ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೇಯಾಂಕಿತರಿಗೆ ಸುಲಭ ಗೆಲುವು

ಟೆನಿಸ್; ಕ್ವಾರ್ಟರ್ ಫೈನಲ್‌ಗೆ ಶ್ರೀರಾಮ್, ಸನಮ್, ಜೀವನ್
Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ದಾವಣಗೆರೆ: ಭಾರತದ ಶ್ರೇಯಾಂಕಿತ ಆಟಗಾರರಾದ  ಶ್ರೀರಾಮ್ ಬಾಲಾಜಿ, ಸನಮ್ ಸಿಂಗ್, ಜೀವನ್ ನೆಡುಂಚೆಳಿಯನ್ ಹಾಗೂ ಮೋಹಿತ್ ಮಯೂರ್ ಜಯಪ್ರಕಾಶ್ ಇಲ್ಲಿ ನಡೆಯುತ್ತಿರುವ ದಾವಣಗೆರೆ ಓಪನ್ ಐಟಿಎಫ್ ಪುರುಷರ ಟೆನಿಸ್ ಟೂರ್ನಿ ಸಿಂಗಲ್ಸ್‌ನ  ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಹಾಲೆಂಡ್‌ನ ಕಾಲಿನ್ ವಾನ್ ಬೀಮ್ ಎದುರು ನೀರಜ್ ಇಳಂಗೋವನ್, ಜರ್ಮನಿಯ ಟಾರ್ಸ್ಟನ್ ವೀಟೋಸ್ಕಾ ಎದುರು ಅಶ್ವಿನ್ ವಿಜಯರಾಘವನ್ ತೀವ್ರ ಪೈಪೋಟಿ ನಡೆಸಿಯೂ ಶರಣಾಗಬೇಕಾಯಿತು. ಮೊದಲ ಸೆಟ್‌ನಲ್ಲಿ 3-2ರಷ್ಟು ಮುಂದಿದ್ದ ಇಳಂಗೋವನ್ ಆಟದ ಮಧ್ಯೆ ಒಮ್ಮೆ ಮುಗ್ಗರಿಸಿದರು.  ಕಾಲಿನ್ ಅವರು ಇಳಂಗೋವನ್‌ನತ್ತ ರಭಸದ ಸರ್ವ್ ಮಾಡಿದರು. ಇದರಿಂದ ಕೆಲವು ವೇಳೆ ಅಂಗಣದಾಚೆ ಸರಿದ ಚೆಂಡು ಕಾಲಿನ್ ಪಾಲಿಗೆ ಮುಳುವಾಗುವ ಲಕ್ಷಣ ಕಂಡುಬಂದಿತು. ಮತ್ತೆ ತಾಳ್ಮೆಯಿಂದ ಆಟವಾಡಿದ ಕಾಲಿನ್, ಇಳಂಗೋವನ್ ಅವರನ್ನು 7-5, 6-3ರಿಂದ ಮಣಿಸಿದರು.

ಜರ್ಮನಿಯ ಟಾರ್ಸ್ಟನ್ ವಿಟೋಸ್ಕಾ ಮತ್ತು ಅಶ್ವಿನ್ ವಿಜಯ ರಾಘವನ್ ನಡುವಿನ ಪಂದ್ಯದಲ್ಲಿಯೂ ಇದೇ ದೃಶ್ಯದ ಪುನರಾವರ್ತನೆ. ಮೊದಲ ಸೆಟ್‌ನ ಆರಂಭದಲ್ಲಿ ಯಾವುದೇ ಅಂಕಗಳಿಸದೇ ಇಬ್ಬರೂ ವ್ಯರ್ಥ ಹೋರಾಟ ನಡೆಸಿದರು. ಕೊನೆಗೆ 7-5, 6-3ರಲ್ಲಿ ಗೆಲುವು ಟಾರ್ಸ್ಟನ್ ಪಾಲಾಯಿತು.

ಮೋಹಿತ್ ಮಯೂರ್ ಜಯಪ್ರಕಾಶ್ - ಖಾಜಾ ವಿನಾಯಕ್ ಶರ್ಮಾ ನಡುವಣ ಪಂದ್ಯದವು ಮಧ್ಯಾಹ್ನ ವೇಳೆಯ ಬಿಸಿಲು ನೆರಳಿನ ಚೆಲ್ಲಾಟದ ನಡುವೆ ತೀವ್ರ ಸೆಣಸಾಟದಿಂದ ಕೂಡಿತ್ತು. ಎರಡನೇ ಸೆಟ್‌ನ ಮಧ್ಯೆ ಮೋಹಿತ್ ಅನೇಕ ಬಾರಿ ವಿಚಲಿತರಾದರು. ಅವರ ಕೋಪ ಪ್ರೇಕ್ಷಕರ ಮೇಲೆ, ಅತ್ತಿತ್ತ ಓಡಾಡುತ್ತಿದ್ದವರ ಮೇಲೆ ಹರಿಯಿತು. ಅದರ ಪರಿಣಾಮ ಪ್ರತಿ ಸರ್ವ್ ನೆಟ್‌ಗೆ ಬಡಿದದ್ದು, ಅಂಕಣದಿಂದ ಹೊರಹೋದದ್ದೇ ಹೆಚ್ಚು. ಇಷ್ಟಾದರೂ ಮೋಹಿತ್‌ನ ಪ್ರಬಲ ಸರ್ವ್‌ಗಳನ್ನು ಎದುರಿಸಲು ವಿಫಲರಾದ ವಿನಾಯಕ್ 6-2, 7-6 ರಲ್ಲಿ ಶರಣಾದರು.

ಶ್ರೀರಾಮ್ ಬಾಲಾಜಿ  ಮತ್ತು ವಿಘ್ನೇಶ್ ಪೆರನಮಲ್ಲೂರು ನಡುವಿನ ಪಂದ್ಯವೂ ಕುತೂಹಲ ಉಳಿಸಿತು. 6-4, 6-1ರಲ್ಲಿ ಜಯ ಶ್ರೀರಾಮ್‌ಗೆ ಒಲಿಯಿತು.ಜೀವನ್ ನೆಡುಂಚೆಳಿಯನ್ ಅವರು ರಾಮ್‌ಕುಮಾರ್ ರಾಮನಾಥನ್ ವಿರುದ್ಧ 6-3, 6-1ರಲ್ಲಿ ಗೆದ್ದರು. ರಂಜಿತ್ ವಿರಾಲಿ ಮುರುಗೇಶನ್ ಅವರು ವಿವೇಕ್ ಶೊಕೀನ್ ವಿರುದ್ಧ 6-3, 4-6, 6-2ರಲ್ಲಿ ಜಯಗಳಿಸಿದರು. ಚಂದ್ರಿಲ್ ಸೂದ್ ವಿರುದ್ಧ ಶ್ರೇಯಾಂಕಿತ ಆಟಗಾರ ಸನಮ್ ಸಿಂಗ್ 6-3, 6-1ರಲ್ಲಿ ಗೆಲುವು ಪಡೆದರು.  ಹಾಲೆಂಡ್‌ನ ಜೆರಿಯನ್ ಬೆನಾರ್ಡ್ ಅವರು ಅಮೆರಿಕದ ಮೈಕೆಲ್ ಶಾಬಾಸ್ ವಿರುದ್ಧ 6-4, 5-7, 7-5ರಲ್ಲಿ ಜಯ ಸಾಧಿಸಿದರು.

ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಎನ್. ವಿಜಯಸುಂದರ್ ಪ್ರಶಾಂತ್, ಅರುಣ್ ಪ್ರಕಾಶ್ ರಾಜಗೋಪಾಲನ್ ಜೋಡಿಯು ನೀರಜ್ ಇಳಂಗೋವನ್, ರಷ್ಯಾದ ಸೆರ್ಗೈ ಕ್ರತಿಯೋಕ್ ಜೋಡಿಯನ್ನು 6-4, 6-0ಯಿಂದ ಸೋಲಿಸಿತು. ಇಳಂಗೋವನ್ ಸಿಂಗಲ್ಸ್‌ನ ಎರಡನೇ ಸುತ್ತು, ಕ್ರತಿಯೋಕ್ ಅವರು ಸಿಂಗಲ್ಸ್‌ನ ಮೊದಲನೇ ಸುತ್ತಿನಲ್ಲಿ ಸೋಲು ಕಂಡಿದ್ದಾರೆ.ಎನ್. ಶ್ರೀರಾಮ್ ಬಾಲಾಜಿ- ಜೀವನ್ ನೆಡುಂಚೆಳಿಯನ್ ಜೋಡಿಯು ಅಮೆರಿಕದ ಅಮೃತ್ ನರಸಿಂಹನ್, ಮೈಕೆಲ್ ಶಾಬಾಸ್ ಜೋಡಿಯನ್ನು 7-5, 6-3ರಲ್ಲಿ ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT