ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸಾರ ಸಾಗರ ಕಾಜೋಲ್ ಸಪೂರ

Last Updated 11 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಳಿಗ್ಗೆ 5.30ಕ್ಕೆ ಸರಿಯಾಗಿ ಅಲಾರ್ಮ್‌ ಸದ್ದು. ಕಾಜೋಲ್ ದಿನ ಪ್ರಾರಂಭವಾಗುವುದು ಅಲ್ಲಿಂದ. ಅವರೀಗ ನಟಿಯಲ್ಲ. ಆದರೂ ಕಳೆದ ಆರು ತಿಂಗಳಲ್ಲಿ 8 ಕೆ.ಜಿ. ದೇಹತೂಕ ಇಳಿಸಿಕೊಂಡಿದ್ದಾರೆ. ಎದ್ದು ಫ್ರೆಷ್ ಆದವರೇ ಸೀದಾ ಕಾರು ಹತ್ತಿ ಜಿಮ್‌ನತ್ತ ಹೊರಡುತ್ತಾರೆ.

ಮರಳುವುದು 7ಕ್ಕೆ. ಬಂದವರೇ ಮಕ್ಕಳಾದ ನ್ಯಾಸಾ, ಯುಗ್ ಇಬ್ಬರನ್ನೂ ಎಬ್ಬಿಸಿ ಶಾಲೆಗೆ ರೆಡಿ ಮಾಡುವ ಉಸಾಬರಿ. 8.15ರ ಸುಮಾರಿಗೆ ಮಕ್ಕಳ ಜೊತೆ ಅವರೂ ಡೈನಿಂಗ್ ಟೇಬಲ್ ಎದುರು ಆಸೀನರಾಗುವುದು ರೂಢಿ.

ಅವರ ಮಾವ, ಅತ್ತೆ ಕೂಡ ಅಡುಗೆಯವರು ಮಾಡಿಟ್ಟ ತಿಂಡಿಯನ್ನು ಮೊಮ್ಮಕ್ಕಳಿಗೆ ಬಡಿಸುತ್ತಾ ಬೆಳಗನ್ನು ಕಳೆಗಟ್ಟಿಸುತ್ತಾರೆ. ಮಕ್ಕಳು ಕಾರ್ ಹತ್ತಿ ಶಾಲೆಯ ಕಡೆಗೆ ಹೊರಟ ಕೆಲವೇ ನಿಮಿಷಗಳಲ್ಲಿ ಕಾಜೋಲ್ ಇನ್ನೊಂದು ಕಾರ್‌ನಲ್ಲಿ ಕಚೇರಿಯತ್ತ ಧಾವಿಸುತ್ತಾರೆ.

ಹಾಗೆ ನೋಡಿದರೆ ಕಾಜೋಲ್ ಡಯಟ್ ಗೀಳಿಗೆ ಬಿದ್ದು ಐದು ವರ್ಷವಾಗಿದೆ. ಆದರೂ ಅವರ ದೇಹತೂಕ ಕಳೆದ ಆರು ತಿಂಗಳಲ್ಲಿ ಇಳಿದಷ್ಟು ಎಂದೂ ಇಳಿದಿರಲಿಲ್ಲ. ಈಗ ಪ್ರಜ್ಞಾಪೂರ್ವಕವಾಗಿ ಬಾಯಿಕಟ್ಟುವುದು ಅವರಿಗೆ ಅಭ್ಯಾಸ. ಸಂಜೆ ಪಾರ್ಟಿಗೋ ಸ್ನೇಹಿತೆಯರ ಜೊತೆ ಊಟಕ್ಕೋ ಹೋಗಬೇಕೆಂದರೆ ಮನೆಯಲ್ಲಿ ಪಥ್ಯಾಹಾರ ಸೇವಿಸಿಯೇ ಹೊರಡುವುದು.

ಅಲ್ಲಿ ಪಾರ್ಟಿ ಮ್ಯಾನರ್ಸ್‌ ಇರಬೇಕು ಎಂಬ ಕಾರಣಕ್ಕೆ ಕ್ಯಾಲರಿ ಕಡಿಮೆ ಇರುವ ಯಾವುದಾದರೂ ತಿನಿಸಿನ ರುಚಿ ನೋಡುತ್ತಾರಷ್ಟೆ. ಫ್ರೆಂಚ್ ಫ್ರೈನ ಒಂದು ತುಂಡನ್ನೂ ಬಾಯಿಗೆ ಹಾಕುವುದಿಲ್ಲ. ಮೊದಮೊದಲು ಆಪ್ತೇಷ್ಟರು ಕಾಜೋಲ್ ಮಾಡಿದ್ದ ಈ ಸಂಕಲ್ಪ ನೋಡಿ ಮತ್ತೆ ಇವರು ಅಭಿನಯಲೋಕಕ್ಕೆ ಕಾಲಿಡುವ ನಿರ್ಧಾರ ಮಾಡಿದ್ದಾರೆ ಎಂದೇ ಭಾವಿಸಿದರು.

ಆದರೆ ಅವರು ಹಾಗೆ ಅಂದುಕೊಂಡ ಆರು ತಿಂಗಳಲ್ಲಿ ಒಂದು ಕಾಲದ ನಟಿ ಐದು ಆಫರ್‌ಗಳನ್ನು ನಿರಾಕರಿಸಿದರು. `ಬಾಂಬೆ ಟಾಕೀಸ್'ನಲ್ಲಿ ರಾಣಿ ಮುಖರ್ಜಿ ನಿರ್ವಹಿಸಿರುವ ಪಾತ್ರವನ್ನು ಕರಣ್ ಜೋಹರ್ ಮೊದಲು ಕಾಜೋಲ್‌ಗೆ ಕೊಡಲು ಮುಂದಾಗಿದ್ದರು. ಸದ್ಯಕ್ಕೆ ಅಂಥ ಪಾತ್ರ ಬೇಡ ಎಂಬ ತೀರ್ಮಾನ ಅಜಯ್ ದೇವಗನ್ ಪತ್ನಿಯ ಬಾಯಿಂದ ಬಂದಮೇಲೆ ಅವರು ಸುಮ್ಮನಾದರು.

ಪತಿ ಅಜಯ್ ದೇವಗನ್ ತಿಂಗಳಿಗೆ ಇಪ್ಪತ್ತು ದಿನ ಶೂಟಿಂಗ್‌ನಲ್ಲೇ ತೊಡಗುವುದು ಮಾಮೂಲು. ಮಕ್ಕಳ ಜವಾಬ್ದಾರಿ ಸಂಪೂರ್ಣವಾಗಿ ಕಾಜೋಲ್ ಹೆಗಲಿಗೆ. ತಾಯಿಯ ಸುಖವನ್ನು ಅವರು ಅಡಿಗಡಿಗೂ ಅನುಭವಿಸುತ್ತಿದ್ದಾರೆ. ಮಕ್ಕಳು ಏನು ಮಾಡಬೇಕು, ಏನು ಮಾಡಬಾರದು ಎಂಬ ಅಂತಿಮ ನಿರ್ಣಯ ಅವರದ್ದೇ. ಮೊಮ್ಮಕ್ಕಳ ಪರವಾಗಿ ಅಜ್ಜ ಅಜ್ಜಿಯರು ವಾದ ಮಾಡಲು ಬಂದರೂ ಪ್ರೀತಿಯಿಂದ ಗದರಿಸಿ ಅವರನ್ನು ಸುಮ್ಮನಾಗಿಸುವ ಕಲೆ ಕಾಜೋಲ್‌ಗೆ ಕರಗತ.

ಜೈಪುರದ ಪ್ರವಾಸೋದ್ಯಮ, ಗುಜರಾತ್‌ನಲ್ಲಿ ಸೋಲಾರ್ ಪ್ಲಾಂಟ್ ಮೇಲೆ ಅಜಯ್ ದೇವಗನ್ ಹಣ ತೊಡಗಿಸಿದ್ದಾರೆ. ಆ ವಹಿವಾಟಿನತ್ತ ಗಮನ ಹರಿಸಲೆಂದು ಕಚೇರಿಗೆ ಹೋಗಿ ಬರುವ ಅಭ್ಯಾಸ ಬೆಳೆಸಿಕೊಂಡಿರುವ ಕಾಜೋಲ್‌ಗೆ ಪತಿ ದುಡಿದ, ವಿನಿಯೋಗಿಸಿದ ಚಿಕ್ಕಾಸೂ ಪೋಲಾಗಬಾರದು ಎಂಬ ಎಚ್ಚರ.

ಮಾವ, ಅತ್ತೆ ಜೊತೆಗೆ ಇರದೇ ಇದ್ದರೆ ಮದುವೆಯಾದ ನಂತರ ಇಷ್ಟು ಸ್ವತಂತ್ರವಾಗಿ ಬದುಕಲು ಆಗುತ್ತಿರಲಿಲ್ಲ ಎನ್ನುವ ಕಾಜೋಲ್, ವಾರಕ್ಕೊಮ್ಮೆ ಮಕ್ಕಳನ್ನು ಲೋಣಾವಾಲಾದ ತಮ್ಮ ಅಮ್ಮನ ಮನೆಗೆ ಕರೆದುಕೊಂಡು ಹೋಗುತ್ತಾರೆ. ಮೊಮ್ಮಕ್ಕಳನ್ನು ನೋಡಬೇಕು ಎನ್ನಿಸಿದಾಗ ಕಾಜೋಲ್ ತಾಯಿ ತನುಜಾ ಅವರೇ ಮಗಳ ಮನೆಗೆ ಬರುತ್ತಾರೆ. ಬೀಗರೊಡನೆ ಕುಳಿತು ಅವರು ಲೋಕಾಭಿರಾಮ ಮಾತನಾಡುವುದಕ್ಕೆ ಮೊಮ್ಮಕ್ಕಳು ಸಾಕ್ಷಿಯಾಗುತ್ತಾರೆ. ಕಾಜೋಲ್ ಮಗಳು ನ್ಯಾಸಾಗೆ ತನುಜಾ ಅಜ್ಜಿ ಎಂದರೆ ಬಲು ಇಷ್ಟ.

ಯಾಕೆಂದರೆ, ಕೈತೋಟದಲ್ಲಿ ಹಾಕುವ ಗಿಡಗಳನ್ನು ತರಲು ನರ್ಸರಿಗಳಿಗೆ ಎಡತಾಕಲಿಕ್ಕೆ ಅವಳಿಗೆ ಅಜ್ಜಿಯ ಜೊತೆಯೇ ಬೇಕು.
ಮಾವ, ಅತ್ತೆ, ಅಮ್ಮ, ಗಂಡ, ಮಕ್ಕಳು ಎಲ್ಲರ ಭಾವನಾಲೋಕದ ಏರುಪೇರುಗಳಿಗೆ ಪ್ರೀತಿಯನ್ನು ಲೇಪಿಸುವುದು ಐರಾಷಾಮಿ ಲೋಕದ ಕಾಜೋಲ್‌ಗೆ ಸಾಧ್ಯ ಆದದ್ದಾದರೂ ಹೇಗೆ ಎಂದು ಅನೇಕರು ಪ್ರಶ್ನಿಸುವುದಿದೆ. ಕಾಜೋಲ್ ಬಾಲ್ಯ ಕಳೆದದ್ದು ಅಜ್ಜಿ, ಮುತ್ತಜ್ಜಿಯ ನೆರಳಿನಲ್ಲಿ. ಮುತ್ತಜ್ಜಿ ಸತ್ತಾಗ ಒಂದು ವಾರ ಅವರ ಕಣ್ಣೀರು ನಿಂತಿರಲಿಲ್ಲ. ಅಮ್ಮನಿಗಿಂತ ಹೆಚ್ಚಾಗಿ ಅವರನ್ನು ಹಚ್ಚಿಕೊಂಡಿದ್ದರು.

ದೊಡ್ಡವರಿಂದ ಕಲಿತ ಹೃದಯ ಶ್ರೀಮಂತಿಕೆಯ ಪಾಠವೇ ಎಲ್ಲವನ್ನೂ ನಿಭಾಯಿಸುವ ಮನೋಶಕ್ತಿಯನ್ನು ತಮಗೆ ನೀಡಿದೆ ಎಂಬುದು ಕಾಜೋಲ್ ಅನುಭವ ನುಡಿ.

ಇತ್ತೀಚೆಗೆ ಕನ್ನಡಿಯ ಮುಂದೆ ಹೆಚ್ಚು ಕಾಲ ಕಳೆಯುವ ಕಾಜೋಲ್‌ಗೆ ಹತ್ತು ವರ್ಷದ ಹಿಂದಿಗಿಂತ ಈಗ ತಾವು ಹೆಚ್ಚು ಸುಂದರ ಎನ್ನಿಸಿದೆಯಂತೆ. ನಟಿಸುವುದು ಬೇಡ ಎಂಬ ತೀರ್ಮಾನವನ್ನೇನೂ ಅವರು ತೆಗೆದುಕೊಂಡಿಲ್ಲ. ಸ್ಕ್ರಿಪ್ಟ್‌ಗಳು ಹುಡುಕಿಕೊಂಡು ಬರುತ್ತಿವೆ.

ಮಲಗುವ ಮೊದಲು ಅವುಗಳ ಮೇಲೆ ಕಣ್ಣಾಡಿಸುವ ಕಾಜೋಲ್ ಉತ್ತಮ ಕತೆಗಾಗಿ ಹುಡುಕಾಡುತ್ತಿದ್ದಾರಂತೆ. `ಸದ್ಯಕ್ಕೆ ಮಕ್ಕಳೇ ನನ್ನ ಕತೆ, ಗಂಡ ಹಾಡು, ಅತ್ತೆ-ಮಾವ, ಅಮ್ಮ ಕೋ-ಸ್ಟಾರ್ಸ್‌' ಎನ್ನುವುದು ಕಾಜೋಲ್ ಚಟಾಕಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT