ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾತ್ರಿಗೂ ಮುನ್ನ ಕಲ್ಲಂಗಡಿ ಆಗಮನ!

Last Updated 25 ಫೆಬ್ರುವರಿ 2013, 6:04 IST
ಅಕ್ಷರ ಗಾತ್ರ

ರಾಯಚೂರು: ಫೆಬ್ರುವರಿ ಕೊನೆ ವಾರದಲ್ಲಿಯೇ ಏಪ್ರಿಲ್ ತಿಂಗಳ ಚುರುಕು ಬಿಸಿಲನ್ನು ಈ ವರ್ಷ ಜನ ಅನುಭವಿಸುವಂತಾಗಿದೆ. ರಣ ಬಿಸಿಲಿಗೆ ಜನತೆ ತತ್ತರಿಸಿ ಉಶ್ ಎನ್ನುತ್ತಿದ್ದು, ಏಪ್ರಿಲ್-ಮೇ ತಿಂಗಳ ಬಿಸಿಲು ಪ್ರಮಾಣ ಎಷ್ಟು ಹೆಚ್ಚಾಗಬಹುದು ಎಂದು ಲೆಕ್ಕ ಹಾಕುವಂತಾಗಿದೆ.

`ಶಿವ ರಾತ್ರಿಗೆ ಶಿವ ಶಿವ ಎಂಬುವಷ್ಟು ಬಿಸಿಲು' ಎಂಬ ಮಾತಿದೆ. ಈಗಿನ ಬಿಸಿಲು, ಬಿಸಿಲು ಧಗೆಗೆ ಜನ ಶಿವರಾತ್ರಿಗೂ ಮುನ್ನವೇ ಶಿವ ಶಿವಾ... ಉಶ್... ಎಂದು ಸಾವರಿಸಿಕೊಳ್ಳುವಂತಾಗಿದೆ. ರಣ ಬಿಸಿಲಿನ ಪರಿಣಾಮ ಕಂಡ ಜನ ಮಧ್ಯಾಹ್ನ ಹೊರಗಡೆ ಸುಳಿಯದಂತಾಗಿದೆ. ಒಂದೆಡೆ ಧಗೆಯಂಥ ಬಿಸಿಲು. ಮತ್ತೊಂದೆಡೆ ಯಾವ ರಸ್ತೆಗೆ ಹೋದರೂ ಧೂಳು... ಧೂಳು... ಈ ಧೂಳು ತುಂಬಿದ ರಸ್ತೆಯಲ್ಲಿ ರಣ ಬಿಸಿಲಿನಲ್ಲಿ ಸುತ್ತಾಡಿ ಜನ  ಸುಸ್ತಾಗುವಂತಾಗಿದೆ!

ಮತ್ತೊಂದೆಡೆ ಬಿಸಿಲು ಕಾಲದಲ್ಲಿ ಜನ ಹೆಚ್ಚು ಸೇವಿಸುವ ಹಣ್ಣುಗಳು, ತಂಪು ಪಾನೀಯ ಬೆಲೆ ಡಬಲ್!  ಎಳ ನೀರು 18,20,24 ರೂಪಾಯಿ, ಕಲ್ಲಂಗಡಿ 50,80,100, 150 ರೂಪಾಯಿಗೆ ಒಂದು ಮಾರಾಟ ಆಗುತ್ತಿದೆ.  ನೀರಿನ ಪೌಚ್ ಮಾರಾಟ ಲೆಕ್ಕಕ್ಕಿಲ್ಲದಷ್ಟು ಮಾರಾಟ ಆಗುತ್ತಿದೆ. ನಗರದ ಧೂಳು ಮಿಶ್ರಿತ ರಸ್ತೆಯಲ್ಲೇ ಈ ವ್ಯಾಪಾರ ನಡೆಯುತ್ತಿದೆ.

ಶಿವರಾತ್ರಿಗೂ ಮುನ್ನವೇ ಮಾರುಕಟ್ಟೆಗೆ ಧಾವಿಸಿರುವ ಕಲ್ಲಂಗಡಿ ಹಣ್ಣಿನ ಬೆಲೆ ಕೇಳಿ ಗ್ರಾಹಕರು ಬೆಚ್ಚಿ ಬೀಳುವಂತಾಗಿದೆ. 50,100,150! ಹಣ್ಣಿನ ಗಾತ್ರ ದೊಡ್ಡದಿದೆ. ಸೀಸನ್‌ಗೆ ಸ್ವಲ್ಪ ಮೊದಲೇ ಮಾರ್ಕೆಟ್‌ಗೆ ಬಂದಿದೆ. ಹೀಗಾಗಿ ಬೆಲೆ ಜಾಸ್ತಿ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಮಹಮ್ಮದ್ ಸಲೀಮ್ ಹಾಗೂ ಬಷೀರ್.

ಸದ್ಯ ಜಿಲ್ಲೆಯ ರಾಜಲಬಂಡಾ, ರಾಜೋಳಿ, ಗೋರ್ಕಲ್‌ನಿಂದ, ಆಂಧ್ರಪ್ರದೇಶ ಕಡಪಾದಿಂದ ಕಲ್ಲಂಗಡಿ ಹಣ್ಣು ಬರುತ್ತಿದೆ. ಶಿವರಾತ್ರಿಗೆ ಬೇರೆ ಕಡೆಯಿಂದ ಈ ಹಣ್ಣಿನ ಆವಕ ಹೆಚ್ಚಾಗಲಿದೆ ಎಂದು ಹೇಳುತ್ತಾರೆ.

ಬಿಸಿಲು ಕಾಲದಲ್ಲಿ ಗಲೀಜು ನೀರು ಪೂರೈಕೆ: ಇಂಥ ಬಿಸಿಲು ಕಾಲದಲ್ಲಿ ಕುಡಿಯುವ ನೀರನ್ನೂ ಸಮರ್ಪಕವಾಗಿ ಪೂರೈಸುವಲ್ಲಿ ಹೆಣಗಾಡುತ್ತಿರುವ ರಾಯಚೂರು ನಗರಸಭೆ ಹಾಗೂ ಜಿಲ್ಲಾಡಳಿತವು ನಗರದ ಜನತೆಗೆ ಮತ್ತಷ್ಟು ಸಮಸ್ಯೆ ತಂದೊಡ್ಡಿದೆ. ಆರೋಗ್ಯ ಸಂರಕ್ಷಣೆ ಬಗ್ಗೆ ಜನಜಾಗೃತಿ ಮಾಡುವ ನಗರಸಭೆಯೇ ಗಲೀಜು ನೀರು ಪೂರೈಕೆ ಮಾಡಿ ಜನರನ್ನು ಆಸ್ಪತ್ರೆಯತ್ತ ಕಳುಹಿಸುವ ವ್ಯವಸ್ಥೆ ಮಾಡುತ್ತಿದೆ. ಚುನಾವಣೆಯಲ್ಲೇ ನಗರಸಭೆ ಚುನಾವಣೆಯಲ್ಲೇ ಮುಳುಗಿರುವ ರಾಜಕೀಯ ಪಕ್ಷಗಳ ಮುಖಂಡರ, ಜನಪ್ರತಿನಿಧಿಗಳು ಕುಡಿಯುವ ನೀರಿಗೆ ಪರದಾಡುವ ಜನರ ಬವಣೆ ಆಲಿಸಲು ಪುರಸೊತ್ತಿಲ್ಲ!

ಪ್ರತಿ ವರ್ಷ ಬೇಸಿಗೆ ಕಾಲ ಇದ್ದೇ ಇರುತ್ತದೆ. ಮುಂಜಾಗೃತಾ ಕ್ರಮವಾಗಿ ನಗರದ ವಿವಿಧ ವಾರ್ಡ್‌ಗೆ ನೀರು ಪೂರೈಕೆಗೆ ಅಗತ್ಯ ನೀರು ಸಂಗ್ರಹ ಮಾಡಿ ಎಚ್ಚರಿಕೆ ಕ್ರಮ ಕೈಗೊಳ್ಳಬೇಕಾದ ಆಡಳಿಯ ಯಂತ್ರ ಈ ವರ್ಷ ನಿದ್ರೆಗೆ ಜಾರಿ ಈಗ ಗಲೀಜು ನೀರನ್ನು ನಗರದ ಜನತೆ ಪೂರೈಕೆ ಮಾಡುತ್ತದೆ. ಈ ಗಲೀಜು ನೀರನ್ನೂ ಕೂಡಾ ದಿನ ಬಿಟ್ಟು ದಿನ ಪೂರೈಕೆ ಮಾಡಲಾಗುತ್ತದೆ ಎಂದು ನಗರಸಭೆ ಆಡಳಿತ ವರ್ಗ ಹೇಳಿಕೊಂಡು ದೊಡ್ಡ ಉಪಕಾರ ಮಾಡಿದಂತೆ ಬಿಂಬಿಸಿಕೊಂಡಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಂಪುರ ಜಲಾಶಯದಿಂದ ಈಗ ಈಗ ಪೂರೈಕೆ ಆಗುವ ನೀರು ಮಣ್ಣು ಮಿಶ್ರಿತ, ಕಲುಷಿತಗೊಂಡಿದ್ದು, ಪ್ರಾಣಿಗಳೂ ಸಹ ಕುಡಿಯಲು ಹಿಂದೇಟು ಹಾಕುವ ಹಾಗಿದೆ. ನಗರದ ಶೇ 40ರಷ್ಟು ಭಾಗದ ಜನ ಈ ರಾಂಪುರ ಜಲಾಶಯದ ಗಲೀಜು ನೀರನ್ನು ನಾಲ್ಕಾರು ಬಾರಿ ಫಿಲ್ಟರ್ ಮಾಡಿ, ಕಾಯಿಸಿ, ಕುದಿಸಿ ಕುಡಿಯುತ್ತಿದ್ದಾರೆ.

ಬಿಸಿಲು ಕಾಲ ರೋಗಗಳ ಉಲ್ಬಣಕ್ಕೆ ಸಕಾಲ. ಈ ದಿನಗಳಲ್ಲಿ ನಗರಸಭೆ ಆಡಳಿತ ಯಂತ್ರ ಕೊಳಕು ನೀರನ್ನ ಕುಡಿಸಿದರೆ ಜನ ಅನಾರೋಗ್ಯಕ್ಕೆ ಬಲಿಯಾಗದೇ ಇರಲು ಸಾಧ್ಯವೇ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.

ತುಂಗಭದ್ರಾ ಎಡದಂಡೆ ಕಾಲುವೆಯಿಂದ ಗಣೇಕಲ್ ಜಲಾಶಯಕ್ಕೆ ನೀರು ಭರ್ತಿ ಮಾಡಲಾಗುತ್ತಿದ್ದು, ಭರ್ತಿಗೊಂಡ ಬಳಿಕ ರಾಂಪುರ ಜಲಾಶಯಕ್ಕೆ ನಾಲ್ಕಾರು ದಿನದಲ್ಲಿ ಪೂರೈಕೆ ವ್ಯವಸ್ಥೆ ಮಾಡಲಾಗುವುದು ಎಂದು ನಗರಸಭೆ ಆಯುಕ್ತರು, ಸಹಾಯಕ ಆಯುಕ್ತೆ ಮಂಜುಶ್ರೀ ಭರವಸೆ ವ್ಯಕ್ತಪಡಿಸಿದ್ದಾರೆ. ಆದರೆ, ಸದ್ಯದ ಸ್ಥಿತಿ ಗಮನಿಸಿದರೆ ಒಂದು ವಾರಕ್ಕೂ ಹೆಚ್ಚು ಕಾಲ ನೀರು ಬರುವುದು ಅನುಮಾನ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT