ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಟದಲ್ಲಿ ಕಾಲೊನಿ ನಿವಾಸಿ

Last Updated 11 ಫೆಬ್ರುವರಿ 2012, 6:20 IST
ಅಕ್ಷರ ಗಾತ್ರ

ಸಿಂಧನೂರು: ಗಬ್ಬು ನಾರುವ ಅಸಹನೀಯ ವಾಸನೆ, ಗುಂಯ್‌ಗುಡುವ ಸೊಳ್ಳೆ, ಮನೆಯೊಳಗೆ ಹೋದರೆ ಹೊರಗೆ ಬಾರದಂತೆ ಬದುಕುವ ಕಾರಾಗೃಹದ ಅನುಭವ, ಪ್ರತಿ ಮನೆಗಳಲ್ಲಿಯ ವ್ಯಕ್ತಿಗಳು ಎಂಟು ದಿನಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ಜ್ವರ, ಕೆಮ್ಮು ಮತ್ತಿತರ ಕಾಯಿಲೆಗಳಿಂದ ನರಳುತ್ತಿರುವುದು ಸಾಮಾನ್ಯ.
 
ಇದು ಯಾವುದೋ ನಾಗರಿಕ ಸೌಲಭ್ಯವಿಲ್ಲದ ಪರಿಸರವಿರಬಹುದು ಎಂದು ಭಾವಿಸಬೇಡಿ. ಬತ್ತದ ಕಣದ ತಾಲ್ಲೂಕು ಕೇಂದ್ರ ಸಿಂಧನೂರಿನ ಮೆಹಬೂಬ ಕಾಲೊನಿಯ ನಿವಾಸಿಗಳ ಗೋಳಿನ ಚಿತ್ರಾವಳಿಗಳು.

ನಗರದ ಮೆಹಬೂಬ ಕಾಲೊನಿ ಅತ್ಯಂತ ದೊಡ್ಡ ಬಡಾವಣೆಯಾಗಿದ್ದು ಇದರ ಪೂರ್ವ ಭಾಗದಲ್ಲಿ ಸುತ್ತ ಮನೆಗಳು ಮಧ್ಯದಲ್ಲಿ ಚರಂಡಿಯ ನೀರು ತುಂಬಿಕೊಂಡಿರುವುದರಿಂದ ಸುತ್ತಮುತ್ತಲಿನ ಸುಮಾರು 30ಕುಟುಂಬಗಳು ಕಳೆದ ನಾಲ್ಕು ವರ್ಷಗಳಿಂದ ನರಕ ಸದೃಶ ವಾತಾವರಣದಲ್ಲಿ ಕಾಲ ನೂಕುತ್ತಿವೆ.

27 ಮತ್ತು 19ನೇ ವಾರ್ಡಿನ ನೀರು ಹರಿದುಬಂದು ಇದೇ ಕಂದಕದಲ್ಲಿ ಸೇರುತ್ತಿರುವುದರಿಂದ ಈ ಓಣಿಯ ಜನರ ಬದುಕು ತೀರಾ ಶೋಚನೀಯವಾಗಿದೆ. ಈ ಕಂದಕದ ಪಕ್ಕದಲ್ಲಿ ಇಖ್ರಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಿದ್ದು ಚರಂಡಿ ನೀರು ಹರಿಯಲು ಶಾಲಾ ಮಂಡಳಿ ಅವಕಾಶ ಕೊಡದಿರುವುದರಿಂದ ತಮಗೆ ಈ ಪರಿಸ್ಥಿತಿ ಬಂದಿದೆ ಎಂಬುದು ಅಲ್ಲಿಯ ನಿವಾಸಿಗಳ ಆರೋಪ.

ನಾಲ್ಕೈದು ನಿವೇಶನಗಳಲ್ಲಿ ಕಟ್ಟಡ ನಿರ್ಮಾಣವಾಗದೇ ಇರುವುದರಿಂದ ಚರಂಡಿಯ ಮಲೀನ ನೀರು ಇಲ್ಲಿ ಸಂಗ್ರಹಣೆಯಾಗುತ್ತಿದೆ. ನಿವೇಶನದಲ್ಲಿ ಮನೆಗಳನ್ನು ಕಟ್ಟಿಕೊಂಡರೆ ಅಥವಾ ನಿವೇಶನದ ಜಾಗದಲ್ಲಿ ಮಣ್ಣು ಹಾಕಿ ಎತ್ತರಿಸಿದರೆ ತಾವು ಉಸಿರಾಡಲು ಸಾಧ್ಯವಾಗುತ್ತದೆ ಎಂದು ಸುತ್ತಲಿನ ನಿವಾಸಿಗಳು ಹೇಳುತ್ತಿದ್ದಾರೆ.

ಈ ಕುರಿತು ನಗರಸಭೆ ಸದಸ್ಯ ಮಲ್ಲಿಕಾರ್ಜುನ ಪಾಟೀಲ್ ಅವರನ್ನು  ಸಂಪರ್ಕಿಸಿದಾಗ ರಸ್ತೆಗೆ ಮರಂ ಹಾಕಲು ಮತ್ತು ಚರಂಡಿ ನಿರ್ಮಾಣ ಮಾಡಲು ನಗರಸಭೆ ಯಾವಾಗಲೂ ಬದ್ಧವಾಗಿದೆ. ತಾವು ಹಲವಾರು ಬಾರಿ ಅಲ್ಲಿಯ ನಿವಾಸಿಗಳನ್ನು ಮನವೊಲಿಸಿದಾಗ್ಯೂ ಯಾವುದೇ ಪ್ರಯೋಜನವಾಗಿಲ್ಲ.
 
ಅಲ್ಲದೆ ತಮಗಾಗಿರುವ ಸಂಕಟದ ಬಗ್ಗೆ ಅಲ್ಲಿಯ ನಿವಾಸಿಗಳು ನಗರಸಭೆಗೆ ಒಂದು ಅರ್ಜಿಯನ್ನೂ ಸಹ ಕೊಟ್ಟಿರುವುದಿಲ್ಲ. ಈಗಲೂ ಅಷ್ಟೇ ಅಲ್ಲಿಯ ಜನರು ಸಹಕರಿಸಿ ಚರಂಡಿ ಮತ್ತು ರಸ್ತೆ ನಿರ್ಮಿಸಲು ಅವಕಾಶ ನೀಡಿದರೆ ಎರಡೇ ದಿನದ್ಲ್ಲಲಿ ಕಾರ್ಯಪ್ರವೃತ್ತರಾಗಿರುವುದಾಗಿ ಪ್ರತಿಕ್ರಿಯಿಸಿದರು.

ಹೇಗಾದರೂ ಮಾಡಿ ತಮ್ಮನ್ನು ಈ ನರಕ ಸದೃಶ ವಾತಾವರಣದಿಂದ ಮುಕ್ತಗೊಳಿಸಬೇಕೆಂದು ಅಲ್ಲಿಯ ನಿವಾಸಿಗಳಾದ ನಜೀರ್‌ಸಾಬ ಮೆಕ್ಯಾನಿಕ್, ಶಂಶುನ್ನಿಸಾ ಟೀಚರ್, ಖಾಜಾಹುಸೇನ ಟೇಲರ್, ಜಹೀರುದ್ದೀನ, ಚಾಂದಪಾಷ ಎತ್ಮಾರಿ, ಗುಲಾಬ್ ಮೆಕ್ಯಾನಿಕ್ ಮತ್ತಿತರರು ನಗರಸಭೆ ಅಧಿಕಾರಿಗಳು ಮತ್ತು ಸದಸ್ಯರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT