ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ಕ್ರೀಡಾ ಸುದ್ದಿ

Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಫುಟ್‌ಬಾಲ್‌: ಫೈನಲ್‌ಗೆ ಮೊಹಮ್ಮಡನ್‌ ಸ್ಪೋರ್ಟಿಂಗ್‌ ತಂಡ
ನವದೆಹಲಿ (ಐಎಎನ್‌ಎಸ್‌)
: ಐ ಲೀಗ್‌ ತಂಡ ಮೊಹಮ್ಮಡನ್‌ ಸ್ಪೋರ್ಟಿಂಗ್‌ ತಂಡದವರು ಇಲ್ಲಿ ನಡೆಯುತ್ತಿರುವ 126ನೇ ಡ್ಯುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಫೈನಲ್‌ ತಲುಪಿದ್ದಾರೆ.

ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಕೋಲ್ಕತ್ತ ಮೂಲದ ಮೊಹಮ್ಮಡನ್‌ ಸ್ಪೋರ್ಟಿಂಗ್‌ ತಂಡದವರು    3–1ಗೋಲುಗಳಿಂದ ಮುಂಬೈ ಟೈಗರ್ಸ್‌ ಎದುರು ಗೆಲುವು ಸಾಧಿಸಿದರು.

ಮೂರನೇ ನಿಮಿಷದಲ್ಲಿ ಸ್ಪೋರ್ಟಿಂಗ್‌ ತಂಡದ ಸ್ಯಾಮ್ಸನ್‌ ರಾಮಗಾವಿಯಾ ಫ್ರಿ ಕಿಕ್‌ನಲ್ಲಿ ಚೆಂಡನ್ನು ಗುರಿ ಸೇರಿಸಿದರು. ಪಂದ್ಯದ ಮೊದಲಾರ್ಧದ ಹೆಚ್ಚುವರಿ ಸಮಯದಲ್ಲಿ (45+1ನೇ ನಿ.) ಕಾಲಿನ್‌ ಅಬ್ರಾಂಚಸ್‌ ಗಳಿಸಿದ ಗೋಲು 2–0 ಮುನ್ನಡೆ ತಂದುಕೊಟ್ಟಿತು. 65ನೇ ನಿಮಿಷದಲ್ಲಿ ಟೈಗರ್ಸ್‌ನ ಆಂಟನಿ ಸೊರೆನ್‌ ಗೋಲು ಗಳಿಸಿ ಭರವಸೆ ಮೂಡಿಸಿದ್ದರು. ಆದರೆ 82ನೇ ನಿಮಿಷದಲ್ಲಿ ಬಿಕಾಶ್‌ ಜೈರು ಗಳಿಸಿದ ಗೋಲು ಸ್ಪೋರ್ಟಿಂಗ್‌ ಮುನ್ನಡೆಯನ್ನು 3–1ಕ್ಕೆ ಹೆಚ್ಚಿಸಿತು.

ಸ್ಪೋರ್ಟಿಂಗ್‌ ತಂಡ 1992ರಲ್ಲಿ ಕೊನೆಯ ಬಾರಿ ಅಂತಿಮ ಘಟ್ಟ ಪ್ರವೇಶಿಸಿತ್ತು. ಆದರೆ ಜೆಸಿಟಿ ಎದುರು ಪರಾಭವಗೊಂಡಿದ್ದರು.

ಫುಟ್‌ಬಾಲ್‌: ಈಸ್ಟ್‌ ಬೆಂಗಾಲ್‌ ಎದುರಾಳಿ ಪದಾಂಗ್‌
ಕೋಲ್ಕತ್ತ (ಪಿಟಿಐ
): ಈಸ್ಟ್‌ ಬೆಂಗಾಲ್‌ ತಂಡದವರು ಮಂಗಳವಾರ ಇಲ್ಲಿ ನಡೆಯಲಿರುವ ಎಎಫ್‌ಸಿ ಕಪ್‌ (ಮೊದಲ ಹಂತ) ಫುಟ್‌ಬಾಲ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಇಂಡೊನೇಷ್ಯಾದ ಸೆಮೆನ್‌ ಪದಾಂಗ್‌ ಎದುರು ಪೈಪೋಟಿ ನಡೆಸಲಿದ್ದಾರೆ.

ಈಸ್ಟ್‌ ಬೆಂಗಾಲ್‌ ತಂಡದ ನೂತನ ಕೋಚ್‌ ಬ್ರೆಜಿಲ್‌ನ ಮಾರ್ಕೊಸ್‌ ಫಲೋಪಾ ಅವರಿಗೆ ಇದು ಮೊದಲ ಸವಾಲು. ಈ ಸವಾಲು ಸಹಜವಾಗಿಯೇ ಅವರ ಒತ್ತಡ ಹೆಚ್ಚಿಸಿದೆ.

ದೆಹಲಿಯಲ್ಲಿ ಇಂಡಿಯನ್‌ ಓಪನ್‌ ಗಾಲ್ಫ್‌ ಚಾಂಪಿಯನ್‌ಷಿಪ್‌
ನವದೆಹಲಿ (ಪಿಟಿಐ)
: ಪ್ರತಿಷ್ಠಿತ ಹೀರೊ ಇಂಡಿಯನ್‌ ಓಪನ್‌ ಗಾಲ್ಫ್‌ ಟೂರ್ನಿ ಈ ಬಾರಿ ನವದೆಹಲಿಯಲ್ಲಿ ನವೆಂಬರ್‌ 7ರಿಂದ 10ರವರೆಗೆ ನಡೆಯಲಿದೆ.

ಈ ಬಾರಿ ಈ ಟೂರ್ನಿ ಸುವರ್ಣಮಹೋತ್ಸವ ಸಂಭ್ರಮದಲ್ಲಿದೆ. ಇಂಡಿಯನ್‌ ಓಪನ್‌ ಗಾಲ್ಫ್‌ ಟೂರ್ನಿ ಮೊದಲ ಬಾರಿ 1964ರಲ್ಲಿ ನವದೆಹಲಿಯಲ್ಲಿಯೇ ನಡೆದಿತ್ತು. ಈಗ ಮತ್ತೆ ದೇಶದ ರಾಜಧಾನಿಯಲ್ಲಿ ಜರುಗಲಿದೆ.

‘ಇಂಡಿಯನ್‌ ಓಪನ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ ನಮ್ಮ ಪಾಲಿಗೆ ಸ್ಮರಣೀಯ ಕ್ಷಣ. ಮೊಟ್ಟಮೊದಲ ಬಾರಿ ಈ ಟೂರ್ನಿ ನಡೆದ ಸ್ಥಳದಲ್ಲಿಯೇ ಸುವರ್ಣಮಹೋತ್ಸವ ಸಂಭ್ರಮಕ್ಕೆ ನಾವು ಸಜ್ಜಾಗುತ್ತಿದ್ದೇವೆ’ ಎಂದು ಇಂಡಿಯನ್‌ ಗಾಲ್ಫ್‌ ಒಕ್ಕೂಟದ ಜನರಲ್‌ ಬಿಕ್ರಮ್‌ ಸಿಂಗ್‌ ನುಡಿದಿದ್ದಾರೆ.

ಆಶೀಶ್‌ ರಾಯ್‌ ಪಾಲಿನ 133ನೇ ಮ್ಯಾರಥಾನ್‌
ವಾಷಿಂಗ್ಟನ್‌ (ಐಎಎನ್‌ಎಸ್‌
): ವಯಸ್ಸು 81, ಪಾಲ್ಗೊಂಡ ಒಟ್ಟು ಮ್ಯಾರಥಾನ್‌ ಸ್ಪರ್ಧೆಗಳು 133. ಭಾರತದ ಮೂಲದ ಆಶೀಶ್‌ ರಾಯ್‌ ಅವರ ಸಾಧನೆ ಇದು.

ಭಾನುವಾರ ನಡೆದ ರಾಕ್‌ ಅಂಡ್‌ ರೋಲ್‌ ಫಿಲಡೆಲ್ಫಿಯಾ ಹಾಫ್‌ ಮ್ಯಾರಥಾನ್‌ನಲ್ಲೂ ಪಾಲ್ಗೊಂಡು ಅವರು ಗಮನ ಸೆಳೆದರು.
ವಿಶೇಷವೆಂದರೆ ಆಶೀಶ್‌ ಅವರು ಈ ಮ್ಯಾರಥಾನ್‌ ಸ್ಪರ್ಧೆಯಲ್ಲಿ 41 ವರ್ಷ ವಯಸ್ಸಿನ ತಮ್ಮ ಮಗಳು ಅಮೃತ ಅವರೊಂದಿಗೆ ಓಡಿದರು.

ಟೆನಿಸ್‌: ಪ್ರಧಾನ ಹಂತಕ್ಕೆ ಯೂಕಿ
ಕವೊಸಿಯುಂಗ್‌, ತೈವಾನ್‌ (ಪಿಟಿಐ
): ಭಾರತದ ಯೂಕಿ ಭಾಂಬ್ರಿ ಇಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ ವಿಭಾಗದಲ್ಲಿ ಪ್ರಧಾನ ಹಂತದಲ್ಲಿ ಆಡಲು ಅರ್ಹತೆ ಪಡೆದುಕೊಂಡಿದ್ದಾರೆ.

ಅರ್ಹತಾ ಹಂತದ ಮೂರನೇ ಸುತ್ತಿನ ಪಂದ್ಯದಲ್ಲಿ ಯೂಕಿ 7–5, 6–1ರಲ್ಲಿ ಜಪಾನ್‌ನ ಅರತ ಒನೊಜವಾ ಎದುರು ಗೆಲುವು ಸಾಧಿಸಿದರು. ಈ ಹೋರಾಟ 36 ನಿಮಿಷ ನಡೆಯಿತು.

ಪ್ರಧಾನ ಸುತ್ತಿನ ಮೊದಲ ಪಂದ್ಯದಲ್ಲಿ ಅವರು ಇಸ್ರೇಲ್‌ನ ಅಮಿರ್‌ ವೇನ್‌ಟ್ರಾಬ್‌ ಎದುರು ಪೈಪೋಟಿ ನಡೆಸಲಿದ್ದಾರೆ. ಹೋದ ವರ್ಷ ಅಮಿರ್‌ ಅವರನ್ನು ಮಣಿಸುವಲ್ಲಿ ಯೂಕಿ ಯಶಸ್ವಿಯಾಗಿದ್ದರು.

ಈ ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ಚೀ ಫು ವಾಂಗ್‌ ಜೊತೆಗೂಡಿ ಆಡುತ್ತಿರುವ ಯೂಕಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಅವರು 7–6, 7–6ರಲ್ಲಿ ಥಾಯ್ಲೆಂಡ್‌ನ ಸಂಚಾಯಿ  ಹಾಗೂ ಸೊಂಚಾಟ್‌ ರತಿವತನಾ ಎದುರು ಜಯ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT