ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪರ್ಕ ಕಡಿದುಕೊಂಡ ಮೊಗಳ್ಳಿ, ಹೊಸ್ಕೇರಿ

Last Updated 5 ಜುಲೈ 2013, 7:22 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಮಳೆ ಇಳಿಮುಖವಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಗುರುವಾರ ಬೆಳಿಗ್ಗೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ 61ಮಿ.ಮೀ ಮಳೆ ದಾಖಲಾಗಿದೆ.

ಬುಧವಾರ ಮಧ್ಯಾಹ್ನದ ವರೆಗೆ ಧಾರಾಕಾರ ಸುರಿದ ಮಳೆಯ ಅಬ್ಬರ ಸಂಜೆ ವೇಳೆ ಕಡಿಮೆಯಾಯಿತು. ರಾತ್ರಿ ಹೊತ್ತು ಮತ್ತೆ ಚುರುಕುಗೊಂಡಿದ್ದ ಮಳೆ ಬೆಳಿಗ್ಗೆಯ ನಂತರ ವಿರಾಮ ಪಡೆದಿದೆ. ಗುರುವಾರ ಆಗಾಗ ಚದುರಿದಂತೆ ಮಳೆಯಾಗಿದ್ದು ಹೊರತುಪಡಿಸಿದರೆ ದೊಡ್ಡ ಪ್ರಮಾಣದಲ್ಲಿ ಮಳೆಯಾಗಿಲ್ಲ. ಶಾಲ್ಮಲಾ ಹಾಗೂ ವರದಾ ನದಿ, ಕೆಂಗ್ರೆಹೊಳೆಯ ಪ್ರವಾಹ ಇಳಿಮುಖವಾಗಿದ್ದು, ರಸ್ತೆ ಸಂಚಾರ ಸುಗಮವಾಗಿದೆ.

ಪ್ರತಿವರ್ಷ ಮಳೆಗಾಲದಲ್ಲಿ ತಾಲ್ಲೂಕಿನ ಪೂರ್ವ ಭಾಗದ ಬನವಾಸಿ ಸಮೀಪದ ಮೊಗಳ್ಳಿ ಹಾಗೂ ಹೊಸ್ಕೇರಿ ಗ್ರಾಮಗಳು ವರದಾ ನದಿಯ ಪ್ರವಾಹದಿಂದ ಸಂಪರ್ಕ ಕಡಿದುಕೊಂಡು ದ್ವೀಪದಂತಾಗುತ್ತಿದ್ದವು. ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಹಿಂದಿನ ವರ್ಷ ರೂ 10ಲಕ್ಷ ವೆಚ್ಚದಲ್ಲಿ ಮೊಗಳ್ಳಿ ಮತ್ತು ಹೊಸ್ಕೇರಿ ನಡುವೆ ರಸ್ತೆ ಮಾರ್ಗ ನಿರ್ಮಾಣ ಮಾಡಲಾಗಿತ್ತು. ಆದರೆ ಬುಧವಾರ ಸುರಿದ ಅಬ್ಬರದ ಮಳೆಗೆ ಈ ರಸ್ತೆ ಕೊಚ್ಚಿಕೊಂಡು ಹೋಗಿದ್ದು, ರೂ4ಲಕ್ಷ ಹಾನಿ ಅಂದಾಜಿಸಲಾಗಿದೆ.

ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಮತ್ತು ಅಧಿಕಾರಿಗಳು ಬುಧವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗ ರಸ್ತೆ ದುರಸ್ತಿ ಕಾರ್ಯ ಪ್ರಾರಂಭಿಸಿದೆ. ವರದಾ ನದಿಯ ಪ್ರವಾಹದಿಂದ ನೀರಿನಲ್ಲಿ ಮುಳುಗಿದ್ದ ಅಜ್ಜರಣಿ ಗ್ರಾಮಕ್ಕೆ ತೆರಳುವ ಸೇತುವೆ ಯಥಾಸ್ಥಿತಿಯಲ್ಲಿದೆ. ಸಹಸ್ರಾರು ಎಕರೆ ಭತ್ತದ ಗದ್ದೆಯ ಮೇಲೆ ವರದಾ ನದಿ ನೀರು ಹರಿಯುತ್ತಿದ್ದು, ಹರಿವಿನ ಪ್ರಮಾಣ ತುಸು ಕಡಿಮೆಯಾಗಿದೆ.

ಬುಧವಾರ ಸುರಿದ ಮಳೆಗೆ ಮನೆ, ರಸ್ತೆ, ಸೇತುವೆ ಸೇರಿದಂತೆ ಸಾಕಷ್ಟು ಆಸ್ತಿಪಾಸ್ತಿ ನಷ್ಟವಾಗಿದೆ. ಶಿರಸಿ ಉಪವಿಭಾಗದಲ್ಲಿ ರೂ 20ಲಕ್ಷ ಅಂದಾಜು ಹಾನಿ ಸಂಭವಿಸಿರಬಹುದೆಂದು ಲೆಕ್ಕ ಹಾಕಲಾಗಿದ್ದು, ಶಿಥಿಲವಾಗಿರುವ ಜಿಲ್ಲಾ ಪಂಚಾಯ್ತಿ ಹಾಗೂ ಲೋಕೋಪಯೋಗಿ ಇಲಾಖೆ ರಸ್ತೆಗಳ ನಷ್ಟ ಅಂದಾಜಿಸಬೇಕಾಗಿದೆ.

ಶಿರಸಿ ತಾಲ್ಲೂಕಿನಲ್ಲಿ ಐದು ಮನೆಗಳಿಗೆ ಧಕ್ಕೆ, ಉಳಿದ ನಷ್ಟ ಸೇರಿದಂತೆ ಒಟ್ಟು ರೂ 8 ಲಕ್ಷ, ಸಿದ್ದಾಪುರ ತಾಲ್ಲೂಕಿನಲ್ಲಿ ರೂ 5 ಲಕ್ಷ, ಯಲ್ಲಾಪುರ ರೂ 4 ಲಕ್ಷ ಹಾಗೂ ಮುಂಡಗೋಡ ರೂ 3 ಲಕ್ಷ ಹಾನಿಯಾಗಿರಬಹುದೆಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಪ್ರಕೃತಿ ವಿಕೋಪದಿಂದ ಹಾನಿಯಾಗಿರುವ ಮನೆಗಳಿಗೆ ಎರಡು ದಿನಗಳಲ್ಲಿ ಪರಿಹಾರದ ಮೊತ್ತ ನೀಡುವಂತೆ ಎಲ್ಲ ತಹಶೀಲ್ದಾರ್‌ರಿಗೆ ಸೂಚಿಸಲಾಗಿದೆ.

ತಕ್ಷಣಕ್ಕೆ ಪರಿಹಾರ ನೀಡಲು ಅನುದಾನದ ಕೊರತೆಯಿಲ್ಲ ಎಂದು ಉಪವಿಭಾಗಾಧಿಕಾರಿ ರಾಜು ಮೊಗವೀರ ತಿಳಿಸಿದರು. ತೋಟಗಳಿಗೆ ಹಾನಿಯಾಗಿದ್ದರೆ ರೈತರು ಅರ್ಜಿ ನೀಡಿದಲ್ಲಿ ಸಮೀಕ್ಷೆ ನಡೆಸಿ ಸರ್ಕಾರ ನಿರ್ಧರಿಸಿದ ಮಟ್ಟದಲ್ಲಿ ಹಾನಿಯಾಗಿದ್ದರೆ ಪರಿಹಾರ ನೀಡಲಾಗುತ್ತದೆ ಎಂದರು. 

ಹೆಸ್ಕಾಂಗೆ ನಷ್ಟ: ಮಂಗಳವಾರ ಹಾಗೂ ಬುಧವಾರ ಸುರಿದ ಭಾರೀ ಮಳೆಗೆ ಹೆಸ್ಕಾಂ ಶಿರಸಿ ವಿಭಾಗದಲ್ಲಿ ಒಟ್ಟು 120 ವಿದ್ಯುತ್ ಕಂಬ ಹಾಗೂ ಎಂಟು ವಿದ್ಯುತ್ ಪರಿವರ್ತಕ(ಟಿಸಿ)ಗಳು ಹಾನಿಗೊಳಗಾಗಿವೆ.

ಶಿರಸಿ ತಾಲ್ಲೂಕಿನಲ್ಲಿ 25 ಕಂಬ ಹಾಗೂ ಮೂರು ಟಿಸಿ, ಯಲ್ಲಾಪುರ 33 ಕಂಬ, ಒಂದು ಟಿಸಿ, ಸಿದ್ದಾಪುರ 33 ಕಂಬ, ದಾಂಡೇಲಿ 11 ಕಂಬ, ಒಂದು ಟಿಸಿ, ಹಳಿಯಾಳ 12 ಕಂಬ, ಎರಡು ಟಿಸಿ ಹಾಗೂ ಮುಂಡಗೋಡ 17 ಕಂಬ ಹಾಗೂ ಒಂದು ಟಿಸಿ ಹಾಳಾಗಿದೆ ಎಂದು ಹೆಸ್ಕಾಂ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT