ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟಿತ ಹೋರಾಟದಿಂದ ಗೆಲುವು: ದ್ರಾವಿಡ್

Last Updated 15 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಜೈಪುರ (ಪಿಟಿಐ): ಎಲ್ಲಾ ಆಟಗಾರರು ಸಂಘಟಿತ ಪ್ರಯತ್ನ ತೋರಿದ ಕಾರಣ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗೆಲುವು ಸಾಧ್ಯವಾಯಿತು ಎಂದು ರಾಜಸ್ತಾನ ರಾಯಲ್ಸ್ ತಂಡದ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ.

`ಶ್ರೀಶಾಂತ್ ಆರಂಭದಲ್ಲೇ ವಿಕೆಟ್ ಪಡೆದು ಎದುರಾಳಿ ತಂಡಕ್ಕೆ ಆಘಾತ ನೀಡಿದರು. ಅಜಿತ್ ಚಾಂಡಿಲ ಕೂಡಾ ಪ್ರಭಾವಿ ಬೌಲಿಂಗ್ ನಡೆಸಿದರು. ಇತರ ಬೌಲರ್‌ಗಳು ಮತ್ತು ಫೀಲ್ಡರ್‌ಗಳ ಉತ್ತಮ ಪ್ರದರ್ಶನದಿಂದಾಗಿ ನಾವು ಎದುರಾಳಿ ತಂಡವನ್ನು 124 ರನ್‌ಗಳಿಗೆ ನಿಯಂತ್ರಿಸಿದೆವು' ಎಂದು ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.

ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ಆರು ವಿಕೆಟ್‌ಗಳ ಗೆಲುವು ಪಡೆದಿತ್ತು. ಗೆಲುವಿಗೆ 125 ರನ್‌ಗಳ ಗುರಿ ಬೆನ್ನಟ್ಟಿದ್ದ ರಾಯಲ್ಸ್ 19.2 ಓವರ್‌ಗಳಲ್ಲಿ 4 ವಿಕೆಟ್‌ಗೆ 126 ರನ್ ಗಳಿಸಿ ಜಯ ಸಾಧಿಸಿತ್ತು. ಶೇನ್ ವಾಟ್ಸನ್, ಅಜಿಂಕ್ಯ ರಹಾನೆ ಮತ್ತು ಸಂಜು ಸ್ಯಾಮ್ಸನ್ ಉತ್ತಮ ಆಟದ ಮೂಲಕ ತಂಡದ ಗೆಲುವಿಗೆ ಕಾರಣರಾಗಿದ್ದರು.

`ಇಲ್ಲಿನ ಪಿಚ್ ಬೌಲಿಂಗ್‌ಗೆ ನೆರವು ನೀಡುತ್ತಿದ್ದ ಕಾರಣ 125 ರನ್‌ಗಳ ಗುರಿ ಬೆನ್ನಟ್ಟುವುದು ಸುಲಭವಾಗಿರಲಿಲ್ಲ. ಆದರೆ ವಾಟ್ಸನ್ ವೇಗವಾಗಿ ರನ್ ಗಳಿಸಿ ಅಲ್ಪ ಒತ್ತಡವನ್ನು ದೂರು ಮಾಡಿದರು. ಮಧ್ಯಮ ಕ್ರಮಾಂಕದಲ್ಲಿ ಕೆಲವೊಂದು ವಿಕೆಟ್‌ಗಳು ಬಿದ್ದರೂ, ಅಜಿಂಜ್ಯ ರಹಾನೆ ಕ್ರೀಸ್ ಬಳಿ ನೆಲೆಯೂರಿ ನಿಲ್ಲುವಲ್ಲಿ ಯಶಸ್ವಿಯಾದರು' ಎಂದಿದ್ದಾರೆ.

`ಸಂಜು ಸ್ಯಾಮ್ಸನ್ ಕೂಡಾ ಸೊಗಸಾದ ಬ್ಯಾಟಿಂಗ್ ಮಾಡಿದರು. ಮಾತ್ರವಲ್ಲ ತನ್ನ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ, ಇದು ತಂಡ ಪ್ರಯತ್ನಕ್ಕೆ ದೊರೆತ ಗೆಲುವು' ಎಂದು ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT