆ ಅವರಿಗೆ ಕೆಲಸ ನೀಡುವಷ್ಟು ಆರ್ಡರ್‌ಗಳೇ ಇರಲಿಲ್ಲ. ಆಗ ಆರ್ಡರ್ ಹುಡುಕಿಕೊಂಡು ಹೋಗುವುದೇ ಒಂದು ಕೆಲಸವಾಯಿತು. ಪ್ರಸಿದ್ಧ ಕಂಪೆನಿಗಳು ಹೊಸ ಗಾರ್ಮೆಂಟ್ ಕಂಪೆನಿಗೆ ಆರ್ಡರ್ ನೀಡುತ್ತಿರಲಿಲ್ಲ. ಅವರಲ್ಲಿ ವಿಶ್ವಾಸ ಮೂಡಿಸಬೇಕಾಗಿತ್ತು. ಅದಕ್ಕೂ ಒಂದಿಷ್ಟು ಮಧ್ಯವರ್ತಿಗಳು. ಅವರನ್ನು `ಸರಿಯಾಗಿ' ನೋಡಿಕೊಳ್ಳಬೇಕಾಗಿತ್ತು. ಆರ್ಡರ್ ಸಿಕ್ಕರೂ ಪೇಮೆಂಟ್ ಸರಿಯಾಗಿ ಇರುತ್ತಿರಲಿಲ್ಲ. ಬಟ್ಟೆಗಳನ್ನು ಪೂರೈಸಿದ 60 ದಿನಗಳ ನಂತರ ಪೇಮೆಂಟ್ ಮಾಡಲಾಗುತ್ತಿತ್ತು. ಆದರೆ ಕೆಲಸಗಾರರಿಗೆ ಸಂಬಳವನ್ನು ನಿಲ್ಲಿಸುವಂತಿರಲಿಲ್ಲ. ಎರಡು ತಿಂಗಳ ವೇತನವನ್ನು ಇಟ್ಟುಕೊಂಡೇ ಕೆಲಸ ಆರಂಭಿಸಬೇಕಿತ್ತು.

ಪ್ರಸಿದ್ಧ ಕಂಪೆನಿಗಳ ಶರ್ಟ್‌ಗಳನ್ನು ನೀವು ಷೋರೂಂಗಳಲ್ಲಿ ಸಾವಿರ ರೂಪಾಯಿ ಕೊಟ್ಟು ಖರೀದಿ ಮಾಡುತ್ತೀರಿ. ಒಂದು ಅಂಗಿಯನ್ನು ಹೊಲಿಯಲು ಕೊಟ್ಟರೆ ಟೈಲರ್ ಕನಿಷ್ಠ 250 ರೂಪಾಯಿ ಹೊಲಿಗೆ ಕೂಲಿ ಕೇಳುತ್ತಾನೆ. ಆದರೆ ಗಾರ್ಮೆಂಟ್ ಘಟಕಗಳಿಗೆ ಈಗಲೂ ಒಂದು ಶರ್ಟ್ ಹೊಲಿಯಲು ಕಂಪೆನಿಗಳು ಕೊಡುವ ಕೂಲಿ 40ರಿಂದ 50 ರೂಪಾಯಿ ಮಾತ್ರ. ಇಷ್ಟು ಕನಿಷ್ಠ ಹಣಕ್ಕೆ ಹೊಲಿದು ಕೊಡಲು ಸಾಧ್ಯವಿಲ್ಲ ಎಂದರೆ ಆರ್ಡರ್ ಸಿಕ್ಕುವುದಿಲ್ಲ. ಕನಿಷ್ಠ ಹಣಕ್ಕೆ ಹೊಲಿದು ಕೊಡಲು ಒಪ್ಪಿಕೊಂಡು ಆರ್ಡರ್ ಪಡೆದುಕೊಂಡರೆ ಕಾರ್ಮಿಕರಿಗೆ ಸಂಬಳ ನೀಡುವುದೇ ಕಷ್ಟ. ಆದರೂ ಶಾಂತಿ, ಹಿಡಿದ ಛಲ ಬಿಡಲಿಲ್ಲ.

`ಪೀಟರ್ ಇಂಗ್ಲೆಂಡ್' ಸಹಿತ ಮೂರು ಪ್ರತಿಷ್ಠಿತ ಕಂಪೆನಿಗಳ ಆರ್ಡರ್ ಪಡೆದುಕೊಳ್ಳುವಲ್ಲಿ ಕೊನೆಗೂ ಸಫಲರಾದರು. ಒಂದು ವರ್ಷದ ಅವಧಿಯಲ್ಲಿ ಅವರ ಸಿದ್ಧ ಉಡುಪು ಘಟಕ ಒಂದು ಹಂತಕ್ಕೆ ಬಂದಿತು.

ಈ ನಡುವೆ ಕಾರ್ಮಿಕರ ಸಮಸ್ಯೆ ಆರಂಭವಾಯಿತು. ಬಹುತೇಕ ಕಾರ್ಮಿಕರು ಮಹಿಳೆಯರು. ಹಬ್ಬ ಹರಿದಿನಗಳಲ್ಲಿ ಕೆಲಸಕ್ಕೆ ಬರುವುದಿಲ್ಲ. ಎಲ್ಲ ಕೆಲಸಗಾರರು ಬರದೇ ಇದ್ದರೆ ಕಂಪೆನಿಗಳಿಗೆ ಅವಧಿಯೊಳಗೆ ಒಪ್ಪಿಕೊಂಡಷ್ಟು ಪ್ರಮಾಣದಲ್ಲಿ ಬಟ್ಟೆಗಳನ್ನು ಪೂರೈಸಲು ಸಾಧ್ಯವಾಗದು. ನುರಿತ ಕೆಲಸಗಾರರು ಮಧ್ಯೆಯೇ ಕೆಲಸ ಬಿಟ್ಟು ಹೋಗುತ್ತಿದ್ದರು. ಈ ಎಲ್ಲ ಸಮಸ್ಯೆಗಳ ನಡುವೆಯೇ `ಭಾಗ್ಯವಂತಿ ಗಾರ್ಮೆಂಟ್' ಬೆಳೆಯತೊಡಗಿತು.

`ಒಂದು ವರ್ಷಕ್ಕೆ ಒಂದು ಕೋಟಿ ರೂಪಾಯಿ ವಹಿವಾಟು ನಡೆಸಿದರೆ ಒಂದಿಷ್ಟು ಲಾಭ ಕಾಣಬಹುದಾಗಿದೆ. ಆದರೆ ಇನ್ನೂ ಆ ಮಟ್ಟಕ್ಕೆ ನಮ್ಮ ಸಿದ್ಧ ಉಡುಪು ಘಟಕ ಬೆಳೆದಿಲ್ಲ. ಆದರೆ 120ಕ್ಕೂ ಹೆಚ್ಚು ಮಂದಿ ಕೆಲಸಗಾರರಿಗೆ ಬದುಕನ್ನು ಕೊಟ್ಟ ಭಾಗ್ಯವಂತಿಯ ಸಾಧನೆ ಕಡಿಮೆ ಏನಲ್ಲ' ಎಂದು ಶಾಂತಿ ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾರೆ.

`ಭಾಗ್ಯವಂತಿ' ಬೆಳೆಯಲು ಆರಂಭವಾದ ನಂತರ ಶಾಂತಿ ತಮ್ಮ ಪತಿ ವಿಶ್ವನಾಥ್ ಅವರಿಗೂ ಅಲ್ಲಿಯೇ ಉದ್ಯೋಗ ನೀಡಿದರು. ಹೊರಗಡೆ ಸುತ್ತಾಡಿ ಆರ್ಡರ್‌ಗಳನ್ನು ತರುವ ಕೆಲಸ ವಿಶ್ವನಾಥ್ ಅವರದ್ದಾಯಿತು. ಹೊಲಿಗೆ  ವಿಭಾಗದ ಜವಾಬ್ದಾರಿ ಶಾಂತಿ ಅವರದ್ದು.
ಪ್ರಸಿದ್ಧ ಕಂಪೆನಿಗಳು ಗಾರ್ಮೆಂಟ್‌ಗಳನ್ನು ಶೋಷಣೆ ಮಾಡುವ ರೀತಿಗೆ ಬೇಸರಗೊಂಡಿರುವ ಶಾಂತಿ, ಈಗ ತಮ್ಮದೇ ಆದ `ಬ್ರಾಂಡ್ ನೇಮ್'ನಲ್ಲಿ ಪ್ರತ್ಯೇಕ ಕಂಪೆನಿ ಆರಂಭಿಸುವ ಕನಸು ಕಾಣುತ್ತಿದ್ದಾರೆ. ಮುಂದಿನ ಯುಗಾದಿ ವೇಳೆಗೆ ಅವರದ್ದೇ ಆದ ಬ್ರಾಡ್ ಬಟ್ಟೆಗಳು ಮಾರುಕಟ್ಟೆಗೆ ಬರಲಿವೆ.

ಹೊಸ ಬ್ರಾಂಡ್ ಕಲ್ಪನೆ ಮತ್ತು ಗಾರ್ಮೆಂಟ್ ಕೆಲಸ ಎಂದು ಬಿಡುವಿಲ್ಲದಷ್ಟು ಕೆಲಸಗಳಿದ್ದರೂ ಶಾಂತಿ ಅವರಿಗೆ ಸುಸ್ತೇನೂ ಆಗಿಲ್ಲ. ಮಹಿಳೆಯರಿಗೆ ಹೊಲಿಗೆ ತರಬೇತಿ ಕೊಡುವುದನ್ನು ಅವರು ಈಗಲೂ ನಿಲ್ಲಿಸಿಲ್ಲ. ವಿಶ್ವಶಾಂತಿ ಸೇವಾ ಸಂಸ್ಥೆ ಮೂಲಕ ಮಹಿಳೆಯರಿಗೆ ಫ್ಯಾಷನ್ ಡಿಸೈನ್, ಹೊಲಿಗೆ, ಪೇಪರ್ ಬ್ಯಾಗ್, ಕಂಪ್ಯೂಟರ್ ತರಬೇತಿ ಮುಂದುವರಿಸಿದ್ದಾರೆ.

ವಿದ್ಯೆ ಇಲ್ಲ, ಹಣ ಇಲ್ಲ ಎಂದು ಸುಮ್ಮನೆ ಕೊರಗುತ್ತಾ ಕುಳಿತರೆ ಬದುಕಿನಲ್ಲಿ ಏನನ್ನೂ ಸಾಧಿಸಲು ಸಾಧ್ಯವಾಗದು. ಆತ್ಮವಿಶ್ವಾಸದಿಂದ ಶ್ರಮಪಟ್ಟು ಕೆಲಸ ಮಾಡಿದರೆ ಎಲ್ಲವೂ ನಮ್ಮ ಕಾಲ ಬುಡಕ್ಕೆ ಬಂದು ಬೀಳುತ್ತವೆ ಎನ್ನುವುದಕ್ಕೆಶಾಂತಿ ವಿಶ್ವನಾಥ್(ಮೊ: 9880644038) ಒಂದು ಉದಾಹರಣೆ. ಅವರನ್ನು   shanthidawaradi­@­yahoo.com ನಲ್ಲಿ ಸಂಪರ್ಕಿಸಬಹುದು.

ವಿಶಿಷ್ಟ ಸಾಧನೆ
ಶಾಂತಿ ಅವರ ವಿಶಿಷ್ಟ ಸಾಧನೆ ಎಂದರೆ 13 ಮಂದಿ ಬುದ್ಧಿಮಾಂದ್ಯರಿಗೆ ಹೊಲಿಗೆ ತರಬೇತಿ ನೀಡಿರುವುದು. ಅದರಲ್ಲಿ ಏಳು ಮಂದಿ ಈಗ `ಭಾಗ್ಯವಂತಿ ಗಾರ್ಮೆಂಟ್' ಕೆಲಸಗಾರರು.

`ಬುದ್ಧಿಮಾಂದ್ಯರನ್ನು ಸಹಾನುಭೂತಿಯಿಂದ ನೋಡಿಕೊಂಡು ಹೊಲಿಗೆ ಕೆಲಸವನ್ನು ಕಲಿಸಿದರೆ ಅವರು ಚೆನ್ನಾಗಿ ಕೆಲಸ ಮಾಡುತ್ತಾರೆ. ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಜತೆಗೆ ಅವರ ಪಾಲಕರಿಗೂ ತಮ್ಮ ಮಕ್ಕಳು ಸಮಾಜಕ್ಕೆ ಹೊರೆಯಾಗಿದ್ದಾರೆ ಎಂಬ ಭಾವನೆ ತಪ್ಪುತ್ತದೆ. ನಮ್ಮ ಕಾರ್ಖಾನೆಯಲ್ಲಿ ಇತರೆ ಎಲ್ಲ ಕೆಲಸಗಾರರಂತೆಯೇ ಇವರೂ ಕೆಲಸ ಮಾಡುತ್ತಾರೆ.

ಅವರಂತೆಯೇ ಸಂಬಳ ಪಡೆಯುತ್ತಾರೆ. ಕೆಲಸಕ್ಕೆ ಬರಲು ಆರಂಭಿಸಿದ ನಂತರ ಅವರೂ ಸಾಮಾನ್ಯರಂತೆಯೇ ಆಗಿದ್ದಾರೆ. ನಮ್ಮಲ್ಲಿಯೇ ಕೆಲಸ ಮಾಡುತ್ತಿದ್ದ ಇಂತಹ ವಿಶಿಷ್ಟ ಯುವತಿಯೊಬ್ಬಳಿಗೆ ಇತ್ತೀಚೆಗೆ ಮದುವೆ ಕೂಡ ಆಯಿತು' ಎನ್ನುತ್ತಾ ಸಂತಸ ಹಂಚಿಕೊಂಡರು ಶಾಂತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT