ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಆಶಯಗಳ ಅನುಷ್ಠಾನ ಇಂದಿನ ಅಗತ್ಯ

Last Updated 26 ಜನವರಿ 2012, 19:35 IST
ಅಕ್ಷರ ಗಾತ್ರ

 ಬೆಂಗಳೂರು: `ನಮ್ಮ ಸಂವಿಧಾನವನ್ನು ಪ್ರಮಾಣ ಮಾಡುವುದಕ್ಕಷ್ಟೇ ಚೆನ್ನಾಗಿ ಬಳಸಲಾಗುತ್ತಿದೆ. ಆದರೆ, ಅದರ ಆಶಯಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಲು ಇನ್ನೂ ಸಾಧ್ಯವಾಗಿಲ್ಲ~ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಲ್. ಹನುಮಂತಯ್ಯ ಗುರುವಾರ ಇಲ್ಲಿ ವಿಷಾದಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನಗರ ಜಿಲ್ಲಾ ಶಾಖೆಯು 62ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಮಲ ಹೊರುವ ಪದ್ಧತಿ  ಇನ್ನೂ ಜೀವಂತವಾಗಿದೆ. ಇದು ಮಾನವನಿಗೆ ಕನಿಷ್ಠ ಗೌರವ ಕೂಡ ಸಿಗುತ್ತಿಲ್ಲ ಎಂಬುದರ ಸಂಕೇತ. ನಾವು ತಾಂತ್ರಿಕವಾಗಿ ಎಷ್ಟೇ ಮುಂದುವರಿದಿದ್ದರೂ 30 ಜಿಲ್ಲೆಗಳಿಗೆ ಒಂದೊಂದು ಒಳಚರಂಡಿ ಸ್ವಚ್ಛಗೊಳಿಸುವ ಯಂತ್ರಗಳನ್ನು ಖರೀದಿಸಲು ಸಾಧ್ಯವಾಗಿಲ್ಲ. ಒಂದು ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಮಂಡಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಕೇವಲ 30 ಇಂತಹ ಯಂತ್ರಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲವೇ?~ ಎಂದು ಅವರು ಪ್ರಶ್ನಿಸಿದರು.

`ಅಂಬೇಡ್ಕರ್ ಹೇಳಿದಂತೆ ದೇಶದಲ್ಲಿ ಎಲ್ಲಿಯವರೆಗೆ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ಹೋಗಲಾಡಿಸಲು ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೆ ರಾಜಕೀಯ ಸ್ವಾತಂತ್ರ್ಯವನ್ನೂ ಉಳಿಸಿಕೊಳ್ಳುವುದು ಕಷ್ಟದ ಕೆಲಸ~ ಎಂದು ಅವರು ಅಭಿಪ್ರಾಯಪಟ್ಟರು.

ಹೋರಾಟ ಮುಂದುವರಿಸಬೇಕು: ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್, `ಸಮಾನತೆ ಸಂವಿಧಾನದ ಆಶಯ. ಆದರೆ, ಆ ತತ್ವಗಳಿಂದ ವಂಚಿತರಾಗುತ್ತಿದ್ದೇವೆ. ಇದರಿಂದ ದಲಿತರು ಕೈಕಟ್ಟಿ ಕೂರದೆ ಹೋರಾಟ ಮುಂದುವರಿಸಬೇಕು~ ಎಂದು ಕರೆ ನೀಡಿದರು.

`ನಮ್ಮ ಸರ್ಕಾರಗಳಿಗೆ ಜನರಿಗೆ ಕನಿಷ್ಟ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ನೀರನ್ನೇ ನಾವು ಖರೀದಿಸಿ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸನ್ನಿವೇಶದಲ್ಲಿ ಒಳ್ಳೆಯ ಸಮಾಜ ಕಟ್ಟುವ ಜವಾಬ್ದಾರಿ ಎಲ್ಲ ಸಂಘಟನೆಗಳ ಮೇಲಿದೆ~ ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಂ. ರಾಮಯ್ಯ ಜೀವನಹಳ್ಳಿ ಸ್ವಾಗತಿಸಿದರು. ರಾಜ್ಯ ಸಮಿತಿಯ ಕಾರ್ಯನಿರ್ವಾಹಕ ಸದಸ್ಯ ಕಾರೇಹಳ್ಳಿ ಹನುಮಂತರಾಯಪ್ಪ ಪ್ರಾಸ್ತಾವಿಕ ಭಾಷಣ ಮಾಡಿದರು.

ರಾಜ್ಯ ಸಂಚಾಲಕ ಎನ್. ಗಿರಿಯಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗುಲ್ಬರ್ಗದ ಸಿವಿಲ್ ನ್ಯಾಯಾಧೀಶರಾದ ಗೋಖಲೆ, ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಕಾರ್ಯನಿರ್ವಾಹಕ ಸದಸ್ಯ ಚಂದ್ರಶೇಖರ್‌ಸ್ವಾಮಿ, ಸದಸ್ಯ ಗೌಡಗೆರೆ ಮಾಯುಶ್ರೀ, ದಲಿತ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ಆದಿಲಕ್ಷ್ಮಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT