ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವ್ನಾ ದಂಡೆಯ ಪಶುಪತಿನಾಥ

Last Updated 6 ಜನವರಿ 2011, 11:20 IST
ಅಕ್ಷರ ಗಾತ್ರ

ಪಶುಪತಿನಾಥ ಎನ್ನುತ್ತಲೆ ನೇಪಾಳದ ರಾಜಧಾನಿ ಕಾಠ್ಮಂಡುವಿನಲ್ಲಿದೆ ಎಂದು ಪ್ರತಿಕ್ರಿಯಿಸಿ ಬಿಡುತ್ತೇವಲ್ಲವೆ? ಭಾರತದಲ್ಲೂ ಆ ಹೆಸರಿನ ಒಂದು ಮಂದಿರ ಇದೆ. ಮಧ್ಯಪ್ರದೇಶದ ನಕ್ಷೆಯಲ್ಲಿ ನಾಯಿಯ ತಲೆಯಂತಿರುವ ಭಾಗ ವಾಯುವ್ಯದಲ್ಲಿದೆ. ಅದರ ಕುತ್ತಿಗೆಯ ಸ್ವಲ್ಪ ಮೇಲೆ ಇದೆ- ಮಂದಸೋರ್. ಈ ಊರಿನ ಹೊರವಲಯದಲ್ಲಿ, ಶಿವ್ನಾ ನದಿಯ ತಟದಲ್ಲಿದೆ ಪಶುಪತಿನಾಥ ಮಹಾದೇವ ಮಂದಿರ ಸಂಕೀರ್ಣ.

ಇದು ನೇಪಾಳದ ಮಂದಿರದ ನಕಲೆ?
‘ಇಲ್ಲ, ಅಲ್ಲಿಯ ಲಿಂಗದಲ್ಲಿ ನಾಲ್ಕು ಮುಖ ಕೆತ್ತಲಾಗಿದ್ದರೆ, ಇಲ್ಲಿರುವುದು ಅಷ್ಟಮುಖಿ ಪ್ರತಿಮೆ. ಇಂಥದು ವಿಶ್ವದಲ್ಲೇ ಎಲ್ಲೂ ಇಲ್ಲ’ ಎನ್ನುತ್ತಾರೆ ಪಂ. ಮದನಲಾಲ್ ಜೋಶಿ. ನಮಗೆ ಕಾಣುವುದು ನಾಲ್ಕೇ ಮುಖ. ಆದರೆ ‘ಭಿನ್ನ ಭಿನ್ನ ಭಾವ ಪ್ರಕಟಿಸುವ ಎಂಟು ಮುಖಗಳಿವೆ. ಪೃಥ್ವಿ, ಜಲ, ವಾಯು, ತೇಜ, ಆಕಾಶ, ಸೂರ್ಯ, ಚಂದ್ರ ಮತ್ತು ಆತ್ಮ ಎಂದು ಅವುಗಳನ್ನು ವರ್ಣಿಸಬಹುದು’ ಎನ್ನುತ್ತದೆ ಮಾಹಿತಿ ಪುಸ್ತಕ. ಶಿವನಿಗೆ ಹಲವು ನಾಮ: ಶರ್ವ, ಭವ, ರುದ್ರ, ಉಗ್ರ, ಭೀಮ, ಪಶುಪತಿ, ಈಶಾನ ಮತ್ತು ಮಹಾದೇವ. ಎಂಟು ರೂಪಗಳಲ್ಲಿ ಇಡೀ ವಿಶ್ವವನ್ನು ಸಮಾವೇಶ ಮಾಡುವ ಯತ್ನ ಇದಂತೆ.

ಮಂದಸೋರ್‌ನ ಪ್ರಾಚೀನ ಹೆಸರು ದಶಪುರ್. ಕಾಳಿದಾಸ ತನ್ನ ಕೃತಿಗಳಲ್ಲಿ ಅಷ್ಟಮುಖ ಶಿವನನ್ನು ಉಲ್ಲೇಖಿಸಿರುವುದರಿಂದ ಮೂರ್ತಿ ಗುಪ್ತರ ಕಾಲದ್ದಾಗಿರಬೇಕು ಎಂಬ ಪ್ರತಿಪಾದನೆಯೂ ಇದೆ. ಇದು ಸಿಕ್ಕಿದ್ದು 1940ರಲ್ಲಿ. ಪ್ರತಿಷ್ಠಾಪನೆ ನಡೆದದ್ದು 1961ರಲ್ಲಿ. ಕಾರ್ತೀಕ ಪೂರ್ಣಿಮೆಯಂದು ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಮೇಲಾ (ಜಾತ್ರೆ) ಕೂಡ ಇರುತ್ತದೆ. ಈ ಮಂದಿರದ ನಿರ್ವಹಣೆಯನ್ನು ರಾಜ್ಯ ಸರ್ಕಾರ ರಚಿಸಿದ ಸಮಿತಿ ನೋಡಿಕೊಳ್ಳುತ್ತಿದೆ.ಈ ಪರಿಸರದಲ್ಲಿ ನೋಡಬಹುದಾದ ಇನ್ನೂ ಕೆಲವು ಮಂದಿರಗಳೆಂದರೆ ತಾಪೇಶ್ವರ ಮಹಾದೇವ್, ದುರ್ಗಾ, ರಣಜೀತ್ ಮಾರುತಿರಾಜ್ (ಹನುಮಾನ್) ಮತ್ತು ಜಾನಕೀನಾಥ್.

ನೇಪಾಳದ ಪಶುಪತಿನಾಥ ಮಂದಿರದ ಅರ್ಚಕರ ನೇಮಕದ ಬಗೆಗೆ ದೊಡ್ಡ ವಿವಾದ ಉಂಟಾಗಿತ್ತು. ಆದರೆ ಇಲ್ಲಿ ಕಟ್ಟುನಿಟ್ಟು ಕಡಿಮೆ. ಮಧ್ಯಾಹ್ನ 1ರಿಂದ 2 ಗಂಟೆ ಬಂದ್ ಆಗಿರುವುದನ್ನು ಬಿಟ್ಟರೆ ಬೆಳಗ್ಗೆ 5.30ರಿಂದ ರಾತ್ರಿ 10.30ರವರೆಗೆ ಸಂದರ್ಶಿಸಬಹುದು.

ಶಿವ್ನಾ ನದಿ, ಅಲ್ಲಿಂದ ಮೆಟ್ಟಿಲು-ಮಂದಿರಗಳ ನೋಟ ಆಕರ್ಷಕ. ಒಂದು ದೇವಸ್ಥಾನ ನೋಡಲು ಇಷ್ಟು ದೂರ ಬರಬೇಕೆ ಎನ್ನುವವರಿಗೆ ಗಾಂಧಿಸಾಗರ ಡ್ಯಾಂ (ಚಂಬಲ್ ಮಾತೆಯ ಪ್ರತಿಮೆ ಉದ್ಯಾನದಲ್ಲಿದೆ), ಧಮಸಾರ್ ಗ್ರಾಮದಲ್ಲಿರುವ ಧರ್ಮರಾಜೇಶ್ವರ ಮಂದಿರ (ಎಲ್ಲೋರಾದ ಕೈಲಾಸ ದೇವಸ್ಥಾನದ ಜತೆ ಹೋಲಿಸಲಾಗಿದೆ), ಭಾನ್‌ಪುರಾದ ಯಶವಂತರಾವ್ ಹೋಳ್ಕರ್ ಛತ್ರಿ, ಕಲೆಗೆ ಹೆಸರಾದ ಕೆಲವು ತಾಣಗಳು ತೃಪ್ತಿ ನೀಡಬಹುದು. ಮಂದ್‌ಸೋರ್ ಜಿಲ್ಲಾ ಮುಖ್ಯಸ್ಥಳ. ಇಂದೋರ್‌ನಿಂದ 220 ಕಿ.ಮೀ. ಮಧ್ಯೆ ಸಿಗುವ ರತ್ಲಾಂ (119 ಕಿ.ಮೀ.)ಗೆ ಉತ್ತಮ ರೈಲು ಸಂಪರ್ಕ ಇದೆ. ಅಲ್ಲಿಂದ ನೀಮಚ್ ರಸ್ತೆ ಹಿಡಿದರೆ ಜಾವ್ರಾ (34) ನಂತರ ಮಂದಸೋರ್ (ಒಟ್ಟು 84 ಕಿ.ಮೀ.) ರಾಜಾಸ್ತಾನದ ಕಡೆಯಿಂದಲೂ ಇಲ್ಲಿಗೆ ಬರಬಹುದು.

ಇಲ್ಲಿ ತಂಗಲೂ ತಕ್ಕಮಟ್ಟಿನ ವ್ಯವಸ್ಥೆ ಇದೆ. ಪಶುಪತಿನಾಥಕ್ಕೆ ವರ್ಷದ ಯಾವುದೇ ಕಾಲದಲ್ಲಿ ಭೇಟಿ ನೀಡಬಹುದು. ಕಾರ್ತೀಕ-ಮಾರ್ಗಶಿರದಲ್ಲಿ ಪಾಟೋತ್ಸವ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT