ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ವೈದ್ಯರಿಂದ ಹಳ್ಳಿ ಭೇಟಿ

Last Updated 12 ಡಿಸೆಂಬರ್ 2013, 7:08 IST
ಅಕ್ಷರ ಗಾತ್ರ

ಹೊನ್ನಾವರ: ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಿಗೆ  ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಖುದ್ದು ಪರಿಶೀಲಿಸುವ ಪರಿಪಾಠವನ್ನು ಆರಂಭಿಸಿರುವ ಶಾಸಕ ಮಂಕಾಳ ಎಸ್.ವೈದ್ಯ, ಬುಧವಾರ ತಾಲ್ಲೂಕಿನ ಶರಾವತಿ ನದಿ ದಂಡೆಯ ಕುದ್ರಗಿ ಹಾಗೂ ಕೊಡಾಣಿ  ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ  ಅನಿಲಗೋಡ, ಬೇರಂಕಿ, ಕೊಡಾಣಿ, ಬಾಳೆಮೆಟ್ಟು, ಬೀರನಗೋಡ ಹಾಗೂ ಕುದ್ರಗಿ ಮೊದಲಾದ ‘ಹೊಳೆಸಾಲು’ ಗ್ರಾಮಗಳ ಹಳ್ಳಿಗಳಲ್ಲಿ ಸಂಚರಿಸಿ ಹಳ್ಳಿಗರ ಸಮಸ್ಯೆಗಳನ್ನು ಆಲಿಸಿದರು.

‘ಹಿರಿಯ ಪ್ರಾಥಮಿಕ ಶಾಲೆಯಿಲ್ಲದಿರುವುದರಿಂದ 6ನೇ ತರಗತಿಗೆ ಕಾಲಿಟ್ಟ ಮಕ್ಕಳು ವಿದ್ಯಾಭ್ಯಾಸಕ್ಕಾಗಿ  ತಮಗೆ ಹತ್ತಿರದ 6 ಕಿ.ಮೀ. ದೂರದ ಕೋಡಾಣಿ ಶಾಲೆಗೆ ಹೋಗಬೇಕು ಹಾಗೂ ಹಳ್ಳಿಯ ರಸ್ತೆಯೂ ಸರಿಯಾಗಿಲ್ಲ. ನಮ್ಮ ಸಮಸ್ಯೆ ಪರಿಹರಿಸಿ’ ಎಂಬ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕರು ಪ್ರಸ್ತುತ ಸಮಸ್ಯೆಯನ್ನು ಪರಿಹರಿಸುವ ಹಾಗೂ 3 ತಿಂಗಳ ನಂತರ ಪುನಃ ಇದೇ ಗ್ರಾಮಕ್ಕೆ ಭೇಟಿ ನೀಡುವ ಭರವಸೆ ನೀಡಿದರು.

ಮಾಗೋಡ ಗ್ರಾಮದ ಅಸಿಕೇರಿ ಮಜರೆಗೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿ, ಅನಿಲಗೋಡು ಕುಮಾರರಾಮ ದೇವಸ್ಥಾನ ರಸ್ತೆ ನಿರ್ಮಾಣಕ್ಕೆ ₨5 ಲಕ್ಷ ಅನುದಾನ ನೀಡುವ ಭರವಸೆ ನೀಡಿದರು. ಕುದ್ರಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ₨5 ಲಕ್ಷ ವೆಚ್ಚದ ನಗರೆ–ಹುಂಜನಮಕ್ಕಿ ರಸ್ತೆ ದುರಸ್ಥಿ ಕಾಮಗಾರಿಗೆ ಅವರು ಚಾಲನೆ ನೀಡಿದರು.

‘ತಮ್ಮ ವಿಧಾನಸಭಾ ವ್ಯಾಪ್ತಿಯಲ್ಲಿ ಹಲವು ಕುಗ್ರಾಮಗಳಿದ್ದು ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಈ ಹಳ್ಳಿಗಳ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಪರಿಹರಿಸುವ ಪ್ರಯತ್ನವಾಗಿ ಈ ಕುಗ್ರಾಮಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲಿಸಲು ಆರಂಭಿಸಿದ್ದೇನೆ’ ಎಂದು ಶಾಸಕರು ಈ ಸಂದರ್ಭದಲ್ಲಿ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಎಇಇ ವಿ.ಆರ್. ಪವಾರ, ತಹಶೀಲ್ದಾರ್‌ ಸಿ.ಕೆ.ನಾಯ್ಕ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವ ಹಣಾಧಿಕಾರಿ ಆರ್.ಡಿ.ನಾಯ್ಕ, ಉಪ ತಹಶೀಲ್ದಾರ ಬಿ.ಎಚ್. ಗುನಗ ಶಾಸಕರ ಜೊತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT