ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಲ್ಲಿ ಸಂವೇದನೆಗೆ ಅವಕಾಶ ಇಲ್ಲ; ಸಮೀರಸಿಂಹ ವಿಷಾದ

Last Updated 2 ಸೆಪ್ಟೆಂಬರ್ 2013, 5:05 IST
ಅಕ್ಷರ ಗಾತ್ರ

ದಾವಣಗೆರೆ: `ಸ್ವಾಮಿ ವಿವೇಕಾನಂದ ಅವರು ಒಂದು ಜಾತಿ, ಪಂಗಡ ಹಾಗೂ ಒಂದು ಭಾಗಕ್ಕೆ ಸೀಮಿತಗೊಂಡ ವ್ಯಕ್ತಿಯಲ್ಲ; ಅವರು ವಿಶ್ವಮಾನವರು' ಎಂದು ಬೆಂಗಳೂರಿನ ರಾಮಕೃಷ್ಣ ಆಶ್ರಮದ ತ್ಯಾಗೀಶ್ವರಾನಂದ ಮಹಾರಾಜ್ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಸ್ವಾಮಿ ವಿವೇಕಾನಂದ ಅವರ 150ನೇ ಜನ್ಮ ವರ್ಷಾಚರಣೆ ಸಮಿತಿ ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜಾತಿ ಸಂಕೋಲೆಯಲ್ಲಿ ವಿವೇಕಾನಂದ ಅವರನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ಅವರ ಹೆಸರಿನಲ್ಲಿ ಜಗತ್ತಿನಾದ್ಯಂತ ಅನೇಕ ಸಂಘ- ಸಂಸ್ಥೆಗಳು ಸ್ಥಾಪನೆಗೊಂಡು, ಸಂದೇಶ ಸಾರುವ ಕೆಲಸ ಮಾಡುತ್ತಿವೆ. ಅವರ ಒಂದು ಭಾಷಣಕ್ಕೆ ನೂರುವರ್ಷ ತುಂಬಿದೆ ಎಂದು ಸಂಭ್ರಮಾಚರಣೆ ನಡೆಸಿದ್ದರು. ಪ್ರಭಾವಿ ಭಾಷಣ ಮಾಡಲು ವಿವೇಕಾನಂದರಿಗೆ ಮಾತ್ರ ಸಾಧ್ಯ ಎಂದು ಹೇಳಿದರು.

ಇಂದಿನವರು ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು. ನೀನು ಜಗತ್ತಿಗೆ ಏನು ಕೊಡಬಹುದು ಎಂಬುದರ ಬಗ್ಗೆ ಚಿಂತನೆ ನಡೆಸಬೇಕಿದೆ. ಮಕ್ಕಳಿಗೆ ನಮ್ಮ ಪರಂಪರೆಯ ಬಗ್ಗೆ ತಿಳಿಸಬೇಕು. ಜಗತ್ತನ್ನು ತೊರೆಯುವ ಮೊದಲು ಏನಾದರೂ ಸಾಧನೆ ಮಾಡಬೇಕು ಎಂದ ಅವರು, ಭಾರತದ  ಬಗ್ಗೆ ತಿಳಿಯಬೇಕು ಎಂದರೆ ವಿವೇಕಾನಂದ ಅವರನ್ನು ತಿಳಿಯಲೇಬೇಕು. ಪರಂಪರೆಯ ಅಧ್ಯಯನ ಮಾಡುವುದಾಗಿ ಎಲ್ಲರೂ ಸಂಕಲ್ಪ ಮಾಡಿ ಎಂದು ಮನವಿ ಮಾಡಿದರು.

ವಿವೇಕಾನಂದ ಅವರ ಜೀವನ ಚರಿತ್ರೆ ಅಧ್ಯಯನ ಮಾಡಿದರೆ, ಸಾವಿರಪಟ್ಟು ದೇಶಪ್ರೇಮ ಬೆಳೆಯುತ್ತದೆ. ಇಂದು ರಾಷ್ಟ್ರಪ್ರೇಮ ಜಾಗೃತಗೊಳಿಸುವ ಕೆಲಸ ನಡೆಯಬೇಕು. ನಾವು ಆಕಾರದಲ್ಲಿ ಮಾತ್ರ ಮನುಷ್ಯರಾಗಿದ್ದೇವೆ ಎಂದು ವಿಷಾದಿಸಿದರು.

ಶಿಕ್ಷಣ ತಜ್ಞ ಡಾ.ಕೆ.ಎಸ್.ಸಮೀರಸಿಂಹ ಮಾತನಾಡಿ, ಗುರಿ ಇಟ್ಟುಕೊಂಡರೆ ಸಾಲದು. ಆ ಕಡೆಗೆ ನಾವು ನಡೆಯಬೇಕು. ಇಂದಿನ ಶಿಕ್ಷಣ ವ್ಯವಸ್ಥೆ ಗುರಿ ನಿರೂಪಣೆ ಮಾತ್ರ ಮಾಡುತ್ತಿದೆ. ಸಾಮರ್ಥ್ಯ ಬೆಳೆಸುತ್ತಿಲ್ಲ. ಶಿಕ್ಷಣ ಬುದ್ಧಿಶಕ್ತಿಗೆ ಮಾತ್ರ ಒತ್ತು ನೀಡುತ್ತಿದೆ. ಸಂವೇದನೆಗೆ ಅವಕಾಶ ಇಲ್ಲ ಎಂದು ವಿಷಾದಿಸಿದರು.

ಮಹಾವಾಕ್ಯಾನಂದ ಮಹಾರಾಜ್, ಶಾರದಾನಂದೇಶ್ವರ ಜೀ ಮಹಾರಾಜ್, ವಿ.ನಾಗರಾಜ್, ಜಯರುದ್ರೇಶ್ ಹಾಜರಿದ್ದರು.

ಅವಿರೋಧ ಆಯ್ಕೆ
ಮಲೇಬೆನ್ನೂರು
: ಸಮೀಪದ ಹಿರೇಹಾಲಿವಾಣ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಕುಬೇರಪ್ಪ ಈಚೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಚುನಾವಣಾಧಿಕಾರಿ ಆಗಿ ಅರವಿಂದ್ ಹಾಗೂ ಎಸ್.ಜಿ.ಮಂಜುನಾಥ್ ಕಾರ್ಯ ನಿರ್ವಹಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ಪರಮೇಶ್ವರಪ್ಪ, ಕೆ.ಎಂ. ವ್ಯೋಮಕೇಶಪ್ಪ, ಎಸ್.ಜಿ. ಸಿದ್ದಪ್ಪ, ಎಸ್.ಎಸ್.ಈರಣ್ಣ, ಕೆ.ಪಿ.ಮೋಹನ್, ಯು.ಬಸವರಾಜ್, ಗೊಂದೇರ ಚಂದ್ರಪ್ಪ , ಶಿವಕ್ಳ ಆಂಜನೇಯ, ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT