ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತರ ಆರಾಧನೆಯಲ್ಲಿ ಸಂಗೀತ ಸಮಾರಾಧನೆ

Last Updated 25 ಜನವರಿ 2012, 19:30 IST
ಅಕ್ಷರ ಗಾತ್ರ

ಇನ್ನೊಮ್ಮೆ ಪುರಂದರ, ತ್ಯಾಗರಾಜ ಆರಾಧನೆ ಬಂದಿದೆ. ಗೋಷ್ಠಿ ಗಾಯನ, ಮಧುಕರ ವತ್ತಿ, ಸಂಗೀತ ಕಛೇರಿಗಳಿಗೆ ನಗರ ಇನ್ನೊಮ್ಮೆ ಸ್ಪಂದಿಸುತ್ತಿದೆ. ಅಂಥ ಸಂಸ್ಥೆಗಳಲ್ಲಿ ಒಂದಾದ ಶ್ರೀ ರಾಘವೇಂದ್ರ ಸೇವಾ ಸಮಿತಿಯು ಸುಧೀಂದ್ರ ನಗರದ ತನ್ನ ಸ್ವಂತ ರಾಯರ ಮಠದಲ್ಲಿ ಪುರಂದರದಾಸರ ಪುಣ್ಯ ದಿನಾಚರಣೆ ನಿಮಿತ್ತ ಸಂಗೀತ ಕಾರ್ಯಕ್ರಮವಲ್ಲದೆ ಹರಿಕಥೆ, ಪ್ರವಚನ, ಭಜನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನೂ ನಡೆಸಿತು.

ಇಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟ ವಿದುಷಿ ಸಂಗೀತಕಟ್ಟಿ ಪೂರ್ಣವಾಗಿ ಕನ್ನಡ ದೇವರನಾಮಗಳನ್ನೇ ಹಾಡಿದರು. ಪ್ರಾರಂಭಕ್ಕೆ ಶುದ್ಧ ಕಲ್ಯಾಣ್ ರಾಗವನ್ನು ಆಯ್ದರು. ತ್ರಿಸ್ಥಾಯಿಯಲ್ಲೂ ಲೀಲಾಜಾಲವಾಗಿ ಸಂಚರಿಸುತ್ತಾ ರಾಗದ ಸುಂದರ ಚಿತ್ರ ಬಿಡಿಸಿದರು. ಹಿಂದಿನಿಂದಲೂ ಕೇಳುಗರಿಗೆ ಪ್ರಿಯವಾದ `ನಂದತನಯ ಗೋವಿಂದ- ಮಿಠಾಯಿ~- ಬೇಹಾಗ್ ರಾಗದಲ್ಲಿ ಸೊಗಸಾಗಿ ಮೂಡಿತು. `ಕುರುಡು ನಾಯಿ ಸಂತೆಗೆ ಬಂದಂತೆ~ ನಂತರ `ಕೊಬ್ಬಿನಲಿ ಇರಬೇಡವೊ ಮನುಜ~~ ಹಮೀರ್‌ನಲ್ಲಿ ಹೊಮ್ಮಿತು. `ಸುಳ್ಳು ನಮ್ಮಲಿಲ್ಲವಯ್ಯ~ (ಸೋಹನಿ), `ಮುದ್ದು ಮಾಡಲರಿಯ~ (ಅಡಾಣ) ಮತ್ತು `ಕ್ಷೀರಾಬ್ದಿ ಕನ್ನಿಕೆ ಆರಿಗೆ ವಧುವಾಗುವೆ~ (ಬಂದಾವನಿ ಸಾರಂಗ್)- ಹೀಗೆ  ಪದಗಳನ್ನು ಮಧುರ ಕಂಠದಿಂದ, ಭಾವಪೂರ್ಣವಾಗಿ ಹಾಡಿ, ಸಭೆಯ ಮೆಚ್ಚುಗೆಗೆ ಪಾತ್ರರಾದರು. ಹಾರ್ಮೊನಿಯಂನಲ್ಲಿ ರವೀಂದ್ರ ಕಾಟೋಟಿ, ತಬಲದಲ್ಲಿ ಉದಯರಾಜ ಕರ್ಪೂರ್ ಹಾಗೂ ಉಪಪಕ್ಕವಾದ್ಯದಲ್ಲಿ ವೆಂಕಟೇಶ್ ಪುರೋಹಿತ್ ಸಾಥ್ ನೀಡಿದರು.

ನಾದಜ್ಯೋತಿ ಸಭಾ

ಕಳೆದ 46 ವರ್ಷಗಳಿಂದ ಆರಾಧನೆಯ ಸಂದರ್ಭದಲ್ಲಿ ಸಂಗೀತೋತ್ಸವವನ್ನು ನಡೆಸಿಕೊಂಡು ಬರುತ್ತಿರುವವರು `ನಾದಜ್ಯೋತಿ ಶ್ರೀ ತ್ಯಾಗರಾಜಸ್ವಾಮಿ ಭಜನ ಸಭಾ~ದವರು. ಈ ವರ್ಷ (ಜನವರಿ 21ರಿಂದ 29ರವರೆಗೆ) ಮಲ್ಲೇಶ್ವರಂ ಆರ್ಯ ವೈಶ್ಯ ಸಂಘದ ಸಹಭಾಗಿತ್ವದಲ್ಲಿ ಸಂಗೀತವಲ್ಲದೆ (ತನಿ ಪಿಟೀಲು, ಜುಗಲ್‌ಬಂದಿ, ಲಯ ವಿನ್ಯಾಸ, ಹಿಂದುಸ್ತಾನಿ ಗಾಯನ) ಹರಿಕಥೆ, ಮಧುಕರ ವೃತ್ತಿಗಳನ್ನೂ ಏರ್ಪಡಿಸಲಾಗಿದೆ. ಕೆ.ಅರ್ಜುನನ್ (ಮೃದಂಗ), ಲಲಿತ ಜೆ. ರಾವ್ (ಹಿಂದುಸ್ತಾನಿ), ಎ.ಡಿ. ಜಕಾರಿಯಾ (ಪಿಟೀಲು) ಅವರಿಗೆ `ಕಲಾಜ್ಯೋತಿ~ ಪುರಸ್ಕಾರ ಹಾಗೂ ಪ್ರೊ. ಗುರುಚರಣ್ ವಿ. ಗರುಡ್ ಅವರಿಗೆ `ನಾದಜ್ಯೋತಿ~ ಪುರಸ್ಕಾರ ಪ್ರದಾನ ಈ ವರ್ಷದ ಇನ್ನೊಂದು ವಿಶೇಷ. `ನಾದಜ್ಯೋತಿ ಆರೋಗ್ಯ ಸಂಪದ~ ಸರಣಿಯಲ್ಲಿ ಸಂಗೀತಗಾರರ ಆರೋಗ್ಯ ಚಿಕಿತ್ಸೆಗೆ ಆರ್ಥಿಕ ನೆರವು ನೀಡುತ್ತಿರುವುದು ಅಭಿನಂದನೀಯ.

ಭಾನುವಾರ ಸಂಜೆ ಇಲ್ಲಿ ಯುಗಳ ಪಿಟೀಲು ನುಡಿಸಿದ ಜಿ.ಜೆ.ಆರ್. ಕೃಷ್ಣನ್ ಮತ್ತು ವಿಜಯಲಕ್ಷ್ಮೀ ಪ್ರಖ್ಯಾತ `ಲಾಲ್‌ಗುಡಿ~ ಮನೆತನಕ್ಕೆ ಸೇರಿದವರು. ದಿನಕ್ಕೆ ಹೊಂದುವ ದೀಕ್ಷಿತರ ಕೃತಿಯ ನಂತರ `ಸೊಗಸು ಚೂಡ ತರಮಾ~- ನುಡಿಸಿದರು.  ಹಾಗೆಯೇ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಕಾಂಬೋಧಿ ರಾಗವು ಮಿಂಚಿನ ಸಂಗತಿಗಳಿಂದ ಬೆಳಗಿತು. ದೇವರನಾಮಗಳು ಹಾಡಿದ ಹಾಗೆ ವಾದ್ಯದಲ್ಲಿ ನುಡಿಯುತ್ತಿತ್ತು. ಕರ್ಣರಂಜಿನಿ ತಿಲ್ಲಾನ ಚುರುಕು ನಡೆಯಿಂದ ರಂಜಿಸಿತು. ನುರಿತ ಲಯ ವಾದ್ಯಗಾರರಾದ ಅರ್ಜುನ್ ಕುಮಾರ್ ಮತ್ತು ಉಳ್ಳೂರು ಗಿರಿಧರ ಉಡುಪ ತಮ್ಮ ಕೈಚಳಕದಿಂದ ಕಾವು ತುಂಬಿದರು.

ಆರ್ಯಭಟ ಕಲಾ ಉತ್ಸವ

ಆರ್ಯಭಟ ಸಾಂಸ್ಕೃತಿಕ ಸಂಸ್ಥೆ 22ನೇ ಯುವ ಸಂಗೀತ ನೃತ್ಯೋತ್ಸವವನ್ನು ಎರಡು ದಿನ ನಯನ ಸಭಾಂಗಣದಲ್ಲಿ ನಡೆಸಿತು. ಕೃಪಾ ಫೌಂಡೇಷನ್, ವಿವೇಕಾನಂದ ಕಲಾ ಕೇಂದ್ರ ಹಾಗೂ ನೃತ್ಯ ಅಕಾಡೆಮಿಯ ವಿದ್ಯಾರ್ಥಿನಿಯರು ಮೊದಲ ದಿನ ನೃತ್ಯ ಮಾಡಿದರು. ಬೆಂಗಳೂರಲ್ಲದೆ ಹುಬ್ಬಳ್ಳಿ, ಮೈಸೂರುಗಳಿಂದಲೂ ಉದಯೋನ್ಮುಖ ಕಲಾವಿದರು ಭಾಗವಹಿಸ್ದ್ದಿದರು. ಅದರಲ್ಲೂ ಪುಟಾಣಿ ಕಲಾವಿದೆಯರ ಭರತನಾಟ್ಯ ಪ್ರಶಂಸೆಗೆ ಪಾತ್ರವಾಯಿತು. ಪುಟ್ಟ ಬಾಲಕಿಯರು ಸೀರೆ-ಕಚ್ಚೆ ಹಾಕಿಕೊಂಡು, ಆಭರಣಗಳನ್ನು ತೊಟ್ಟು ನಿರ್ಭಯವಾಗಿ, ಆತ್ಮವಿಶ್ವಾಸದಿಂದ ನರ್ತಿಸಿದರು. ಈ ಕಿರಿಯ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ನಿರಂತರ ಪ್ರೋತ್ಸಾಹ ಅಗತ್ಯ. ಆ ನಿಟ್ಟಿನಲ್ಲಿ ಆರ್ಯಭಟ ಸಂಸ್ಥೆಯ ಪ್ರಯತ್ನ ಶ್ಲಾಘನೀಯ.

ವಾಗ್ಗೇಯಕಾರರ ರಚನೆಗಳು

`ಕಾಂಚನ- ರಂಜನಿ ಸಹೋದರಿಯರು~ ಎಂದೇ ಪರಿಚಿತರಾದ ಕಾಂಚನ ಶ್ರೀರಂಜನಿ ಹಾಗೂ ಶ್ರುತಿ ರಂಜನಿ ದಕ್ಷಿಣ ಕನ್ನಡ ಜಿಲ್ಲೆಯ ಸಂಗೀತ ಮನೆತನಕ್ಕೆ ಸೇರಿದವರು. ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರ ಮೊಮ್ಮಕ್ಕಳು ಹಾಗೂ ವಿ. ಸುಬ್ಬರತ್ನಂ ಮಕ್ಕಳಾದ ಈ ಸಹೋದರಿಯರು ವಿದ್ವತ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ. ಗಾಯನ, ಪಿಟೀಲುಗಳೆರಡರಲ್ಲೂ ಸಾಧನೆ ಮಾಡಿದ್ದಾರೆ. ಮೊನ್ನೆ ನಡೆದ ತಮ್ಮ ಕಛೇರಿಯಲ್ಲಿ (ಬೆಂಗಳೂರು ಲಲಿತಕಲಾ ಪರಿಷತ್) ಅವರು ಆರಿಸಿಕೊಂಡದ್ದು `30ನೇ ಶತಮಾನದ ಕೆಲ ಮೈಸೂರು ವಾಗ್ಗೇಯಕಾರರ ರಚನೆಗಳು~. ಮಹಾರಾಜ ಜಯಚಾಮರಾಜ ಒಡೆಯರ್, ವೀಣೆ ಶೇಷಣ್ಣ ಹಾಗೂ ಮುತ್ತಯ್ಯ ಭಾಗವತರ್ ಅವರ ಹಲವು ಅಪರೂಪ ರಚನೆಗಳು ಬೆಳಕು ಕಂಡವು. ಮಾನವತಿ (ಜತಿ ಸ್ವರ), ನಾಟಕಪ್ರಿಯ (ಸದಾಶಿವ) ಎರಡೂ ಹೆಚ್ಚಾಗಿ ಬಳಕೆ ಇಲ್ಲದ ರಾಗಗಳು. ನಿರೋಷ್ಟಕ ರಾಗದ `ರಾಜ ರಾಜ ರಾಜಿತೆ~ ಕೇಳುಗರಿಗೆ ಎಂದೂ ಪ್ರಿಯವಾದುದೇ. ತಮ್ಮ ಉತ್ತಮ ಕಂಠ ಹಾಗೂ ನಿರೂಪಣೆಗಳಿಂದ ಶುಭಪಂತುವರಾಳಿ (ಮನೋನ್ಮಣಿ) ರಾಗವನ್ನು ಹಿತಮಿತವಾಗಿ ವಿಸ್ತರಿಸಿದರು. ಕಲ್ಯಾಣಿ (ಶಾರದೆ ವರದೆ) ಮತ್ತು ನಾದನಾಮಕ್ರಿಯೆ (ಏನೆಂದು ಪೊಗಳಲಿ) ದೇವರನಾಮಗಳೂ ಸುಭಗ! ಪ್ರಖ್ಯಾತ ಜಿಂಜೋಟಿ ತಿಲ್ಲಾನದೊಂದಿಗೆ ಮುಕ್ತಾಯ. ಪಿಟೀಲಿನಲ್ಲಿ ಎಚ್. ಎಂ. ಸ್ಮಿತಾ, ಮೃದಂಗದಲ್ಲಿ ಬಿ.ಸಿ. ಮಂಜುನಾಥ್ ಹಾಗೂ ಘಟದಲ್ಲಿ ಎನ್. ಎಸ್. ಕೃಷ್ಣಪ್ರಸಾದ್ ದಕ್ಷತೆಯಿಂದ ಪಕ್ಕವಾದ್ಯಗಳನ್ನು ನುಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT