ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕಾರ ಸಾರ್ವಕಾಲಿಕ ಸತ್ಯ: ಜೋಶಿ

Last Updated 8 ಜುಲೈ 2013, 5:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ವೇದ, ಉಪನಿಷತ್, ಪುರಾಣಗಳನ್ನೊ ಒಳಗೊಂಡ ಹಿಂದೂ ಸಂಸ್ಕಾರ ಸಾರ್ವಕಾಲಿಕ ಸತ್ಯ. ಆದರೆ ಇಂದು ನಮ್ಮತನ ಮರೆತು ಕೀಳುಭಾವನೆ ಬೆಳೆಸಿಕೊಂಡು ಪಾಶ್ಚಾತ್ಯರ ಸಂಸ್ಕೃತಿಯೇ ಶ್ರೇಷ್ಠ ಎಂದು ನಂಬಿದ್ದೇವೆ' ಎಂದು ಸಂಸದ ಪ್ರಹ್ಲಾದ ಜೋಶಿ ವಿಷಾದ ವ್ಯಕ್ತಪಡಿಸಿದರು.

ಇಲ್ಲಿನ ಕೇಶ್ವಾಪುರದ ಅಂಬಿಕಾನಗರದಲ್ಲಿ ಭಾನುವಾರ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ `ವೈದಿಕ ಪಾಠಶಾಲೆ' ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಟಿವಿ ಬಂದ ಮೇಲೆ ಉತ್ತಮ ಅಂಶಗಳ ಬಗ್ಗೆ ಗಮನ ನೀಡುವುದನ್ನೇ ಬಿಟ್ಟಿದ್ದೇವೆ ಎಂದು ಹೇಳಿದ ಅವರು, ವೈದಿಕ ಪಾಠಶಾಲೆಯ ಮೂಲಕ ಇಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಪರಿಚಯಿಸಿಕೊಡುವ ಪ್ರಯತ್ನ ಶ್ಲಾಘನೀಯ ಎಂದರು.
ವೈದಿಕ ಪಾಠಶಾಲೆಯ ಉಪಯೋಗ ಕೇವಲ ಬ್ರಾಹ್ಮಣ ಸಮಾಜಕ್ಕೆ ಮಾತ್ರವಲ್ಲ ಹಿಂದು ಸಮಾಜದ ಎಲ್ಲಾ ಜಾತಿಯ ಜನರಿಗೂ ದೊರೆಯಲಿ ಎಂದು ಜೋಶಿ ಆಶಿಸಿದರು.

ಸಮಾರಂಭ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಸಂಘಟನೆಗಳ ಹೆಸರಲ್ಲಿ ಮೂರು ದಶಕದ ಹಿಂದೆಯೇ ಹುಡಾದಿಂದ ನಿವೇಶನ ಪಡೆದವರು ಇನ್ನೂ ಕಟ್ಟಡಗಳನ್ನು ನಿರ್ಮಿಸದೆ ಹಾಳು ಬಿಟ್ಟಿದ್ದಾರೆ. ಬ್ರಾಹ್ಮಣ ಸಂಘದವರು ಒಗ್ಗಟ್ಟಿನಿಂದ ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಕಟ್ಟಡ ನಿರ್ಮಿಸಿಕೊಂಡು ಚಟುವಟಿಕೆ ಆರಂಭಿಸಿರುವುದು ಅನುಕರಣೀಯ ಎಂದರು.

ಮುಂದಿನ ದಿನಗಳಲ್ಲಿ ಹೆಚ್ಚು ಕ್ರಿಯಾಶೀಲ ಕೆಲಸಗಳಲ್ಲಿ ತೊಡಗಿಕೊಂಡು ಸಂಘ ಮುಂದುವರಿಯಲಿ. ಕಟ್ಟಡ ನಿರ್ಮಾಣದಲ್ಲಿ ಹೆಚ್ಚು ಆಸಕ್ತಿ ತೋರಿ ಅದನ್ನು ಸಾಧಿಸಿ ತೋರಿಸಿದ ಸಂಘದ ಅಧ್ಯಕ್ಷ ಡಾ.ಪಿ.ಬಿ.ಸತ್ತೂರು ಅವರ ಕೆಲಸ ಶ್ಲಾಘನೀಯ ಎಂದು ಹೇಳಿದರು.

ಹುಡಾ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ ಮಾತನಾಡಿ, ಬ್ರಾಹ್ಮಣ ಸಮಾಜದಿಂದ ಸಂಸ್ಕೃತಿಯ ಅರಿವು ಮೂಡಿಸುತ್ತಿರುವುದು ಉತ್ತಮ ಕೆಲಸ. ಈ ಭಾಗದ ಬಡವರಿಗೆ ಸ್ವ-ಉದ್ಯೋಗಕ್ಕೆ ಅನುಕೂಲವಾಗಲು ಹೊಲಿಗೆ ತರಬೇತಿ ಆರಂಭಿಸುವಂತೆ ಮನವಿ ಮಾಡಿದರು.

ಹೊಲಿಗೆ ತರಬೇತಿಗೆ ಅನುಕೂಲವಾಗಲು ಎರಡು ಹೊಲಿಗೆ ಯಂತ್ರಗಳನ್ನು ಸಂಘಕ್ಕೆ ದೇಣಿಗೆ ನೀಡುವುದಾಗಿ ಲಿಂಗರಾಜ ಪಾಟೀಲ ಪ್ರಕಟಿಸಿದರು.

ಸಂಘದ ಅಧ್ಯಕ್ಷ ಡಾ.ಪಿ.ಬಿ.ಸತ್ತೂರ ಮಾತನಾಡಿ, ವೈದಿಕ ಪಾಠಶಾಲೆಯ ಮೂಲಕ ಎರಡರಿಂದ ಐದು ವರ್ಷದೊಳಗಿನ ಮಕ್ಕಳಿಗೆ ಸಂಸ್ಕಾರ ನೀಡುವ ಕೆಲಸ ಮಾಡಲಾಗುವುದು. ನೈತಿಕ ಮೌಲ್ಯಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ನಡೆಯಲಿದೆ ಎಂದರು.

ಕಟ್ಟಡ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ವಿಧಾನಪರಿಷತ್ ಮಾಜಿ ಸದಸ್ಯ ವಿಜಯ ಸಂಕೇಶ್ವರ ಹಾಗೂ ಸಂಸದ ಪ್ರಹ್ಲಾದ ಜೋಶಿ ಅವರ ನೆರವನ್ನು ಡಾ.ಸತ್ತೂರ ಸ್ಮರಿಸಿದರು.

ಸಮಾರಂಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಸುಧೀರ್ ಸರಾಫ್, ಆದರ್ಶ ಉಪ್ಪಿನ, ಲಕ್ಷ್ಮಿ ಉಪ್ಪಾರ, ವೀರಪ್ಪ ಖಂಡೇಕಾರ, ಬ್ರಾಹ್ಮಣ ಸಮಾಜದ ಮುಖಂಡರಾದ ಎಸ್.ಜಿ.ಮುಧೋಳಕರ, ಪ್ರಸಾದ ದೀಕ್ಷಿತ, ಮನೋಜ ಪರ್ವತಿಕರ, ಎಂ.ಆರ್.ಪರ್ವತಿ, ಸರಸ್ವತಿ ಗುಡಿ, ಮಾಲತಿ ಸತ್ತೂರ, ಸುಮಂಗಲಾ ಭಟ್ಟ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT