ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಾಜಿ ಜೀವನಗಾಥೆಯ ಪಾಠ

Last Updated 22 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಹಿಂದಿನ ಅಂಕಣದಲ್ಲಿ ದುರ್ಯೋಧನನನ್ನು ಅವನ ಕೆಲವು ಸಕಾರಾತ್ಮಕವಾದ ನಿಲುವುಗಳಿಂದಾಗಿ ಅವನೊಬ್ಬ ಒಳ್ಳೆಯ ಬಾಸ್ ಎಂದು ಸಂಬೋಧಿಸಿದ್ದೆ. ಆದರೆ, ಆತ ನಿಜವಾಗಿಯೂ ಒಳ್ಳೆಯ ನಾಯಕನೆ? ಆತ ಒಳ್ಳೆಯ ನಾಯಕನಾಗಿದ್ದರೆ ಕಡೆಯಲ್ಲಿ ತಾನೂ ಸೋತು ತನ್ನವರೆಲ್ಲರನ್ನೂ ಬಲಿ ಕೊಡುತ್ತಿದ್ದನೆ?

ಉತ್ತರ ಸ್ಪಷ್ಟ. ಒಬ್ಬ ಒಳ್ಳೆಯ ನಾಯಕನಿಗೆ ಛಲವೊಂದೇ ಇದ್ದರೆ ಸಾಲದು. ಅದಕ್ಕೆ ಪೂರಕವಾಗಿ ಅವನಲ್ಲಿ ಇನ್ನೂ ಕೆಲವು ಗುಣಗಳು ಇದ್ದೇ ಇರಬೇಕು. ನನ್ನ ಅನುಭವಕ್ಕೆ ನಿಲುಕಿದ ಈ ಗುಣಗಳನ್ನು ತುಲನೆ ಮಾಡುವುದೇ ಮುಂದಿನ ಕೆಲ ಅಂಕಣಗಳ ಗುರಿ.

ನಮ್ಮ ದೇಶದ ಇತಿಹಾಸದಲ್ಲಿ ನನಗೆ ಅತ್ಯಂತ ವರ್ಣರಂಜಿತವಾಗಿ, ವೈವಿಧ್ಯಮಯವಾಗಿ ಹಾಗೂ ವೀರೋಚಿತವಾಗಿ ಕಂಡು ಬರುವ ವ್ಯಕ್ತಿತ್ವಗಳಲ್ಲಿ ಛತ್ರಪತಿ ಶಿವಾಜಿಯದು ಅಗ್ರಸ್ಥಾನ. ಶಿವಾಜಿಯ ಒಂದೇ ವ್ಯಕ್ತಿತ್ವದಲ್ಲಿ ಜೀವನದ ಎಲ್ಲ ರಸಗಳ ಸಮಾಗಮವಿದೆ. ನನ್ನ ಮಟ್ಟಿಗೆ ಇದೇ ಅವನ ವೈಶಿಷ್ಟ್ಯ. ಅವನ ಜೀವನ ಕಷ್ಟ  - ಸುಖಗಳ ಸಮಪಾಕ!

ಸೋತ ದುಃಖದ ಜೊತೆಯಲ್ಲೇ ಗೆದ್ದ ಹರುಷವಿದೆ. ಅವಮಾನದ ಪರಿಧಿಯಲ್ಲೇ ವಿಜೃಂಭಣೆಯ ಸಾಲುಗಾಥೆಗಳಿವೆ.ಕಪಟವೆನ್ನಬಹುದಾದ ಪಲಾಯನಗಳ ಬೆನ್ನಲ್ಲೇ ವೀರರಸ  ಉಕ್ಕಿಸಬಲ್ಲ ಧೀರೋದಾತ್ತವಾದ ಆಕ್ರಮಣಗಳ ಸರದಿ ಸಾಲುಗಳೇ ಇವೆ.

ಅತ್ಯಂತ ಚಿಕ್ಕವಯಸ್ಸಿನಲ್ಲೇ ಧ್ಯೇಯವೊಂದಕ್ಕೆ ಕಟ್ಟುಬಿದ್ದು ಇಡಿಯ ತನ್ನ ಐವತ್ಮೂರು ವರ್ಷಗಳ ಜೀವಿತದುದ್ದಕ್ಕೂ ಅದರ ಸಾಧನೆಯಲ್ಲೇ ಹಂತಹಂತವಾಗಿ ಮೇಲೇರುತ್ತ ಅರೆಗಳಿಗೆಯೂ ವಿಶ್ರಮಿಸದೆ ಅವಿಶ್ರಾಂತವಾಗಿ ಶ್ರಮಿಸಿದ ಶಿವಾಜಿಯ ಕಥನವನ್ನು ವಿಶ್ವದ ಇನ್ನಾವುದೇ ರಾಜಮಹಾರಾಜರ ಜೀವಿತದಲ್ಲಿ ನಾನಂತೂ ಕಂಡಿಲ್ಲ. ಶಿವಾಜಿಗೆ ಶಿವಾಜಿಯೇ ಸಾಟಿ!

ನಾನು ಶಿವಾಜಿಯ ಕತೆಯನ್ನು ಮೊದಲು ಓದಿದ್ದು ಸ್ಕೂಲಿನಲ್ಲಿದ್ದ ಸಮಯದಲ್ಲಿ. ಆಗಿನ ನನ್ನ ಹುಡುಗ ಬುದ್ಧಿಗೆ ಶಿವಾಜಿಯ ಒಂದು ಘಟನೆ ಅತ್ಯಂತ ಪ್ರಿಯವಾಗಿತ್ತು. ಔರಂಗಜೇಬನ ನಂಬಿಕಸ್ಥ ಸೇನಾನಿ ಜೈಸಿಂಹನ ಭಾರಿ ಪಡೆಯಿಂದ ತನ್ನ ಅನೇಕ ಕೋಟೆಕೊತ್ತಲಗಳನ್ನು ಕಳೆದುಕೊಂಡ ಶಿವಾಜಿ, ಒಂದು ಹಂತದಲ್ಲಿ ಔರಂಗಜೇಬನಿಗೆ ಮಣಿಯುತ್ತಾನೆ.

ಅವನ ಸರ್ವಾಧಿಕಾರವನ್ನು ಒಪ್ಪಿಕೊಂಡು ಅವನ ಆಹ್ವಾನದ ಮೇರೆಗೆ ಅವನ ಆಸ್ಥಾನಕ್ಕೆ ಬರುತ್ತಾನೆ. ಅಲ್ಲಿ ತನಗಾಗುವ ಅವಮಾನವನ್ನು ಧಿಕ್ಕರಿಸಿದಾಗ, ಅದನ್ನೇ ಕಾರಣವನ್ನಾಗಿಸಿಕೊಂಡು ಔರಂಗಜೇಬ್ ಶಿವಾಜಿಯನ್ನು ಗೃಹಬಂಧನದಲ್ಲಿ ಇಡುತ್ತಾನೆ. ಎಂದೂ ಹತಾಶನಾಗದ ಶಿವಾಜಿಯ ಮನಸ್ಸಿನಲ್ಲಿ ಆ ಸಂಕಟದ ವೇಳೆಯಲ್ಲೂ ಒಂದು ಯೋಜನೆ ರೂಪುಗೊಳ್ಳುತ್ತದೆ.

ಆಗ್ರಾದ ಬಡಜನರಿಗೆ ದಿನವೂ ಬುಟ್ಟಿಗಳಲ್ಲಿ ಸಿಹಿ ತಿಂಡಿಗಳನ್ನು ಹಣ್ಣು ಹಂಪಲುಗಳನ್ನು ರಾಜ ಸತ್ಕಾರದ ರೂಪದಲ್ಲಿ ಕಳುಹಿಸುವ ಒಂದು ಪರಿಪಾಟವನ್ನು ಶುರು ಮಾಡುತ್ತಾನೆ. ಔರಂಗಜೇಬ್‌ನ ಸೈನಿಕರು ಮೊದ ಮೊದಲು ಇದೊಂದು ಶಿವಾಜಿಯ ಯಾವುದೇ ಕುತಂತ್ರವಿರಬೇಕೆಂದೆಣಿಸಿ ಈ ಬುಟ್ಟಿಗಳನ್ನೆಲ್ಲ ಕೂಲಂಕಷವಾಗಿ ತಪಾಸಣೆ ಮಾಡುತ್ತಾರೆ.

ಆದರೆ ಕಾಲ ಕ್ರಮೇಣ ಇದು ಈ ರಾಜನ ದೈನಂದಿನ ಚಟುವಟಿಕೆ ಎಂದರಿತು ತಮ್ಮ ಭದ್ರತೆ  ಸಡಿಲಗೊಳಿಸಿದ ಹೊತ್ತಿನಲ್ಲಿ, ಒಂದು ದಿನ ಶಿವಾಜಿಯೇ ಸ್ವತಃ ಒಂದು ಬುಟ್ಟಿಯಲ್ಲಿ ಕುಳಿತು, ಸನ್ಯಾಸಿಯ ವೇಷ ಧರಿಸಿ ಆಗ್ರಾದಿಂದ ದಕ್ಷಿಣದ ತನ್ನ ಕೋಟೆಗೆ ತಪ್ಪಿಸಿಕೊಂಡು ಬಂದು ಬಿಡುತ್ತಾನೆ.

ಬುಟ್ಟಿಯೊಂದರಲ್ಲಿ ಕುಳಿತು ವೈರಿ ಉದರದಿಂದಲೇ ತಪ್ಪಿಸಿಕೊಂಡು ಬರುವ ಶಿವಾಜಿಯ ಈ ಕತೆ ಅದ್ಯಾವ ಬಾಲಕನಿಗೆ ರುಚಿಸುವುದಿಲ್ಲ ಹೇಳಿ? ನಾನು ಬಾಲ್ಯದಲ್ಲಿ ಆಟ  ಆಡುವಾಗ, ಹಜಾರದಲ್ಲೇ ಅರ್ಧ ಖಾಲಿ ಇದ್ದ ನೀರಿನ ಡ್ರಮ್ಮಿನಲ್ಲಿ ಅವಿತು ಕುಳಿತು ಎಲ್ಲರ ಕಣ್ಣು ತಪ್ಪಿಸಿದಾಗ ನಾನೇ ಶಿವಾಜಿಯೆಂದು ಮೆರೆದದ್ದು ಈಗೊಂದು ಸುಂದರ ನೆನಪು!

ನಾನು ಕಾಲೇಜಿನಲ್ಲಿದ್ದಾಗ ನಾಟಕವೊಂದರ ರಚನೆಯ ಸಂದರ್ಭದಲ್ಲಿ ಶಿವಾಜಿಯನ್ನು ಮತ್ತೊಮ್ಮೆ ಓದಿದ್ದೆ. ಆ ದಿನಗಳಲ್ಲಿ ನನಗೆ ಇಷ್ಟವಾದ ಶಿವಾಜಿ ಜೀವನದ ಘಟನೆಯೊಂದರ ಬಗ್ಗೆ ಬರಯಲೇಬೇಕು.

ವಿಜಾಪುರದ ಸುಲ್ತಾನನಿಗೆ ದಿನೇ ದಿನೇ ಬಲಿಷ್ಠನಾಗುತ್ತಿರುವ ಶಿವಾಜಿಯ ಬಗ್ಗೆ ಎಂದಿಗೂ ಹೆದರಿಕೆ ಇದ್ದೇ ಇತ್ತು. ಶಿವಾಜಿಯನ್ನು ಮುಗಿಸಿಯೇ ಬಿಡಬೇಕೆಂದು ತೀರ್ಮಾನಿಸಿ ತನ್ನ ದೈತ್ಯಾಕಾರದ ಸೇನಾನಿಯಾದ ಅಫ್ಜಲ್‌ಖಾನ್‌ನನ್ನು ಶಿವಾಜಿಯ ವಿರುದ್ಧ ಸಮರಕ್ಕೆ ಕಳುಹಿಸುತ್ತಾನೆ.

ಸುಮಾರು ನಲವತ್ತು ಸಾವಿರದಷ್ಟು ದೊಡ್ಡ ಸೈನ್ಯದೊಂದಿಗೆ ಅಫ್ಜಲ್ ಹೊರಟಾಗಲೂ ಅವನ ಬೃಹದಾಕಾರದ ಎದೆಯ ಮೂಲೆಯಲ್ಲೆಲ್ಲೋ ಶಿವಾಜಿಯ ಬಗ್ಗೆ ಹಾಗೂ ಅವನ ಜೊತೆಯಿದ್ದ ಕೇವಲ ಮೂರ್ನಾಲ್ಕು ಸಾವಿರ ಯೋಧರ ಬಗ್ಗೆ ಹೃದಯ ಕಂಪನವಿದ್ದಿರಬೇಕು. ಅಂತೆಯೇ ಯುದ್ಧ ಬಿಟ್ಟು ಸಂಧಿಗೆಂದು ಬರಮಾಡಿಕೊಂಡು, ಒಬ್ಬಂಟಿಗನಾಗಿ ಬಂದ ಶಿವಾಜಿಯನ್ನು ಆತ್ಮೀಯವಾಗಿ ತಬ್ಬಿ ಹಿಡಿವಂತೆ ನಟಿಸಿ ಅವನ ಕುತ್ತಿಗೆ ಹಿಚುಕಿ ಸಾಯಿಸಬೇಕೆಂಬ ಸಂಚಿನಲ್ಲಿ ಅಫ್ಜಲ್‌ಖಾನ್ ಮುಂದಾಗುತ್ತಾನೆ.

ಅವನ ವಜ್ರ ಹಿಡಿತದಿಂದ ನುಣುಚಿಕೊಳ್ಳುತ್ತ ಅವನ ಬೆನ್ನನ್ನು ಚೂರಿಯಿಂದ ಸೀಳಿ, ತನ್ನ ಹುಲಿ ಉಗುರುಗಳಿಂದ ಅವನ ಹೊಟ್ಟೆ  ಬಗೆದು ಕೊಲ್ಲುವುದಿದೆಯಲ್ಲ, ಅದನ್ನು ಪುರಾಣದಲ್ಲೆಲ್ಲೋ ನರಸಿಂಹನವತಾರದ ಕತೆಯಲ್ಲಿ ಕೇಳಿದ್ದುಂಟು. ನಿಜ ಜೀವನದಲ್ಲಿ ಈ ಪರಿಯ ವೀರಗಾಥೆ ಶಿವಾಜಿಯದು ಮಾತ್ರ. ನಾಟಕವೊಂದರಲ್ಲಿ ಈ ಘಟನೆ ಅಳವಡಿಸಿಕೊಂಡು ಆ ಸನ್ನಿವೇಶದಲ್ಲಿ ನಾನೇ ಶಿವಾಜಿ ಎಂದು ಭಾವಿಸಿ ನಟಿಸಿದದ್ದು ಈಗೊಂದು ಮಧುರ ನೆನಪು!

ವರುಷಗಳೇ ಉರುಳಿವೆ. ಮ್ಯಾನೇಜ್‌ಮೆಂಟ್ ಕುರಿತಾಗಿ ಈಗ ಅಂಕಣ ಬರೆಯುತ್ತಿದ್ದೇನೆ. ಕಂಪೆನಿಯ ಕಾರ್ಮಿಕ ಗಣದಲ್ಲಿ ಸ್ಪರ್ಧಾಮನೋಭಾವ ಮೂಡಿಸಬೇಕಾದರೆ ಆ ಕಂಪೆನಿಯ ಬೋರ್ಡ್‌ರೂಮಿನ ಸುತ್ತಮುತ್ತಲಿನ ನಾಯಕರಲ್ಲಿ ಮೂಲಭೂತವಾಗಿ ಇರಬೇಕಾದ ಗುಣಗಳ ಬಗ್ಗೆ ಚಿಂತನೆ ನಡೆಸಿದ್ದೇನೆ. ನನಗೆ ಸರಿಕಂಡ ಆ ಗುಣವಿಶೇಷಗಳ ಪಟ್ಟಿ ಮಾಡಿದ್ದೇನೆ. ಆ ಪಟ್ಟಿಯಲ್ಲಿನ ಮೊದಲ ಗುಣದ ಬಗ್ಗೆ ಬರೆಯುತ್ತಿರುವಾಗ ನನಗೆ ಮತ್ತೆ ಶಿವಾಜಿ ನೆನಪಾಗುತ್ತಿದ್ದಾನೆ.

ಪುಣೆಯ ಹತ್ತಿರದ ಗುಡ್ಡಗಾಡಿನ ಗ್ರಾಮವಾದ ಮಾವಲ್‌ಗೆ ತಾಯಿ ಜೀಜಾಬಾಯಿಯೊಂದಿಗೆ ಬಂದಾಗ ಶಿವಾಜಿ ಇನ್ನೂ ಪುಟ್ಟ ಹುಡುಗ. ಆ ವಯಸ್ಸಿನಲ್ಲೇ ಸ್ವರಾಜ್ಯದ ಭವ್ಯ ಕನಸು ಕಾಣುತ್ತಾನೆ. ಆದರೆ, ಅದಕ್ಕೆ ಬೇಕಾದ ಯಾವ ಒಂದು ಸಂಪನ್ಮೂಲವೂ ಶಿವಾಜಿಗಿರಲಿಲ್ಲ. ಧನವಿಲ್ಲ, ಜನ ಬೆಂಬಲವಿಲ್ಲ. ಯುದ್ಧ ಶಸ್ತ್ರಾಸ್ತ್ರಗಳಿಲ್ಲ. ಸುತ್ತಲಿದ್ದವರು ಉಣಲಿಕ್ಕೂ ಎರಡು ಹೊತ್ತಿನ ಕೂಳಿಲ್ಲದ ಬಡ ಮಾವಳಿಗರು ಮಾತ್ರ.

ಆದರೆ, ಇವರೆಲ್ಲ ಶ್ರಮಜೀವಿಗಳು. ಕಷ್ಟದ ತೆಕ್ಕೆಯಲ್ಲಿ ರೂಪುಗೊಂಡ ಬಲಿಷ್ಠ ದೇಹಿಗಳು. ಅವರಲ್ಲಿ ಇಲ್ಲದ ವಿಚಾರಗಳನ್ನೇ ಹಲುಬುತ್ತ ಶಿವಾಜಿ ಹತಾಶನಾಗಲಿಲ್ಲ. ಅವರಲ್ಲಿರುವುದನ್ನೇ ಬಳಸಿಕೊಂಡು ತನ್ನ ಕನಸಿನೆಡೆ ಹೆಜ್ಜೆ ಇಡುವತ್ತ ಮುಂದಾಗುತ್ತಾನೆ ಬಾಲ ಶಿವಾಜಿ.

ಆ ಮಾವಳಿ ಮಕ್ಕಳನ್ನು ಒಂದು ಗೂಡಿಸುತ್ತಾನೆ. ಮರಾಠಿಗರು ಹಾಗೂ ಮೊಘಲರು ಎಂದು ಎರಡು ಪಂಗಡವನ್ನಾಗಿಸಿ ದಿನವೂ ಅವರನ್ನು ಯುದ್ಧದಾಟದಲ್ಲಿ ತೊಡಗಿಸುತ್ತಾನೆ. ದೈನಂದಿನ ಯುದ್ಧ ತಂತ್ರಜ್ಞಾನ ಹಾಗೂ ಕಲಿಕೆ ಆಟದ ಮುಖೇನ ಆಗುತ್ತಿದ್ದಂತೆಯೇ ಕಡೆಯಲ್ಲಿ ಮರಾಠಿಗರ ಗುಂಪು ಮೊಘಲರನ್ನು ಸೋಲಿಸಿ ಕೆಳಕ್ಕೆ ದೂಡಬೇಕೆಂಬ ಆಟದ ನಿಯಮದೊಂದಿಗೆ ಆ ಎಳೆ ಹುಡುಗರ ಮನಸ್ಸಿನಲ್ಲಿ ‘ಮರಾಠಿಗರಾದ ತಾವು ಕಡೆಯಲ್ಲಿ ಮೊಘಲರ ವಿರುದ್ಧ ಗೆದ್ದೇ ಗೆಲ್ಲಬೇಕೆಂಬ’ ನಿಶ್ಚಲವಾದ ನಂಬಿಕೆಯ ಬೀಜವನ್ನು ಬಿತ್ತುತ್ತಾನೆ! ಆ ಮಕ್ಕಳಲ್ಲಿ ಅನೇಕರು ಶಿವಾಜಿಯ ಜೀವನದುದ್ದಕ್ಕೂ ಜೊತೆಗಿದ್ದರು. ಆತನ ನಂಬಿಕಸ್ಥ ಯೋಧರಾಗಿದ್ದರು. ಆತನ ಕನಸನ್ನು ತಮ್ಮದೆಂದೇ ಭಾವಿಸಿ ಜೀವವನ್ನೇ ಧಾರೆ ಎರೆದುಬಿಟ್ಟರು.

ಯೋಚಿಸಿ ನೋಡಿ. ಭವ್ಯ ಕನಸುಗಳು ಎಲ್ಲರಿಗೂ ಮೂಡುತ್ತವೆ. ಆದರೆ, ದಶಕಗಳ ನಂತರದ ಗುರಿಯೊಂದರ ಸಾಧನೆಯನ್ನು ಸೂಕ್ಷ್ಮವಾಗಿ ಚಿತ್ರಿಸಿಕೊಂಡು, ಅದರ ಅನುಷ್ಠಾನದ ಹಾದಿಯಲ್ಲಿ ಈಗಿನಿಂದಲೇ ಸಮಂಜಸವಾದ ಯೋಜನೆಗಳನ್ನು ರೂಪಿಸಿಕೊಳ್ಳುವವರು ಕೆಲವೇ ಕೆಲವು ಮಂದಿ. ಅದರಲ್ಲೂ ಚಿಕ್ಕವಯಸ್ಸಿನಲ್ಲೇ ಈ ಪರಿಯ ದೂರದೃಷ್ಟಿ - ಪ್ರಾಯಶಃ ಶಿವಾಜಿಗೆ ಮಾತ್ರ ಸಾಧ್ಯವಾಯಿತೇನೊ!

ಕಂಪೆನಿಯೊಂದರ ಕಾರ್ಮಿಕರೆಲ್ಲ ಹೇಳಿದ್ದನ್ನು ಯಥೇಚ್ಚ ಮಾಡುವವರು ಮಾತ್ರ. ಆದರೆ, ಅವರುಗಳು ತಮ್ಮ ದಿನನಿತ್ಯದ ಗುರಿಗಳನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾದರೆ ಅವರ ನಾಯಕನಾದವನು ಮುಂದಿನ ಹತ್ತು ವರ್ಷಗಳ ಕನಸು ಕಾಣಬೇಕು. ಆ ಕನಸು ವಾಸ್ತವಕ್ಕೆ ಹತ್ತಿರವಾಗಿರಬೇಕು. ಆ ಕನಸನ್ನು ನನಸನ್ನಾಗಿಸು ಯೋಜನೆಗಳ ಸಂಪೂರ್ಣ ಜ್ಞಾನ ಅವನಿಗಿರಬೇಕು. ಪ್ರಸ್ತುತದಲ್ಲಿ ಜರುಗುತ್ತಿರುವ ಕಾರ್ಯಗಳೆಲ್ಲ ಹಾಗೂ ಪುಟ್ಟಪುಟ್ಟ ಗುರಿಸಾಧನೆಗಳೆಲ್ಲ ಹೇಗೆ ಅಂತಿಮದ ಆ ಹೆಗ್ಗುರಿಯ ಸಾಧನೆಯ ಪಥವೇ ಹೌದೆಂದು ಸಹಪಾಠಿಗಳಿಗೆ ನಂಬಿಕೆ ಮೂಡಿಸುವಷ್ಟು ಸತ್ಯಕ್ಕೆ ಹತ್ತಿರವಾದ ದೂರದೃಷ್ಟಿ ಅವನಲ್ಲಿರಬೇಕು.ಈ ಪರಿಯ ಸಹಜವಾದ ದೂರದೃಷ್ಟಿಯೇ ನಾಯಕರಲ್ಲಿ ಕೆಲವರನ್ನು ಶ್ರೇಷ್ಠರನ್ನಾಗಿಸಿ ಬಿಡುತ್ತದೆ.

ರಾಜ ಮಹಾರಾಜರ ಮಹಾಪೂರದಲ್ಲಿ ಎಲ್ಲೋ ಒಬ್ಬನನ್ನು ಮಾತ್ರ ಶಿವಾಜಿಯನ್ನಾಗಿಸಿ ಬಿಡುತ್ತದೆ!
ಈ ಅಂಕಣದ ತಿರುಳನ್ನು ಈ ಕೆಳಗಿನ ಚೌಪದಿಯಲ್ಲಿ ಕಾಣಬಹುದು...

ರವಿಯು ಕಾಣದ್ದನ್ನು ಕವಿಯು ಕಾಣುವನಂತೆ/ ಕವಿಗೆ ಎಟುಕದ ದೃಷ್ಟಿ ನಾಯಕನಿಗಂತೆ//
ಅವನ ಇಂದಿನ ಬದುಕು ನಾಳೆಯೊಂದರ ಹಿಂದೆ/ ಅವನಿಗದೆ ಮೂಲಧನ!
- ನವ್ಯ ಜೀವಿ

ಈ ಅಂಕಣದ ಕಡೆಯಂಚಿನಲ್ಲಿದ್ದೇವೆ. ನೀವು ಗಮನಿಸಿದಿರಾ? ಆಗ್ರಾದಿಂದ ಬುಟ್ಟಿಯಲ್ಲಿ ಕುಳಿತು ಪರಾರಿಯಾದಾಗ ಶಿವಾಜಿಗೆ ಸುಮಾರು ನಲವತ್ತರ ವಯಸ್ಸು. ಈ ಘಟನೆಗೆ ನನಗೆ ಇಷ್ಟವಾದಾಗ ನನಗಾಗ ಹನ್ನೆರಡು ವರ್ಷ!

ಅಫ್ಜಲ್‌ಖಾನ್‌ನನ್ನು ಕೊಂದ ಶಿವಾಜಿಗೆ ಮೂವತ್ತೆರಡರ ತುಂಬು ಯೌವನ. ಈ ಘಟನೆ ನನ್ನನ್ನು ಕಲಕಿದಾಗ ನಾನಾಗ ಇಪ್ಪತ್ತರ ಹೊಸ್ತಿಲಲ್ಲಿದ್ದೆ! ಇದೀಗ ನನಗೆ ನಲವತ್ತೆಂಟು ವರ್ಷ. ಅದೇಕೋ ಏನೊ? ಹನ್ನೆರಡು ವಯಸ್ಸಿನ ಶಿವಾಜಿಯ ದೂರದೃಷ್ಟಿ ನನಗೆ ಮ್ಯಾನೇಜ್‌ಮೆಂಟ್ ಪಾಠ ಹೇಳಿಕೊಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT