ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್ ಮಿಂಚಬೇಕು; ಆರ್‌ಸಿಬಿ ಗೆಲ್ಲಬೇಕು

ಕ್ರಿಸ್ ಗೇಲ್ ಆಟ ನೋಡಲು ಕ್ರಿಕೆಟ್ ಪ್ರೇಮಿಗಳ ಹೃದಯ ಮಿಡಿತ
Last Updated 3 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಕೆಟ್ ಹಾಗೂ ಮನರಂಜನೆಯ ಸಮ್ಮಿಶ್ರಣದ ಐಪಿಎಲ್ ಸಡಗರ ಮತ್ತೆ ಶುರುವಾಗಿದೆ. ಸಿಕ್ಸರ್, ಬೌಂಡರಿಗಳ ಜೋಶ್ ಜೊತೆಗೆ ಚಿಯರ್ ಬೆಡಗಿಯರ ವೈಯ್ಯಾರ ಉದ್ಯಾನ ನಗರಿಗೆ ಮರಳಿದೆ. ಹಾಗಾಗಿ ಕೆಲ ದಿನಗಳ ಬಿಡುವಿನ ಬಳಿಕ ಈ ನಗರಿಯ ಕ್ರಿಕೆಟ್ ಪ್ರೇಮಿಗಳ ಹೃದಯ ಮತ್ತೆ ಜಿಗಿದಾಡಲು ಶುರು ಮಾಡಿದೆ.

ಸಿಕ್ಸರ್ ಪ್ರಿಯ ಕ್ರಿಸ್‌ಗೇಲ್ ಆಗಮನವೂ ಅದಕ್ಕೊಂದು ಕಾರಣ. ಜೊತೆಗೆ ಸ್ಫೂರ್ತಿಯ ಸೆಲೆ ಸಚಿನ್ ತೆಂಡೂಲ್ಕರ್ ಉಪಸ್ಥಿತಿ, ಆಸ್ಟ್ರೇಲಿಯಾಕ್ಕೆ ಎರಡು ಬಾರಿ ವಿಶ್ವಕಪ್ ಗೆದ್ದುಕೊಟ್ಟ ನಾಯಕ ರಿಕಿ ಪಾಂಟಿಂಗ್ ಹೊಳಪು, ಭಾರತ ತಂಡದ ಭವಿಷ್ಯದ ನಾಯಕ ವಿರಾಟ್ ಕೊಹ್ಲಿ ಆಕರ್ಷಣೆ ಚುಟುಕು ಕ್ರಿಕೆಟ್ ಕದನದ ರಸವತ್ತತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ನಗರದ ಬಿಸಿಲ ಧಗೆಗಿಂತ ಹೆಚ್ಚಾಗಿರುವ ಪ್ರೇಕ್ಷಕರ ಕ್ರಿಕೆಟ್ ಪ್ರೀತಿಯ ಕಾವು, ಜೊತೆಗೆ ರಾತ್ರಿ ವೇಳೆ ಮಳೆರಾಯನ ಕಣ್ಣು ಮುಚ್ಚಾಲೆಯ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಸಿಲಿಕಾನ್ ಸಿಟಿಯಲ್ಲಿ ಮೊದಲ ಹಣಾಹಣಿಗೆ ಸಜ್ಜಾಗಿವೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆಯಲಿರುವ ಟ್ವೆಂಟಿ-20 ಟೂರ್ನಿಯ ಈ ಪಂದ್ಯದ ಮೋಜು ಅನುಭವಿಸಲು ಕ್ರಿಕೆಟ್ ಪ್ರೇಮಿಗಳ ಮನಸ್ಸು ತುಡಿಯುತ್ತಿದೆ.

ಹಿಂದಿನ ಟೂರ್ನಿಗಳಲ್ಲಿ ಸ್ಫೋಟಕ ಹೊಡೆತಗಳ ಮೂಲಕ ಹೀರೊ ಆಗಿ ಮೆರೆದಿದ್ದ ಗೇಲ್ ಈ ಬಾರಿಯೂ ಆತಿಥೇಯ ತಂಡದ ಅಭಿಮಾನಿಗಳ ಪಾಲಿನ ನೆಚ್ಚಿನ ಆಟಗಾರ. ಈ ಆಟಗಾರನ ಪಾಲಿಗೆ ಉದ್ಯಾನ ನಗರಿ  ಎರಡನೇ ಮನೆಯಂತಾಗಿದೆ!

ಆದರೆ ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಒಂದಿಷ್ಟು ಗೊಂದಲವೂ ಶುರುವಾಗಿದೆ. ಅದಕ್ಕೆ ಕಾರಣ ತೆಂಡೂಲ್ಕರ್. ಸಚಿನ್ ಬ್ಯಾಟಿಂಗ್ ವೈಭವವನ್ನು ಕಣ್ತುಂಬಿಕೊಳ್ಳಲು ಅವರ ಮನ ತುಡಿಯುತ್ತಿದೆ, ಇನ್ನೊಂದೆಡೆ ತಮ್ಮ ನೆಚ್ಚಿನ ತಂಡ ರಾಯಲ್ ಚಾಲೆಂಜರ್ಸ್ ಗೆಲ್ಲಬೇಕು ಎಂದು ಹೃದಯ ಬಯಸುತ್ತಿದೆ. 40 ವರ್ಷ ವಯಸ್ಸಿನ ಸಚಿನ್ ಮೇಲೆ ಪ್ರೇಕ್ಷಕರು ಇಟ್ಟಿರುವ ನಿರೀಕ್ಷೆ ಹಾಗೂ ಪ್ರೀತಿ ಅಂತಹದ್ದು. ಹಾಗಾಗಿ ಎಂದಿನಂತೆ `ಸಚಿನ್ ಮಿಂಚಬೇಕು; ಆರ್‌ಸಿಬಿ ಗೆಲ್ಲಬೇಕು' ಎಂಬ ಜಪ ಪ್ರೇಕ್ಷಕರ ಮನದಲ್ಲಿ...!

ಈ ಎರಡು ತಂಡಗಳು ಪ್ರತಿ ಬಾರಿಯೂ ಈ ಟೂರ್ನಿಯಲ್ಲಿ ಭರವಸೆಯಿಂದ ಕಣಕ್ಕಿಳಿಯುತ್ತಿವೆ. ಜೊತೆಗೆ ಪ್ರತಿಭಾವಂತ ಆಟಗಾರರನ್ನೂ ಒಳಗೊಂಡಿವೆ. ಆದರೆ ಅಂತಿಮ ಹಂತದಲ್ಲಿ ಎಡವಟ್ಟು ಮಾಡಿಕೊಳ್ಳುತ್ತಿವೆ. ಹಾಗಾಗಿ ಪ್ರಶಸ್ತಿ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ.

ಈ ಹೋರಾಟದಲ್ಲಿ ಗೆಲುವಿನ ನೆಚ್ಚಿನ ತಂಡ ಯಾವುದು ಎಂದು ಹೇಳುವುದು ಕಷ್ಟ. ಉಭಯ ತಂಡಗಳು ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳನ್ನು ಹೊಂದಿವೆ. ಆದರೆ ಬೌಲಿಂಗ್‌ನಲ್ಲಿ ಈ ತಂಡಗಳಿಗೆ ಕೊಂಚ ಚಿಂತೆ ಇದೆ. ಏಕೆಂದರೆ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ವೇಗಿ ಲಸಿತ್ ಮಾಲಿಂಗ ಗಾಯದಿಂದ ಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹಾಗೇ, ಚಾಲೆಂಜರ್ಸ್ ತಂಡದ ಜಹೀರ್ ಖಾನ್ ಫಿಟ್‌ನೆಸ್ ಬಗ್ಗೆಯೂ ಅನುಮಾನವಿದೆ.

ಆರ್‌ಸಿಬಿ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಹಾಗೂ ವಿಕೆಟ್ ಕೀಪರ್ ಎಬಿ ಡಿವಿಲಿಯರ್ಸ್ ಮೊದಲ ಪಂದ್ಯಕ್ಕೆ ಲಭ್ಯರಾಗುತ್ತಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ವಿವಾಹವಾಗಿರುವ ಅವರು ಇನ್ನೂ ಇಲ್ಲಿಗೆ ಬಂದಿಲ್ಲ. ಅವರ ಬದಲು ಅರುಣ್ ಕಾರ್ತಿಕ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸುವ ಸಾಧ್ಯತೆ ಇದೆ.

ವಿದೇಶದ ನಾಲ್ವರು ಆಟಗಾರರಿಗೆ ಮಾತ್ರ ತಂಡದಲ್ಲಿ ಆಡಲು ಅವಕಾಶವಿದೆ. ಹಾಗಾಗಿ ಆರ್‌ಸಿಬಿ ಪರ ಗೇಲ್, ದಿಲ್ಶಾನ್, ವೆಟೋರಿ, ಮುರಳೀಧರನ್ ಅಥವಾ ವೇಗಿ ರವಿ ರಾಂಪಾಲ್ ಕಣಕ್ಕಿಳಿಯುವ ನಿರೀಕ್ಷೆ ಇದೆ.

ಈ ಬಾರಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗುವ ನೆಚ್ಚಿನ ತಂಡ ಎಂದು ಕ್ರಿಕೆಟ್ ಪಂಡಿತರು ಭವಿಷ್ಯ ನುಡಿಯುತ್ತಿದ್ದಾರೆ. ವಿಶ್ವ ಕಂಡ ಅತ್ಯುತ್ತಮ ನಾಯಕರಲ್ಲಿ ಒಬ್ಬರು ಎನಿಸಿರುವ ಪಾಂಟಿಂಗ್ ಈ ತಂಡ ಮುನ್ನಡೆಸುತ್ತಿರುವುದು ಅದಕ್ಕೊಂದು ಕಾರಣ.

ಜೊತೆಗೆ ಪೊಲಾರ್ಡ್, ಡ್ವೇನ್ ಸ್ಮಿತ್, ರೋಹಿತ್ ಶರ್ಮ ಹಾಗೂ ಅಂಬಟಿ ರಾಯುಡು ಅವರಂಥ ಪ್ರತಿಭಾವಂತ ಬ್ಯಾಟ್ಸ್‌ಮನ್‌ಗಳಿದ್ದಾರೆ. ಸ್ಮಿತ್ ಅಥವಾ ಫ್ರಾಂಕ್ಲಿನ್ ಜೊತೆ ಸಚಿನ್ ಇನಿಂಗ್ಸ್ ಆರಂಭಿಸುವ ಸಂಭವವಿದೆ.

ತಂಡಗಳು ಇಂತಿವೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು

ವಿರಾಟ್ ಕೊಹ್ಲಿ (ನಾಯಕ), ತಿಲಕರತ್ನೆ ದಿಲ್ಶಾನ್, ಮಯಾಂಕ್ ಅಗರವಾಲ್, ಕ್ರಿಸ್ ಗೇಲ್, ಸೌರಭ್ ತಿವಾರಿ, ಮೊಯಿಸೆಸ್ ಹೆನ್ರಿಕ್ಸ್, ಡೇನಿಯಲ್ ಕ್ರಿಸ್ಟಿಯಾನ್, ಅರುಣ್ ಕಾರ್ತಿಕ್, ಮುತ್ತಯ್ಯ ಮುರಳೀಧರನ್, ಡೇನಿಯಲ್ ವೆಟೋರಿ, ಜಹೀರ್ ಖಾನ್. ಆರ್.ವಿನಯ್ ಕುಮಾರ್, ರವಿ ರಾಂಪಾಲ್, ಮುರಳಿ ಕಾರ್ತಿಕ್, ಸನ್ನಿ ಸೊಹಾಲ್, ಅಭಿನವ್ ಮುಕುಂದ್, ಕ್ರಿಸ್ಟೋಫರ್ ಬಾರ್ನ್ವೆಲ್, ಕರುಣ್ ನಾಯರ್, ಶೆಲ್ಡನ್ ಜಾಕ್ಸನ್, ಆ್ಯಂಡ್ರ್ಯೂ ಮೆಕ್‌ಡೊನಾಲ್ಡ್ ಹಾಗೂ ಆರ್.ಪಿ.ಸಿಂಗ್.

ಮುಂಬೈ ಇಂಡಿಯನ್ಸ್
ರಿಕಿ ಪಾಂಟಿಂಗ್ (ನಾಯಕ), ಸಚಿನ್ ತೆಂಡೂಲ್ಕರ್, ಡ್ವೇನ್ ಸ್ಮಿತ್, ಏಡರ್ನ್ ಬ್ಲಿಜಾರ್ಡ್, ರೋಹಿತ್ ಶರ್ಮ, ಕೀರನ್ ಪೊಲಾರ್ಡ್, ದಿನೇಶ್ ಕಾರ್ತಿಕ್, ಅಂಬಟಿ ರಾಯುಡು, ಹರಭಜನ್ ಸಿಂಗ್, ಮುನಾಫ್ ಪಟೇಲ್, ಪ್ರಗ್ಯಾನ್ ಓಜಾ, ಧವಳ್ ಕುಲಕರ್ಣಿ, ಜೇಕಬ್ ಓರಮ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಷೆಲ್ ಜಾನ್ಸನ್, ಜೇಮ್ಸ ಫ್ರಾಂಕ್ಲಿನ್, ಆದಿತ್ಯ ತಾರೆ ಹಾಗೂ ಅಬು ನೆಚಿಮ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT