ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಣ್ಣನ ಸಾತ್ವಿಕ ಸಿಟ್ಟು

Last Updated 9 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

‘ಟೀವಿಗಳಲ್ಲಿ ರೋಮ್ಯಾಂಟಿಕ್ ದೃಶ್ಯಗಳು, ಹಾರರ್‌ ಧಾರಾವಾಹಿಗಳು, ನೆಟ್‌ನಲ್ಲಿ ಮಕ್ಕಳ ಜೊತೆ ನೋಡಬಾರದ ದೃಶ್ಯಗಳು ಬರುತ್ತಿವೆ. ಮೊದಲು ಇದಕ್ಕೆ ಕಡಿವಾಣ ಹಾಕಬೇಕು. ಹಾಗೆ ನೋಡಿದರೆ ಟೀವಿ ಚಾನೆಲ್‌ಗಳನ್ನು ನಿಲ್ಲಿಸಬೇಕು. ಚಿತ್ರದಲ್ಲಿ ಯಾವ ಕೆಟ್ಟ ದೃಶ್ಯಗಳೂ ಇಲ್ಲ. ಈ ದೃಶ್ಯ ಇರಬಾರದಿತ್ತು ಅಂತ ಒಂದು ಕಡೆ ನೀವು ಹೇಳಿಬಿಟ್ಟರೆ ನಾನು ಇಂಡಸ್ಟ್ರಿಯನ್ನೇ ಬಿಟ್ಟು ಹೋಗುತ್ತೇನೆ’ ಹೀಗೆ ಸಾತ್ವಿಕ ಸಿಟ್ಟು ಹೊರಹಾಕಿದ್ದು ನಟ ಶಿವರಾಜ್ ಕುಮಾರ್‌.

ಹರ್ಷ ನಿರ್ದೇಶನದ ಅದ್ದೂರಿ ಚಿತ್ರ ‘ಭಜರಂಗಿ’ಗೆ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣ ಪತ್ರ ನೀಡಿರುವುದಕ್ಕೆ ಶಿವಣ್ಣನಿಗೆ ಬೇಸರವಿದೆ. ಮಾಧ್ಯಮಗಳ ಎದುರು ‘ಎ’ ಪ್ರಮಾಣ ಪತ್ರ ನೀಡಿರುವುದಕ್ಕೆ ಸಣ್ಣ ಬೇಸರವಿದೆ ಎಂದರೂ, ಅವರ ಮಾತಿನಲ್ಲಿ ಹೆಚ್ಚೇ  ಬೇಸರ ವ್ಯಕ್ತಗೊಂಡಿತು.

‘‘ಈ ಚಿತ್ರಕ್ಕೆ ಆ್ಯಕ್ಷನ್ ಅವಶ್ಯ. ಈ ದೃಶ್ಯಗಳಿಗೆ ‘ಎ’ ಪ್ರಮಾಣ ಪತ್ರ ನೀಡುವುದಾದರೆ, ಎಲ್ಲಾ ಟೀವಿ ಚಾನೆಲ್‌ಗಳಿಗೂ ಕಡಿವಾಣ ಹಾಕಬೇಕಾಗುತ್ತದೆ. ಟೀವಿ ಮಾಧ್ಯಮಕ್ಕೆ ಏಕೆ ಮಾನದಂಡಗಳು ಅನ್ವಯವಾಗುತ್ತಿಲ್ಲ? ‘ಭಜರಂಗಿ’ ಕ್ಲೀನ್ ಸಿನಿಮಾ. ‘ನಾನು ಯಾರನ್ನೂ ವಿರೋಧಿಸುತ್ತಿಲ್ಲ. ಆದರೆ ನನಗೆ ಈ ಮಾನದಂಡ ವೈಯಕ್ತಿಕವಾಗಿ ಸರಿ ಕಾಣುತ್ತಿಲ್ಲ’’ ಎಂದು ಗಂಭೀರವಾದರು.

‘ಭಜರಂಗಿ ನನಗೆ ಯಾವುದೇ ಉದ್ವೇಗ ನೀಡಿಲ್ಲ. ಹಾಡುಗಳು ಹಿಟ್‌ ಆಗಿದ್ದು ಒಳ್ಳೆಯ ಬೆಳವಣಿಗೆ. ನಾನು ಸುಖಾಸುಮ್ಮನೆ ಹಣ ಖರ್ಚು ಮಾಡಿಸುವವನಲ್ಲ. ಸಮಯವನ್ನು ವ್ಯರ್ಥ ಮಾಡುವವನಲ್ಲ. ಯಾವುದೇ ಚಿತ್ರಗಳ ಬಗ್ಗೆಯೂ ನಿರುತ್ಸಾಹಿಯಲ್ಲ. ಎಲ್ಲ ಚಿತ್ರಗಳನ್ನೂ ಒಂದೇ ರೀತಿ ಪರಿಗಣಿಸುತ್ತೇನೆ. ಅದಾಗಲೇ ಆರು ಚಿತ್ರಗಳಲ್ಲಿ ತೊಡಗಿದ್ದೆ. ನನ್ನಿಂದಲೇ ಏಕೆ ಪಾತ್ರ ಮಾಡಿಸುತ್ತೀರಿ, ಬೇಡ’ ಎಂದೆ ಎಂದು ‘ಭಜರಂಗಿ’ಯಲ್ಲಿ ತೊಡಗಿದ ಗಳಿಗೆಗಳನ್ನು ವಿವರಿಸಿದರು. ಚಿತ್ರದ ಟೈಟಲ್ ಟ್ರ್ಯಾಕ್ ಕೇಳಿದರೆ ಭಜರಂಗಿಯ ಪವರ್ ಅರ್ಥವಾಗುತ್ತದೆ’ ಎಂದರು.

ಸೆನ್ಸಾರ್ ಮಾತು–ಕತೆಗೂ ಮುನ್ನ ಅವರು ಕೇಂದ್ರೀಕರಿಸಿ ಮಾತನಾಡಿದ್ದು ‘ಆರ್ಯನ್’ ಚಿತ್ರದ ಬಗ್ಗೆ. ಕ್ರೀಡೆಯನ್ನು ವಸ್ತುವನ್ನಾಗಿಸಿಕೊಂಡಿರುವ ‘ಆರ್ಯನ್’ ಚಿತ್ರದ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಮುಂದಿನ ದೃಶ್ಯ ಚಿತ್ರೀಕರಿಸಲು ಚಿತ್ರತಂಡ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಲಿದೆ. ಡಿ. ರಾಜೇಂದ್ರ ಬಾಬು ಅವರ ಅಕಾಲಿಕ ಮರಣದ ನಂತರ ಚಿತ್ರವನ್ನು ಚಿ. ಗುರುದತ್ ನಿರ್ದೇಶಿಸುತ್ತಿದ್ದಾರೆ. ಇಲ್ಲಿ ಶಿವರಾಜ್‌ಕುಮಾರ್ ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಆರ್ಯನ್‌, ಆ್ಯಕ್ಷನ್ ಸಿನಿಮಾ ಅಲ್ಲ. ಪಕ್ಕಾ ಲವ್ ಸ್ಟೋರಿ. ದೇಶದ ಬಗ್ಗೆ, ಕ್ರೀಡೆ ಬಗ್ಗೆ ಮತ್ತು ತನ್ನ ಹುಡುಗಿಯ ಬಗ್ಗೆ ಪ್ರೀತಿ ಬೆಳೆಸಿಕೊಂಡಿರುವ ಕಥೆ. ಕ್ರೀಡಾ ಚಟುವಟಿಕೆಗಳು, ನಾಯಕಿ–ನಾಯಕನ ಮನೆ....ಹೀಗೆ ಸಣ್ಣದಾಗಿ ಕ್ರೀಡಾಪಟುವಿನ ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ. ಚಿತ್ರಕಥೆ ವಿಭಿನ್ನ ನಿರೂಪಣೆಯಲ್ಲಿ ಸಾಗುತ್ತದೆ. ಚಿತ್ರದಲ್ಲಿ ನಾಯಕಿ, ಆಕೆಯ ಅಪ್ಪ ಎಲ್ಲರೂ ಪ್ರಯಾಣಿಕರಾಗಿದ್ದು ಯಾವ ರೀತಿ ಭೇಟಿಯಾಗುತ್ತಾರೆ... ಹೀಗೆ ವಿಭಿನ್ನ ಹಾದಿಯಲ್ಲಿ ಸಾಗುವ ಚಿತ್ರ. ಸಿಂಗಪುರದಲ್ಲಿ ಚಿತ್‍ರೀಕರಣಕ್ಕೆ ಯೋಚನೆ ಇದೆ. ಈಗಾಗಲೇ ಶೇ 30ರಷ್ಟು ಚಿತ್ರೀಕರಣ ಮುಗಿದಿದೆ. ಚಿತ್ರ ಹೇಗೆ ಬಂದಿದೆ ಎಂದು ನೀವೇ ನೋಡಿ’ ಎಂದು ಕಥೆಯ ಬಗೆಗಿನ ಮಾತಿಗೆ ವಿರಾಮ ನೀಡಿದರು.

ರಾಜೇಂದ್ರ ಬಾಬು ಅವರ ನಿಧನದಿಂದ ಮುಂದೆ ಚಿತ್ರದ ‘ಕಥೆ ಏನಾದೀತೋ’ ಎಂದು ಶಿವಣ್ಣ ಯೋಚಿಸಿದ್ದರಂತೆ. ಆಗ ಕಂಡಿದ್ದು ಬಾಲ್ಯದ ಗೆಳೆಯ ಚಿ. ಗುರುದತ್‌. ಗುರುದತ್ ನಿರ್ದೇಶನವನ್ನು ಮೆಚ್ಚಿದ ಅವರು, ‘ಗುರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಾನು ಇಂಪ್ರೆಸ್ ಆಗಿದ್ದೇನೆ. ನನ್ನ ಸಿನಿಮಾ ಅಲ್ಲ ಇದು ನಮ್ಮೆಲ್ಲರ ಸಿನಿಮಾ ಅಂತ ಹೇಳುತ್ತಾನೆ. ರಾಜೇಂದ್ರ ಬಾಬು ನಿಧನಾ ನಂತರ ಗುರು ಅವರಿಗೆ ಚಿತ್ರದ ವಸ್ತುವಿನ ಮೇಲೆ ಹಿಡಿತ ಸಿಕ್ಕಿದೆ. ಸಣ್ಣ ಸಣ್ಣ ಬದಲಾವಣೆ ಮಾಡಿಕೊಂಡೆವು. ಇದ್ದ ಕೆಲವು ಸಂದೇಹಗಳನ್ನು ಪರಿಹರಿಸಿಕೊಂಡೆವು. ಅವು ಏನು ಎಂಬುದನ್ನು ಸಿನಿಮಾ ಬಿಡುಗಡೆಯಾದ ನಂತರ ನಿಮಗೆ ಹೇಳುತ್ತೇನೆ’ ಎಂದರು ಶಿವರಾಜ್ ಕುಮಾರ್.

‘‘ನಾವು ಹೊಸ ರೀತಿಯ ಪ್ರಯೋಗಗಳನ್ನು 20 ವರುಷಗಳ ಹಿಂದೆಯೇ ಮಾಡಿದ್ದೇವೆ. ‘ಇನ್‌ಸ್ಪೆಕ್ಟರ್‌ ವಿಕ್ರಂ’ ಚಿತ್ರವನ್ನು ನೋಡಿದ ಅಪ್ಪಾಜಿ, ಈ ಸಿನಿಮಾವನ್ನು ನೋಡಿ ಇದು ಮೂವತ್ತು ವರ್ಷವಾದರೂ ಇರುತ್ತದೆ ಅಂದಿದ್ದರು. ನನ್ನ ಮಗಳು ಆ ಸಿನಿಮಾವನ್ನು ಈಗಲೂ ಮೆಚ್ಚುತ್ತಾಳೆ. ‘ಜನುಮದಾತ’ ಮತ್ತಿತರ ಚಿತ್ರಗಳು ಪ್ರಯೋಗಾತ್ಮಕವಾಗಿವೆ’’ ಎಂದು ನೆನಪಿಸಿಕೊಂಡರು.  


ಚಿತ್ರ: ಕೆ.ಎನ್. ನಾಗೇಶ್ ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT