ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟನೆಗಳ ಪ್ರತಿಭಟನೆ

ಪಠ್ಯದಲ್ಲಿ ಝಾನ್ಸಿರಾಣಿ ಲಕ್ಷೀಬಾಯಿ ಅವಹೇಳನ
Last Updated 4 ಆಗಸ್ಟ್ 2013, 20:09 IST
ಅಕ್ಷರ ಗಾತ್ರ

ಬೆಂಗಳೂರು: ಸಿಬಿಎಸ್‌ಇಯ ಐದನೇ ತರಗತಿ ಪಠ್ಯದಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿ ಅವರನ್ನು ಹುಕ್ಕಾ ಹಿಡಿದಿರುವಂತೆ ಚಿತ್ರಿಸುವ ಮೂಲಕ ಅವರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ವಿವಿಧ ಹಿಂದೂಪರ ಸಂಘಟನೆಗಳ ಸದಸ್ಯರು ನಗರದ ಪುರಭವನದ ಎದುರು ಭಾನುವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಹಿಂದೂ ಜಾಗೃತಿ ಸಮಿತಿಯ ಅಧ್ಯಕ್ಷ ಎನ್.ಮೋಹನ್‌ಗೌಡ, `ಓರಿಯಂಟಲ್ ಬ್ಲಾಕ್‌ಸ್ಮಿತ್ ಪ್ರಕಾಶನದಿಂದ ಹೊರಬಂದ ಐದನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ `ಸ್ವಾತಂತ್ರ ಸಂಗ್ರಾಮದಲ್ಲಿ ಝಾನ್ಸಿಯ ಪಾತ್ರ' ಎಂಬ ಅಧ್ಯಾಯವಿದೆ. ಅದರಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಮುಡಿಪಿಟ್ಟ ವೀರ ಮಹಿಳೆ ಝಾನ್ಸಿರಾಣಿ ಲಕ್ಷ್ಮೀಬಾಯಿ ಅವರನ್ನು ಹುಕ್ಕಾ ಹಿಡಿದಿರುವಂತೆ ಚಿತ್ರಿಸಲಾಗಿದೆ. ಈ ಮೂಲಕ ಸರ್ಕಾರ ಇತಿಹಾಸವನ್ನೇ ವಿಕೃತಗೊಳಿಸಲು ಮುಂದಾಗುತ್ತಿದೆ. ಇದೊಂದು ಗಂಭೀರ ಅಪರಾಧ ಪ್ರಕರಣವಾಗಿರುವುದರಿಂದ ಪ್ರಕಾಶಕರೂ ಸೇರಿದಂತೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು' ಎಂದು ಆಗ್ರಹಿಸಿದರು.

`ಒಂದು ಕಡೆ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವ ಹಾಗೂ ಹುಕ್ಕಾ ಸೇವನೆ ಮಾಡುವ ಚಿತ್ರಗಳ ಮೇಲೆ ನಿಷೇಧ ಹೇರಿರುವ ಸರ್ಕಾರ, ಮತ್ತೊಂದೆಡೆ ಮಕ್ಕಳ ಪಠ್ಯದಲ್ಲಿ ಝಾನ್ಸಿರಾಣಿ ಹುಕ್ಕಾ ಹಿಡಿದಿರುವಂತೆ ಚಿತ್ರಿಸಿದೆ. ಆದರೆ, ಅವರು ತಮ್ಮ ಜೀವನದಲ್ಲಿ ಹುಕ್ಕಾ ಸೇವನೆ ಮಾಡಿರುವ ಉಲ್ಲೇಖ ಎಲ್ಲಿಯೂ ಇಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಇನ್ನು ರಚನಾ ಸಾಗರ ಮುದ್ರಣ ಸಂಸ್ಥೆ ಪ್ರಕಾಶಿಸಿರುವ ಐದನೇ ತರಗತಿಯ ಆಂಗ್ಲ ವಿಷಯದ ಪಠ್ಯದಲ್ಲಿ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮಾನವೀಯತೆ ಮತ್ತು ದೂರದರ್ಶಿತ್ವ ಗುಣವುಳ್ಳ ದೇಶದ ಭಾವಿ ನಾಯಕ ಎಂದು ಬಿಂಬಿಸಲಾಗಿದೆ. ಹೀಗೆ ಪಕ್ಷದ ಪ್ರಚಾರಕ್ಕಾಗಿ ಪಠ್ಯವನ್ನು ಬಳಸಿಕೊಂಡಿರುವ ಕ್ರಮ ಸರಿಯಲ್ಲ' ಎಂದು ಅಭಿಪ್ರಾಯಪಟ್ಟರು.

`ತಮಿಳುನಾಡಿನಲ್ಲಿ ಇತ್ತೀಚೆಗೆ ಹಿಂದೂ ಮನ್ನಾಣಿ ಪಕ್ಷದ ನಾಯಕರಾದ ಎಸ್.ವೆಲ್ಲಪ್ಪನ್ ಮತ್ತು ವಿ.ರಮೇಶ್ ಅವರನ್ನು ಇಸ್ಲಾಂ ಜಿಹಾದಿಗಳು ಹತ್ಯೆಗೈದಿದ್ದಾರೆ. ಈ ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ 16 ಹಿಂದೂ ನಾಯಕರು ಕೊಲೆಯಾಗಿರುವುದು ಆತಂಕದ ವಿಷಯವಾಗಿದೆ. ಅವರ ರಕ್ಷಣೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.  ಜತೆಗೆ ಶ್ರೀರಂಗಪಟ್ಟಣದಲ್ಲಿ ಟಿಪ್ಪು ವಿಶ್ವವಿದ್ಯಾಲಯ ಸ್ಥಾಪನೆಯ ಪ್ರಸ್ತಾವವನ್ನು ರದ್ದುಗೊಳಿಸಬೇಕು' ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಹಿಂದೂ ಮಹಾಸಭಾ, ಶ್ರೀರಾಮಸೇನೆ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT