ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಉಳಿಸಲು ಕರೆ

Last Updated 20 ಜನವರಿ 2011, 6:45 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಾಹಿತ್ಯ ಮತ್ತು ಸಂಸ್ಕೃತಿ ಉಳಿವಿಗೆ ಯುವಪಡೆ ಸನ್ನದ್ಧವಾಗಬೇಕು ಎಂದು ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಕರೆ ನೀಡಿದರು.ನಗರದ ತರಾಸು ಜಿಲ್ಲಾ ರಂಗಮಂದಿರದಲ್ಲಿ ಬುಧವಾರ ಸ್ವಾಮಿ ವಿವೇಕಾನಂದ ಹಾಗೂ ನೇತಾಜಿ ಸುಭಾಷ್‌ಚಂದ್ರ ಬೋಸ್ ಜಯಂತಿ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ ರಾಷ್ಟ್ರೀಯ ಯುವದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ತನ್ನದೇ ಆದ ಸಾಹಿತ್ಯ ಹಾಗೂ ಸಂಸ್ಕೃತಿಯ ಪರಂಪರೆ ಉಳಿಸಿಕೊಂಡು ಅನ್ಯ ದೇಶಗಳಿಗೆ ಮಾದರಿಯಾಗಿದೆ. ಈ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ಯುವ ಸಮೂಹದ ಮೇಲಿದೆ ಎಂದರು.ಭಾರತ-ಪಾಕಿಸ್ತಾನ ಕ್ರಿಕೆಟ್ ನಡೆದಾಗ ಮಾತ್ರ ರಾಷ್ಟ್ರಾಭಿಮಾನ ಉಕ್ಕಿ ಹರಿಯುತ್ತಿದೆ. ದೇಶಕ್ಕೆ ಗಂಡಾಂತರ ಬಂದಾಗ ಈ ಮನಃಸ್ಥಿತಿ ಮೂಡುತ್ತಿಲ್ಲ. ಇಂತಹ ಮನಃಸ್ಥಿತಿಯಿಂದ ಹೊರಬಂದು ದೇಶದ ಸಂಸ್ಕೃತಿ, ಸಾಹಿತ್ಯದ ಉಳಿವಿಗೆ ಗಮನಹರಿಸಬೇಕು ಎಂದು ನುಡಿದರು.

ವಿದ್ಯಾರ್ಥಿ ಸಮೂಹ ವಿದೇಶಿ ಸಂಸ್ಕೃತಿಗೆ ಮಾರು ಹೋಗಿದ್ದರೂ ಅದು ಹೆಚ್ಚು ದಿನ ಉಳಿಯುವುದಿಲ್ಲ. ದಿನ ಕಳೆದಂತೆ ವಿದೇಶಿ ಸಂಸ್ಕೃತಿಯಿಂದ ಬೇಸತ್ತು ದೇಸಿ ಸಂಸ್ಕೃತಿ ಕಡೆ ವಾಲುತ್ತಿದ್ದಾರೆ ಎಂದು ತಿಳಿಸಿದರು.ಶಿವಮೊಗ್ಗ ವಿಭಾಗೀಯ ಪ್ರಮುಖ ಎಚ್.ಎಂ. ವಿಶ್ವನಾಥ್ ಮಾತನಾಡಿ, ದೇಸಿ ಸಂಸ್ಕೃತಿಯನ್ನು ವಿಶ್ವಕ್ಕೆ ಪ್ರಚಾರ ಮಾಡಿದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು. ಇಂದಿನ ವಿದ್ಯಾರ್ಥಿಗಳು ಮುಂದಿನ ಗುರಿ ಬಗ್ಗೆ ಆತ್ಮವಿಶ್ವಾಸ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಎಬಿವಿಪಿ ರಾಜ್ಯ ಘಟಕದ ಕಾರ್ಯದರ್ಶಿ ವಿನಯ ಬಿದರೆ, ನಗರ ಘಟಕದ ಅಧ್ಯಕ್ಷ ಪ್ರೊ.ಹೇಮಂತ ಕುಮಾರ್, ಕಾರ್ಯದರ್ಶಿ ಸಿ. ಧನಂಜಯ, ಶ್ರೀಧರ್ ಮರಡಿಹಳ್ಳಿ, ಪ್ರಾಂಶುಪಾಲ ಪಿ.ಕೆ. ಗದಗ, ಉಪನ್ಯಾಸಕ ಡಾ.ಕೆ. ರಾಜೀವಲೋಚನ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT