ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ರಾಷ್ಟ್ರೀಯ ಸುದ್ದಿ

Last Updated 6 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕೋರ್ಟ್‌ಗೆ ಗೈರು: ಮೇಧಾಗೆ ದಂಡ
ನವದೆಹಲಿ (ಪಿಟಿಐ):
ಮಾನನಷ್ಟ ಮೊಕದ್ದಮೆ ಪ್ರಕರಣಗಳಲ್ಲಿ ವಿಚಾರಣೆಗಾಗಿ ಕೋರ್ಟ್‌ಗೆ ಹಾಜರಾಗಲು ವಿಫಲರಾದ ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಅವರಿಗೆ ದೆಹಲಿಯ ನ್ಯಾಯಾಲಯ ರೂ. 15 ಸಾವಿರ ದಂಡ ವಿಧಿಸಿದೆ.

ಅಹಮದಾಬಾದ್‌ನ ಸ್ವಯಂಸೇವಾ ಸಂಸ್ಥೆಯಾದ `ನ್ಯಾಷನಲ್ ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟಿಸ್'(`ಎನ್‌ಸಿಸಿಎಲ್') ಮೇಧಾ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿತ್ತು. ಅದಕ್ಕೆ ಪ್ರತಿಯಾಗಿ ಮೇಧಾ ಸಹ ಸಂಸ್ಥೆಯ ವಿರುದ್ಧ ಮಾನನಷ್ಟ ಪ್ರಕರಣಗಳನ್ನು ದಾಖಲಿಸಿದ್ದರು.

13 ವರ್ಷಗಳಿಂದ ಈ ಸಂಘಟನೆ ಮತ್ತು ಮೇಧಾ ನಡುವೆ ಕಾನೂನು ಸಂಘರ್ಷ ನಡೆಯುತ್ತಿದೆ. ತಾವು ದಾಖಲಿಸಿದ್ದ ಹಾಗೂ `ಎನ್‌ಸಿಸಿಎಲ್' ದಾಖಲಿಸಿದ್ದ ಪ್ರಕರಣಗಳಲ್ಲಿ  ಕೋರ್ಟ್‌ಗೆ ಹಾಜರಾಗಲು ವಿಫಲರಾದ ಕಾರಣ ಮೂರು ಪ್ರಕರಣಗಳಲ್ಲಿ ತಲಾ ರೂ. 5 ಸಾವಿರದಂತೆ ಮೇಧಾ ಅವರಿಗೆ ದಂಡ ವಿಧಿಸಲಾಗಿದೆ.

ಬ್ರಿಟಿಷ್ ಮಹಿಳೆ ಕೊಲೆ: ಬಂಧನ
ಶ್ರೀನಗರ (ಐಎಎನ್‌ಎಸ್)
: ಶ್ರೀನಗರದ ದಲ್ ಸರೋವರದ ಹೌಸ್ ಬೋಟ್‌ನಲ್ಲಿ ಬ್ರಿಟಿಷ್ ಮಹಿಳೆಯೊಬ್ಬರ ಕೊಲೆಯಾಗಿದ್ದು, ಆ ಮಹಿಳೆಯೊಂದಿಗೆ ಅದೇ ಹೌಸ್‌ಬೋಟ್‌ನಲ್ಲಿ ವಾಸವಾಗಿದ್ದ ಡಚ್ ದೇಶದ ಪ್ರಜೆಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

24 ವರ್ಷದ ಬ್ರಿಟಿಷ್ ಮಹಿಳೆಯ ಶವ ಶನಿವಾರ ಬೆಳಿಗ್ಗೆ ಹೌಸ್‌ಬೋಟ್‌ನಲ್ಲಿ ಪತ್ತೆಯಾಯಿತು.

ಮಹಿಳೆಯ ಜತೆ ಇದ್ದ ಡಚ್ ವ್ಯಕ್ತಿ ತನ್ನ ಸಾಮಾನು ಸರಂಜಾಮುಗಳೊಂದಿಗೆ ಪರಾರಿಯಾಗಿದ್ದು, ತನ್ನ ಜತೆ ಪಾಸ್‌ಪೋರ್ಟ್ ಮಾತ್ರ ಒಯ್ದಿದ್ದ.  ಡಚ್ ವ್ಯಕ್ತಿ ಡೇ-ವಿಟ್ ರಿಚರ್ಡ್‌ನನ್ನು  ದಕ್ಷಿಣ ಕಾಶ್ಮೀರದ ಕ್ವಾಜಿಗಂದ್ ಪಟ್ಟಣದಲ್ಲಿ ಬಂಧಿಸಲಾಗಿದೆ.

`ಸೌದಿ ಭಾರತೀಯರಿಗೆ ಭಯವಿಲ್ಲ'
ಮಲಪ್ಪುರಂ (ಕೇರಳ)(ಪಿಟಿಐ): ಗ
ಲ್ಫ್ ರಾಷ್ಟ್ರದಲ್ಲಿ ಜಾರಿಗೊಳಿಸಲಾಗಿರುವ ನೂತನ ಕಾರ್ಮಿಕ ನೀತಿ `ನಿತಾಕತ್'ಯಿಂದ ಸೌದಿಯಲ್ಲಿರುವ ಭಾರತೀಯ ವಲಸಿಗರಿಗೆ ಮುಂದಿನ ಎರಡು ತಿಂಗಳುಗಳ ಕಾಲ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ಇ. ಅಹ್ಮದ್ ಅವರು ತಿಳಿಸಿದ್ದಾರೆ.

`ಮುಂದಿನ ಎರಡು ತಿಂಗಳುಗಳ ಕಾಲ ಭಾರತೀಯರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಸೌದಿ ಅಧಿಕಾರಿಗಳು ನಮಗೆ ಭರವಸೆ ನೀಡಿದ್ದಾರೆ' ಎಂದು ಶುಕ್ರವಾರ ರಾತ್ರಿ ಇಲ್ಲಿಗೆ ಆಗಮಿಸಿದ ಕೇಂದ್ರ ಸಚಿವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮತದಾನ ಮಾಡಿ: ಸುನೀತಾ
ಅಹಮದಾಬಾದ್ (ಪಿಟಿಐ)
: `ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದಿಂದ ದೂರವಿದ್ದರೆ ನೀವು ವ್ಯವಸ್ಥೆಯಲ್ಲಿನ ದೋಷದ ಬಗ್ಗೆ ಟೀಕಿಸುವ ಅರ್ಹತೆಯನ್ನು ಕಳೆದುಕೊಳ್ಳುತ್ತೀರಿ' ಎಂದು ಭಾರತೀಯ ಸಂಜಾತೆ ಅಮೆರಿಕ ಮೂಲದ ಗಗನ ಯಾತ್ರಿ ಸುನೀತಾ ವಿಲಿಯಮ್ಸ ಅಭಿಪ್ರಾಯ ಪಟ್ಟಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದಲೇ ಮತಚಲಾಯಿಸಿದ ಸುನೀತಾ ಅವರು, ಮತದಾನ ಪ್ರಕ್ರಿಯೆಯಲ್ಲಿ ಜನ ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ಭಾರತದ ಪ್ರವಾಸದಲ್ಲಿರುವ ಸುನೀತಾ ಅವರು, ಗುಜರಾತ್ ತಾಂತ್ರಿಕ ವಿಶ್ವವಿದ್ಯಾಲಯ (ಜಿಟಿಯು)ದಲ್ಲಿ ನಡೆದ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದರು.

ಕೇಜ್ರಿವಾಲ್ ನಿರಶನ ಅಂತ್ಯ
ನವದೆಹಲಿ (ಪಿಟಿಐ):
ನೀರಿನ ಕರ ಹಾಗೂ ವಿದ್ಯುತ್ ದರ ಹೆಚ್ಚಳ ಖಂಡಿಸಿ ಕಳೆದ 15 ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಆಮ್ ಆದ್ಮಿ ಪಕ್ಷ(ಎಎಪಿ)ದ ಮುಖಂಡ ಅರವಿಂದ್ ಕೇಜ್ರಿವಾಲ್ ಶನಿವಾರ ಅಂತ್ಯಗೊಳಿಸಿದ್ದಾರೆ.

ನೀರು ಹಾಗೂ ವಿದ್ಯುತ್ ದರ ಏರಿಕೆ ವಿಷಯದ ಮೇಲೆ ದೆಹಲಿ ವಿಧಾನಸಭಾ ಚುನಾವಣೆಗಳನ್ನು  ಎದುರಿಸುವುದಾಗಿ ಕೇಜ್ರಿವಾಲ್ ಪ್ರಕಟಿಸಿದ್ದಾರೆ.

ಶಿರಡಿ ಬಾವಿಯಲ್ಲಿ ರೂ. 1.5 ಲಕ್ಷ ಚಿಲ್ಲರೆ!
ಶಿರಡಿ (ಪಿಟಿಐ):
ಭಕ್ತರು ಅರ್ಪಿಸಿದ್ದ ರೂ. 1.5 ಲಕ್ಷ ಮೌಲ್ಯದ ನಾಣ್ಯಗಳನ್ನು ಹಾಗೂ ಇತರ ವಸ್ತುಗಳನ್ನು  ಬಳಕೆಯಲ್ಲಿಲ್ಲದ ಹಾಗೂ ಒಂದು ಕಾಲದಲ್ಲಿ ಸಂತ ಸಾಯಿಬಾಬಾ ಬಳಸುತ್ತಿದ್ದರು ಎನ್ನಲಾದ ಬಾವಿಯಿಂದ ಹೊರತೆಗೆಯಲಾಗಿದೆ.

ಶಿರಡಿಯ ಲೆಂಡಿಬಾಗ್ ಪ್ರದೇಶದಲ್ಲಿರುವ ಬಾವಿಯನ್ನು ಸ್ವಚ್ಛಗೊಳಿಸುತ್ತಿರುವಾಗ ಈ ಹಣ ದೊರಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT