ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷಷ್ಠಿ: ಸುಬ್ರಹ್ಮಣ್ಯಸ್ವಾಮಿಗೆ ವಿಶೇಷ ಪೂಜೆ

Last Updated 19 ಡಿಸೆಂಬರ್ 2012, 7:05 IST
ಅಕ್ಷರ ಗಾತ್ರ

ರಾಮನಾಥಪುರ: ಪುರಾಣ ಪ್ರಸಿದ್ಧ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಮಹಾರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ರಥೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರು.

ಚಂಪಾ ಷಷ್ಠಿ ಪ್ರಯುಕ್ತ ನಡೆದ ರಥೋತ್ಸವದಲ್ಲಿ ಎಲ್ಲಿ ನೋಡಿದರೂ ಜನಸಾಗರವೇ ತುಂಬಿತ್ತು. ನಸುಕಿನಿಂದಲೇ ಹರಿದು ಬರುತ್ತಿದ್ದ ಭಕ್ತರ ದಂಡು ಕಾವೇರಿ ನದಿಯಲ್ಲಿ ಪುಣ್ಯಸ್ನಾನ ಮಾಡಿದರು. ಸಂಜೆವರೆಗೂ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಭಕ್ತಿಯ ಉನ್ಮಾದದಲ್ಲಿ ಮಿಂದೆದ್ದರು.

ದೇವಸ್ಥಾನದಲ್ಲಿ ಅರ್ಚಕರು ಬೆಳಿಗ್ಗೆಯಿಂದಲೇ ಹಲವು ಪೂಜಾ ಕೈಂಕರ್ಯ ನೆರವೇರಿಸಿದರು. ಹೂವುಗಳಿಂದ ಅಲಂಕರಿಸಿದ್ದ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯದ ಮೆರವಣಿಗೆಯ ಮೂಲಕ ಮಧ್ಯಾಹ್ನ ಅರ್ಚಕರು ಹೊರ ತಂದರು. ದೇಗುಲದ ಎದುರು ನಿಂತಿದ್ದ 35 ಅಡಿ ಎತ್ತರದ ಅಲಂಕಾರಿಕ ತೇರಿನ ಮೇಲೆ ಅಭಿಜಿನ್ ಮುಹೂರ್ತದಲ್ಲಿ ರಥಾರೋಹಣ ಮಾಡಿದ ನಂತರ ಉತ್ಸವ ಮೂರ್ತಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.

ಮಧ್ಯಾಹ್ನ 12 ಗಂಟೆಗೆ ಆಕಾಶದಲ್ಲಿ ಕಾಣಿಸಿಕೊಂಡ ಗರುಡ ಪಕ್ಷಿ ಶುಭ ಸೂಚಕದ ಸಂಕೇತ ಎಂಬಂತೆ ಮೂರು ಸುತ್ತು ಪ್ರದಕ್ಷಿಣೆ ಹಾಕಿತು. ಗರುಡ ಪಕ್ಷಿ ದರ್ಶನವಾದ ತಕ್ಷಣವೇ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಬಳಿಕ ಮಹಾ ರಥೋತ್ಸವಕ್ಕೆ ಚಾಲನೆ ದೊರೆತು, ಭಕ್ತ ಸಮೂಹ ಉತ್ಸವ ಮೂರ್ತಿಯನ್ನು ಹೊತ್ತ ದೊಡ್ಡ ರಥವನ್ನು ಎಳೆಯಲು ಪ್ರಾರಂಭಿಸಿತು. ವಿಪ್ರರು, ಸುಮಂಗಲಿಯರು ವೇದ- ಮಂತ್ರಗಳನ್ನು ಪಠಿಸಿ ರಥ ಹಿಂಬಾಲಿಸಿದರು. ರಥ ಬೀದಿಯಲ್ಲಿ ಸೇತುವೆ ತನಕ ಚಲಿಸಿದ ತೇರು ಪುನಃ ಅದೇ ಮಾರ್ಗವಾಗಿ ಸಾಗಿ ಸ್ವಸ್ಥಾನಕ್ಕೆ ಬಂದು ನಿಂತಿತು. ರಥ ಮುಂದೆ ಸಾಗುವ ವೇಳೆಗೆ ಪೂಜಾ ಸಾಮಗ್ರಿಗಳೊಂದಿಗೆ ಆಗಮಿಸಿದ್ದ ಭಕ್ತರು ಈಡುಗಾಯಿ ಒಡೆದು ತೇರಿನತ್ತ ಹಣ್ಣು- ಜವನ ಎಸೆದು ಧನ್ಯತೆ ಮೆರೆದರು.

ದೇವಳದ ಪಾರುಪತ್ತೇದಾರ್ ಟಿ. ಸೀತಾರಾಮ್ ಮುಖಂಡತ್ವದಲ್ಲಿ ಧಾರ್ಮಿಕ ವಿಧಿ- ವಿಧಾನಗಳು ಸಾಂಗವಾಗಿ ನಡೆದವು. ರಾತ್ರಿ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿಗೆ ಶಾಂತೋತ್ಸವ ನಡೆಸಲಾಯಿತು.

ಭಕ್ತರ ದಂಡು: ನಸುಕಿನ 3 ಗಂಟೆಗೆ ಕಾವೇರಿ ನದಿ ಬಳಿ ಸ್ನಾನಕ್ಕಾಗಿ ಭಕ್ತರ ದಂಡು ನೆರೆದಿತ್ತು. ಎಲ್ಲಿ ನೋಡಿದರೂ ಭಕ್ತರೇ ಗಿಜಿಗುಡುತ್ತಿದ್ದರು. ಆಕಾಶದಲ್ಲಿ ಸೂರ್ಯ ಮರೆಯಾಗುವವರೆಗೂ ಸಾವಿರಾರು ಭಕ್ತರು ನದಿಯಲ್ಲಿ ಪವಿತ್ರ ಸ್ನಾನ ಮುಗಿಸಿ ನಂತರ ದೇವಸ್ಥಾನದಲ್ಲಿ ನಡೆಯುವ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.

ಹರಕೆ ಮುಡಿ: ಹರಕೆ ಹೊತ್ತ ಭಕ್ತರು ಕೇಶ ಮುಂಡನ ಮಾಡಿಸಿಕೊಂಡು ನದಿಯಲ್ಲಿ ಪವಿತ್ರ ಸ್ನಾನ ಮಾಡಿ ದೇವಸ್ಥಾನದಲ್ಲಿ ಹಣ್ಣು- ತುಪ್ಪ ನೈವೇದ್ಯ ಅರ್ಪಿಸಿ ಹರಕೆ ತೀರಿಸಿದರು. ನಾಗದೋಷ ಪರಿಹಾರಕ್ಕಾಗಿ ನಾಗರ ಹೆಡೆ ಸಮರ್ಪಿಸಿದರು. ಹಲವರು ಉರುಳು ಸೇವೆ ಮಾಡಿ ತಮ್ಮ ಇಷ್ಟಾರ್ಥ ಈಡೇರಿಕೆಗೆ ಪ್ರಾರ್ಥಿಸಿ ದೇವರಲ್ಲಿ ಮೊರೆಯಿಟ್ಟರು.

ಶ್ರೀರಾಮೇಶ್ವರ, ಅಗಸ್ತ್ಯೇಶ್ವರ, ಆಂಜನೇಯಸ್ವಾಮಿ, ಪಟ್ಟಾಭಿರಾಮ ಮುಂತಾದ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡಿದ್ದರು.

ಹೋಮ- ಹವನ; ಭಕ್ತರ ದಂಡು
ಅರಸೀಕೆರೆ: ಪಟ್ಟಣದ ಹೊರ ಭಾಗದಲ್ಲಿರುವ ಆನೆ ಬೆಟ್ಟದ ಮೇಲಿರುವ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಚಂಪಾ ಷಷ್ಠಿ ಪ್ರಯುಕ್ತ ಸ್ವಾಮಿಗೆ ವಿಶೇಷ ಪೂಜೆ, ಹೋಮ- ಹವನ ಕಾರ್ಯಕ್ರಮಗಳು ಮಂಗಳವಾರ ನಡೆದವು.

ಕುಕ್ಕೆ ಮತ್ತು ಘಾಟಿ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ಚಂಪಾ ಷಷ್ಠಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುವಂತೆ ಇಲ್ಲಿನ ಆನೆ ಬೆಟ್ಟದ ಸುಬ್ರಹ್ಮಣ್ಯ ದೇವಾಲಯದಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಪಟ್ಟಣವೂ ಸೇರಿದಂತೆ ಅಕ್ಕ ಪಕ್ಕದ ಗ್ರಾಮಗಳಿಂದ ಭಕ್ತಾದಿಗಳು ಆಗಮಿಸಿ ಸ್ವಾಮಿಯ ದರ್ಶನ ಪಡೆದರೆ, ಮಹಿಳೆಯರು ಬೆಟ್ಟದ ಮೇಲಿರುವ ಹುತ್ತ ಹಾಗೂ ನಾಗರ ವಿಗ್ರಹಗಳಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು. ದೇವಾಲಯದ ಶಂಕರಸ್ವಾಮಿ ಸಾನಿಧ್ಯದಲ್ಲಿ ನಡೆದ ಮಾಡಾಳು ಶಿವಬಸವ ಕುಮಾರಾಶ್ರಮದ ತೋಂಟದಾರ್ಯ ಸ್ವಾಮೀಜಿ ಪಾಲ್ಗೊಂಡಿದ್ದರು.

ನಾಗರ ಕಲ್ಲುಗಳಿಗೆ ಪೂಜೆ
ಹೊಳೆನರಸೀಪುರ: ಷಷ್ಠಿ ಹಬ್ಬದ ದಿನವಾದ ಮಂಗಳವಾರ ಪಟ್ಟಣದಲ್ಲಿ ಸಾರ್ವಜನಿಕರು ಇಲ್ಲಿನ ಲಕ್ಷೀ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿರುವ ನಾಗಪ್ಪನ ಗುಡಿಗೆ ತೆರಳಿ ಪೂಜೆ ಸಲ್ಲಿಸಿ ದೇವಾಲಯದ ಆವರಣದಲ್ಲಿರುವ ನಾಗರ ಕಲ್ಲುಗಳಿಗೆ ತನಿ ಎರೆದರು. ಕೆಲವರು ಹುತ್ತಗಳಿಗೆ  ತನಿ ಎರೆದು ಅಲ್ಲಿಯೇ ನೆಂಟರಿಷ್ಟರೊಂದಿಗೆ ಕುಳಿತು ಊಟ ಮಾಡಿ ಷಷ್ಠಿಹಬ್ಬ ಆಚರಿಸಿದರು. ತರಕಾರಿಗಳನ್ನು ಅಕ್ಕ ಪಕ್ಕದವರಿಗೆ ಹಂಚುವ ಸಂಪ್ರದಾಯ ಇದ್ದು, ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಮುಂಜಾನೆ ತರಕಾರಿ ವ್ಯಾಪಾರ ಜೋರಾಗಿತ್ತು. 

ಭಕ್ತರಿಂದ ಮಡೆ ಮಡೆಸ್ನಾನ
ರಾಮನಾಥಪುರ: ಇಲ್ಲಿನ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಮಹಾರಥೋತ್ಸವ ದಿನವಾದ ಮಂಗಳವಾರ ಹರಕೆ ಹೊತ್ತ ಭಕ್ತರು ಮಡೆ ಮಡೆಸ್ನಾನ ಸೇವೆ ಸಲ್ಲಿಸಿದರು.

ರಥೋತ್ಸವ ಮುಗಿದ ನಂತರ ಮಧ್ಯಾಹ್ನ 1 ಗಂಟೆಗೆ ದೇವಸ್ಥಾನದ ಮಾಳಿಗೆ ಮೇಲೆ ಹೊರಾಂಗಣದಲ್ಲಿ ಬ್ರಾಹ್ಮಣರು ಊಟ ಮಾಡಿದ ಬಳಿಕ, ರೋಗ- ರುಜಿನಗಳ ನಿವಾರಣೆಗೆ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ ಹರಕೆ ಹೊತ್ತ ಭಕ್ತರು ಎಂಜಲು ಎಲೆಗಳ ಮೇಲೆ ಉರುಳಿದರು.

ಈ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ ಸಂಪುಟ ನರಸಿಂಹಸ್ವಾಮಿ ಮಠದ ಆಡಳಿತಕ್ಕೆ ಸೇರಿದೆ. ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಮಡೆ ಮಡೆಸ್ನಾನ ಸೇವೆಯಲ್ಲಿ ಕೆಳ ವರ್ಗದ ಜನರು ಪಾಲ್ಗೊಂಡರೆ, ರಾಮನಾಥಪುರ ದೇವಸ್ಥಾನದಲ್ಲಿ ಹರಕೆ ಹೊತ್ತ ಬ್ರಾಹ್ಮಣರು ಮಾತ್ರ ಪಾಲ್ಗೊಳ್ಳುವುದು ವಿಶೇಷ.

ಸುಬ್ರಹ್ಮಣ್ಯನಿಗೆ ಪಂಚಾಮೃತ ಅಭಿಷೇಕ
ಹಾಸನ: ಸುಬ್ರಹ್ಮಣ್ಯ ಷಷ್ಠಿ ಅಂಗವಾಗಿ ಮಂಗಳವಾರ ನಗರದ ಹೇಮಾವತಿ ಬಡವಾಣೆಯಲ್ಲಿರುವ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು.

ಹಬ್ಬದ ಅಂಗವಾಗಿ ಬೆಳಿಗ್ಗೆಯಿಂದ ಸಂಜೆವರೆಗೂ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು. ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ, ಪಂಚಾಮೃತ ಅಭಿಷೇಕ ನಡೆದವು.

ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಗಿತ್ತು.  ಶಾಸಕ ಎಚ್.ಎಸ್. ಪ್ರಕಾಶ್, ನಗರಸಭೆ ಮಾಜಿ ಅಧ್ಯಕ್ಷ ಚನ್ನವೀರಪ್ಪ ಇತರರು ದೇವರ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT