ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಕಾರಾಗೃಹಕ್ಕೆ ಬೇಕಿದೆ `ರಕ್ಷಣೆ'!

ಸಾರ್ವಜನಿಕರಿಗೆ ಕಾರಾಗೃಹದ ಉಚಿತ ದರ್ಶನ
Last Updated 5 ಸೆಪ್ಟೆಂಬರ್ 2013, 8:59 IST
ಅಕ್ಷರ ಗಾತ್ರ

ಶಿವಮೊಗ್ಗ: ಎರಡು ವರ್ಷಗಳಲ್ಲಿ ತಪ್ಪಿಸಿಕೊಂಡವರು ಮೂರು ಜನ. ಒಬ್ಬ 15ದಿವಸ ಬಿಟ್ಟು ಸಿಕ್ಕರೆ, ಇನ್ನಿಬ್ಬರನ್ನು 24 ಗಂಟೆಗಳಲ್ಲಿ ಹುಡುಕಿ  ಬಂಧಿಸಲಾಯಿತು.  ಆದರೆ, ತಪ್ಪಿಸಿಕೊಂಡ ಜಾಗದಲ್ಲಿ ಹರಿದ ತಂತಿಬೇಲಿ ಇನ್ನೂ ದುರಸ್ತಿ ಕಾಣದಿರುವುದು ಇಲ್ಲಿಯ ದುಸ್ಥಿತಿ.


ಉಡುಪಿ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗಳು, ಶಿವಮೊಗ್ಗ ನಗರದ ರೌಡಿಗಳು, ಭದ್ರಾಪುರ ಸಹೋದರರ ಭೀಕರ ಕೊಲೆ ಪ್ರಕರಣದ ಆರೋಪಿಗಳಿರುವ ಈ ಜಿಲ್ಲಾ ಕಾರಾಗೃಹದ ಹಿಂಬದಿಯ ಗೋಡೆ ಮೇಲಿನ ತಂತಿಬೇಲಿ ಹರಿದು ವರ್ಷಗಳೇ ಕಳೆದರೂ ಅದಕ್ಕೆ ದುರಸ್ತಿ ಭಾಗ್ಯ ದೊರೆತಿಲ್ಲ.  

ಶಿವಮೊಗ್ಗ ನಗರದ ಹೃದಯಭಾಗದಲ್ಲಿ 46.09 ಎಕರೆ ಪ್ರದೇಶದಲ್ಲಿ ಜಿಲ್ಲಾ ಕಾರಾಗೃಹದ ಕಟ್ಟಡ ಎದ್ದು ನಿಂತು 128 ವರ್ಷಗಳಾಗಿವೆ. 155ಜನ ಪುರುಷ ಮತ್ತು 12ಜನ ಮಹಿಳಾ ಕೈದಿಗಳನ್ನು ಬಂಧಿಸುವಷ್ಟು ವ್ಯವಸ್ಥೆ ಈ ಕಾರಾಗೃಹದಲ್ಲಿದೆ. ಶತಮಾನಕ್ಕೂ ಹೆಚ್ಚಿನ ಇತಿಹಾಸದ ಈ ಕಾರಾಗೃಹ ಈಗ ಸ್ಥಳಾಂತರಗೊಳ್ಳುವ ಒಂದೇ ಕಾರಣದಿಂದ ಸೂಕ್ತ ಬಂದೋಬಸ್ತಿಗೂ ಕೊರತೆಯಾಗಿದೆ.

ಇಲ್ಲಿನ ಕಾರಾಗೃಹದಿಂದ ತಪ್ಪಿಸಿಕೊಂಡ ಮೂವರಲ್ಲಿ ಇಬ್ಬರು ಕಾರಾಗೃಹ ಆವರಣದಲ್ಲಿರುವ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗಲೇ ಗೋಡೆ ಹಾರಿ ಪರಾರಿಯಾಗಿದ್ದರು. ಕಾರಾಗೃಹದ ಗೋಡೆಗೆ ತಾಗಿಕೊಂಡೇ ಮರಗಳಿದ್ದು, ಅವುಗಳ ಮೂಲಕ ಗೋಡೆ ಮೇಲೇರಿ ತಡೆಯಾಗಿದ್ದ ತಂತಿಬೇಲಿಯನ್ನೂ ನುಸುಳಿ ತಪ್ಪಿಸಿಕೊಂಡಿದ್ದರು. ಮತ್ತೊಬ್ಬ ಕೈದಿ ನೇರವಾಗಿ ಮುಂದಿನ ಬಾಗಿಲಿನಿಂದಲೇ ಪರಾರಿಯಾಗಿದ್ದ. ಈ ಮೂವರೂ ವಿಚಾರಣಾಧೀನ ಕೈದಿಗಳಾಗಿದ್ದರು.

ಕೈದಿಗಳ ಪರಾರಿ ಪ್ರಕರಣದ ನಂತರ ಕೈದಿಗಳಿಂದ ತೋಟದ ಕೆಲಸ ಮಾಡಿಸುವುದನ್ನು ನಿಲ್ಲಿಸಲಾಗಿದೆ. ಹಾಗಾಗಿ, ಈಗ ತೆಂಗಿನ ತೋಟ ಪಾಳು ಬಿದ್ದಿದ್ದು, ಗಿಡಗಂಟೆಗಳು ಬೆಳೆದು ನಿಂತಿವೆ. ಗೋಡೆಯ ಮೇಲೆ ನೆಟ್ಟಿರುವ ಗಾಜಿನ ಚೂರುಗಳೆಲ್ಲವೂ ಉದುರಿ ಹೋಗಿದ್ದು, ಹೊರಗಡೆ ಜನ ಕೂಡ ಸಲೀಸಾಗಿ ಕಾರಾಗೃಹಕ್ಕೆ ನುಸುಳಬಹುದಾಗಿದೆ. ಹಾಕಬಹುದಾಗಿದೆ. ತೋಟದ ತೆಂಗಿನ ಕಾಯಿಗಳು ಆಗಾಗ್ಗೆ ಕಣ್ಮರೆಯಾಗುತ್ತಿರುವುದು ಇದಕ್ಕೆ ಪುರಾವೆಯಾಗಿವೆ.

ಕಾರಾಗೃಹದ ಗೋಡೆಯ ಕಿತ್ತು ಹೋದ ತಂತಿಗಳನ್ನು ನೋಡಿಕೊಂಡು ದಿನ ನಿತ್ಯ ಇದೇ ರಸ್ತೆಯಲ್ಲಿ ಕೀರ್ತಿನಗರ, ಅರವಿಂದ ನಗರ, ನಾಗೇಂದ್ರ ಕಾಲೊನಿ, ಬೊಮ್ಮನಕಟ್ಟೆಯ ನೂರಾರು ನಿವಾಸಿಗಳು ಓಡಾಡುತ್ತಿದ್ದಾರೆ. ಅವರೆಲ್ಲರಿಗೂ ಕಾರಾಗೃಹದ ಉಚಿತ ದರ್ಶನ ಸಿಗುತ್ತಿದೆ. 

`ಎರಡು ವರ್ಷಗಳಿಂದ ಇದೇ ಸ್ಥಿತಿ ಇದೆ. ಕೆಲವು ಹುಡುಗರು ಇದೇ ಗೋಡೆ ಹತ್ತಿ ಕುಳಿತಿರುವುದನ್ನು ನಾವು ನೋಡಿದ್ದೇವೆ. ಸಾಕಷ್ಟು ಶಾಲಾ ಮಕ್ಕಳು ಇದೇ ರಸ್ತೆಯಲ್ಲಿ ಓಡಾಡುತ್ತಿರುತ್ತಾರೆ. ಯಾವ ಸಮಯದಲ್ಲಿ ಏನು ಬೇಕಾದರೂ ಆಗಬಹುದು. ಕಾರಾಗೃಹ ಸಿಬ್ಬಂದಿಯೇ ಒಂದಿಷ್ಟು ತಂತಿ ತಂದು ಸರಿಪಡಿಸಬಹುದಾಗಿತ್ತು; ಆದರೂ ಈ ಕೆಲಸ ಆಗಿಲ್ಲ' ಎಂದು ಆತಂಕ ವ್ಯಕ್ತಪಡಿಸುತ್ತಾರೆ ನಾಗೇಂದ್ರ ಕಾಲೊನಿಯ ಪಿ.ಎಂ.ಮಂಜುನಾಥ.

`ಕಾರಾಗೃಹದ ಗೋಡೆಯ ತಂತಿಬೇಲಿ ರಿಪೇರಿ ಸೇರಿದಂತೆ ಹಲವು ರಕ್ಷಣಾ ಕ್ರಮಗಳಿಗೆ ್ಙ 60 ಲಕ್ಷಕ್ಕೆ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ, ಅಲ್ಲಿಂದ ಇದುವರೆಗೂ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಅಷ್ಟಕ್ಕೂ ಸೋಗಾನೆ ಬಳಿ ರಾಜ್ಯದಲ್ಲೇ ಮಾದರಿಯಾದ ಕಾರಾಗೃಹ ನಿರ್ಮಾಣವಾಗುತ್ತಿದ್ದು, ಸದ್ಯದಲ್ಲೇ ಅಲ್ಲಿಗೆ ಇದು ಸ್ಥಳಾಂತರಗೊಳ್ಳಲಿದೆ. ಈ ಹಿನ್ನೆಲೆಯಲ್ಲೂ ಇಲ್ಲಿನ ರಿಪೇರಿ ಕೆಲಸ ತಡವಾಗಿರಬಹುದು' ಎನ್ನುತ್ತಾರೆ ಜಿಲ್ಲಾ ಕಾರಾಗೃಹ ಅಧೀಕ್ಷಕ ನಾಗಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT