ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯಕ್ಕೆ ಬೀಗ, `ಪ್ರಕೃತಿ ಕರೆ'ಗೆ ಬಯಲು

Last Updated 29 ಜುಲೈ 2013, 10:16 IST
ಅಕ್ಷರ ಗಾತ್ರ

ಮಂಡ್ಯ: ಇಲ್ಲಿನ ಸರ್ ಎಂ. ವಿಶ್ವೇಶ್ವರಯ್ಯ  ಕ್ರೀಡಾಂಗಣ ಆವರಣದಲ್ಲಿ ಕ್ರೀಡಾಪಟುಗಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಶೌಚಾಲಯಕ್ಕೆ ಬೀಗ ಜಡಿಯಲಾಗಿದೆ. ಹೀಗಾಗಿ, `ಪ್ರಕೃತಿ ಕರೆ'ಗೆ ಬಯಲನ್ನೇ ಆಶ್ರಯಿಸಬೇಕಿದೆ.

ಈ ಶೌಚಾಲಯದ ನಿರ್ವಹಣೆ ಹೊಣೆ ಹೊತ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಏಕೋ, ಏನೋ ಇತ್ತ ಗಮನ ಹರಿಸಿದಂತೆ ಕಾಣಿಸುತ್ತಿಲ್ಲ. ಉತ್ತಮವಾದ ಕಟ್ಟಡವಿದ್ದರೂ, ಬಳಕೆಗೆ ಮಾತ್ರ ದೊರಕುತ್ತಿಲ್ಲ.

ಬಳಕೆಗೆ ದೊರೆಯದೇ ಇರುವುದರಿಂದ ಶೌಚಾಲಯದ ಕಟ್ಟಡದ ಸುತ್ತಲಿನ ಗೋಡೆಗಳೇ `ನೈಸರ್ಗಿಕ ಕ್ರಿಯೆ'ಗೆ ಆಧಾರವಾಗಿದೆ. ಸುತ್ತಲಿನ ಆವರಣ ಅನೈರ್ಮಲ್ಯದಿಂದ ಕೂಡಿದೆ.

ನಗರದ ಹೃದಯ ಭಾಗದಲ್ಲಿ ಕ್ರೀಡಾಂಗಣ ಇರುವುದರಿಂದ ಬಹುತೇಕ ಕ್ರೀಡಾಪಟುಗಳು ಅಭ್ಯಾಸಕ್ಕಾಗಿ ಇಲ್ಲಿಗೆ ಬರುತ್ತಾರೆ. ಬ್ಯಾಸ್ಕೆಟ್‌ಬಾಲ್, ಬ್ಯಾಡ್ಮಿಂಟನ್, , ಕ್ರಿಕೆಟ್, ಓಟ ಸೇರಿದಂತೆ ಅನೇಕ ಕ್ರೀಡೆಗಳ ಅಭ್ಯಾಸವು ಇಲ್ಲಿ ನಡೆಯುತ್ತದೆ. ನೂರಾರು ಯುವಜನರು, ಹಿರಿಯರೂ ಬರುತ್ತಾರೆ.

ಆದರೆ, ಇವರಿಗೆ ಶೌಚಾಲಯದೇ ಚಿಂತೆ. ಯುವತಿಯರು ಸನಿಹದಲ್ಲೆ ಇರುವ ಕ್ರೀಡಾ ಹಾಸ್ಟೆಲ್ ಆಶ್ರಯಿಸಿದರೇ, ಪುರುಷರಿಗೆ ಬಯಲೇ ಆಧಾರ.

ಕೆಲವರು ಮಾತ್ರ ಇಲಾಖೆ ಕಟ್ಟಡದಲ್ಲಿನ ಶೌಚಾಲಯ ಬಳಸಿದರೇ, ಮತ್ತೆ ಕೆಲವರು ಸಾರ್ವಜನಿಕ ಗ್ರಂಥಾಲಯ ಆವರಣದಲ್ಲಿನ ಸುಲಭ್ ಶೌಚಾಲಯದ ಮೊರೆ ಹೋಗುತ್ತಾರೆ.

`ಪ್ರಮುಖವಾದ ಪಂದ್ಯಾವಳಿ ನಡೆದಾಗ ಮಾತ್ರವೇ ಈ ಶೌಚಾಲಯದ ಬಾಗಿಲುಗಳು ತೆರೆಯುತ್ತದೆ. ಉಳಿದಂತೆ ಬಾಗಿಲ ಹಾಕಿರುತ್ತದೆ. ಹೀಗಾಗಿ `ಪ್ರಕೃತಿ ಕರೆ'ಗೆ  ಬಯಲನ್ನೇ ಆಶ್ರಯಿಸಬೇಕಿದೆ' ಎನ್ನುತ್ತಾರೆ ಬಿ.  ಸುರೇಶ್.

`ಇನ್ನು ಸ್ವಲ್ಪ ದಿನದಲ್ಲೇ ತಾಲ್ಲೂಕು ಮಟ್ಟದ ಪೈಕಾ ಗ್ರಾಮೀಣ ಮತ್ತು ದಸರಾ ಕ್ರೀಡಾಕೂಟಗಳು ನಡೆಯಲಿದೆ. ವಿವಿಧೆಡೆಯಿಂದ ಸಾಕಷ್ಟು ಕ್ರೀಡಾಪಟುಗಳೂ ಬರುತ್ತಾರೆ. ಶೌಚಾಲಯ ದುಸ್ಥಿತಿಯಲ್ಲಿದ್ದರೆ, ಆದಷ್ಟು ಬೇಗನೆ ಸರಿಪಡಿಸಲಿ. ಕ್ರೀಡಾಪಟುಗಳ ಬಳಕೆಗೆ ಸಿಗುವಂತೆ ಮಾಡಲಿ' ಎನ್ನುತ್ತಾರೆ ಅವರು.

ಇಲಾಖೆಯ ಸಹಾಯಕ ನಿರ್ದೇಶಕಿ  ಡಾ. ಎಚ್.ಪಿ. ಮಂಜುಳಾ ಮಾತನಾಡಿ, `ಶೌಚಾಲಯದ ಒಳಚರಂಡಿ ವ್ಯವಸ್ಥೆ ಸಮಪರ್ಕವಾಗಿ ಇಲ್ಲದೇ ಇರುವುದರಿಂದ ಗಲೀಜು ಕಟ್ಟಿಕೊಳ್ಳುತ್ತದೆ. ಹೀಗಾಗಿ, ತಾತ್ಕಾಲಿಕವಾಗಿ ಬೀಗ ಹಾಕಲಾಗಿದೆ' ಎನ್ನುತ್ತಾರೆ.

ಒಳಚರಂಡಿ ದುರಸ್ತಿಗೆ ಕ್ರಮಕೈಗೊಳ್ಳಲಾಗಿದೆ. ನಿರ್ವಹಣೆಗೆ ಸಿಬ್ಬಂದಿ ನೀಡುವಂತೆಯೂ ನಗರಸಭೆಗೆ ಮನವಿ ಮಾಡಲಾಗಿದೆ ಎಂದು ಪ್ರತಿಕ್ರಿಯಿಸಿದರು.

ವಿವಿಧ ಕ್ರೀಡೆಗಳಿಗೆ ಉತ್ತಮವಾದ ಅಂಕಣಗಳ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಇರುವ ಕ್ರೀಡಾಂಗಣದಲ್ಲಿ ಶೌಚಾಲಯದೇ ಕೊರತೆ. ಅದನ್ನು ನೀಗಿಸಿದರೇ, ಮತ್ತಷ್ಟು ಕ್ರೀಡಾಪಟುಗಳು ಇತ್ತ ಬರಬಹುದು. ಕ್ರೀಡಾಂಗಣ ಪರಿಸರ ಇನ್ನಷ್ಟು ಉತ್ತಮವಾಗಲಿದೆ. ಅಧಿಕಾರಿಗಳು ಮನಸ್ಸು ಮಾಡಬೇಕು ಎನ್ನುತ್ತಾರೆ ಕ್ರೀಡಾಪಟುಗಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT