ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ಸುಬ್ಬಣ್ಣ ಅವರಿಗೆ ಕುವೆಂಪು ಸಿರಿಗನ್ನಡ ಪ್ರಶಸ್ತಿ ಪ್ರದಾನ

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ರಾಷ್ಟ್ರಕವಿ ಕುವೆಂಪು ಅವರಷ್ಟು ಕನ್ನಡ ಪರವಾಗಿ ಕವಿತೆಗಳನ್ನು ರಚಿಸಿದ ಮತ್ತೊಬ್ಬ ಕವಿ ಇಲ್ಲ. ಇದು ಕುವೆಂಪು ಅವರ ಕನ್ನಡ ಪ್ರೀತಿಯನ್ನು ತೋರಿಸುತ್ತದೆ~ ಎಂದು ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅಭಿಪ್ರಾಯಪಟ್ಟರು.

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಚಾಮರಾಜಪೇಟೆಯಲ್ಲಿನ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸುಗಮ ಸಂಗೀತಗಾರ ಡಾ. ಶಿವಮೊಗ್ಗ ಸುಬ್ಬಣ್ಣ ಅವರಿಗೆ `ಕುವೆಂಪು ಸಿರಿಗನ್ನಡ ಪ್ರಶಸ್ತಿ~ ಪ್ರದಾನ ಮಾಡಿ ಅವರು ಮಾತನಾಡಿದರು.

`ದೇಶದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆ ಕುರಿತು ಕುವೆಂಪು ಅವರು ಚಿಂತನೆ ನಡೆಸಿದ ರೀತಿಯಲ್ಲಿ ಪರಂಪರೆಯ ಬಗ್ಗೆ ಚಿಂತನೆ ನಡೆಸುವವರು ಬಹಳ ವಿರಳ. ವೈಚಾರಿಕ ಚಿಂತನೆಗೂ ಕುವೆಂಪು ಅವರು ಮಹತ್ವ ನೀಡಿದ್ದರು. ಅವರಷ್ಟು ವೈಚಾರಿಕ ಕೃತಿಗಳನ್ನು ರಚಿಸಿದ ಬೇರೊಬ್ಬ ಸಾಹಿತಿ ಕೂಡ ಇಲ್ಲ~ ಎಂದು ಬಣ್ಣಿಸಿದರು.

`ಶಿವಮೊಗ್ಗ ಸುಬ್ಬಣ್ಣ ಅವರ ಗಾಯನದಲ್ಲಿ ಮಾಧುರ್ಯವಿದೆ. ಅವರ ಗಾಯನ ಶೈಲಿಯು ಕೇಳುಗರನ್ನು ಧ್ಯಾನ ಸ್ಥಿತಿಗೆ ಕರೆದೊಯ್ಯುವಷ್ಟು ಪರಿಣಾಮಕಾರಿ ಎನಿಸಿದೆ. ಸುಬ್ಬಣ್ಣ ಅವರ ಗಾನ ಮಾಧುರ್ಯಕ್ಕೆ ಸ್ವತಃ ಕುವೆಂಪು ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು~ ಎಂದರು.

`ಬೆಂಗಳೂರು ವಿವಿ ಘಟಿಕೋತ್ಸವದಲ್ಲಿ ಕುವೆಂಪು ಅದ್ಭುತ ಭಾಷಣ ಮಾಡಿದ್ದರು. ಆ ಭಾಷಣ ಮುದ್ರಿಸಿ ವಿತರಿಸಬೇಕು. ಅದು ಯುವಜನತೆಗೆ ಸ್ಫೂರ್ತಿ ನೀಡಲಿದೆ~ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ನಗರ ಜಿಲ್ಲಾ ಕಸಾಪಅಧ್ಯಕ್ಷ ಸಿ.ಕೆ. ರಾಮೇಗೌಡ, `ಕುವೆಂಪು ಅವರ ಭಾಷಣದ 25,000 ಪ್ರತಿಗಳನ್ನು ಮುದ್ರಿಸಿ ವಿತರಿಸಲಾಗುವುದು~ ಎಂದರು.

ಜಾನಪದ ವಿದ್ವಾಂಸ ಡಾ.ಚಕ್ಕೆರೆ ಶಿವಶಂಕರ್, `ಕುವೆಂಪು ಅವರ ಹೆಸರನ್ನು ಸ್ವಲಾಭ, ವೈಯಕ್ತಿಕ ಹಿತಾಸಕ್ತಿಗೆಂದು ಬಳಸಿಕೊಳ್ಳುವುದು, ಅವರನ್ನು ಕೆಲ ಚೌಕಟ್ಟಿನಲ್ಲೇ ಬಂಧಿಸಿಡುವ ಹುನ್ನಾರ ನಡೆಯುತ್ತಿದೆ. ಈ ಷಡ್ಯಂತ್ರವನ್ನು ತಡೆಗಟ್ಟಲು ಮುಂದಾಗಬೇಕಿದೆ~ ಎಂದರು.ವಿಧಾನ ಪರಿಷತ್ ಸದಸ್ಯರಾದ ಪ್ರೊ.ಎಂ.ಆರ್. ದೊರೆಸ್ವಾಮಿ, ಅಶ್ವತ್ಥನಾರಾಯಣ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ, ನಗರ ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಎ.ಎಸ್. ನಾಗರಾಜಸ್ವಾಮಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT