ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಥೆಯಲ್ಲಿ ಸರ್ಕಾರದ ಹಸ್ತಕ್ಷೇಪ ಬೇಡ

Last Updated 23 ಮೇ 2012, 19:30 IST
ಅಕ್ಷರ ಗಾತ್ರ

`ಬೆಂಗಳೂರು: `ಬಡವರ ಹೃದ್ರೋಗ ಚಿಕಿತ್ಸಾ ಸೇವೆಯಲ್ಲಿ ಹೆಸರು ಮಾಡಿರುವ ಸರ್ಕಾರಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆಡಳಿತದಲ್ಲಿ ಸರ್ಕಾರ ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡದೆ ದೂರ ನಿಂತು ಅಗತ್ಯ ಪ್ರೋತ್ಸಾಹ ನೀಡಲಿ~ ಎಂದು ಪರಿಶಿಷ್ಟ ಜಾತಿ ಒಳ ಮೀಸಲಾತಿ ಆಯೋಗದ ಅಧ್ಯಕ್ಷ, ನ್ಯಾಯಮೂರ್ತಿ ಎ.ಜೆ. ಸದಾಶಿವ ಮಂಗಳವಾರ ಇಲ್ಲಿ ಒತ್ತಾಯಿಸಿದರು.

ರಂಗಚೇತನ ಸಂಸ್ಕೃತಿ ಕೇಂದ್ರ ಟ್ರಸ್ಟ್ ಮೈಸೂರು ಮುಕ್ತ ವಿಶ್ವವಿದ್ಯಾಲಯ ಹಾಗೂ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ `ಹವಳ~ ಅಭಿನಂದನಾ ಗ್ರಂಥದ ದ್ವಿತೀಯ ಮುದ್ರಣವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡದಿರುವುದು ಸಂಸ್ಥೆಯ ಹಾಗೂ ಸಮಾಜದ ದೃಷ್ಟಿಯಿಂದ ಒಳ್ಳೆಯದು. ಇನ್ನು ಮುಂದೆಯೂ ಅದ್ಯಾವುದೇ ಸರ್ಕಾರ ಬರಲಿ. ಇನ್ನಷ್ಟು ಹೆಚ್ಚು ದೂರ ಉಳಿದು ಸಂಸ್ಥೆಗೆ ಸಹಕಾರ ನೀಡಲಿ~ ಎಂದು ಮನವಿ ಮಾಡಿದರು.

ಗೌರವ ಡಾಕ್ಟರೇಟ್ ಪದವಿಗಳ ಅಪಮೌಲ್ಯ: ಅಭಿನಂದನಾ ನುಡಿಗಳನ್ನಾಡಿದ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ, `ವಿಶ್ವವಿದ್ಯಾಲಯಗಳು ನೀಡುತ್ತಿರುವ ಗೌರವ ಡಾಕ್ಟರೇಟ್ ಪದವಿಗಳುಅಪಮೌಲ್ಯಕ್ಕೊಳಗಾಗುತ್ತಿರುವ ಸನ್ನಿವೇಶದಲ್ಲಿ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾದ ರಾಜ್ಯಪಾಲರು ಏಕೆ ಮೌನ ವಹಿಸಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ~ ಎಂದರು.

`ಹಲವು ವಿಶ್ವವಿದ್ಯಾಲಯಗಳು ಹನ್ನೆರಡು, ಎಂಟು ಜನರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿದರೆ, ಇನ್ನೂ ಕೆಲವು ವಿಶ್ವವಿದ್ಯಾಲಯಗಳು ಇಬ್ಬರಿಗೆ ಗೌರವ ಡಾಕ್ಟರೇಟ್ ಪದವಿ ನೀಡುತ್ತಿವೆ. ಎಷ್ಟು ಜನರಿಗೆ, ಏಕೆ? ಯಾವ ಉದ್ದೇಶಕ್ಕಾಗಿ ಗೌರವ ಡಾಕ್ಟರೇಟ್ ಪದವಿ ನೀಡಬೇಕು ಎಂಬ ನಿಯಮಾವಳಿಗಳನ್ನೇ ವಿಶ್ವವಿದ್ಯಾಲಯಗಳು ಪಾಲಿಸುತ್ತಿಲ್ಲ. ಹೀಗಾಗಿ, ಗೌರವ ಡಾಕ್ಟರೇಟ್ ಪದವಿಗಳು ವಿಶ್ವಾಸ ಕಳೆದುಕೊಳ್ಳುತ್ತಿವೆ~ ಎಂದು ವಿಷಾದಿಸಿದರು.

`ದುಡ್ಡುಕೊಟ್ಟು ಅಭಿನಂದನೆ ಮಾಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಡಾ.ಮಂಜುನಾಥ್ ಅವರಿಗೆ ಎರಡು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿ ನೀಡಿರುವುದು ಪ್ರಶಂಸನೀಯ. ಆ ಮೂಲಕ ಡಾ. ಮಂಜುನಾಥ್ ಗೌರವ ಡಾಕ್ಟರೇಟ್ ಪದವಿಗಳಿಗೇ ಗೌರವ ತಂದುಕೊಟ್ಟಿದ್ದಾರೆ~ ಎಂದು ಬಣ್ಣಿಸಿದರು.

`ನಿರಾಕಾರ ಹೃದಯ, ಮಾನವೀಯ ಅಂತಃಕರಣದ ಮೂಲಕ ಬಡವ-ಬಲ್ಲಿದ, ಹಳ್ಳಿ-ಗುಡಿಸಲಿನ ರೋಗಿಗಳನ್ನೂ ಸಂಭಾಳಿಸುವ ಸೂಕ್ಷ್ಮತೆಯ ಗುಣದಿಂದ ಹಳ್ಳಿಗಾಡಿನ ಮಣ್ಣಿನ ಮಗನೊಬ್ಬ ಅಪರೂಪದ ಸಾಮಾಜಿಕ ಸಾಧನೆ ಮಾಡಿದ್ದಾನೆ. ಆ ಮೂಲಕ ವರನಟ ಡಾ. ರಾಜ್‌ಕುಮಾರ್ ಅವರಂತೆ ಹಳ್ಳಿಗಾಡಿನ ಯುವಕರ ಆತ್ಮವಿಶ್ವಾಸಕ್ಕೆ ಚಾಲಕಶಕ್ತಿ ತುಂಬಿದ್ದಾರೆ~ ಎಂದು ಬರಗೂರು ನುಡಿದರು.

`ಹವಳ~ ಅಭಿನಂದನಾ ಗ್ರಂಥಕ್ಕೆ ಎರಡನೇ ಮುನ್ನುಡಿ ಬರೆದ ವಿಮರ್ಶಕ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, `ರಾಜ್ಯ ಸರ್ಕಾರ ದೂರ ನಿಂತು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಹೆಚ್ಚಿನ ಅನುದಾನ ನೀಡಲಿ~ ಎಂದು ಒತ್ತಾಯಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್, `ಕನ್ನಡಿಗರನ್ನು ಕಟ್ಟಿದ ಡಾ.ಮಂಜುನಾಥ್ ಕುರಿತು ರಂಗಚೇತನ ಸಂಸ್ಕೃತಿ ಕೇಂದ್ರ ಟ್ರಸ್ಟ್ ಒಳ್ಳೆಯ ಲೇಖಕರಿಂದ 100-150 ಪುಟಗಳ ಜೀವನ ಚರಿತ್ರೆ ಬರೆಸಿದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಲಿದೆ~ ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಡಾ.ಸಿ.ಎನ್. ಮಂಜುನಾಥ್ ಹಾಗೂ ಡಾ. ಅನುಸೂಯ ದಂಪತಿಯನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ರಂಗಚೇತನ ಸಂಸ್ಕೃತಿ ಕೇಂದ್ರ ಟ್ರಸ್ಟ್‌ನ ಅಧ್ಯಕ್ಷ ಡಿ.ಕೆ. ಚೌಟ, ಭವಾನಿ ಟ್ರಸ್ಟ್ ಅಧ್ಯಕ್ಷ ಲಕ್ಷ್ಮಣ್, ಕೈಗಾರಿಕೋದ್ಯಮಿ ಕೆ.ಎಚ್. ಪುಟ್ಟಸ್ವಾಮಿಗೌಡ ಉಪಸ್ಥಿತರಿದ್ದರು. ರಂಗಚೇತನ ಸಂಸ್ಕೃತಿ ಕೇಂದ್ರ ಟ್ರಸ್ಟ್‌ನ ವ್ಯವಸ್ಥಾಪಕ ಧರ್ಮದರ್ಶಿ ನಂಜುಂಡಸ್ವಾಮಿ ತೊಟ್ಟವಾಡಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT