ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತಸ ನೀಡಿದ ಗೆಲುವು: ರಿಕಿ ಪಾಂಟಿಂಗ್

Last Updated 25 ಫೆಬ್ರುವರಿ 2011, 18:00 IST
ಅಕ್ಷರ ಗಾತ್ರ

ನಾಗಪುರ: ಕಿವೀಸ್ ವಿರುದ್ಧದ ಪಂದ್ಯದಲ್ಲಿ ಲಭಿಸಿದ ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಆಸ್ಟ್ರೇಲಿಯಾ ತಂಡದ ನಾಯಕ ರಿಕಿ ಪಾಂಟಿಂಗ್ ಹೇಳಿದರು. ‘ನ್ಯೂಜಿಲೆಂಡ್ ಪ್ರಬಲ ತಂಡ. ಅವರ ಮುಂದೆ ಭರ್ಜರಿ ಜಯ ಸಾಧಿಸಿರುವುದು ಸಂತಸದ ವಿಚಾರ. ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪಂದ್ಯಗಳನ್ನು ಆಡಬೇಕಿದೆ. ಟೂರ್ನಿಯಲ್ಲಿ ಉತ್ತಮ ಆರಂಭ ದೊರೆತಿದೆ’ ಎಂದು ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಪಾಂಟಿಂಗ್ ತಿಳಿಸಿದರು.

‘ಆಲ್‌ರೌಂಡ್ ಪ್ರದರ್ಶನ ನೀಡಿದ ಕಾರಣ ಗೆಲುವು ಒದಗಿದೆ. ವೇಗಿಗಳು ಎದುರಾಳಿ ತಂಡವನ್ನು ಸಣ್ಣ ಮೊತ್ತಕ್ಕೆ ನಿಯಂತ್ರಿಸಿದರು. ವ್ಯಾಟ್ಸನ್ ಮತ್ತು ಹಡಿನ್ ಭರ್ಜರಿ ಆರಂಭ ನೀಡಿದರು. ಇದರಿಂದ ನಮ್ಮ ಕೆಲಸ ಸುಲಭವಾಯಿತು. ವೆಟೋರಿ ಒಳಗೊಂಡಂತೆ ಸ್ಪಿನ್ನರ್‌ಗಳ ವಿರುದ್ಧ ಇಬ್ಬರೂ ಚೆನ್ನಾಗಿ ಆಡಿದರು. ಇದು ಧನಾತ್ಮಕ ಅಂಶ’ ಎಂದರು. ‘ಆದರೆ ಗೆಲುವಿನ ಅಲೆಯಲ್ಲಿ ಮೈಮರೆಯುವಂತಿಲ್ಲ. ಟೂರ್ನಿಯಲ್ಲಿ ಇನ್ನೂ ಕಠಿಣ ಪಂದ್ಯಗಳು ಎದುರಾಗಲಿವೆ.

ಶ್ರೀಲಂಕಾ ವಿರುದ್ಧದ ಮುಂದಿನ ಪಂದ್ಯ ಸವಾಲಿನದ್ದು. ತವರು ನೆಲದಲ್ಲಿ ಶ್ರೀಲಂಕಾ ಯಾವಾಗಲೂ ಅಪಾಯಕಾರಿ ತಂಡ’ ಎಂದು ಪಾಂಟಿಂಗ್ ನುಡಿದರು. ಆಸ್ಟ್ರೇಲಿಯಾ ತನ್ನ ಮುಂದಿನ ಪಂದ್ಯದಲ್ಲಿ ಮಾರ್ಚ್ 5 ರಂದು ಕೊಲಂಬೊದಲ್ಲಿ ಕುಮಾರ ಸಂಗಕ್ಕಾರ ಬಳಗವನ್ನು ಎದುರಿಸಲಿದೆ.

ಬೌಲಿಂಗ್ ಆನಂದಿಸುತ್ತೇನೆ: ‘ತಂಡಕ್ಕೆ ಅಗತ್ಯವಿರುವ ಸಂದರ್ಭಗಳಲ್ಲಿ ವಿಕೆಟ್ ಪಡೆಯಲು ಸಾಧ್ಯವಾಗುತ್ತಿರುವುದು ಸಂತಸ ಉಂಟುಮಾಡಿದೆ. ಇಲ್ಲಿನ ಪರಿಸ್ಥಿತಿಯಲ್ಲಿ ಬೌಲಿಂಗ್‌ನ್ನು ಆನಂದಿಸುತ್ತಿದ್ದೇನೆ’ ಎಂದು ಪಂದ್ಯಶ್ರೇಷ್ಠ ಮಿಷೆಲ್ ಜಾನ್ಸನ್ ಹೇಳಿದರು. ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದ ಮಿಷೆಲ್, ಶುಕ್ರವಾರವೂ ತಂಡದ ‘ಹೀರೊ’ ಆಗಿ ಮೆರೆದರು.

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನಿರ್ದಿಷ್ಟ ಬ್ಯಾಟ್ಸ್‌ಮನ್‌ನ್ನು ಗುರಿಯಾಗಿಸುವಿರಾ ಎಂಬ ಪ್ರಶ್ನೆಗೆ, ‘ಹಾಗೇನಿಲ್ಲ. ಸಂಗಕ್ಕಾರ ಮತ್ತು ತಿಲಕರತ್ನೆ ದಿಲ್ಶಾನ್ ಒಳಗೊಂಡಂತೆ ಪ್ರಮುಖ ಆಟಗಾರರು ಲಂಕಾ ತಂಡದಲ್ಲಿದ್ದಾರೆ. ಈ ಪಂದ್ಯ ಸವಾಲಿನಿಂದ ಕೂಡಿರಲಿದೆ’ ಎಂದು ಉತ್ತರಿಸಿದರು.

‘ಬ್ಯಾಟಿಂಗ್ ಕೈಕೊಟ್ಟಿತು’
ಬ್ಯಾಟ್ಸ್‌ಮನ್‌ಗಳು ಕೈಕೊಟ್ಟ ಕಾರಣ ಸೋಲು ಅನುಭವಿಸಬೇಕಾಯಿತು ಎಂದು ನ್ಯೂಜಿಲೆಂಡ್ ತಂಡದ ನಾಯಕ ಡೇನಿಯಲ್ ವೆಟೋರಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.

‘260 ರಿಂದ 270 ರನ್ ಪೇರಿಸಿದ್ದರೆ ಗೆಲುವು ಪಡೆಯುವ ವಿಶ್ವಾಸವಿತ್ತು. ಆದರೆ ನಮ್ಮ ಯೋಜನೆ ನಡೆಯಲಿಲ್ಲ. ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವೆವು. ಇಲ್ಲಿನ ಪಿಚ್ ಚೆನ್ನಾಗಿತ್ತು. ಆಸ್ಟ್ರೇಲಿಯಾ ನಮಗಿಂತ ಉತ್ತಮ ಪ್ರದರ್ಶನ ನೀಡಿತು. ಒತ್ತಡವನ್ನು ನಿಭಾಯಿಸುವ ತಂಡ ಯಶಸ್ಸು ಕಾಣುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT