ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚ ಮುಕ್ತವಾದೀತೇ ಕಲಬುರ್ಗಿ ಮಠ ಸ್ಮಶಾನ

Last Updated 12 ಜುಲೈ 2012, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಸ್ಥಳೀಯ ಶಾಸಕ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿ ಪಟ್ಟ ಅಲಂಕರಿಸುತ್ತಿದ್ದಂತೆಯೇ ಉತ್ತರ ಕರ್ನಾಟಕದಾದ್ಯಂತ ಸಂಭ್ರಮ ಮುಗಿಲು ಮುಟ್ಟಿದೆ. ಇಲ್ಲಿನ ಮಂಟೂರು ರಸ್ತೆಯಲ್ಲಿರುವ ಕಲಬುರ್ಗಿಮಠ ಸ್ಮಶಾನದ ಸುತ್ತ ತಾತ-ಮುತ್ತಾತನ ಕಾಲದಿಂದ ನೆಲಸಿರುವ ಸುಮಾರು 70ಕ್ಕೂ ಹೆಚ್ಚು ಕುಟುಂಬಗಳಲ್ಲಿ ಮೂಡಿರುವ ಸಂತಸದ ಕಾರಣ ಮಾತ್ರ ಬೇರೆ.

ಈ ಕುಟುಂಬಗಳಿಗೆ ಶೆಟ್ಟರ್ ಮುಖ್ಯಮಂತ್ರಿಯಾದರು ಎನ್ನುವುದಕ್ಕಿಂತ ಈ ಭಾಗದ ಜನರಿಗೆ ಬಯಲು ಶೌಚಾಲಯವಾಗಿರುವ ಈ ಸ್ಮಶಾನ ಈಗಲಾದರೂ ಮುಕ್ತಿ ಕಾಣಬಹುದೇನೋ ಎಂಬ ನಿರೀಕ್ಷೆ ಇದೆ. ಏಕೆಂದರೆ ಈ ಸ್ಮಶಾನದಲ್ಲಿಯೇ ಶೆಟ್ಟರ್ ಅವರ ತಂದೆ ಎಸ್.ಎಸ್.ಶೆಟ್ಟರ್ ಅವರ `ಸಮಾಧಿ~ ಇದೆ. ಹಾಗಾಗಿ ಇಲ್ಲಿಗೆ ಶೌಚಾಲಯ ವ್ಯವಸ್ಥೆ ಆಗಬಹುದು ಎಂಬುದು ಈ ಕುಟುಂಬಗಳ ನಿರೀಕ್ಷೆಯಾಗಿದೆ.

ಹುಬ್ಬಳ್ಳಿ ನಗರದಿಂದ ಕೇವಲ ನಾಲ್ಕು ಕಿ.ಮೀ ದೂರದಲ್ಲಿ ಕಲಬುರ್ಗಿಮಠ ಮತ್ತು ಅದಕ್ಕೆ ಹೊಂದಿಕೊಂಡು ಜಂಗಮ ಮತ್ತು ಶೆಟ್ಟರ್ ಸಮುದಾಯಕ್ಕೆ ಮೀಸಲಾದ ಸ್ಮಶಾನವಿದೆ. ಈ ಸಮುದಾಯದವರ ಶವಸಂಸ್ಕಾರ ಮಾಡಲು ಇಲ್ಲಿಗೇ ಬರಬೇಕು ಎನ್ನುವುದು ಹಿಂದಿನಿಂದಲೂ ನಡೆದುಕೊಂಡ ಬಂದಿರುವ ಪದ್ಧತಿ. ಅದಕ್ಕೆ ಪೂರಕವೆಂಬಂತೆ ಈ ಸ್ಮಶಾನದಲ್ಲಿ ಸರ್ ಸಿದ್ಧಪ್ಪ ಕಂಬಳಿ ಅವರಿಂದ ಹಿಡಿದು ಜಗದೀಶ ಶೆಟ್ಟರ್ ಅವರ ತಂದೆ ಎಸ್.ಎಸ್. ಶೆಟ್ಟರ್ ಅವರ ಸ್ಮಾರಕದವರೆಗೆ ಹಲವು ಗದ್ದಿಗೆಗಳು ಇವೆ. ವಿಚಿತ್ರವೆಂದರೆ ಮಠದ ಅಧೀನದಲ್ಲಿರುವ ಮನೆಗಳಲ್ಲಿ ಬಾಡಿಗೆಗೆ ಇರುವವರಿಗೆ ಈ `ಸ್ಮಶಾನ~ ಬಯಲು ಶೌಚಾಲಯ ಕೂಡ ಆಗಿದೆ.

`ಹನ್ನೆರಡು ವರ್ಷಗಳಿಂದ ಇಲ್ಲಿರುವ ನಮಗೆ ತಲೆಯ ಮೇಲೊಂದು ಮುರುಕಲು ಸೂರು, ಪಾಲಿಕೆಯಿಂದ ಎರಡು ದಿನಕ್ಕೊಮ್ಮೆ ನೀರು ಹೊರತುಪಡಿಸಿದರೆ ಬೇರೆ ಯಾವುದೇ ಸೌಲಭ್ಯ ಇಲ್ಲ. ಅದರಲ್ಲೂ ನಾವೆಲ್ಲ ತಾತನ ಕಾಲದಿಂದಲೂ ಶೌಚಾಲಯಕ್ಕೆ ಅನಿವಾರ್ಯವಾಗಿ ಈ ಸುಡುಗಾಡಿಗೆ ಹೋಗುತ್ತಿದ್ದೇವೆ. ಶೆಟ್ಟರ್ ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದಾಗಲೂ ಇಲ್ಲಿಗೆ ಏನೂ ಮಾಡಿಲ್ಲ. ಮುಖ್ಯಮಂತ್ರಿ ಆದ ಬಳಿಕವಾದರೂ ನಮ್ಮ ಸಮಸ್ಯೆ ಪರಿಹಾರ ಆಗಬಹುದು ಎಂಬ ನಿರೀಕ್ಷೆ ನಮ್ಮದು~ ಎನ್ನುತ್ತಾರೆ ಮಂಜುಳಾ ತಳವಾರ.

`ಈ ಮಠದ ರೇವಣಸಿದ್ಧಸ್ವಾಮಿ, ಗುಲ್ಬರ್ಗದಲ್ಲಿರುವ ಗದ್ದಗಿ ಮಠದಲ್ಲಿರುತ್ತಾರೆ. ಆರು ತಿಂಗಳಿಗೊಮ್ಮೆ ಬಾಡಿಗೆ ಪಡೆಯಲು ಇಲ್ಲಿಗೆ ಬರುತ್ತಾರೆ. ಈ ಮನೆಗಳಿಗೆ  ಶೌಚಾಲಯ ಇಲ್ಲ ಎನ್ನುವುದು ಸ್ವಾಮೀಜಿಗಳಿಗೂ ಗೊತ್ತು. ಈ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ, ಶೌಚಕ್ಕೆ ಸಮಾಧಿ ಸ್ಥಳಕ್ಕೇ ಹೋಗಬೇಕು. ಅದೂ ಹಗಲು ವೇಳೆಯ್ಲ್ಲಲಿ. ಮರ, ಸಮಾಧಿಗಳ ಮರೆಯಲ್ಲಿ ಕುಳಿತು ನಿತ್ಯಕರ್ಮ ಮುಗಿಸಬೇಕು. ರಾತ್ರಿ ಹೋಗಲು ಭಯವಾಗುತ್ತಿದೆ. ನಮಗಿದು ಅನಿವಾರ್ಯ. ಇದೀಗ ನಮ್ಮವರೇ ಮುಖ್ಯಮಂತ್ರಿ ಆಗಿರುವುದರಿಂದ ಶೌಚಾಲಯ ಸೌಲಭ್ಯ ಕಲ್ಪಿಸಿಕೊಡಬಹುದು ಎಂಬ ಆಸೆ ನಮ್ಮದು~ ಎಂದರು ಯಶೋದಾ ಶಿವಮಠ.

`ಮಠದ ಬಾಡಿಗೆ ಮನೆಗಳಲ್ಲಿ ಮುಸ್ಲಿಂ, ಕ್ರೈಸ್ತ ಕುಟುಂಬಗಳು ಇವೆ. ಸುಣಗಾರ ಸಮುದಾಯದವರ ಮನೆಗಳು ಹೆಚ್ಚು ಇವೆ. ನಾವು (ಗಂಡಸರು) ಸಮಾಧಿ ಹೊರಗಿನ ವಿಶಾಲ ಜಾಗದಲ್ಲಿ ಶೌಚಕ್ಕೆ ಹೋಗುತ್ತೇವೆ. ಮಹಿಳೆಯರು ಸ್ಮಶಾನದ ಒಳಗೆ ಹೋಗುತ್ತಾರೆ. ಇಲ್ಲಿ ಈ ವ್ಯವಸ್ಥೆ ಹಿಂದಿನಿಂದಲೂ ಇದೆ. ಶೆಟ್ಟರ್ ಮುಖ್ಯಮಂತ್ರಿಯಾದ ಬಳಿಕವಾದರೂ ಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆ ಇದೆ~ ಎನ್ನುತ್ತಾರೆ ರಾಜಶೇಖರ ಶೆಟ್ಟರ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT