ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಬಂಧವಿರುವುದೇ ಮುರಿದುಕೊಳ್ಳಲಿಕ್ಕೆ

Last Updated 8 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸುಮಾರು ಆರು ವರ್ಷಗಳ ಹಿಂದಿನ ಮಾತು. ಮಧುರದನಿಯ ನಟಿಯೊಬ್ಬರು ತಮ್ಮ ಮನಸ್ಸನ್ನು ಕನ್ನಡಿಗೆ ಹೋಲಿಸಿಕೊಂಡಿದ್ದರು. ಯಾವುದೇ ಸಂಬಂಧ ಮುರಿದರೆ ಅದನ್ನು ತಡೆದುಕೊಳ್ಳುವ ಶಕ್ತಿ ಇಲ್ಲದ ಸುಕೋಮಲೆ ತಾವೆಂದು ಟೀವಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ನಟಿಸಿದ್ದು ಬೆರಳೆಣಿಕೆಯ ಚಿತ್ರಗಳಲ್ಲಷ್ಟೇ.
 
ಈಗ ಆ ನಟಿಯ ಬದುಕಿನ ದಿಕ್ಕು ಬದಲು. ಮಾತೂ ಬೇರೆ. ವರಸೆಯಲ್ಲಿ ವ್ಯತ್ಯಾಸ. `ಸಂಬಂಧ ಮುರಿದುಕೊಳ್ಳುವುದು~ ತಮಗೆ ತುಂಬಾ ಇಷ್ಟವಾದ ಎರಡು ಪದಗಳೆಂದು ಅವರು ನಿಸ್ಸಂಕೋಚವಾಗಿ ಹೇಳಿಕೊಳ್ಳಲು ಕಾರಣ ಉಂಟು.
 
ಸಂಜಯ್ ಗುಪ್ತಾ, ಅರ್ಶದ್ ವಾರ್ಸಿ, ಕುನಾಲ್ ಕಪೂರ್ ಹಾಗೂ ಅಪೂರ್ವ ಲಾಖಿಯಾ ಜೊತೆ ಡೇಟಿಂಗ್ ನಡೆಸಿದ ಹುಡುಗಿ ಎಂಬ ಕಾರಣಕ್ಕೆ ಪದೇಪದೇ ಸುದ್ದಿಯಲ್ಲಿದ್ದ ಆ ಹೆಣ್ಣುಮಗಳ ಹೆಸರು ದಿಯಾ ಮಿರ್ಜಾ.

ಇದೀಗ ಸಾಹಿಲ್ ಸಾಂಘ ಕೈಹಿಡಿದು ಹೆಜ್ಜೆ ಹಾಕುತ್ತಿರುವ ಅವರು ವೃತ್ತಿ ಹಾಗೂ ಖಾಸಗಿ ಬದುಕಿನ ಮಹತ್ವದ ಘಟ್ಟಕ್ಕೆ ಬಂದು ನಿಂತಿದ್ದಾರೆ. ಸದ್ಯದಲ್ಲೇ ಸಾಹಿಲ್ ಅವರನ್ನು ವಿವಾಹವಾಗುವುದಾಗಿಯೂ ಅವರು ಸುದ್ದಿ ಸ್ಫೋಟಿಸಿದ್ದಾಗಿದೆ.

ದಿಯಾ ಬೇಡಿಕೆ ಕಳೆದುಕೊಂಡ ನಟಿ. ಅದಕ್ಕೇ ಅವರೀಗ ತಮ್ಮದೇ ನಿರ್ಮಾಣ ಸಂಸ್ಥೆ ಕಟ್ಟಿದ್ದಾರೆ. `ಬಾರ್ನ್ ಫ್ರೀ ಪ್ರೊಡಕ್ಷನ್ಸ್~ ಎಂಬುದು ಸಂಸ್ಥೆಯ ಹೆಸರು. ಸಾಹಿಲ್ ಹಾಗೂ ಜಾಯೆದ್ ಖಾನ್ ಈ ಸಂಸ್ಥೆಯ ಪಾಲುದಾರರು. ಇವರೆಲ್ಲ ಸೇರಿ ನಿರ್ಮಿಸುತ್ತಿರುವ ಚಿತ್ರದ ಹೆಸರು `ಲವ್ ಬ್ರೇಕಪ್ಸ್ ಜಿಂದಗಿ~ (ಪ್ರೀತಿ ಮುರಕೊಂಡ ಬದುಕು ಎಂಬುದು ಅರ್ಥ).

ಖಾಸಗಿ ಬದುಕು ಹಾಗೂ ವೃತ್ತಿಬದುಕನ್ನು ನಟ-ನಟಿಯರು, ನಿರ್ದೇಶಕರು ಹೇಗೆ ನಿಸ್ಸಂಕೋಚವಾಗಿ ಜೋಡಿಸುತ್ತಿದ್ದಾರೆ ಎಂಬುದಕ್ಕೆ ದಿಯಾ ನಿರ್ಮಾಣ ಯೋಜನೆ ತಾಜಾ ಉದಾಹರಣೆ.

`ನಾನು, ಜಾಯೆದ್, ಅರ್ಶದ್ ನಿರ್ಮಾಣದ ಬಗ್ಗೆ ಚಿಂತಿಸುತ್ತಾ ಕೂತಾಗ ಅದಕ್ಕೆ ಬಾರ್ನ್ ಫ್ರೀ ಎಂಬ ಹೆಸರು ಕೊಟ್ಟಿದ್ದು ಸಾಹಿಲ್. ನಾವು ಹುಟ್ಟಾ ಸ್ವತಂತ್ರರು ಎಂದು ನಂಬಿದವಳು ನಾನು. ಅದನ್ನು ಸಮರ್ಥಿಸುವಂತಿದೆ ನಮ್ಮ ನಿರ್ಮಾಣ ಸಂಸ್ಥೆಯ ಹೆಸರು.

ಅಂದುಕೊಂಡಿದ್ದನ್ನ ಎಲ್ಲರೂ ಮಾಡಬೇಕು. ಅದು ತಪ್ಪು, ಸರಿ ಎಂಬುದು ಗೊತ್ತಾಗಲು ಹೆಚ್ಚು ಕಾಲವೇನೂ ಬೇಕಿಲ್ಲ~- ಇದು ದಿಯಾ ಫಿಲಾಸಫಿ.

ಯಾರೊಟ್ಟಿಗೂ ತನ್ನ ಖಾಸಗಿ ಬದುಕಿನ ಅಷ್ಟೂ ಸಂಗತಿಗಳನ್ನು ಒಂದೇ ಉಸಿರಲ್ಲಿ ಹೇಳಿಕೊಳ್ಳಬಲ್ಲ ಅಪರೂಪದವರು ದಿಯಾ. ಮಾಧ್ಯಮಮಿತ್ರರು ಎದುರಲ್ಲಿ ಕೂತರೂ ಅವರದ್ದು ಸಂಕೋಚವಿಲ್ಲದ ಭಾವ. ಒಮ್ಮೆ ಪ್ರಮುಖ ಹಿಂದಿ ಪತ್ರಿಕೆಯ ಸುದ್ದಿಮಿತ್ರರೊಬ್ಬರು ನಿಮ್ಮ ಬದುಕಿನ ಎಲ್ಲಾ ಪ್ರಣಯಗಳ ಕುರಿತು ಹೇಳಿ ಎಂಬ ಪ್ರಶ್ನೆ ಮುಂದಿಟ್ಟರು.

ಅದಕ್ಕೆ ದಿಯಾ ಕೊಟ್ಟ ಉತ್ತರ ಹೀಗಿತ್ತು: `ಅರ್ಶದ್ ವಾರ್ಸಿ ಜೊತೆ ನಾನು ಡೇಟಿಂಗ್ ನಡೆಸುತ್ತಿದ್ದೇನೆ ಎಂಬ ಸುದ್ದಿ ಸ್ಫೋಟಗೊಂಡ ಸಂದರ್ಭದಲ್ಲಾಗಲೇ ಸಾಹಿಲ್ ನನ್ನ ಮನ ಗೆದ್ದು ಆಗಿತ್ತು. ಹಾಗೆ ನೋಡಿದರೆ ನನಗೂ ಅರ್ಶದ್‌ಗೂ ಸಂಬಂಧವೇ ಇರಲಿಲ್ಲ. ಸುಮ್ಮನೆ ಇಲ್ಲಸಲ್ಲದ್ದನ್ನು ಹೇಳಿ ಅವರ ಸಂಸಾರದಲ್ಲಿ ಹುಳಿ ಹಿಂಡುವ ಯತ್ನಗಳು ನಡೆದವು.

ಅರ್ಶದ್ ನನಗೆ ಇಷ್ಟವಾಗುವ ಸಾಧ್ಯತೆ ಇತ್ತು. ಅಷ್ಟರಲ್ಲಿ ಸಾಹಿಲ್ ಸಿಕ್ಕಿದ. ನನಗೆ ಅರ್ಶದ್‌ಗಿಂತ ಇವನೇ ಇಷ್ಟವಾದ. ಇದಕ್ಕೂ ಸಾಕಷ್ಟು ಮುಂಚೆ ನನಗಿಂತ ವಯಸ್ಸಿನಲ್ಲಿ ಸಾಕಷ್ಟು ದೊಡ್ಡವನಾದ ಅಪೂರ್ವ ಲಾಖಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾಗ ಅಮ್ಮನಿಗೆ ಬೇಸರವಾಗಿತ್ತು.

ನನಗಿಂತ ತುಂಬಾ ವಯಸ್ಸಾದವನ ಜೊತೆ ಸುತ್ತಾಡುವುದನ್ನು ಅವರು ಸಹಿಸಲಿಲ್ಲ. ಆ ವಿಷಯವಾಗಿ ನಿತ್ಯವೂ ವಾದ ನಡೆಯುತ್ತಿತ್ತು. ಕೊನೆಗೆ ನಾನೇ ಸೋತೆ. ಲಾಖಿಯಾಗೂ ಹೇಳಿಬಿಟ್ಟೆ; ಅಮ್ಮ ಕಿರಿಕಿರಿ ಮಾಡುತ್ತಿದ್ದಾಳೆ, ಸುತ್ತೋದು ಸಾಕು ಅಂತ. ಅವನೂ ಒಪ್ಪಿ ಸುಮ್ಮನಾದ.

ಅರ್ಶದ್ ಜೊತೆ ನನ್ನ ಹೆಸರು ಕೇಳಿಬಂದಾಗಲೂ ಅಮ್ಮ ಅವನ ಸಂಸಾರ ಹಾಳಾಗುತ್ತದೆ ಎಂದು ನನ್ನ ಜೊತೆ ಜಗಳ ಕಾದಿದ್ದಳು. ನನಗೂ ಅವನಿಗೂ ಸಂಬಂಧವಿಲ್ಲ ಎಂದು ಎಷ್ಟು ಹೇಳಿದರೂ ಅವಳು ಒಪ್ಪುತ್ತಿರಲಿಲ್ಲ. ಅದಕ್ಕೇ ನಾನು ಬೇಗ ಸಾಹಿಲ್ ಜೊತೆ ಡೇಟ್ ಮಾಡತೊಡಗಿದೆ~!

ಬಹುತೇಕ ದಿಯಾ ಮಿರ್ಜಾ ಬದುಕಿನ ಘಟನಾವಳಿಗಳನ್ನೇ ಆಧರಿಸಿದಂತಿರುವ `ಲವ್ ಬ್ರೇಕಪ್ಸ್ ಜಿಂದಗಿ~ ಶೀರ್ಷಿಕೆ ಈಗ ಕುತೂಹಲ ಹುಟ್ಟಿಸಿದೆ. `ಇದು ನನ್ನ ಬದುಕಿನ ಕಥೆಯೇನೂ ಅಲ್ಲ.

ಜಸ್ಟ್ ಇನ್ನೊಂದು ರೊಮ್ಯಾಂಟಿಕ್ ಕಾಮಿಡಿ ಅಷ್ಟೆ~ ಎನ್ನುವ ದಿಯಾಗೆ ಅಮ್ಮನಿಂದ ಮೊನ್ನೆಮೊನ್ನೆ ಒಂದು ಪ್ರಶ್ನೆ ಎದುರಾಯಿತು: `ಮುಂದೆ ಇವನೂ ಇಷ್ಟವಾಗದೇ ಹೋದರೆ ಏನು ಮಾಡುವೆ?~
ಅದಕ್ಕೆ ದಿಯಾ ಉತ್ತರ: `ಬ್ರೇಕ್‌ಅಪ್... ಬಹುಶಃ ಸಂಬಂಧಗಳಿರುವುದೇ ಮುರಿದುಕೊಳ್ಳಲಿಕ್ಕೆ~!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT