ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದ ಆರ್ಯರತ್ನೆ ಅವರಿಗೆ ಬಸವಶ್ರೀ ಪ್ರಶಸ್ತಿ

Last Updated 11 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ:  ಇಲ್ಲಿನ ಮುರುಘಾ ಮಠದ ವತಿಯಿಂದ ಪ್ರತಿ ವರ್ಷ ನೀಡುವ ಪ್ರತಿಷ್ಠಿತ `ಬಸವಶ್ರೀ~ ಪ್ರಶಸ್ತಿಯನ್ನು 2010ನೇ ಸಾಲಿಗೆ ಶ್ರೀಲಂಕಾದ ಖ್ಯಾತ ಗಾಂಧಿವಾದಿ, ಸರ್ವೋದಯ ಶ್ರಮದಾನ ಚಳವಳಿ ನೇತಾರ ಡಾ.ಎ.ಟಿ. ಆರ್ಯರತ್ನೆ ಅವರಿಗೆ ಪ್ರದಾನ ಮಾಡಲು ನಿರ್ಧರಿಸಲಾಗಿದೆ.

ಪ್ರಶಸ್ತಿಯು ಮೂರು ಲಕ್ಷ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಗುರುವಾರ ಪತ್ರಿಕಾಗೋಷ್ಠಿಯಲ್ಲಿ  ಪ್ರಕಟಿಸಿದರು.

1931ರ ನ. 5ರಂದು ಶ್ರೀಲಂಕಾದ ಗಲ್ಲೆ ಜಿಲ್ಲೆಯ ಉನವತೊನೆಯಲ್ಲಿ ಜನಿಸಿರುವ ಡಾ.ಎ.ಟಿ. ಆರ್ಯರತ್ನೆ ಅವರು, ಶ್ರೀಲಂಕಾ ಮತ್ತು ಫಿಲಿಪ್ಪಿನ್ಸ್ ವಿಶ್ವವಿದ್ಯಾನಿಲಯಗಳಿಂದ ಪದವಿ ಪಡೆದಿದ್ದಾರೆ. ಹತ್ತಾರು ಕೃತಿಗಳು ರಚಿಸಿರುವುದು ಸೇರಿದಂತೆ ಖ್ಯಾತ ನೋಬೆಲ್ ಅರ್ಥಶಾಸ್ತ್ರಜ್ಞ ಇ.ಎಫ್. ಶೋಮೇಕರ್ ಮೊದಲಾದ ತಜ್ಞರ ಕೃತಿಗಳನ್ನು ಭಾಷಾಂತರ ಮಾಡಿದ್ದಾರೆ ಎಂದು ವಿವರಿಸಿದರು.

1958ರಲ್ಲಿ ಕೊಲಂಬೋದ ನಲಂದ ಕಾಲೇಜಿನಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ಅವರು, ಶ್ರೀಲಂಕಾದ ಹಳ್ಳಿಗಳಲ್ಲಿ ಸ್ವಾವಲಂಬನೆಯ ತಳಹದಿಯ ಮೇಲೆ ಗ್ರಾಮೀಣ ಬಡಜನರ ಬದುಕನ್ನು ಕಟ್ಟಲು ಆರಂಭಿಸಿದರು.
 
ಬುದ್ಧನ ತತ್ವಗಳನ್ನಾಧರಿಸಿ ಅಹಿಂಸಾತ್ಮಕ ಮಾರ್ಗಗಳ ಮೂಲಕ ಸರ್ವರ ಅಭಿವೃದ್ಧಿಗೆ ಕಾರಣವಾಗುವ ಮಾದರಿಗಳನ್ನು ರೂಪಿಸಿ ಕಾರ್ಯಗತಗೊಳಿಸಿದರು. ಈ ಕ್ರಮಗಳು ಸಂಘಟಿತ ರೂಪ ಪಡೆದು ಸರ್ವೋದಯ ಶ್ರಮದಾನ ಚಳವಳಿಯಾಗಿ ಜನ ಮನ್ನಣೆ ಪಡೆಯಿತು.

ನಂತರ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿ ಅವರ ಪತ್ನಿ ನೀತಾ ದಮ್ಮಾಚಾರಿ ಆರ್ಯರತ್ನೆ ಅವರೊಂದಿಗೆ ಚಳವಳಿಯ ಪೂರ್ಣಾವಧಿ ನೇತಾರರಾದರು. ಮೂರು ದಶಕಗಳ ಜನಾಂಗೀಯ ಸಂಘರ್ಷದ ರಕ್ತಸಿಕ್ತ ಘಟನೆಗಳ ಮಧ್ಯೆಯೂ 25 ಜಿಲ್ಲೆಗಳಲ್ಲಿ ಸುಮಾರು 15 ಸಾವಿರ ಹಳ್ಳಿಗಳಲ್ಲಿ ಲಕ್ಷಾಂತರ ಬಡಜನರಿಗೆ ಸ್ವತಂತ್ರ ಬದುಕು ಕಟ್ಟಿಕೊಳ್ಳಲು ನೆರವಾದ ಅನನ್ಯ ಸೇವೆ ಅವರದಾಗಿದೆ ಎಂದು ಸ್ವಾಮೀಜಿ ವಿವರಿಸಿದರು.

ಆ. 15ರಂದು ನಗರದ ಬಸವೇಶ್ವರ ವೈದ್ಯಕೀಯ ಕಾಲೇಜು ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ ಆರ್ಯರತ್ನೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT