ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಮನೂರು ಸಂಸದರಾಗಿದ್ದು ಒಂದೇ ವರ್ಷ!

1998ರಲ್ಲಿ ಕಾಂಗ್ರೆಸ್‌ಗೆ, 1999ರಲ್ಲಿ ಮತ್ತೆ ಬಿಜೆಪಿಗೆ ಗೆಲುವು
Last Updated 21 ಮಾರ್ಚ್ 2014, 5:49 IST
ಅಕ್ಷರ ಗಾತ್ರ

ದಾವಣಗೆರೆ: ಹಣ, ಜನಪ್ರಿಯತೆ ಇದ್ದರಷ್ಟೇ ಸಾಲದು ರಾಜಕೀಯ ಅಧಿಕಾರ ಅನುಭವಿಸಲು ಅದೃಷ್ಟವೂ ಇರಬೇಕು ಎನ್ನುವ ಮಾತು 1998ರ ಲೋಕಸಭಾ ಚುನಾವಣೆಯ ನಂತರ ‘ದಾವಣಗೆರೆ ಧಣಿ’ ಎಂದೇ ಖ್ಯಾತರಾದ ಶಾಮನೂರು ಶಿವಶಂಕರಪ್ಪ ಅವರ ವಿಷಯದಲ್ಲಿ ಸಾಬೀತಾಯಿತು.

1996ರಲ್ಲಿ ನಡೆದ ಚುನಾವಣೆಯ ನಂತರ ಕೇಂದ್ರದಲ್ಲಿ ಕನ್ನಡಿಗರೇ ಆದ ಎಚ್‌.ಡಿ. ದೇವೇಗೌಡರು ಪ್ರಧಾನಿಯಾದರು. ಹಾಗಾಗಿ, ಅದು ರಾಜ್ಯದ ಪಾಲಿಗೆ ಅವಿಸ್ಮರಣೀಯ ದಿನ. ಆದರೆ, ಕಾಂಗ್ರೆಸ್‌ ತಾನು ನೀಡಿದ್ದ ಬಾಹ್ಯ ಬೆಂಬಲ ಹಿಂದಕ್ಕೆ ಪಡೆದ ಕಾರಣ ಎರಡನೇ ವರ್ಷದಲ್ಲಿ ಎರಡು ಪ್ರಧಾನಿ ಕಂಡ ಲೋಕಸಭೆ ವಿಸರ್ಜನೆಯಾಯಿತು. ಅದರ ಪರಿಣಾಮ 1998ರಲ್ಲಿ ಮಧ್ಯಂತರ ಚುನಾವಣೆ ನಡೆಯಿತು.

96ರಲ್ಲಿ ಕಾಂಗ್ರೆಸ್‌ ಭದ್ರಕೋಟೆಯನ್ನು ಭೇದಿಸಿ ಕಮಲ ಅರಳಿಸಿದ್ದ ಭೀಮ ಸಮುದ್ರದ ಮಲ್ಲಿಕಾರ್ಜುನಪ್ಪ ಅವರನ್ನು 1998ರ ಮಧ್ಯಂತರ ಚುನಾವಣೆಯಲ್ಲಿ ಮಣಿಸಿ ಮತ್ತೆ ಕ್ಷೇತ್ರವನ್ನು ಕಾಂಗ್ರೆಸ್‌ ತೆಕ್ಕೆಗೆ ತರುವಲ್ಲಿ ಶಾಮನೂರು ಯಶಸ್ವಿಯೂ ಆದರು. ಆದರೆ, ಸಂಸದರಾಗಿ ಅವರು ಅಧಿಕಾರ ಅನುಭವಿಸಲು ಸಾಧ್ಯವಾಗಿದ್ದು, ಕೇವಲ ಒಂದು ವರ್ಷ!

ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಶಿವಶಂಕರಪ್ಪ ಚಲಾವಣೆಯಾದ 8,28,009 ಮತಗಳಲ್ಲಿ 3,43,704 ಮತ ಪಡೆದು

ಬಿಜೆಪಿಯ ಮಲ್ಲಿಕಾರ್ಜುನಪ್ಪ ಅವರನ್ನು 11,332 ಮತಗಳ ಅಂತರದಿಂದ ಮಣಿಸಿದ್ದರು. ಮಲ್ಲಿಕಾರ್ಜುನಪ್ಪ 3,32,372 ಮತ ಪಡೆದರೆ, ಅಂದು ಮುಖ್ಯಮಂತ್ರಿಯಾಗಿದ್ದ ಜೆ.ಎಸ್‌. ಪಟೇಲರ ಸಹೋದರ ಎಸ್‌.ಎಚ್‌.ಪಟೇಲ್‌ (ಜನತಾ ದಳ) ಕೇವಲ  99,334 ಮತ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕರ್ನಾಟಕ ವಿಕಾಸ ಪಕ್ಷದ ಎಸ್‌.ನಿಂಗಪ್ಪ  32,731ಮತ ಗಳಿಸಿದರು. ನಾಲ್ವರು ಪಕ್ಷೇತರರೂ ಠೇವಣಿ ಕಳೆದುಕೊಂಡಿದ್ದರು.

13 ತಿಂಗಳಿಗೆ ಮತ್ತೆ ಚುನಾವಣೆ!
ಕೇಂದ್ರದಲ್ಲಿ ಅತಂತ್ರ ಲೋಕಸಭೆ ಸೃಷ್ಟಿಯಾದ ಕಾರಣ ಬಿಜಿಪಿ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂತು. ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾದರು. ಆದರೆ, ವಾಜಪೇಯಿ ಸರ್ಕಾರ ಕೇವಲ 1 ಮತದ ಅಂತರದಲ್ಲಿ ಪತನವಾಗಿ ಕೇವಲ 13 ತಿಂಗಳಿಗೆ ಮತ್ತೆ ಚುನಾವಣೆ ಘೋಷಣೆಯಾಗಿತ್ತು.

99ರ ವೇಳೆಗಾಗಲೇ ವಾಜಪೇಯಿ ಅವರ ಜನಪ್ರಿಯತೆ ಸಾಕಷ್ಟು ಹೆಚ್ಚಾಗಿತ್ತು. ಕಡಿಮೆ ಅವಧಿಗೆ ಅಧಿಕಾರ ಕಳೆದುಕೊಂಡಿದ್ದು, ಬಿಜೆಪಿ ಪರ ಅನುಕಂಪದ ಅಲೆ ಸೃಷ್ಟಿಸಿತ್ತು. ಅಲ್ಲದೇ, ಜನತಾದಳ ವಿಭಜನೆಯಾಗಿ ಮುಖ್ಯಮಂತ್ರಿ ಜೆ.ಎಚ್.ಪಟೇಲರ ನೇತೃತ್ವದ ಜೆಡಿಯು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿತ್ತು.

ಅಂದು ನಡೆದ ಚುನಾವಣೆಯಲ್ಲಿ ಮತ್ತೆ ಮಲ್ಲಿಕಾರ್ಜುನಪ್ಪ ಅವರ ಕೊರಳಿಗೆ ಕ್ಷೇತ್ರದ ಮತದಾರ ವಿಜಯ ಮಾಲೆ ತೊಡಿಸಿದ್ದ.  ಮಲ್ಲಿಕಾರ್ಜುನಪ್ಪ ಅವರ ವಿರುದ್ಧ ಸೋತ ಶಾಮನೂರು ಐದು ವರ್ಷ ರಾಜಕೀಯದಿಂದಲೇ ದೂರ ಉಳಿಯುವಂತಾಗಿತ್ತು. ಅಲ್ಲದೇ, ಅವರ ಜೀವನದಲ್ಲಿ ಅವರು ಸಂಸದರಾಗಿ ಇದ್ದದ್ದು ಅದೊಂದೇ ವರ್ಷ.

ಚಲಾವಣೆಯಾದ 8,82,717 ಮತಗಳಲ್ಲಿ ಜಿ.ಮಲ್ಲಿಕಾರ್ಜುನಪ್ಪ 3,98,969 ಮತ ಪಡೆದು ಶಾಮನೂರು ಶಿವಶಂಕರಪ್ಪ  ಅವರನ್ನು 16,269 ಮತಗಳ ಅಂತರದಿಂದ ಸೋಲಿಸಿ, 98ರ ಸೋಲಿಗೆ ಸೇಡು ತೀರಿಸಿಕೊಂಡರು. ಶಾಮನೂರು 3,82,700 ಮತ ಪಡೆದರೆ, ಜೆಡಿಎಸ್‌ನ ಕೆ.ಮಲ್ಲಪ್ಪ 64,705 ಮತ, ಎಐಎಡಿಎಂಕೆಯ ಬಸವರಾಜು 3,704 ಮತ ಗಳಿಸಿದ್ದರು.

ವಾಜಪೇಯಿ ಅಲೆ ನಡುವೆಯೂ ಸಾಧನೆ
ವಾಜಪೇಯಿ ಒಂದು ಮತದ ಅಂತರದಿಂದ ಅಧಿಕಾರ ಕಳೆದುಕೊಂಡಿದ್ದು, 1999ರ ಚುನಾವಣೆಯಲ್ಲಿ ಅನುಕಂಪ ದೊರಕಿಸಿತು. ಅದು ಬಿಜೆಪಿಗೆ ವರವಾಯಿತು. ಅಂತಹ ಅಲೆಯ ನಡುವೆಯೂ ಶಿವಶಂಕರಪ್ಪ ಅವರು ಗಳಿಸಿದ್ದು, 3,82,700 ಮತ. ಅದು ಅವರ ಜನಪ್ರಿಯತೆಗೆ ಸಾಕ್ಷಿ.

ಅದೇ ಸಂದರ್ಭದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಸ್‌.ಎಸ್.ಮಲ್ಲಿಕಾರ್ಜುನ್‌ ಸೇರಿದಂತೆ ಜಿಲ್ಲೆಯ 5 ಮಂದಿ ಆಯ್ಕೆಯಾದರು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯಿತು. ಅಂದು ಎನ್‌ಡಿಎ ಪರ ಕೇಂದ್ರದಲ್ಲಾದ ರಾಜಕೀಯ ಧೃವೀಕರಣ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಿತ್ತು.
–ಡಾ.ವೈ.ರಾಮಪ್ಪ, ಮಾಜಿ ಅಧ್ಯಕ್ಷ, ಜಿಲ್ಲಾ ಪಂಚಾಯ್ತಿ.

1998ರ ಅಂಕಿ–ಅಂಶ
ಒಟ್ಟು ಮತದಾರರು:       11,81787
ಚಲಾವಣೆಯಾದ ಮತ:     8,28,009
ಶಿವಶಂಕರಪ್ಪ:             3,43,704
ಮಲ್ಲಿಕಾರ್ಜುನಪ್ಪ (ಬಿಜೆಪಿ): 3,32,372
ಎಸ್‌.ಎಚ್‌.ಪಟೇಲ್‌(ಜೆಡಿ):    99,334
ಎಸ್‌.ನಿಂಗಪ್ಪ (ಕೆವಿಪಿ):       32,731
ಗೆಲುವಿನ ಅಂತರ:        11,332

1999ರ ಅಂಕಿ–ಅಂಶ
ಒಟ್ಟು ಮತದಾರರು:     12,17,506
ಚಲಾವಣೆಯಾದ ಮತ:    8,82,717
ಮಲ್ಲಿಕಾರ್ಜುನಪ್ಪ (ಬಿಜೆಪಿ): 3,98,969
ಶಿವಶಂಕರಪ್ಪ:      3,82,700
ಕೆ. ಮಲ್ಲಪ್ಪ (ಜೆಡಿಎಸ್‌):     64,705
ಬಸವರಾಜು(ಎಐಎಡಿಎಂಕೆ):  3,704

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT