ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ತ್ಯಜಿಸಿರುವ ಮಕ್ಕಳ ಸಮೀಕ್ಷೆ

Last Updated 9 ಆಗಸ್ಟ್ 2012, 9:10 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ 6ನೇ ತರಗತಿ ನಂತರ ಶಾಲೆ ತ್ಯಜಿಸಿರುವ ಮಕ್ಕಳ ಸ್ಥಿತಿಗತಿಯ ಸಮೀಕ್ಷೆ ಮಾಡಲು ಉದ್ದೇಶಿಸಲಾಗಿದೆ. ಇಂತಹ ಸಮೀಕ್ಷೆಗಳ ಮೂಲಕ ಬಾಲಕಾರ್ಮಿಕ ಪದ್ಧತಿ ಮತ್ತು ಬಾಲ್ಯವಿವಾಹ ತಡೆಗಟ್ಟಲು ಅನುಕೂಲ ಆಗುತ್ತದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಬಾಲಭವನದಲ್ಲಿ ಬುಧವಾರ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಮ್ಮಿಕೊಂಡಿರುವ ಎರಡು ದಿನಗಳ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

6ನೇ ತರಗತಿ ನಂತರ ಶಾಲೆ ಬಿಟ್ಟ ಮಕ್ಕಳ ಪಟ್ಟಿಯನ್ನು ಎರಡು ದಿನಗಳಲ್ಲಿ ನೀಡುವಂತೆ ಡಿಡಿಪಿಐಗೆ ಸೂಚಿಸಲಾಗಿದೆ. ಈ ಮಾಹಿತಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ, ಅಂಗನವಾಡಿ ಕಾರ್ಯಕರ್ತರಿಗೆ ನೀಡಲಾಗುವುದು. ಈ ಪಟ್ಟಿ ಆಧರಿಸಿ ಮಕ್ಕಳು ಶಾಲೆ ಮುಂದುವರಿಸಲು ಆಗಿರುವ ತೊಂದರೆ ಬಗ್ಗೆ ಅವರು ವಿಚಾರಿಸಲಿದ್ದಾರೆ. ಶಾಲೆ ಬಿಡಲು ಕಾರಣಗಳೇನು? ಶಾಲೆ ಬಿಟ್ಟ ನಂತರ ಮಗುವಿನ ಸ್ಥಿತಿಗತಿ ಕುರಿತು ಮಾಹಿತಿ ಕಲೆ ಹಾಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಶಾಲೆ ತ್ಯಜಿಸುವ ಬಹುತೇಕ ಮಕ್ಕಳು ಬಾಲಕಾರ್ಮಿಕರಾಗಿರುತ್ತಾರೆ. ಒಂದು ವೇಳೆ ಬಾಲಕಿಯಾಗಿದ್ದರೆ ಬಾಲ್ಯ ವಿವಾಹವಾಗಿರುತ್ತಾರೆ. ಆದ್ದರಿಂದ ಮುಂದಿನ 15 ದಿನಗಳ ಒಳಗೆ ಮಕ್ಕಳ ಪರಿಶೀಲನೆ ಕೈಗೊಳ್ಳಲಾಗುವುದು. ಪ್ರತಿ ಮನೆಯಲ್ಲಿ 2-3 ಬಾರಿ ತಪಾಸಣೆ ಮಾಡಲು ಕ್ರಮಕೈಗೊಳ್ಳಲಾಗುವುದು. ಮಕ್ಕಳು ಕಾಣೆಯಾಗಿದ್ದರೆ ಈ ಬಗ್ಗೆ ಪಟ್ಟಿಯನ್ನು ಪೊಲೀಸರಿಗೆ ನೀಡಲಾಗುವುದು. ಪೊಲೀಸರಿಂದ ಪತ್ತೆಯ ಬಗ್ಗೆ ವರದಿ ಪಡೆದ ಮೇಲೆ ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯವಾಗುವುದು ಎಂದು ವಿವರಿಸಿದರು.

ಮಾಹಿತಿ ನೀಡುವುದು ಮತ್ತು ಕಾನೂನುಗಳ ಅನುಷ್ಠಾನದ ಮೂಲಕ ಮಾತ್ರ ಬಾಲ್ಯವಿವಾಹದಂತಹ ಪದ್ಧತಿಗಳನ್ನು ನಿರ್ಮೂಲನೆ ಮಾಡಲು ಸಾಧ್ಯ. ಕಾನೂನುಗಳನ್ನು ಸಹ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಸಾಮಾಜಿಕ ಅನಿಷ್ಟ ಪದ್ಧತಿ ಹೋಗಲಾಡಿಸಲು ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಸದಾಶಿವ ಎಸ್. ಸುಲ್ತಾನಪುರಿ, ಪೋಷಕರು ಮಕ್ಕಳನ್ನು ಹೆತ್ತು, ಬೆಳೆಸಿ ಮದುವೆ ಮಾಡಿದರೆ ಸಾಲದು. ಉತ್ತಮ ಭವಿಷ್ಯ ರೂಪಿಸುವ ಜವಾಬ್ದಾರಿ ಅರಿಯಬೇಕು. ಈ ಕುರಿತು ಜನಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಕುಟುಂಬದಲ್ಲಿ ಹೆಣ್ಣುಮಕ್ಕಳು ಸುಶಿಕ್ಷಿತರಾದರೆ ಮಕ್ಕಳಿಗೂ ಉತ್ತಮ ಸಂಸ್ಕಾರ ನೀಡುತ್ತಾರೆ.  ಗ್ರಾಮೀಣ ಭಾಗದ ಜನರು ಬಡತನದ ಕಾರಣ ಸಣ್ಣ ವಯಸ್ಸಿನಲ್ಲಿ ಮಕ್ಕಳ ಮದುವೆ ಮಾಡಲು ಮುಂದಾಗುತ್ತಾರೆ. ಕೆಲವರು ಶ್ರೀಮಂತರ ಸಂಬಂಧ ದೊರೆತಿದೆ ಎನ್ನುವ ಕಾರಣಕ್ಕೆ ಹೆಣ್ಣುಮಕ್ಕಳ  ಮದುವೆ ಮಾಡಿಸುತ್ತಾರೆ. ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಮಾನವೀಯತೆ ಹಾಗೂ ಕಾನೂನಿನ ನಡುವೆ ಸಂಘರ್ಷ ಉಂಟಾಗುತ್ತದೆ. ಎಂತಹ ಸಂದರ್ಭದಲ್ಲೂ ಮನುಷ್ಯ ಕಾನೂನನ್ನು ಗೌರವಿಸಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಸಿಇಒ ಪಿ.ಎ. ಗೋಪಾಲ್ ಮಾತನಾಡಿ, ಪಂಚಾಯ್ತಿ ಅಭಿವೃದ್ಧಿ  ಅಧಿಕಾರಿಗಳು ಕೇವಲ ಗ್ರಾಮ ಪಂಚಾಯ್ತಿ ಕೆಲಸ ಮಾಡಿದರೆ ಸಾಲದು. ಗ್ರಾಮ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕೆಲಸ ಮಾಡಬೇಕು. ಎಲ್ಲ ಇಲಾಖೆಗಳ ಯೋಜನೆಗಳ ಬಗ್ಗೆ ಅರಿವಿರಬೇಕು. ಗ್ರಾಮೀಣ ಪ್ರದೇಶದ ಜನರ ಜತೆ ಬೆರೆಯುವ ಪಿಡಿಒಗಳು ಅಲ್ಲಿನ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಒದಗಿಸಲು ಮುಂದಾಗಬೇಕು. ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡುವ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುವ ಅನಿಷ್ಟ ಪದ್ಧತಿಗಳನ್ನು ನಿವಾರಿಸುವ ಕಾರ್ಯದಲ್ಲಿ ತೊಡಗಬೇಕು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿದೇರ್ಶಕ ನಂಜೇಗೌಡ, ನಿರೂಪಣಾಧಿಕಾರಿ ಕೆ.ಎಚ್. ಭಾಸ್ಕರ್, ವಕೀಲರಾದ ಡಿ.ಕೆ. ಶೀಲಾ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT